ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರವಾಡದಲ್ಲಿ ಜ.25ರಿಂದ ಮೂರು ದಿನಗಳ ಸಾಹಿತ್ಯ ಸಂಭ್ರಮ

By Prasad
|
Google Oneindia Kannada News

Ramakanth Joshi
ಧಾರವಾಡ, ಜ. 5 : ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೇ ಜನಜನಿತವಾಗಿರುವ, ಫೇಡೆಗೆ ಹೆಸರಾಗಿರುವ ಧಾರವಾಡದಲ್ಲಿ ಜನವರಿ ತಿಂಗಳ ಕೊನೆಯಲ್ಲಿ ಕನ್ನಡ ಸಾಹಿತಿಗಳ ಕಲರವ ಕೇಳಿಬರಲಿದೆ. ಜ.25, 26 ಮತ್ತು 27ರಂದು ಮೂರು ದಿನಗಳ ಕಾಲ 'ಧಾರವಾಡ ಸಾಹಿತ್ಯ ಸಂಭ್ರಮ'ವನ್ನು ಆಯೋಜಿಸಲಾಗಿದೆ.

ದ.ರಾ. ಬೇಂದ್ರೆ, ವಿ.ಕೆ. ಗೋಕಾಕ್, ಜಿ.ಬಿ. ಜೋಶಿ, ಬೆಟಗೇರಿ ಕೃಷ್ಣಶರ್ಮ, ಗಿರೀಶ್ ಕಾರ್ನಾಡ್, ಕೀರ್ತಿನಾಥ ಕುರ್ತಕೋಟಿ, ಚಂದ್ರಶೇಖರ ಪಾಟೀಲ, ಜಿ.ಎಸ್, ಆಮೂರ, ಜಿ.ವಿ. ಕುಲಕರ್ಣಿ, ಡಾ. ಎಂ.ಎಂ. ಕಲಬುರ್ಗಿ, ಪಾಟೀಲ ಪುಟ್ಟಪ್ಪ, ಶಂ.ಭಾ.ಜೋಶಿ, ಶಾಂತಾದೇವಿ ಮಾಳವಾಡ, ಸುದರ್ಶನ ದೇಸಾಯಿ ಮುಂತಾದ ಖ್ಯಾತ ಸಾಹಿತಿಗಳನ್ನು ಕನ್ನಡ ನಾಡಿಗೆ ಕೊಡುಗೆಯಾಗಿ ನೀಡಿರುವ ಧಾರವಾಡ ಮತ್ತೊಂದು ಸಾಹಿತ್ಯ ಸಂಭ್ರಮ.

ಕನ್ನಡ ಸಾಹಿತ್ಯ ಸಮ್ಮೇಳನ, ಇತರೆ ವಿಚಾರ ಸಂಕಿರಣಗಳಿಗಿಂತ ವಿಭಿನ್ನವಾಗಿ ನಡೆಸುವ ಉದ್ದೇಶದಿಂದ ಈ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮ್ಮೇಳನದ ಆಯೋಜಕರು ಹೇಳಿದ್ದಾರೆ. ಒಣ ಭಾಷಣಗಳಿಗಿಂತ ಓದು, ಸಂಭಾಷಣೆ, ಮಾತುಕತೆ, ಚರ್ಚೆ, ಪ್ರಶ್ನೋತ್ತರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು ಎಂದು ಆಯೋಜಕರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಇಂದಿನ ಸಾಹಿತ್ಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸುವುದು, ಹಿಡಿದಿರುವ ಹಾದಿಯನ್ನು ಗುರುತಿಸುವುದು, ಹೊಸ ತಾಂತ್ರಿಕತೆ ಒದಗಿಸುವ ಸೌಲಭ್ಯಗಳನ್ನು ಸಾಹಿತ್ಯದ ಬೆಳವಣಿಗೆಗಾಗಿ ಅರ್ಥಪೂರ್ಣವಾಗಿ ಬಳಸಿಕೊಳ್ಳುವುದು ಈ ಸಾಹಿತ್ಯ ಸಂಭ್ರಮದಲ್ಲಿ ನಡೆಯಲಿದೆ. ರಾಜ್ಯದ ಒಳಹೊರಗಿನಿಂದ 100ಕ್ಕೂ ಹೆಚ್ಚು ಸಾಹಿತಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಮ್ಯಾನ್ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿ ಸ್ಥಾನಪಡೆದಿರುವ ಡಾ.ಯು.ಆರ್. ಅನಂತಮೂರ್ತಿ ಅವರು ಸಮ್ಮೇಳನ ಉದ್ಘಾಟಿಸಿ ಆಶಯ ಭಾಷಣ ಮಾಡಲಿದ್ದಾರೆ.

ಆತ್ಮಕತೆಗಳ ಆಯ್ದಭಾಗಗಳ ಓದು, ನಾಟಕಕಾರನೊಂದಿಗೆ ನಾಟಕಕಾರ, ಕಾರ್ಪೋರೇಟ್ ಜಗತ್ತು ಮತ್ತು ಕನ್ನಡ ಸಾಹಿತ್ಯ, ಸಿನೆಮಾ ಆಗಿ ಸಾಹಿತ್ಯ ಕೃತಿ, ವಿಮರ್ಶೆ ತೊಡಕು-ತೊಡಕಾಗುತ್ತಿದೆಯೆ, ಕತೆ ಹುಟ್ಟುವ ರೀತಿ, ಹೆಚ್ಚುತ್ತಿರುವ ಪ್ರಶಸ್ತಿಗಳ ಹಾವಳಿ, ಅಂತರ್ಜಾಲದಲ್ಲಿ ಕನ್ನಡ, ಲೇಖಕರೊಂದಿಗೆ ಪ್ರಶ್ನೋತ್ತರ, ಕತೆ ಹೇಳುವ ಕಲೆ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಗೋಷ್ಠಿಗಳಲ್ಲಿ 50ಕ್ಕೂ ಹೆಚ್ಚು ಪ್ರಸ್ತುತ ಕ್ರಿಯಾಶೀಲರಾಗಿರುವ ಸಾಹಿತಿಗಳು, ವಿಮರ್ಶಕರು, ಪತ್ರಕರ್ತರು ಭಾಗವಹಿಸಿ ತಮ್ಮ ಪ್ರಬುದ್ಧ ಅನುಭವ ಹಂಚಿಕೊಳ್ಳಲಿದ್ದಾರೆ.

ಒನ್ಇಂಡಿಯಾ ಕನ್ನಡದ ಸಂಪಾದಕರಾದ ಎಸ್.ಕೆ. ಶಾಮ ಸುಂದರ ಅವರು ಅಂತರ್ಜಾಲದಲ್ಲಿ ಕನ್ನಡ ಗೋಷ್ಠಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರ ಜೊತೆಗೆ, ಸಾಹಿತಿ-ಸಾಹಿತಿಗಳ ನಡುವೆ, ಲೇಖಕ-ಓದುಗರ ನಡುವೆ ಉತ್ತಮ ಬಾಂಧ್ಯವ್ಯ, ಆತ್ಮೀಯ ಸಂಬಂಧ ಬೆಳೆಸುವ ಉದ್ದೇಶವೂ ಈ ಸಮ್ಮೇಳನಕ್ಕಿದೆ ಎಂದು ಆಯೋಜಕರು ಹೇಳಿದ್ದಾರೆ. ಕನ್ನಡ ಸಾಹಿತ್ಯವನ್ನು ಸವಿಯುವುದರ ಜೊತೆ ಧಾರವಾಡದ ಫೇಡೆಯನ್ನು ಕೊಂಡು ಬರಲು ಸಾಹಿತ್ಯ ಪ್ರೇಮಿಗಳಿಗೆ ಸುಯೋಗ ಒದಗಿಬಂದಿದೆ.

English summary
3 days Kannada literary festival has been organized in cultural capital of Karnataka Dharwad by Dharwad Sahitya Sambhrama, from January 25-27, 2013. More than 100 eminent laureates and literary enthusiasts are participating in this mega event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X