ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

21 ಚಿತ್ರಗಳಲ್ಲಿ ಮಹಾ ಕುಂಭ ಮೇಳ ದರ್ಶನ

By Prasad
|
Google Oneindia Kannada News

ಅಲಹಾಬಾದ್, ಜ. 4 : ಪವಿತ್ರ ನದಿಗಳಾದ ಗಂಗಾ, ಯಮುನಾ ಮತ್ತು ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಆಚರಿಸಲಾಗುವ, ಹಿಂದೂಗಳ ಅತಿದೊಡ್ಡ ಧಾರ್ಮಿಕ ಸಮ್ಮಿಲನ, ಕುಂಭ ಮೇಳಕ್ಕೆ ಉತ್ತರ ಪ್ರದೇಶದ ಅಲಹಾಬಾದ್ ಸಜ್ಜಾಗುತ್ತಿದೆ. ಜನವರಿ 27ರಿಂದ ಆರಂಭವಾಗುತ್ತಿರುವ ಕುಂಭ ಮೇಳಕ್ಕೆ ಜನಸಾಗರವೇ ಹರಿದುಬರಲಿದೆ. ಒಂದು ಅಂದಾಜಿನ ಪ್ರಕಾರ, 10 ಕೋಟಿಗೂ ಹೆಚ್ಚು ಭಕ್ತಾದಿಗಳು ಈ ಮಹಾ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪೂರ್ಣ ಕುಂಭ ಮೇಳ ಕೇವಲ ಭಕ್ತಾದಿಗಳ ಸಮಾವೇಶ ಮಾತ್ರವಲ್ಲ. ಇದು ಭಕ್ತಿಯ ಸುನಾಮಿ, ಧಾರ್ಮಿಕ ಭಾವನೆಗಳ ಮಹಾಪೂರ ಅಥವಾ ಸರಳವಾಗಿ ಹೇಳಬೇಕೆಂದರೆ ಸಂತಸ ಸಂಭ್ರಮದ ಸಾಗರ. ದೇಶದ ಮತ್ತು ವಿದೇಶದ ನಾನಾ ಭಾಗಗಳಿಂದ ಭಕ್ತಾದಿಗಳು ಇಲ್ಲಿ ಬಂದು ಸೇರಲಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಬೆತ್ತಲಾಗಿಯೇ ಭಕ್ತಿಯ ಪರಾಕಾಷ್ಠೆ ಮೆರೆಯುವ ನಾನಾ ಸಾಧುಗಳು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಲಿದ್ದಾರೆ. ಬಣ್ಣಬಣ್ಣಗಳ ಮಹಾಮೇಳ ಎಂದೂ ಈ ಮೇಳವನ್ನು ಕರೆಯಲಾಗುತ್ತದೆ.

ಇಷ್ಟೊಂದು ಜನರು ಇಲ್ಲಿ ಸೇರುತ್ತಿರುವಾಗ, ಉತ್ತರ ಪ್ರದೇಶ ಸರಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಜಿಪಿಎಸ್ ತಂತ್ರಜ್ಞಾನ ಸೇರಿದಂತೆ ಅತ್ಯಾಧುನಿಕ ಸಲಕರಣೆಗಳ ಉಪಯೋಗಗಳನ್ನು ಪಡೆಯುತ್ತಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿ ಪುನೀತರಾಗುವ ಭಕ್ತರಿಗೆ ಅನುಕೂಲವಾಗಲೆಂದು ಉತ್ತರ ಪ್ರದೇಶ ಸರಕಾರ ಅಧಿಕೃತ ವೆಬ್ ಸೈಟನ್ನು (http://kumbhmelaallahabad.gov.in/english/index.html) ಆರಂಭಿಸಿದ್ದು, ಇಲ್ಲಿ ಎಲ್ಲ ಮಾಹಿತಿಗಳನ್ನು ಪಡೆಯಬಹುದಾಗಿದೆ.

ಪುಷ್ಯ ಪೂರ್ಣಿಮಾ ಮತ್ತು ಮೌನಿ ಅಮವಾಸ್ಯೆ ಸ್ನಾನ

ಪುಷ್ಯ ಮಾಸದಲ್ಲಿ ಬರುವ ಪೌರ್ಣಿಮೆ(ಜನವರಿ 27)ಯಿಂದ ಪೂರ್ಣ ಕುಂಭ ಮೇಳ ಆರಂಭವಾಗಲಿದೆ. ಇದು ಚಳಿಗಾಲದ ಕೊನೆಯ ಚಳಿಗಾಲವಾಗಿದ್ದು, ಇದಕ್ಕೂ ಮೊದಲೇ ಲಕ್ಷಾಂತರ ಸಂಖ್ಯೆಯಲ್ಲಿ ಸಾಧುಗಳು ಮತ್ತು ಇತರ ಭಕ್ತರು ಇಲ್ಲಿ ಬಂದು ಸೇರಲಿದ್ದಾರೆ. ಫೆಬ್ರವರಿ 10ರಂದು ಸಂಭವಿಸುವ ಅಮಾವಾಸ್ಯೆಯಂದು ಭಕ್ತಾದಿಗಳು, ಕೊರೆಯುವ ಚಳಿಯಲ್ಲಿ ತ್ರಿವೇಣಿ ಸಂಗಮದಲ್ಲಿ ತೆಗೆದುಕೊಳ್ಳುವ ಸ್ನಾನವನ್ನು ಅತ್ಯಂತ ಪುಣ್ಯಸ್ನಾನವೆಂದು ಪರಿಗಣಿಸಲಾಗುತ್ತದೆ.

ಕುಂಭ ಮೇಳದ ಸಿದ್ಧತೆ ಹೇಗೆ ನಡೆಯುತ್ತಿದೆ, ಭಕ್ತರು ಎಲ್ಲೆಲ್ಲಿಂದ ಹೇಗೆ ಬರುತ್ತಿದ್ದಾರೆ ಇತ್ಯಾದಿ ಮಾಹಿತಿಗಳತ್ತ ಕಣ್ಣು ಹಾಯಿಸೋಣ.

ಟ್ರಾಕ್ಟರಲ್ಲಿ ಬರುತ್ತಿರುವ ಸಾಧು ಸನ್ಯಾಸಿಗಳು

ಟ್ರಾಕ್ಟರಲ್ಲಿ ಬರುತ್ತಿರುವ ಸಾಧು ಸನ್ಯಾಸಿಗಳು

ಅಲಹಾಬಾದದಲ್ಲಿ ನಡೆಯಲಿರುವ ಕುಂಭ ಮೇಳಕ್ಕೆ ದೇಶದ ಎಲ್ಲೆಡೆಯಿಂದ ಸಾವಿರಾರು ಜನರು ಬಂದು ಸೇರುತ್ತಿದ್ದು, ಅಲಹಾಬಾದ್ ಹತ್ತಿರವಿರುವ ಪ್ರದೇಶಗಳಿಂದ ನೂರಾರು ಕಾವಿಧಾರಿ ಸಾಧು ಮತ್ತು ಸನ್ಯಾಸಿಗಳು ಟ್ರಾಕ್ಟರ್ ಮುಖಾಂತರ ಬೆಚ್ಚಗಿನ ಉಡುಗೆ ತೊಟ್ಟು ಭಜನೆ ಮಾಡುತ್ತ ಬರುತ್ತಿದ್ದಾರೆ.

ಸಾಧುಗಳಿಂದ ಗಜರಾಜನಿಗೆ ಪೂಜೆ

ಸಾಧುಗಳಿಂದ ಗಜರಾಜನಿಗೆ ಪೂಜೆ

ತ್ರಿವೇಣಿ ಸಂಗಮದ ಸ್ಥಳದಲ್ಲಿ ತಮ್ಮ ಇರುವಿಕೆಗಾಗಿ ಟೆಂಟ್ ಹಾಕುವ ಮುನ್ನ ಸಾಧುಗಳು ಅಲ್ಲಿರುವ ಆನೆಗೆ ವಿಧಿಪೂರ್ವಕವಾಗಿ ಪೂಜೆ ಸಲ್ಲಿಸಿ ಟೆಂಟಿನ ಗೂಟ ಹೊಡೆಯುತ್ತಾರೆ. ಸಾಧುಗಳಿಗೆ ಇದು ಅವಶ್ಯಕ ವಿಧಿಯಾದರೆ, ಆನೆಯ ಮಾಲಿಕನಿಗೆ ಕೈತುಂಬ ಝಣಝಣ ಕಾಂಚಾಣ.

ತಾತ್ಕಾಲಿಕ ಸೇತುವೆಗಳ ನಿರ್ಮಾಣ

ತಾತ್ಕಾಲಿಕ ಸೇತುವೆಗಳ ನಿರ್ಮಾಣ

ಲಕ್ಷಾಂತರ ಭಕ್ತಾದಿಗಳಿಗೆ ಅನುಕೂಲವಾಗಲೆಂದು ಪವಿತ್ರ ಗಂಗಾ ನದಿಯ ಮೇಲೆ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಈ ತಾತ್ಕಾಲಿಕ ಸೇತುವೆ ಕುಸಿಯದಂತೆ ಮತ್ತು ಕಾಲ್ತುಳಿತ ಸಂಭವಿಸದಂತೆ ಅಲಹಾಬಾದ್ ಜಿಲ್ಲಾಡಳಿತ ಹೆಚ್ಚಿನ ನಿಗಾ ವಹಿಸಬೇಕಾಗಿದೆ.

ಸೇತುವೆ ನಿರ್ಮಾಣದ ಮತ್ತೊಂದು ಚಿತ್ರ

ಸೇತುವೆ ನಿರ್ಮಾಣದ ಮತ್ತೊಂದು ಚಿತ್ರ

ತಾತ್ಕಾಲಿಕ ಸೇತುವ ನಿರ್ಮಾಣದಲ್ಲಿ ಈಗಾಗಲೆ ಸಾವಿರಾರು ಕಾರ್ಮಿಕರು ನಿರತರಾಗಿದ್ದಾರೆ. ವಿಪರೀತ ಚಳಿಯನ್ನು ಲೆಕ್ಕಿಸದೆ ಬಂದು ಸೇರುವ ಭಕ್ತಾದಿಗಳಿಗಾಗಿ ಕಾರ್ಮಿಕರು ಬೆವರು ಸುರಿಸುತ್ತಿದ್ದಾರೆ.

ಹೇಗಿದೆ ನೋಡಿ ತಾತ್ಕಾಲಿಕ ಬ್ರಿಜ್

ಹೇಗಿದೆ ನೋಡಿ ತಾತ್ಕಾಲಿಕ ಬ್ರಿಜ್

ಬೃಹತ್ ಗಾತ್ರದ ಕಪ್ಪು ಬಣ್ಣದ ದಿಮ್ಮಿ ಮತ್ತು ಮರಳಿನ ಚೀಲಗಳನ್ನು ಬಳಸಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡುತ್ತಿದ್ದಾರೆ ಕಾರ್ಮಿಕರು. ನದಿಯ ಒಂದು ತುದಿಯಿಂದ ಇನ್ನೊಂದು ತುದಿ ಸೇರಲು ಈ ಸೇತುವೆ ಬಳಸಲಾಗುತ್ತದೆ.

ಸಾಧು ಸಂತರಿಂದ ಪವಿತ್ರ ಗಂಗೆಯ ಪೂಜೆ

ಸಾಧು ಸಂತರಿಂದ ಪವಿತ್ರ ಗಂಗೆಯ ಪೂಜೆ

ಅಲಹಾಬಾದ್ ಕುಂಭ ಮೇಳ ಅತ್ಯಂತ ಶಾಂತಿಯಿಂದ ಮತ್ತು ನಿರ್ವಿಘ್ನವಾಗಿ ನಡೆಯಲೆಂದು ಅಲ್ಲಿನ ಪೂಜಾರಿಗಳೆಂದು ಕರೆಯಲಾಗುವ ಅಖಾಡ ಸಾಧುಗಳು ಗಂಗೆಗೆ ಅರ್ಘ್ಯ ನೀಡಿ ವಿಧಿವತ್ತಾಗಿ ಪೂಜೆ ಸಲ್ಲಿಸುತ್ತಿದ್ದಾರೆ.

ಸಾಧುಗಳಿಂದ ಧರ್ಮ ಧ್ವಜ ಹಾರಾಟ

ಸಾಧುಗಳಿಂದ ಧರ್ಮ ಧ್ವಜ ಹಾರಾಟ

ಈಗಾಗಲೆ ಗಂಗಾ ತೀರದಲ್ಲಿ ಜಮಾಯಿಸಿರುವ ಸಾವಿರಾರು ಸಾಧುಗಳು ಹಿಂದೂಗಳ ಧಾರ್ಮಿಕ ಸಂಕೇತವಾಗಿರುವ ಕೇಸರಿ ಬಣ್ಣದ ಬೃಹತ್ ಧ್ವಜವನ್ನು ಹಗ್ಗಗಳ ಸಹಾಯದಿಂದ ಸ್ಥಾಪಿಸುತ್ತಿದ್ದಾರೆ.

ನಾಗಾ ಸಾಧುಗಳಿಂದ ಧಾರ್ಮಿಕ ಮೆರವಣಿಗೆ

ನಾಗಾ ಸಾಧುಗಳಿಂದ ಧಾರ್ಮಿಕ ಮೆರವಣಿಗೆ

'ಪೇಶ್ವೈ' ಎಂದು ಕರೆಯಲಾಗುವ ಧಾರ್ಮಿಕ ಮೆರವಣಿಗೆಯನ್ನು, ಮೈತುಂಬ ಬೂದಿ ಬಳಿದುಕೊಂಡ ಮಹಾನಿರ್ವಾಣ ಅಖಾರ ನಾಗಾ ಸಾಧುಗಳು ಕೈಗೊಂಡರು. ನಗಾರಿಯನ್ನು ಬಾರಿಸುತ್ತ, ಉದ್ಘಾಷಗಳನ್ನು ಕೂಗುತ್ತ ನೂರಾರು ಸಾಧುಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಧ್ವಜಾರೋಹಣ ಸಮಾರಂಭದಲ್ಲಿ ಸಾಧುಗಳಿಂದ ನರ್ತನ

ಧ್ವಜಾರೋಹಣ ಸಮಾರಂಭದಲ್ಲಿ ಸಾಧುಗಳಿಂದ ನರ್ತನ

ಧಾರ್ಮಿಕ ಧ್ವಜಾರೋಹಣ ಸಮಾರಂಭಕ್ಕೂ ಮುನ್ನ ಕಾವಿಧಾರಿ ಸಾಧುಗಳಿಂದ ನರ್ತನ. ಭಜನೆಗಳನ್ನು ಮಾಡುತ್ತ ಸಾಧುಗಳು ಈ ಸಮಯದಲ್ಲಿ ಕಾಲ ಕಳೆಯುತ್ತಾರೆ. ಇದನ್ನು ನೋಡುವುದಕ್ಕೆ ಮತ್ತು ಕೇಳುವುದಕ್ಕೆ ಸಖತ್ತಾಗಿರುತ್ತದೆ.

ಮೇಳದ ಅಧಿಕಾರಿಗಳ ಜೊತೆ ಸಾಧು ಮೀಟಿಂಗ್

ಮೇಳದ ಅಧಿಕಾರಿಗಳ ಜೊತೆ ಸಾಧು ಮೀಟಿಂಗ್

ಅಲಹಾದಾದ್ ಕುಂಭ ಮೇಳದಲ್ಲಿ ಪೂಜೆ ಪುನಸ್ಕಾರ ನಡೆಸುವ ಅಖಾರ ಸಾಧುಗಳು, ಅಲ್ಲಿ ಎಲ್ಲ ಆಯೋಜನೆ ಮಾಡುತ್ತಿರುವ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ನಂತರ ಸಂಭಾಷಣೆಯಲ್ಲಿ ತೊಡಗಿರುವುದು.

ಸಾಧುಗಳಿಂದ ಪೇಠ್ ಪೂಜಾ

ಸಾಧುಗಳಿಂದ ಪೇಠ್ ಪೂಜಾ

'ಪೇಶ್ವೈ' ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಭಾಗವಹಿಸುವ ಜುನಾ ಅಖಾರ ಸಾಧುಗಳಿಗೆ 'ಲಂಗರ್' ಅನ್ನ ಸಂತರ್ಪಣೆ ಮಾಡಲಾಯಿತು.

ಕೇಶರಾಶಿ ತೋರುತ್ತಿರುವ ನಾಗಾ ಸಾಧುಗಳು

ಕೇಶರಾಶಿ ತೋರುತ್ತಿರುವ ನಾಗಾ ಸಾಧುಗಳು

ಇಲ್ಲಿ ನಾನಾ ಸಾಧನೆಯನ್ನು ಮಾಡಿರುವ ನಾನಾಬಗೆಯ ನಾಗಾ ಸಾಧುಗಳನ್ನು ನೋಡಬಹುದಾಗಿದೆ. ಕೆಲ ನಾಗಾ ಸಾಧುಗಳು ತಾವು ವರ್ಷಗಳ ಕಾಲ ಜತನದಿಂದ ಕಾಪಾಡಿಕೊಂಡು ಬಂದಿರುವ ಕೇಶರಾಶಿಯನ್ನು ತೋರುತ್ತಿರುವುದು. ಇದಕ್ಕೆ ಅವರು ನಿಯಮಿತವಾಗಿ ಏನು ಹಚ್ಚುತ್ತಾರೆ ಎಂಬುದನ್ನು ಅವರನ್ನೇ ಕೇಳಿ ತಿಳಿದುಕೊಳ್ಳಬೇಕು.

ಆನೆಯಿದೆ ಆದರೆ ಅಂಬಾರಿ ಇಲ್ಲ

ಆನೆಯಿದೆ ಆದರೆ ಅಂಬಾರಿ ಇಲ್ಲ

'ಪೇಶ್ವೈ' ಮೆರವಣಿಗೆಗೆ ಸಿದ್ಧವಾಗಿರುವ ಅಲಂಕೃತ ಆನೆಯನ್ನು ತದೇಕಚಿತ್ತದಿಂದ ನೋಡುತ್ತಿರುವ ಸಾಧುಗಳ ಹಿಂಡು. ಈ ಆನೆಯ ಹಿಂದೆ ಜೈಜೈ ಕಾರ ಹಾಕುತ್ತ, ಭಜನೆಗಳನ್ನು ಹಾಡುತ್ತ, ಕುಣಿದಾಡುತ್ತ ಮೆರವಣಿಗೆಯಲ್ಲಿ ಸಾಧುಗಳು ಸಾಗುತ್ತಾರೆ.

ಚಿಲ್ ಮಾಡುವ ಚಳಿಯಲ್ಲಿ ಚಿಲ್ಲಮ್ ಸೇವನೆ

ಚಿಲ್ ಮಾಡುವ ಚಳಿಯಲ್ಲಿ ಚಿಲ್ಲಮ್ ಸೇವನೆ

ಯಪ್ಪೋ ಏನ್ ಚಳಿ? ಮೇಲೆ ನಿರಭ್ರ ಆಕಾಶ, ಭೂಮಿಯ ಮೇಲೆ ಮೈನಡುಗಿಸುವ 10ರಿಂದ 15 ಡಿಗ್ರಿ ಸೆಂಟಿಗ್ರೇಡ್ ಚಳಿ. ಮೈತುಂಬ ಬಟ್ಟೆ ಹೊದ್ದಿದ್ದರೂ ಈ ಚಳಿಯನ್ನು ಒದ್ದೋಡಿಸಲು ಬೂದಿ ಬಳಿದುಕೊಂಡಿರುವ ಸಾಧುಗಳು ಚಿಲ್ಲಮ್ ಎಂಬ ಬೀಡಿ ಸೇದಿ ಮೈಬೆಚ್ಚಗೆ ಮಾಡಿಕೊಳ್ಳುತ್ತಾರೆ.

ಮೈಕಾಯಿಸುತ್ತಿರುವ ಸಾಧುಗಳು

ಮೈಕಾಯಿಸುತ್ತಿರುವ ಸಾಧುಗಳು

ಮೈಯಲ್ಲಿ ಗುಳ್ಳೆ ಎಬ್ಬಿಸುವ ಚಳಿಯನ್ನು ಓಡಿಸಲು ಬೀಡಿಯೊಂದೆ ಸಾಕಾ? ನಸುಕಿನಲ್ಲಿ ಬಯಲಿಗೆ ಹೋಗಲು ಕೈಯಲ್ಲಿ ಚೆರಿಗೆ ಕೂಡ ಹಿಡಿಯಲು ಅಸಾಧ್ಯವಾಗುವಂತಹ ಚಳಿಯಲ್ಲಿ ಬೆಂಕಿ ಹಾಕಿ ಕೈಕಾಯಿಸಿಕೊಳ್ಳುವುದೊಂದೇ ದಾರಿ. ಸಾಧುಗಳು ಕೂಡ ಅದನ್ನೇ ಮಾಡುತ್ತಿದ್ದಾರೆ. ಇಲ್ಲದಿದ್ದರೆ ಬೆರಳು ಸೆಟೆದು, ಕೈಯಲ್ಲಿಂದ ಚೆರಿಗೆ ಜಾರಿಬಿದ್ದು ಹೋದರೂ ಗೊತ್ತಾಗಿರುವುದಿಲ್ಲ.

ಹಕ್ಕಿಗಾಗಿ ಸಾಧುಗಳಿಂದ ಪ್ರತಿಭಟನೆ

ಹಕ್ಕಿಗಾಗಿ ಸಾಧುಗಳಿಂದ ಪ್ರತಿಭಟನೆ

ತಮ್ಮ ಹಕ್ಕಿಗಾಗಿ ಹೋರಾಡಲು ಕುಂಭ ಮೇಳಕ್ಕಿಂತ ಇನ್ನೊಂದು ಸಂದರ್ಭ ಬೇಕಾ? ಸಾಧುಗಳು ಕೂಡ ತಮಗೆ ಸೂಕ್ತವಾದ ಜಾಗ ನೀಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಧರಣಿ ನಡೆಸಿ ತಮ್ಮ ಪ್ರತಿರೋಧ ವ್ಯಕ್ತಪಡಿಸಿದರು.

ಕಾರ್ಮಿಕರಿಗೊಂದು ಥ್ಯಾಂಕ್ಸ್

ಕಾರ್ಮಿಕರಿಗೊಂದು ಥ್ಯಾಂಕ್ಸ್

ಕುಂಭ ಮೇಲೆ ಅತಿ ಸುಸೂತ್ರವಾಗಿ ನಡೆಯಲೆಂದು ಭಕ್ತಾದಿಗಳಿಗಾಗಿ ನಿರ್ಮಿಸಲಾಗುತ್ತಿರುವ ತಾತ್ಕಾಲಿಕ ಸೇತುವೆ ನಿರ್ಮಾಣವಾಗುತ್ತಿದೆ. ಇದಕ್ಕಾಗಿ ನೂರಾರು ಕಾರ್ಮಿಕರು ಹಗಲಿರುಳು ದುಡಿಯುತ್ತಿದ್ದಾರೆ. ಅವರಿಗೊಂದು ಥ್ಯಾಂಕ್ಸ್ ಹೇಳಬೇಕಲ್ಲವೆ?

ಗಂಗಾ ತಟದಲ್ಲಿ ಬೀಡು ಬಿಟ್ಟಿರುವ ಟೆಂಟ್

ಗಂಗಾ ತಟದಲ್ಲಿ ಬೀಡು ಬಿಟ್ಟಿರುವ ಟೆಂಟ್

ಗಂಗಾ, ಯಮುನಾ ಮತ್ತು ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಭಾರತೀಯ ಸಾಧುಗಳಿಗಾಗಿ ನೂರಾರು ಟೆಂಟ್‌ಗಳನ್ನು ಹಾಕಲಾಗಿದೆ. ನೂರಾರು ಟೆಂಟುಗಳು ವಿಹಂಗಮ ನೋಟ.

ಆರೋಗ್ಯ ತಪಾಸಣೆಗೆ ಆಂಬುಲನ್ಸ್

ಆರೋಗ್ಯ ತಪಾಸಣೆಗೆ ಆಂಬುಲನ್ಸ್

ಜನವರಿ 27ರಿಂದ ಆರಂಭವಾಗುತ್ತಿರುವ ಕುಂಭ ಮೇಳಕ್ಕೆ 10 ಕೋಟಿಗೂ ಅಧಿಕ ಜನರು ಜಮಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನರ ಆರೋಗ್ಯ ರಕ್ಷಣೆಗಾಗಿ ನೂರಾರು ಆಂಬುಲನ್ಸ್‌ಗಳಿಗೆ ಉತ್ತರ ಪ್ರದೇಶದ ಆರೋಗ್ಯ ಸಚಿವ ಅಹ್ಮದ್ ಹಸನ್ ಅವರು ಚಾಲನೆ ನೀಡಿದರು.

ಗರ್ಭಪಾತ ಬಿಡಿ ದತ್ತು ಪಡೆಯಿರಿ

ಗರ್ಭಪಾತ ಬಿಡಿ ದತ್ತು ಪಡೆಯಿರಿ

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯೊಬ್ಬರು, 'ದಯವಿಟ್ಟು ಅಬಾರ್ಷನ್ ಮಾಡಿಸಿಕೊಳ್ಳಬೇಡಿ, ಮಕ್ಕಳನ್ನು ದತ್ತು ಪಡೆಯಿರಿ' ಎಂಬ ಭಿತ್ತಿಪತ್ರವನ್ನು ಹಿಡಿದು ಸಂದೇಶ ರವಾನಿಸುತ್ತಿರುವುದು.

ಅಲಹಾಬಾದ್ ರೈಲು ನಿಲ್ದಾಣಕ್ಕೆ ಮಂತ್ರಿ ಆಗಮನ

ಅಲಹಾಬಾದ್ ರೈಲು ನಿಲ್ದಾಣಕ್ಕೆ ಮಂತ್ರಿ ಆಗಮನ

ಮಹಾ ಕುಂಭ ಮೇಳಕ್ಕಾಗಿ ಮಾಡಲಾಗಿರುವ ರೈಲು ವ್ಯವಸ್ಥೆಯ ವೀಕ್ಷಣೆಗೆಂದು ಕೇಂದ್ರ ರೈಲ್ವೆ ಸಚಿವ ಪವನ್ ಕುಮಾರ್ ಬನ್ಸಾಲ್ ಅವರು ಅಲಹಾಬಾದ್‌ಗೆ ಆಗಮಿಸಿದ್ದರು. ದೇಶದ ಎಲ್ಲೆಡೆಯಿಂದ ಲಕ್ಷಾಂತರ ಜನರು ರೈಲಿನ ಮುಖಾಂತರ ಕುಂಭ ಮೇಳಕ್ಕೆ ಆಗಮಿಸಲಿದ್ದಾರೆ.

English summary
What is it that attracts hordes of people from across the world to Kumbh Mela? Call it devotion, religious fervour or simply the excitement to be part of a festival which has crossed religious boundaries. Kumbh Mela underway at Allahabad, Uttar Pradesh is considered as biggest religious gathering in the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X