ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಡಿಕೇರಿ ಜನತೆಯನ್ನು ಕಂಗೆಡಿಸಿರುವ ಶೀತಗಾಳಿ

By ಬಿ.ಎಂ.ಲವಕುಮಾರ್
|
Google Oneindia Kannada News

Cold breeze disrupts normal life in Madikeri
ಮಡಿಕೇರಿ, ಡಿ. 18 : ಡಿಸೆಂಬರ್ ತಿಂಗಳಲ್ಲಿ ಮಡಿಕೇರಿಯಲ್ಲಿ ಮಂಜುಕವಿದ ವಾತಾವರಣ, ಕೊರೆಯುವ ಚಳಿ ಇರುವುದು ಸಾಮಾನ್ಯ. ಆದರೆ, ನಗರದಲ್ಲಿ ಕಳೆದ ಎರಡು ದಿನಗಳಿಂದ ವಾತಾವರಣದಲ್ಲಿ ಏರುಪೇರಾಗಿದ್ದು, ರಭಸದಿಂದ ಬೀಸುತ್ತಿರುವ ಚಳಿಗಾಳಿಯನ್ನು ಕೆಲವರು ಪ್ರಳಯದ ಮುನ್ಸೂಚನೆ ಎಂಬಂತೆ ಬಿಂಬಿಸುತ್ತಿರುವುದರಿಂದ ನಗರದ ಜನತೆ ಆತಂಕಕ್ಕೀಡಾಗಿದ್ದಾರೆ.

ಇದ್ದಕ್ಕಿದ್ದಂತೆಯೇ ನಗರದಲ್ಲಿ ವಿಪರೀತ ಎನ್ನುವಂತಹ ಗಾಳಿಯೊಂದಿಗೆ ಮೈಕೊರೆಯುವ ಚಳಿ ಕಂಡುಬಂದಿದ್ದು, ಶೀತಹವೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಜನರು ಮನೆಯ ಬಾಗಿಲು ಹಾಕಿಕೊಂಡು ಬೆಚ್ಚಗಿರಲು ಪ್ರಯತ್ನಿಸುತ್ತಿದ್ದಾರೆ. ಬೆಳಿಗ್ಗೆ ಮತ್ತು ಸಂಜೆ ಜನರು ಮನೆಯಿಂದ ಹೊರ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ.

ಭಾರೀ ರಭಸದಿಂದ ಬೀಸುತ್ತಿರುವ ಬಿರುಗಾಳಿಯಿಂದಾಗಿ ಮಡಿಕೇರಿ ಕೆಎಸ್‌ಆರ್‌ಟಿಸಿ ಘಟಕದ ಕಚೇರಿಯ ಮೇಲ್ಭಾಗಕ್ಕೆ ಅಳವಡಿಸಿದ್ದ ಶೀಟುಗಳು ಹಾರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಖಾಸಗಿ ಶಾಲೆಯೊಂದರ ಶಿಕ್ಷಕಿಯೊಬ್ಬರಿಗೆ ತಾಗಿದ್ದರಿಂದ ಗಾಯಗಳಾದ ಘಟನೆಯೂ ನಡೆದಿದೆ.

ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿರುವ ಮರಗಳ ಒಣಗಿದ ರೆಂಬೆಗಳು ಗಾಳಿಯ ರಭಸಕ್ಕೆ ನೆಲಕ್ಕುರುಳುತ್ತಿರುವುದರಿಂದ ಕಚೇರಿ ಕೆಲಸಕ್ಕೆ ಆಗಮಿಸುತ್ತಿದ್ದ ಸಾರ್ವಜನಿಕರು ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವಂತಹ ಸನ್ನಿವೇಶವೂ ನಿರ್ಮಾಣವಾಗಿದೆ. ಪ್ರತಿಭಟನೆಗೆ ಬಂದಿದ್ದ ಅರಣ್ಯ ಮೂಲ ಬುಡಕಟ್ಟುಗಳ ಒಕ್ಕೂಟದ ಕಾರ್ಯಕರ್ತರು ಕೂಡ ಹೆದರಿಕೆಯಿಂದಲೇ ಮುಷ್ಕರದಲ್ಲಿ ಪಾಲ್ಗೊಂಡಿದ್ದು ಕಂಡುಬಂತು.

ಮಡಿಕೇರಿ ನಗರ ಸಭೆ ಬಳಿಯ ಉದ್ಯಾನವನದಲ್ಲಿ ಅಳವಡಿಸಲಾಗಿರುವ ಪವನ ವಿದ್ಯುತ್ ಉತ್ಪಾದನಾ ಯಂತ್ರದ ರೆಕ್ಕೆಗಳು ಬಿರುಗಾಳಿಗೆ ಸಿಲುಕಿ, ಭಾರೀ ಸದ್ದಿನೊಂದಿಗೆ ಸುತ್ತುತ್ತಿರುವುದರಿಂದಾಗಿ ಆ ಭಾಗದ ನಾಗರಿಕರ ನಿದ್ದೆಗೆ ತೊಂದರೆಯಾಗುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.

ನಗರದಲ್ಲಿ ಕಳೆದ ಎರಡು ದಿನಗಳಿಂದ ಕಂಡು ಬರುತ್ತಿರುವ ಅಹಿತಕರ ವಾತಾವರಣವನ್ನು ಕಂಡ ಕೆಲವರು ಇದು ಪ್ರಳಯದ ಮುನ್ಸೂಚನೆ ಎಂಬ ಗಾಳಿ ಸುದ್ದಿಯನ್ನು ಹರಡುತ್ತಿದ್ದು ಜನತೆ ಬೆಚ್ಚಿಬಿದ್ದಿದ್ದಾರೆ.

English summary
Cold breeze has disrupted the normal life in Madikeri city. People are fearing to get out of house as strong breeze is uprooting trees and flew away roof tops. Few people are spreading rumors about doomsday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X