ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಪೊರೇಟರ್ ಗೌರಮ್ಮ 15ರವರೆಗೆ ಪೊಲೀಸ್ ಕಸ್ಟಡಿಗೆ

By Srinath
|
Google Oneindia Kannada News

Kannada Editor Lingaraju murder case Corporator Gowramma arrested
ಬೆಂಗಳೂರು,ಡಿ.13: ನಿನ್ನೆ ತಂಜಾವೂರಿನಲ್ಲಿ ಬಂಧನಕ್ಕೊಳಗಾಗಿದ್ದ ಹತ್ಯಾ ಆರೋಪಿ ಗೌರಮ್ಮನನ್ನು ನ್ಯಾಯಾಲಯ ಡಿಸೆಂಬರ್ 15ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಗೌರಮ್ಮ ಪತಿ ಗೋವಿಂದರಾಜು ಈಗಾಗಲೇ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಹಿಂದಿನ ಸುದ್ದಿ:
ಪತ್ರಕರ್ತ ಲಿಂಗರಾಜು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಚಾಮರಾಜಪೇಟೆಯ ಅಜಾದ್ ನಗರ ಕಾರ್ಪೊರೇಟರ್ ಗೌರಮ್ಮನನ್ನು ಕೊನೆಗೂ ಬಂಧಿಸಿದ್ದಾರೆ.

ಪ್ರಕರಣದ ಸಂಬಂಧ ನೇಮಿಸಲಾಗಿದ್ದ ವಿಶೇಷ ತನಿಖಾ ತಂಡ ಗೌರಮ್ಮನನ್ನು ತಮಿಳುನಾಡಿನ ತಂಜಾವೂರಿನಲ್ಲಿ ಇಂದು ಬೆಳಗ್ಗೆ ಬಂಧಿಸಿದ್ದು, ಸಂಜೆ ವೇಳೆಗೆ ಬೆಂಗಳೂರಿನಲ್ಲಿ ಕೋರ್ಟಿಗೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಆಯುಕ್ತ ಮೊಹಂತಿ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.

ಪತ್ರಕರ್ತ ಲಿಂಗರಾಜು ಹತ್ಯೆ ಪ್ರಕರಣ ತನಿಖೆಯಲ್ಲಿ ರಾಜಕೀಯ ಒತ್ತಡ ನುಸುಳಿತ್ತು. ಹಾಗಾಗಿ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ, ಗೌರಮ್ಮನ ಪತಿ ಗೋವಿಂದರಾಜುನನ್ನು ಬಂಧಿಸಿದ್ದರೇ ಹೊರತು, ಗೌರಮ್ಮನ ತಂಟೆಗೆ ಹೋಗಿರಲಿಲ್ಲ.

ಜತೆಗೆ, ತನಿಖೆಗೆ ಅಗತ್ಯವಾಗಿದ್ದ ಗೋವಿಂದರಾಜುನ ಮೊಬೈಲ್ ಅನ್ನು ಸಹ ವಶಪಡಿಸಿಕೊಂಡಿರಲಿಲ್ಲ. ಈ ಮಧ್ಯೆ, ಕಳೆದ ತಿಂಗಳು ಮಗಳ ಮದುವೆ ನೆರವೇರಿದ ಬಳಿಕ ಗೌರಮ್ಮ ತಲೆಮರೆಸಿಕೊಂಡಿದ್ದರು.

ಆದರೆ ಬೆಂಗಳೂರು ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಹೈಕೋರ್ಟ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸುತ್ತೇವೆ ಎಂದು ಗುಡುಗಿತ್ತು. ಇದಕ್ಕೆ ಪೂರಕವಾಗಿ, ಗೌರಮ್ಮ ತಮ್ಮಲ್ಲಿದ್ದ ಚಿನ್ನವನ್ನು ಅಡವಿಟ್ಟು, ಸುಪಾರಿ ಹಣ ಪೂರೈಸಿದ್ದಾರೆ ಎಂದೂ ಆರೋಪಿಸಲಾಗಿತ್ತು. ಇದರಿಂದ ಎಚ್ಚೆತ್ತ ಪೊಲೀಸರು ಕೊನೆಗೂ ಗೌರಮ್ಮನನ್ನು ಬಂಧಿಸಿದ್ದಾರೆ.

ಪ್ರಕರಣವೇನು?: ತಮ್ಮ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ ಕಾರಣಕ್ಕೆ ನವೆಂಬರ್‌ನಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತನೂ ಆಗಿದ್ದ ಪತ್ರಕರ್ತ ಲಿಂಗರಾಜುನನ್ನು ಗೌರಮ್ಮ ಹಾಗೂ ಆಕೆಯ ಪತಿ ಗೋವಿಂದರಾಜು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದರು. ಈ ಪ್ರಕರಣದಲ್ಲಿ ಗೌರಮ್ಮ ಪತಿ ಗೋವಿಂದರಾಜು ಸೇರಿ ಎಂಟು ಮಂದಿಯನ್ನು ಬಂಧಿಸಿದ ಪೊಲೀಸರು, ಗೌರಮ್ಮ ಪಾತ್ರದ ಬಗ್ಗೆ ಸ್ಪಷ್ಟವಾಗಿ ತಿಳಿಸದೆ ಜಾರಿಕೊಂಡಿದ್ದರು.

ಆದರೆ, ಲಿಂಗರಾಜು ಕೊಲೆ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡ ಹೈ ಕೋರ್ಟ್‌, ಈ ಕೊಲೆ ಪ್ರಕರಣದಲ್ಲಿ ಪೊಲೀಸರ ತನಿಖೆಯ ವೈಖರಿ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೇ, ಬಿಬಿಎಂಪಿ ಸದಸ್ಯೆ ಗೌರಮ್ಮರನ್ನು ಬಂಧಿಸದಿರುವ ಬಗ್ಗೆ ವಿವರಣೆ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದರು. ಈ ನಿರ್ದೇಶನ ಹೊರ ಬಿದ್ದ ಬೆನ್ನಲ್ಲೇ ಗೌರಮ್ಮ ಅವರನ್ನು ಪೊಲೀಸರು ಸೆರೆ ಹಿಡಿದು ತರುವಲ್ಲಿ ಯಶಸ್ವಿಯಾಗಿದ್ದಾರೆ.

ವಿಶೇಷ ತನಿಖಾ ದಳ ರಚಿಸಿದ ಹೈಕೋರ್ಟ್‌:
ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಕೊಲೆ ಪ್ರಕರಣದ ತನಿಖೆಗೆ ಹೈಕೋರ್ಟ್‌ ಬುಧವಾರ ವಿಶೇಷ ತನಿಖಾ ದಳ ರಚಿಸಿದೆ. ಹೈಕೋರ್ಟ್‌ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿ.ಜೆ. ಸೇನ್‌ ಹಾಗೂ ನ್ಯಾ. ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠಕ್ಕೆ, ಸರ್ಕಾರದ ಒಪ್ಪಿಗೆ ಮೇರೆಗೆ ನಗರ ಜಂಟಿ ಪೊಲೀಸ್‌ ಆಯುಕ್ತ ಪ್ರಣವ್‌ ಮೊಹಾಂತಿ ಹಾಗೂ ಸಿಐಡಿ ಎಸ್‌.ಪಿ. ಅಬ್ದುಲ್‌ ಅಹದ್‌ ಅವರನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸಿ ಆದೇಶಿಸಿದೆ.

ಅಲ್ಲದೇ, ತನಿಖಾ ತಂಡವು ಲಿಂಗರಾಜು ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ (ನ.22ರಂದು) ದಿನದಿಂದ ಅನ್ವಯವಾಗುವಂತೆ ಮೂರು ತಿಂಗಳ ಅವಧಿಯಲ್ಲಿ ತನಿಖೆ ಪೂರ್ಣಗೊಳಿಸಬೇಕು. ಸರ್ಕಾರವು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ತನಿಖಾ ದಳಕ್ಕೆ ಒದಗಿಸಬೇಕು ಹಾಗೂ ಅಗತ್ಯ ಕಂಡಬಂದಲ್ಲಿ ತನಿಖಾಧಿಕಾರಿಗಳು ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬಹುದು ಎಂದು ಆದೇಶಿಸಿದೆ.

ಜತೆಗೆ, ಸರ್ಕಾರದ ಶಿಫಾರಸು ಆಧರಿಸಿ ಪ್ರಕರಣ ಕುರಿತ ಅಧೀನ ನ್ಯಾಯಾಲಯದ ವಿಚಾರಣೆಗೆ ಸರ್ಕಾರಿ ವಿಶೇಷ ಅಭಿಯೋಜಕರಾಗಿ ಹಿರಿಯ ವಕೀಲ ಸದಾಶಿವ ಮೂರ್ತಿ ಅವರನ್ನು ನೇಮಕ ಮಾಡಿದ್ದು, ಲಿಂಗರಾಜು ಕೊಲೆ ಪ್ರಕರಣದ ಎಲ್ಲಾ ಸಾಕ್ಷಿದಾರರಿಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ಸೂಚಿಸಿದೆ.

ಗೌರವಧನ ಲಿಂಗರಾಜು ಪತ್ನಿಗೆ
ಪ್ರಕರಣ ಕುರಿತು ಕೋರ್ಟ್‌ಗೆ ಸೂಕ್ತ ಸಲಹೆ ಹಾಗೂ ಮಾಹಿತಿ ನೀಡಿದ ಕೋರ್ಟ್‌ ಸಹಾಯಕ (ಅಮಿಕಸ್‌ ಕ್ಯೂರಿ) ವಕೀಲ ಹಸ್ಮತ್‌ ಪಾಷಾ ಅವರಿಗೆ 40 ಸಾವಿರ ಗೌರವಧನ ನೀಡುವಂತೆ ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ಆದೇಶಿಸಿತು. ಆದರೆ, ಹಸ್ಮತ್‌ ಪಾಷಾ ಅವರು ಆ ಗೌರವಧನವನ್ನು ಲಿಂಗರಾಜು ಪತ್ನಿಗೆ ಪರಿಹಾರ ರೂಪದಲ್ಲಿ ನೀಡುವಂತೆ ನ್ಯಾಯಾಲಯವನ್ನು ಕೋರುವ ಮೂಲಕ ಮಾನವೀಯತೆ ಮೆರೆದರು.

ಪಾಷಾ ಅವರ ನಡೆಯನ್ನು ಪ್ರಶಂಸಿಸಿದ ಮುಖ್ಯ ನ್ಯಾಯಮೂರ್ತಿ ಸೇನ್‌ ಅವರು, 'ಸರ್ಕಾರ ಪರಿಹಾರ ನೀಡುವುದಿಲ್ಲ. ಅದರ ಬದಲಾಗಿ ನೀವೇ ಸರ್ಕಾರದಿಂದ ಗೌರವಧನ ಪಡೆದು ಲಿಂಗರಾಜು ಪತ್ನಿಗೆ ಹಸ್ತಾಂತರಿಸಿ' ಎಂದು ಸೂಚಿಸಿದರು.

English summary
Bangalore Police have arrested Corporator Gowramma in Tanjavur today (Dec 12) in the Maha Prachanda Kannada Editor Lingaraju murder case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X