ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಉದಾಸಿ: ಹಾನ್ಗಲ್ ಅಣ್ಣ, ಹಾವೇರಿ ತಮ್ಮ

By Shami
|
Google Oneindia Kannada News

BJP minister CM Udasi big brother of Hanagal
ರಾಣಿಬೆನ್ನೂರು, ಡಿ. 8 : ಜಿಲ್ಲಾ ಕೇಂದ್ರವಾಗಿ 15 ವರ್ಷಗಳೇ ಉರುಳಿದರೂ ಜಿಲ್ಲೆಯ ಹೆಡ್ ಕ್ವಾರ್ಟರ್ಸ್ ಹಾವೇರಿ ಮಾತ್ರ ಆವತ್ತು ಹೇಗಿತ್ತೋ ಇವತ್ತೂ ಹಾಗೇ ಇದೆ. ಡಿಸಿ ಆಫೀಸು ಎಸ್ ಪಿ ಆಫೀಸು ಬಿಟ್ಟರೆ ಅಲ್ಲಿ ಹೇಳಿಕೊಳ್ಳುವಂಥ ಹೊಸದೇನು ಹುಟ್ಟಿಲ್ಲ. ಭಾರತದ ಆತ್ಮ ಹಳ್ಳಿಗಳಲ್ಲಿದೆ ಎಂಬ ವೇದವಾಕ್ಯಕ್ಕೆ ಹಾವೇರಿ ಇಂದಿಗೂ ಒಂದು ಉದಾಹರಣೆ.

ಇದು ಗೊತ್ತಿದ್ದರಿಂದಲೇ ನಾನು ಬಸ್ ಟಿಕೆಟ್ಟನ್ನು ರಾಣಿಬೆನ್ನೂರಿಗೆ ಮಾಡಿಸಿದ್ದೆ. ಹಾವೇರಿ ಜಿಲ್ಲಾಕೇಂದ್ರವಾದರೂ ರಾಣಿಬೆನ್ನೂರು ಜಿಲ್ಲೆಯ ಬಿಸಿನೆಸ್ ಕ್ಯಾಪಿಟಲ್. ಹಾಗಾಗಿ ಇಲ್ಲಿ ನಾಕಾರು ವಸತಿಗೃಹಗಳಿವೆ. ಇದ್ದದ್ದರಲ್ಲಿ ಈ ಊರಿನ ಲೀಲಾ ಪ್ಯಾಲೇಸ್ ಆಗಿರುವ ಹೋಟೆಲ್ ಸೂರಜ್ ನಲ್ಲಿ ಜೋಡಿ ಹಾಸಿಗೆಯ ಒಂದು ಕೊಠಡಿ ಬುಕ್ ಮಾಡಿಸಿದ್ದೆ.

ಬೆಳಗ್ಗೆ ನಾಲಕ್ಕೂವರೆಗೆನೇ ರಾಜಹಂಸ ನನ್ನನ್ನ ಬಸ್ ಸ್ಟ್ಯಾಂಡಿನಲ್ಲಿ ಇಳಿಸಿ ಹೊಸ ಪ್ರಯಾಣಿಕರನ್ನು ಹತ್ತಿಸಿಕೊಂಡು ಮಾಸೂರು, ರಟ್ಟಿಹಳ್ಳಿ ಕಡೆಗೆ ಹೊರಟಿತು. ನಾನು ಹೋಟೆಲಿನ ಎರಡನೇ ಮಹಡಿ ಹತ್ತಿ ಲಗೇಜು ಇಟ್ಟು ಚಾ ಕುಡಿಯಕ್ಕೆ ಕೆಳಗಿಳಿದು ಬರುವ ಹೊತ್ತಿಗೆ ಫುಟ್ ಪಾತಿನಲ್ಲಿ ದಿನಪತ್ರಿಕೆಗಳ ಬಿಸಿಬಿಸಿ ಬಂಡಲ್ಲುಗಳು ಬಿದ್ದಿದ್ದವು. ತನ್ನನ್ನು ವಿಂಗಡಿಸುವ, ವಿತರಿಸುವ ಹುಡುಗರಿಗಾಗಿ ಕಾಯುತ್ತಿದ್ದವು.

ಊರಿಗೆ ಸರಬರಾಜು ಆಗಿದ್ದ ಎಲ್ಲ ಡಾಕ್ ಎಡಿಷನ್ನುಗಳ ಒಂದೊಂದು ಪ್ರತಿ ಕೊಂಡೆ. ಎಲ್ಲವೂ ಹುಬ್ಬಳ್ಳಿ ಆವೃತ್ತಿಗಳೇ. ವಿಜಯವಾಣಿ, ಕನ್ನಡಪ್ರಭ, ವಿಜಯಕರ್ನಾಟಕ, ಉದಯವಾಣಿ, ದಿ ಟೈಂಸ್ ಆಫ್ ಇಂಡಿಯಾ, ದಿ ಹಿಂದೂ ಸಿಕ್ಕವು. ಯಾಕೋ ಗೊತ್ತಿಲ್ಲ, ಗಂಟೆ ಐದಾದರೂ ಪ್ರಜಾವಾಣಿ ಇನ್ನೂ ಬಂದಿರಲಿಲ್ಲ.

ಚಾ ಕುಡಿಯುವಾಗ ಯಾರೋ ಒಬ್ಬರು ನನ್ನನ್ನು ಗುರುತು ಹಚ್ಚಿ ಮಾತಿಗಿಳಿದರು. ಅವರ ಹೆಸರು ದಶರಥ್. ಹಾವೇರಿಯಲ್ಲಿ ಶಾಲಾ ಮಾಸ್ತರ್ ಅಂತೆ. ರಾಜಕೀಯ ಗೊತ್ತಿರಲೇಬೇಕು. "ಓ ನೀವು ಕೆಜೆಪಿ ಸಮಾವೇಶಕ್ಕೆ ಬಂದಿರಬೇಕು ಅಲ್ವಾ ಸಾರ್" ಎಂದರು. ನಾನು ಗೋಣು ಆಡಿಸುವುದಕ್ಕೆ ಮುಂಚೆನೇ ಜಿಲ್ಲೆ, ರಾಜ್ಯದ ರಾಜಕೀಯ ಅಖಾಡಕ್ಕೆ ಧುಮುಕಿದರು.

ಲೋಕೋಪಯೋಗಿ ಸಚಿವ ಸಿಎಂ ಉದಾಸಿ ಅವರ ರಾಜಕೀಯ ಶಾಣೇತನಗಳನ್ನು ಹೇಳುತ್ತಾ ಹೋದರು. "ಉದಾಸಿ ಓದಿರುವುದು 7ನೇ ಕ್ಲಾಸ್ ಆದರೂ ಬ್ರಿಲಿಯೆಂಟ್ ಮನ್ಷ್ಯ. ನಿಮ್ಮ ಕಡೆ ಡಾ. ರಾಜ್ ಕುಮಾರ್ ಅವರನ್ನು ಅಣ್ಣಾ ಎಂದು ಕರೆಯುವ ಹಾಗೆ ಹಾನಗಲ್ ನಲ್ಲಿ ಮಂದಿ ಉದಾಸಿಯನ್ನು ಅಣ್ಣಾ ಅಂತನೇ ಕರೀತಾರೆ ಸಾರ್" ಅಂದ್ರು.

ಇನ್ನು ನಾನು ನಿಂತಿರುವ ನೆಲ ರಾಣಿಬೆನ್ನೂರಿನ ಶಾಸಕ ಜಿ. ಶಿವಣ್ಣಂದು. ಅವರು ಈ ಕ್ಷಣದವರೆಗೂ ಬಿಜೆಪಿಯ ನಿಷ್ಠಾವಂತ ಶಾಸಕ. ನಾಳೆ ಹುಟ್ಟುವವನು ಬೇರೆ ಸೂರ್ಯ. ದಶರಥ್ ಹೇಳಿದರು. "ಉದಾಸಿಯ ಮಗಳನ್ನು ಶಿವಣ್ಣನ ಮಗನಿಗೆ ಕೊಟ್ಟು ಲಗ್ನ ಮಾಡಿದಾರೆ, ಶಿವಣ್ಣೋರು ಬೀಗರ ಮನೆಗೆ ಹೋಗೋದು ಖಂಡಿತ" ಎಂದು ಭವಿಷ್ಯ ಹೇಳಿದ್ರು.

ನಾನು ಮತ್ತೆ ರೂಮಿಗೆ ಬಂದು ಪೇಪರುಗಳನ್ನು ತಿರುವಿಹಾಕುತ್ತಾ ಕುಳಿತೆ. ಶಿವಣ್ಣನೋರು ಮತ್ತು ಉದಾಸಿಗಳು ಪರಸ್ಪರ ಬೀಗರೆಂಬ ನ್ಯೂಸ್ ಎಲ್ಲೂ ಪ್ರಿಂಟ್ ಆಗಿರಲಿಲ್ಲ. ಡಾಕ್ ಎಡಿಷನ್ನುಗಳಲ್ಲಾದರೂ ಇಂಥ ನ್ಯೂಸ್ ಕೊಡದಿದ್ದರೆ ಅವನೆಂಥ ನ್ಯೂಸ್ ಎಡಿಟರ್ ಎಂದುಕೊಂಡು ಮುಖಪುಟದಲ್ಲಿ ರಾರಾಜಿಸುತ್ತಿರುವ good morning Ranebennuru ಸುದ್ದಿಗಳತ್ತ ಕಣ್ಣುನೆಟ್ಟೆ.

English summary
Karnataka PWD minister C.M. Udasi is dubbed as 'big brother' of Hanagal, an assembly constituency in Haveri District. Udasi is close aid of ex-cm BSY, the torch bearer of new political party KJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X