ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣುತ್ಯಾಜ್ಯ ವಿರೋಧಿಸಿ ಕೆಜಿಎಫ್ ಬಂದ್ ಯಶಸ್ವಿ

By ವರದಿ: ಚ ಶ್ರೀನಿವಾಸಮೂರ್ತಿ
|
Google Oneindia Kannada News

Protest against dumping Koodankulam n-waste in KGF
ಕೋಲಾರ, ನ. 23 : ತಮಿಳುನಾಡಿನ ಕೂಡಂಕುಳಂ ಅಣು ತ್ಯಾಜ್ಯ ವಿಲೇವಾರಿಗೆ ಕೋಲಾರದ ಚಿನ್ನದ ಗಣಿಗಳನ್ನು ಆಯ್ಕೆ ಮಾಡಿಕೊಂಡಿರುವುದನ್ನು ವಿರೋಧಿಸಿ ಶುಕ್ರವಾರ ಕೆಜಿಎಫ್ ನಗರ ಹಾಗು ಗ್ರಾಮಂತರ ಪ್ರದೇಶಗಳಲ್ಲಿ ನಡೆಸಿದ ಸ್ವಯಂ ಪ್ರೇರಿತ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

ಬಂದ್‌ಗೆ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದವು. ಇಲ್ಲಿನ ವಕೀಲರ ಸಂಘ ಸಹ ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ ಬಂದ್‌ಗೆ ಬೆಂಬಲ ಸೂಚಿಸಿತ್ತು. ಸಾವಿರಾರು ಜನರು ರಸ್ತೆಗಿಳಿದು ಟೈರ್ ಸುಟ್ಟು, ಕೇಂದ್ರ ಸಚಿವರ ಪ್ರತಿಕೃತಿ ದಹಿಸಿ ತಮ್ಮ ಪ್ರತಿರೋಧ ವ್ಯಕ್ತಪಡಿಸಿದರು.

ನಗರದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಯಾವುದೇ ಬಸ್ ಸಂಚಾರವಿರಲಿಲ್ಲ. ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ತೆರಳುವ ಎಲ್ಲ ಬಸ್ಸುಗಳನ್ನು ತಡೆಹಿಡಯಲಾಗಿತ್ತು. ಹಾಲು ಮತ್ತು ತರಕಾರಿ ಸಾಗಾಟ ಹೊರತುಪಡಿಸಿದರೆ ಅಗತ್ಯ ವಸ್ತುಗಳ ಸಾಗಾಟ ಸಂಪೂರ್ಣ ನಿಂತಿತ್ತು. ಇಡೀದಿನ ಅಂಗಡಿ ಮುಂಗಟ್ಟುಗಳು ತೆರೆಯಲಿಲ್ಲ.

ಶಾಲಾ ಕಾಲೇಜು ಬಂದ್ : ಕೇಂದ್ರ ಸ್ವಾಮ್ಯದ ಬಿಇಎಂಎಲ್ ಸಂಸ್ಥೆ ರಜೆ ಘೋಷಿಸಿತ್ತು. ಎಲ್ಲ ಬ್ಯಾಂಕ್, ಶಾಲಾ ಕಾಲೇಜುಗಳು ಶುಕ್ರವಾರ ಬಂದ್ ಆಗಿದ್ದವು. ಕೆಜಿಎಫ್ ಮಾತ್ರವಲ್ಲ ಬಂಗಾರಪೇಟೆ, ಬೇತಮಂಗಲ, ಕೋಲಾರದಲ್ಲಿಯೂ ಕೂಡಂಕುಳಂ ತ್ಯಾಜ್ಯ ವಿಲೇವಾರಿಗೆ ವ್ಯಾಪಕ ಪ್ರತಿರೋಧ ವ್ಯಕ್ತವಾಗಿದೆ.

ತ್ಯಾಜ್ಯ ವಿಲೆವಾರಿ ಬಗ್ಗೆ ಪತ್ರಿಕಾ ವರದಿಗಳನ್ನು ನೋಡಿದ ಜನ ಮುಂದೇನು ಎಂಬ ಅತಂಕ ಅನುಮಾನಗಳಿಂದ ಭಯಭೀತಿಗೊಳಗಾಗಿದ್ದಾರೆ. ಮುಂದಾಗಬಹುದಾದ ಅನಾಹುತದ ಬಗ್ಗೆ ಭೀತಿಯಿಂದ ಮಾತನಾಡಿಕೊಳ್ಳುವ ಜನ ಕೇಂದ್ರ ಸರ್ಕಾರದ ವಿರುದ್ದ ಕೋಪೊದ್ರಿಕ್ತರಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರದ ಹುನ್ನಾರವನ್ನು ವಿರೋಧಿಸಿ ಸಾರ್ವಜನಿಕರು ಬೀದಿಗಿಳಿದು ಬಂದ್ ಬೆಂಬಲಿಸಿದ್ದು ವಿಶೇಷವಾಗಿತ್ತು.

ಸಂಪಂಗಿ ಆಕ್ರೋಶ : ಮುಚ್ಚಿರುವ ಚಿನ್ನದ ಗಣಿಗಳನ್ನು ಪುನಶ್ಚೇತನಗೊಳಿಸದ ಕೇಂದ್ರದ ಯುಪಿಎ ಸರ್ಕಾರ, ಚಿನ್ನದ ಗಣಿ ಕಾರ್ಮಿಕರನ್ನು ಅಕ್ಷರಶಃ ಬೀದಿಪಾಲು ಮಾಡಿದೆ. ಈಗ ಅಣು ತ್ಯಾಜ್ಯ ಹಾಕಿ ಇಲ್ಲಿನ ಜನರನ್ನು ನರಕದ ಕೂಪಕ್ಕೆ ತಳ್ಳುವಂತಹ ಕೆಲಸ ಮಾಡಲು ಮುಂದಾಗಿದೆ ಎಂದು ಶಾಸಕ ವೈ ಸಂಪಂಗಿ ಅವರು ಕೇಂದ್ರ ಸಚಿವ ಮುನಿಯಪ್ಪನವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ಅವರ ರಾಜೀನಾಮೆಗೆ ಅಗ್ರಹಿಸಿದರು.

ಮಾಜಿ ಶಾಸಕ ಜೆಡಿಎಸ್ ಮುಖಂಡ ಭಕ್ತವತ್ಸಲಂ ಅವರು ಸಹ ನೇರವಾಗಿ ಕೋಲಾರದ ಸಂಸದ, ಕೇಂದ್ರ ಸಣ್ಣ ಹಾಗು ಮಧ್ಯಮ ಖಾತೆ ಮಂತ್ರಿ ಮುನಿಯಪ್ಪ ಅವರ ವಿರುದ್ದ ನೇರ ಅರೋಪ ಮಾಡಿದರು. ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರೂ ಜಿಲ್ಲೆಗೆ ಏನೂ ಮಾಡಿಲ್ಲ. ಈಗ ಇಲ್ಲಿನ ಜನರ ಪ್ರಾಣ ತಗೆಯುವಂತಹ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಕೇಂದ್ರ ಸಚಿವ ಮುನಿಯಪ್ಪ ಅವರ ಭೂತ ದಹನ ಮಾಡಿದರು.

ಕೋಲಾರದ ಚಿನ್ನದ ಗಣಿಯಲ್ಲಿ ತಂದುಹಾಕುವ ಅಣುತ್ಯಾಜ್ಯದಿಂದ ಕೆಜಿಎಫ್ ನಗರ ಮಾತ್ರವಲ್ಲ ಇಡೀ ಕೋಲಾರ ಜಿಲ್ಲೆಯ ಸುತ್ತ ಮುತ್ತ ಸುಮಾರು 150 ಕಿ.ಮೀ. ವ್ಯಾಪ್ತಿಯಲ್ಲಿ ತೀವ್ರವಾದ ದುಷ್ಪರಿಣಾಮ ಉಂಟಾಗಲಿದೆ. ಈಗಾಗಲೆ ಫ್ಲೋರೈಡ್ ನೀರು ಕುಡಿಯುತ್ತಿರುವ ಜಿಲ್ಲೆಯ ಜನ ಅಪಾಯಕಾರಿ ತ್ಯಾಜ್ಯದಿಂದ ಜನ, ಜಾನುವಾರುಗಳು ಮತ್ತಷ್ಟು ರೋಗರುಜಿನಗಳಿಗೆ ತುತ್ತಾಗಿ ನರಕಸದೃಶ ಜೀವನ ಸಾಗಿಸಬೇಕಾದ ಅನಿವಾರ್ಯತೆ ಏರ್ಪಡುತ್ತದೆ ಎಂದು ಜಿಲ್ಲಾ ರೈತ ಮುಖಂಡ ಪಿ ಆರ್ ಸೂರಿ ಹೇಳಿದ್ದಾರೆ.

ಮುನಿಯಪ್ಪನಿಂದ ಪ್ರಧಾನಿ ಭೇಟಿ : ಕೂಡಂಕುಳಂ ಅಣು ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಕೆಜಿಎಫ್‌ನಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಮತ್ತು ಕೋಲಾರ ಸಂಸದ ಕೆ.ಎಚ್. ಮುನಿಯಪ್ಪ ಅವರು ಶುಕ್ರವಾರ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಕೆಜಿಎಫ್ ಗಣಿಯನ್ನು ಮರುಆರಂಭಿಸುವ ಬಗ್ಗೆಯೂ ಚರ್ಚೆ ಮಾಡಿದ್ದಾರೆ. ಈ ಕುರಿತು ಹೆಚ್ಚಿನ ಮಾತುಕತೆ ಸೋಮವಾರ ನಡೆಯುವ ಸಾಧ್ಯತೆಯಿದೆ.

English summary
Bandh called to protest against dumping of Koodankulam nuclear waste in Kolar Gold Fields (KGF) was hugely successful. The bandh was supported by all political parties, public and all organizations. Kolar MP Muniyappa met Prime minister Singh on Friday in this regard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X