ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗಳ ಮದುವೆ ಇಟ್ಟುಕೊಂಡು ಪತ್ರಕರ್ತನ ಹತ್ಯೆ

By Srinath
|
Google Oneindia Kannada News

bng-kannada-editor-lingaraju-murder-supari-killers-held
ಬೆಂಗಳೂರು, ನ.23: ಬೆಂಗಳೂರು ಪೊಲೀಸರು ಮತ್ತೊಮ್ಮೆ ತಮ್ಮ ಚಾಕಚಕ್ಯತೆ ಮೆರೆದಿದ್ದಾರೆ. ಚಾಮರಾಜ ಪೇಟೆ ಟಿಆರ್ ಮಿಲ್ ಬಳಿ ಮಂಗಳವಾರ ಬೆಳಗ್ಗೆ ಪತ್ರಕರ್ತ ಲಿಂಗರಾಜು ಅವರನ್ನು ಸಾಯಿಸಿದ್ದ ಪಾತಕ ತಂಡವನ್ನು 48 ಗಂಟೆಗಳಲ್ಲಿ ಪತ್ತೆ ಹಚ್ಚಿ, ಜೈಲಿಗಟ್ಟಿದ್ದಾರೆ.

ದುರ್ದೈವೆಂದರೆ ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ಹೆಕ್ಕಿ ಲಿಂಗರಾಜು ತನಗೆ ಕಂಟಕವಾಗುತ್ತಿದ್ದಾನೆಂದು ಭಾವಿಸಿದ ಆತನ ಹಳೆಯ ಮಿತ್ರ, ಕಾರ್ಪೊರೇಟರ್ ಗೌರಮ್ಮನ ಪತಿ ಗೋವಿಂದರಾಜು 15 ಲಕ್ಷ ರೂ. ಸುಪಾರಿ ನೀಡಿ ಸಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗೌರಮ್ಮ, ಚಾಮರಾಜ ಪೇಟೆಯ ಅಜಾದ್ ನಗರ, ವಾರ್ಡ್ ನಂ. 141ರ ಬಿಬಿಎಂಪಿ ಸದಸ್ಯೆ.

ಗಮನಾರ್ಹವೆಂದರೆ ಇತ್ತ ಪತ್ರಕರ್ತ ಲಿಂಗರಾಜು ಹತ್ಯೆಗೆ ಸುಪಾರಿ ನೀಡಿದ್ದ ಗೋವಿಂದರಾಜು, ಮುಂದಿನ ತಿಂಗಳು ಅರಮನೆ ಮೈದಾನದಲ್ಲಿ ತನ್ನ ಮಗಳ ಮದುವೆಗೆ ಮಹೂರ್ತ ನಿಗದಿ ಪಡಿಸಿದ್ದ.

RTIನಲ್ಲಿ ಗೌರಮ್ಮ ವಿರುದ್ಧ ಮಾಹಿತಿ ಸಂಗ್ರಹಿಸಿದ್ದ ಪತ್ರಕರ್ತ ಲಿಂಗರಾಜು ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಿಂದ ಗೌರಮ್ಮ ಮನೆಯ ಮೇಲೆ ಇತ್ತೀಚೆಗೆ ದಾಳಿ ನಡೆದು ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಸುಪಾರಿ ಹಂತಕರು ಸಿಕ್ಕಿದ್ದು ಹೇಗೆ ?: ಪತ್ನಿಯ ಜತೆ ನಲ್ಲಿ ನೀರು ಹಿಡಿಯುತ್ತಿದ್ದಾಗ ಲಿಂಗರಾಜು ಅವರನ್ನು ಭೀಕರವಾಗಿ ಹತ್ಯೆ ಮಾಡಿದ ಪಾತಕ ತಂಡ, ಆಟೋ ಹತ್ತಿ ಸ್ಥಳದಿಂದ ಪರಾರಿಯಾಗಿತ್ತು. ಸ್ಥಳೀಯರೊಬ್ಬರು ಆ ಆಟೋದ ಸಂಖ್ಯೆಯನ್ನು prompt ಆಗಿ ಪೊಲೀಸರಿಗೆ ಹಸ್ತಾಂತರಿಸಿದ್ದರು. ಪೊಲೀಸರಿಗೆ ಅಷ್ಟು ಸಾಕಾಗಿತ್ತು, ಹತೆಗೆ ಲಿಂಗರಾಜು ಅವರ ಪತ್ನಿ ಕಾರ್ಪೊರೇಟರ್ ಗೌರಮ್ಮ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

ಹಾಗಾಗಿ ಎರಡೇ ದಿನದಲ್ಲಿ ಪ್ರಮುಖ ಆರೋಪಿ ಗೋವಿಂದರಾಜು (50) ಸೇರಿದಂತೆ 8 ಜನ ಆರೋಪಿಗಳನ್ನು ಬಂಧಿಸುವಲ್ಲಿ ನಗರದ ಪೊಲೀಸರು ಯಶಸ್ವಿಯಾಗಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ಹತ್ಯೆ ನಡೆದ ಬಳಿಕ ಕೆಲಸ ಮುಗಿಯಿತೆಂದು ಗೋವಿಂದರಾಜು ಸುಪಾರಿ ಹಂತಕರಿಗೆ 5 ಲಕ್ಷ ರೂ. ಹಣ ಬಟವಾಡೆ ಮಾಡಿದ್ದಾನೆ. ಆದರೆ ಕೆಲವೇ ಗಂಟೆಗಳಲ್ಲಿ ಪೊಲೀಸರು ಆತನ ಹೆಗಲ ಮೇಲೆ ಕೈಯಿಟ್ಟಿದ್ದಾರೆ.

ಈ ಹತ್ಯೆಗೆ ಸಂಬಂಧಿಸಿದಂತೆ ಮೈಸೂರು ರಸ್ತೆ ಆನಂದಪುರದ ವೇಲು (41), ಜೆಜೆ ನಗರದ ಚಂದ್ರ (32), ಕೆಪಿ ಅಗ್ರಹಾರದ ನಿವಾಸಿ ಶಂಕರ ಯಾನೆ ಗುಂಡ (32), ಹೊಸ ಬಿನ್ನಿಪೇಟೆ ಬಡಾವಣೆಯ ಉಮಾಶಂಕರ್ ಯಾನೆ ಭವಾನಿ (45), ಪೀಣ್ಯ 2ನೆ ಹಂತ, ಮಯ್ಯೂರ ನಗರದ ರಂಗಸ್ವಾಮಿ ಯಾನೆ ರಂಗ (23), ಹೆಗ್ಗನಹಳ್ಳಿ ಕ್ರಾಸ್ ಸಂಜೀವಿನಿ ನಗರದ ರಾಘವೇಂದ್ರ ಯಾನೆ ರಾಘು (23) ಹಾಗೂ ಶಂಕರ (23) ಇತರ ಬಂಧಿತ ಆರೋಪಿಗಳು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮುಂಗಡವಾಗಿ 2.50 ಲಕ್ಷ ರೂ. ನೀಡಿದ್ದ ಗೋವಿಂದ ರಾಜು, ಲಿಂಗರಾಜು ಕೊಲೆಯಾದ ನಂತರ 5 ಲಕ್ಷ ರೂ. ನೀಡಿರುತ್ತಾರೆ. ಆರೋಪಿಗಳಿಂದ ಸುಪಾರಿ ಹಣ 3 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ ಒಂದು ಟಾಟಾ ಸುಮೋ ಮತ್ತು ಒಂದು ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಿರ್ಜಿ ತಿಳಿಸಿದ್ದಾರೆ.

ನಗರದ ಜಂಟಿ ಪೊಲೀಸ್‌ ಆಯುಕ್ತ ಪ್ರಣವ್‌ ಮಹಾಂತಿ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಶಿವಮಲ್ಲಯ್ಯ, ಬಾಳೇಗೌಡ, ಮಾಲತೇಶ್‌, ಉಮೇಶ್ ತಂಡ ಆರೋಪಿಗಳನ್ನು ಬಂಧಿಸಿದೆ. ಘಟನೆ ನಡೆದ 48 ಘಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ದಕ್ಷಿಣ ಉಪವಿಭಾಗದ ಉಪ ಪೊಲೀಸ್ ಕಮೀಷನರ್ ಎಚ್ಎಸ್ ರೇವಣ್ಣ ನೇತೃತ್ವದ ತಂಡದ ಕಾರ್ಯವನ್ನು ಶ್ಲಾಘಿಸಿದ ಜ್ಯೋತಿ ಪ್ರಕಾಶ್ ಮಿರ್ಜಿ, ವಿಶೇಷ ಬಹುಮಾನ ಘೋಷಿಸಿದ್ದಾರೆ.

ಅಗತ್ಯಬಿದ್ದರೆ ಗೋವಿಂದರಾಜು ಪತ್ನಿ ಗೌರಮ್ಮ ಅವರನ್ನೂ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುವುದು. ಆರೋಪಿಗಳಾದ ಚಂದ್ರ, ಶಂಕರ ಮತ್ತು ರಂಗಸ್ವಾಮಿ ಅವರ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಹಲ್ಲೆ, ಕೊಲೆ ಯತ್ನ ಸೇರಿದಂತೆ ಇನ್ನಿತರ ಪ್ರಕರಣಗಳು ದಾಖಲಾಗಿವೆ. ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಮಿರ್ಜಿ ಹೇಳಿದ್ದಾರೆ.

English summary
Bangalore Police solove the Maha Prachanda Kannada Editor Lingaraju murder case. 9 Supari killers arrested including Corporator Gowramma's husband Govindaraju.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X