ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಂಡು ತಗುಲಿ ವಿರಾಜಪೇಟೆ ಕಾಂಗ್ರೆಸ್ ಅದ್ಯಕ್ಷ ಸಾವು

By Prasad
|
Google Oneindia Kannada News

Accidental fire kills Abdul Lathif
ಶ್ರೀಮಂಗಲ, ನ. 17 : ಮಾಜಿ ಜಿ.ಪಂ. ಸದಸ್ಯ ಹಾಗೂ ಹಾಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾಗಿದ್ದ ವಿರಾಜಪೇಟೆಯ ಅಬ್ದುಲ್ ಲತೀಫ್ ಅಲಿಯಾಸ್ ರಾಕೇಶ್ (35) ಅವರು ಶ್ರೀಮಂಗಲ ಠಾಣಾ ವ್ಯಾಪ್ತಿಯ ಬಿರುನಾಣಿ ಸಮೀಪದ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯದೊಳಗೆ ಗುಂಡೇಟು ತಗುಲಿ ಸಾವನ್ನಪ್ಪಿದ್ದಾರೆ.

ಅರಣ್ಯದಲ್ಲಿ ಮಗುಚಿ ಬಿದ್ದಿರುವ ಸ್ಥಿತಿಯಲ್ಲಿ ಅಬ್ದುಲ್ ಲತೀಫ್ ಅವರ ಮೃತದೇಹ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ. ಶುಕ್ರವಾರ ರಾತ್ರಿ 8 ಗಂಟೆ ವೇಳೆಗೆ ಅರಣ್ಯಕ್ಕೆ ಬೇಟೆಗೆ ತೆರಳಿದ ಸಂದರ್ಭ ಬೆನ್ನಿಗೆ ಆಕಸ್ಮಿಕವಾಗಿ ಗುಂಡೇಟು ತಗುಲಿದ್ದು, ಸ್ಥಳದಲ್ಲೇ ಸಾವಿಗೀಡಾಗಿರುವುದಾಗಿ ಅಬ್ದುಲ್ ಲತೀಫ್ ಅವರ ಕಾರು ಚಾಲಕ ಸ್ಟಾನ್ಲಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾನೆ.

ಘಟನೆಯ ವಿವರ : ಗುರುವಾರ ವಿರಾಜಪೇಟೆಯಿಂದ ಅಬ್ದುಲ್ ಲತೀಫ್ ಮತ್ತು ಆತನ ಕಾರು ಚಾಲಕ ಸಿದ್ದಾಪುರದ ಸ್ಟಾನ್ಲಿ ಅವರು ಇನೋವಾ ಕಾರಿನಲ್ಲಿ(ಕೆಎ 05 ಎಂಎಫ್ 8044) ಬಿರುನಾಣಿ ಸಮೀಪ ಪುತ್ತುಭಗವತಿ ದೇವಸ್ಥಾನದ ಸಮೀಪದಲ್ಲಿ ಕಾರು ನಿಲ್ಲಿಸಿ ಅಲ್ಲಿನ ನಾಲ್ವರನ್ನು ಜೊತೆಗೆ ಸೇರಿಸಿಕೊಂಡು ಅಲ್ಲಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯಕ್ಕೆ ಬೇಟೆಗೆ ತೆರಳಿದ್ದಾರೆ. ಅರಣ್ಯದೊಳಗೆ ಅಡುಗೆಗೆ ಬೇಕಾದ ಸಾಮಗ್ರಿಗಳನ್ನು ಹಾಗೂ ಬೇಟೆಗೆ ಕೋವಿಯನ್ನು ಒಯ್ದಿದ್ದಾರೆ.

ಗುರುವಾರ ರಾತ್ರಿ ಹಾಗೂ ಶುಕ್ರವಾರ ಅರಣ್ಯದಲ್ಲಿ ಬೇಟೆಯಾಡಿ ಅಡುಗೆ ಮಾಡಿ ಊಟ ಮಾಡಿದ್ದಾರೆ. ಶುಕ್ರವಾರ ರಾತ್ರಿ 8 ಗಂಟೆ ಸಮಯದಲ್ಲಿ ಬೇಟೆಯಾಡುತ್ತಿದ್ದಾಗ ಕಾಡಾನೆಗಳು ಸದ್ದು ಮಾಡಿ ಅಟ್ಟಿಸಿಕೊಂಡು ಬಂದ ಸಂದರ್ಭ ಲತೀಫ್ ಅವರು ಓಡಿ ತುಸು ದೂರದಲ್ಲಿದ್ದ ಕಲ್ಲಿನ ಬಂಡೆಯನ್ನು ಹತ್ತುವ ಸಂದರ್ಭ ಕಾಲು ಜಾರಿ ಹಿಂಬದಿಗೆ ಮಗುಚಿಕೊಂಡಾಗ ತಮ್ಮ ಜೊತೆಯಲ್ಲಿದ್ದ ಕೋವಿ ತಾಗಿ ಗುಂಡೇಟು ಬಿದ್ದಿದೆ ಎಂದು ವಿಚಾರಣೆ ವೇಳೆ ಲತೀಫ್ ಚಾಲಕ ಸ್ಟಾನ್ಲಿ ತಿಳಿಸಿದ್ದಾನೆ.

ಇದಲ್ಲದೆ ಗುಂಡೇಟು ತಗುಲಿದ ತಕ್ಷಣ ಲತೀಫ್‌ನನ್ನು ಉಪಚಾರ ಮಾಡಿರುವ ಕಾರು ಚಾಲಕ ಹಾಗೂ ಇತರ ನಾಲ್ವರು ಗುಂಡೇಟಿನಿಂದ ಬಿದ್ದ ಗಾಯಕ್ಕೆ ರಕ್ತ ಬರದಂತೆ ತಮ್ಮ ಬಳಿಯಿದ್ದ ಟವಲ್‌ನ್ನು ಸುತ್ತಿದ್ದಾರೆ. ಅಲ್ಲದೆ, ಸಮೀಪದಲ್ಲೇ 2 ಮರದ ತುಂಡುಗಳನ್ನು ಕಡಿದು ಗಾಯಾಳು ಲತೀಫ್‌ನನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಮರ ಕಡಿಯುವ ಸಮಯಕ್ಕೆ ಲತೀಫ್ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ಚಾಲಕ ವಿವರಿಸಿದ್ದಾನೆ.

ಆ ನಂತರ ಕಾರಿನಲ್ಲಿ ವಿರಾಜಪೇಟೆಗೆ ತೆರಳಿ ಲತೀಫ್ ಅವರ ತಾಯಿಗೆ ವಿಚಾರ ತಿಳಿಸಿದ್ದಾನೆ. ಲತೀಫ್ ಅವರ ಕಿರಿಯ ಸಹೋದರ ಹಾರೀಸ್ ಅವರು ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನನ್ವಯ ಪೊಲೀಸರು ಸ್ಥಳಕ್ಕೆ ತೆರಳಿ ಶನಿವಾರ ಬೆಳಿಗ್ಗೆ 8.30ರ ಹೊತ್ತಿಗೆ ಮೃತ ದೇಹವನ್ನು ಅರಣ್ಯದಲ್ಲಿ ಪತ್ತೆಹಚ್ಚಿದ್ದಾರೆ. ಲತೀಫ್ ಮೃತದೇಹದಿಂದ ಸುಮಾರು 5 ಅಡಿ ದೂರದಲ್ಲಿ ಏಕನಳಿಕೆ ಕೋವಿ ಬಿದ್ದಿರುವುದು ಗೋಚರಿಸಿದೆ. ಮೃತದೇಹವನ್ನು ಗೋಣಿಕೊಪ್ಪ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಪೊಲೀಸರು ಮಹಜರು ನಡೆಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಸ್ಥಳಕ್ಕೆ ಕುಟ್ಟ ವೃತ್ತನಿರೀಕ್ಷಕ ಶಿವಶಂಕರ್, ಕುಟ್ಟ ಎಸ್‌ಐ ಹರಿಶ್ಚಂದ್ರ, ಶ್ರೀಮಂಗಲ ಎಸ್‌ಐ ನಾಗೇಶ್ ನೇತೃತ್ವದಲ್ಲಿ ಸಿಬ್ಬಂದಿಗಳು ಕಡಿದಾದ ಅರಣ್ಯ ಪ್ರದೇಶಕ್ಕೆ ತೆರಳಿ ಮಹಜರು ನಡೆಸಿದರು. ಮೃತ ಅಬ್ದುಲ್ ಲತೀಫ್ ಅವರು ಅವಿವಾಹಿತರಾಗಿದ್ದು ತಾಯಿ, ಮೂವರು ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

English summary
Hunting in the forest proves costly for Virajpet block Congress leader Abdul Lathif alias Rakesh. Accidentally bullet fires from his own rifle killing him instantly. His body was recovered on Saturday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X