ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುರುವಾಯ್ತು ಪಟಾಕಿ ಅನಾಹುತ : ಇಬ್ಬರು ಮಕ್ಕಳ ಕಣ್ಣಿಗೆ ಗಾಯ

By Prasad
|
Google Oneindia Kannada News

Kids injured bursting firecrackers in Bangalore
ಬೆಂಗಳೂರು, ನ. 12 : ಗಂಧಕದ ವಾಸನೆಯ ಅಟಂ ಬಾಂಬ್ ಪಟಾಕಿ ಢಂಢಮಾರ್ ಅಂದಾಗ, ಫ್ಲವರ್ ಪಾಟ್ ಬುಸ್ಸನೆ ಕಿಡಿಗಳ ಕಾರಂಜಿ ಚಿಮ್ಮಿದಾಗ, ಆಕಾಶಕ್ಕೆ ನೆಗೆದ ರಾಕೆಟ್ ಬಣ್ಣಬಣ್ಣದ ಓಕುಳಿಯನ್ನು ಚಿಮ್ಮಿಸಿದಾಗ, ಸುರುಸುರು ಬತ್ತಿ ಬೆಳ್ಳಿಯ ಬೆಳಕನ್ನು ಚಿಮ್ಮಿಸಿದಾಗ ಮಕ್ಕಳಿಗಷ್ಟೇ ಅಲ್ಲ ಗಂಡುಹೆಣ್ಣು ಸೇರಿದಂತೆ ಎಲ್ಲ ದೊಡ್ಡವರಿಗೂ ಆಗುವ ಸಂತೋಷವಿದೆಯಲ್ಲ ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.

ಅದೇ ಪಟಾಕಿಯ ಕಿಡಿ ನಮ್ಮ ನಿರ್ಲಕ್ಷ್ಯದಿಂದಲೋ, ಹುಡುಗಾಟಿಕೆಯಿಂದಲೋ, ಅನಿರೀಕ್ಷಿತವಾಗಿ ಮೈಗೆ ಸಿಡಿದಾಗ ಅಥವಾ ಕಣ್ಣಿಗೆ ನುಗ್ಗಿದಾಗ ಆ ಆನಂದವೆಲ್ಲ ಕ್ಷಣಾರ್ಧದಲ್ಲಿ ಸುಟ್ಟು ಹೋಗಿರುತ್ತದೆ. ಕಣ್ಣಿಗೆ ಮಾಯದಂತಹ ಘಾಸಿ ಮಾಡಿದಾಗ ಬೆಳಕಿನ ಹಬ್ಬ ಆಜನ್ಮಪರ್ಯಂತ ಅಂಧಕಾರವನ್ನು ಕಾಣಿಕೆಯಾಗಿ ನೀಡಿರುತ್ತದೆ. ಈಗ ನೀವೇ ನಿರ್ಧರಿಸಿ ಬೆಳಗಿನ ಹಬ್ಬ ದೀಪಾವಳಿ ಬೆಳಕನ್ನು ಚಿಮ್ಮಿಸಬೇಕೋ, ಅಂಧಕಾರ ತರಬೇಕೋ.

ಪ್ರತಿವರ್ಷ ಇಂತಹ ಅನಾಹುತಗಳು ನಾಡಿನಾದ್ಯಂತ ನಡೆಯುತ್ತಿದ್ದರೂ ಕೆಲವರು ಎಚ್ಚೆತ್ತುಕೊಳ್ಳುವುದೇ ಇಲ್ಲ. ಇಂಥದೇ ಅನಾಹುತಗಳ ಸರಮಾಲೆ ಈಗಾಗಲೆ ಈ ದೀಪಾವಳಿಯಲ್ಲಿಯೂ ಆರಂಭವಾಗಿದೆ. ದೀಪಾವಳಿಯ ಮೊದಲ ದಿನವಾದ ನರಕಚತುರ್ದಶಿಯಂದು ಬೆಳ್ಳಂಬೆಳಿಗ್ಗೆ ಪಟಾಕಿ ಹಚ್ಚುವಾಗ ಬೆಂಗಳೂರಿನ ವಿಜಯನಗರದ ಆಕಾಶ್ (6) ಮತ್ತು ಜಯಂತ್ (10) ಎಂಬಿಬ್ಬ ಬಾಲಕರು ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾರೆ.

ಈಗ ಅವರಿಬ್ಬರಿಗೆ ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಣ್ಣಿಗೆ ಆಗಿರುವ ಗಾಯ ಯಾವ ಮಟ್ಟಿನದೆಂದು ಇನ್ನೂ ತಿಳಿದುಬಂದಿಲ್ಲ. ಕೈಕಾಲಿಗೆ ಸಣ್ಣಪುಟ್ಟ ಗಾಯಗಳಾದರೆ ಸಹಿಸಿಕೊಳ್ಳಬಹುದು, ಆದರೆ, ಅತ್ಯಮೂಲ್ಯವಾದ ಕಣ್ಣಿಗೆ ಗಾಯವಾಗಿ ದೃಷ್ಟಿಯೇ ಶಾಶ್ವತವಾಗಿ ಹೋಗಿಬಿಟ್ಟರೆ, ಮುಂದಿನ ಬಾಳೇ ಅಂಧಕಾರದಲ್ಲಿ ಕಳೆಯಬೇಕಾಗುತ್ತದೆ.

ಪಟಾಕಿ ತರುವ ಅನಾಹುತಗಳು ಎಂಥವು?

* ವಿಪರೀತ ಶಬ್ದ ಮಾಡುವ ಪಟಾಕಿಗಳಿಂದ ಕಿವಿ ಕಿವುಡಾಗಬಹುದು.
* ಪಟಾಕಿ ಉಂಟುಮಾಡುವ ಧೂಳಿನ ಸೇವನೆಯಿಂದ ಆಸ್ತಮಾ ಬರಬಹುದು.
* ಕಣ್ಣಿಗೆ ಗಾಯವಾದರೆ ಶಾಶ್ವತವಾಗಿ ದೃಷ್ಟಿಯನ್ನು ಕಳೆದುಹೋಗಬಹುದು.
* ಗರ್ಭಿಣಿಯರಿಗೆ ಮತ್ತು ಆಗತಾನೆ ಹುಟ್ಟಿದ ಪುಟ್ಟ ಕಂದಮ್ಮಗಳ ಮೇಲೆ ದುಷ್ಪರಿಣಾಮ ಬೀರಬಹುದು.
* ಪಟಾಕಿ ಧೂಳಿನಿಂದ ಕಣ್ಣಿಗೆ ಸೋಂಕಾಗಬಹುದು, ಗಂಟಲು ತುರಿಕೆಯಾಗಬಹುದು.
* ಹೃದಯಬೇನೆ ಇರುವವರ ಎದೆಯ ಬಡಿತ ಇದ್ದಕ್ಕಿದ್ದಂತೆ ಏರುಪೇರಾಗಬಹುದು.
* ಅಟಂ ಬಾಂಬ್ ಅಥವಾ ರಾಕೆಟ್‌ಗಳಿಂದ ಇತರರಿಗೆ ತೊಂದರೆಯಾಗಬಹುದು.
* ರಾಕೆಟ್‌ಗಳು ಅಕ್ಕಪಕ್ಕದ ಮನೆ ಅಥವಾ ಹುಲ್ಲಿನ ಬಣಿವೆ ಹೊಕ್ಕು ದೊಡ್ಡ ಅನಾಹುತ ತರಬಹುದು.

ಇಷ್ಟೆಲ್ಲ ಅನಾಹುತಗಳಿಗೆ ಕಾರಣರಾಗುವ ಬದಲು, ಪಟಾಕಿ ಸಿಡಿಸದಿದ್ದರೆ ಪರಿಸರ ಹಾನಿಯನ್ನೂ ತಡೆಗಟ್ಟಬಹುದು, ನಮ್ಮ ಆರೋಗ್ಯವನ್ನೂ ಉತ್ತಮವಾಗಿ ಇಟ್ಟುಕೊಳ್ಳಬಹುದು. ಪಟಾಕಿ ಹಚ್ಚಲಿಲ್ಲ ಎಂಬ ಖೇದ ಆರಂಭದಲ್ಲಿ ಕಾಡಬಹುದು. ಆದರೆ, ಅನಾಹುತಗಳ ಬಗ್ಗೆ ಒಂದು ಬಾರಿ ಯೋಚಿಸಿದಾಗ ಪಟಾಕಿ ಹಾರಿಸುವುದಕ್ಕಿಂತ ಸುಮ್ಮನಿದ್ದು, ಆಕಾಶಬುಟ್ಟಿ, ಸಾಲುಸಾಲು ದೀಪಗಳನ್ನು ಹಚ್ಚಿ ಆನಂದಪಡಬಹುದು. ಏನಂತೀರಿ? ದೀಪಾವಳಿ ಹಬ್ಬದ ಶುಭಾಶಯಗಳು.

English summary
Two kids in Vijaynagar, Bangalore were admitted to Narayana Netralaya for treatment to their eyes. Both injured while bursting firecracker on the occasion of Deepavali, the festival of lights, which has brought darkness to the children.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X