ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೊಮ್ಮನಹಳ್ಳಿ ಶಾಸಕರ ಭರ್ಜರಿ ಔತಣಕೂಟ

By Shami
|
Google Oneindia Kannada News

Ananth Kumar, R Ashok and Sathish Reddy
ಬೆಂಗಳೂರು, ನ. 12 : ಬೆಂಗಳೂರು ನಗರದೊಳಗಿರುವ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಪಕ್ಷದ ಶಿಸ್ತಿನ ಸಿಪಾಯಿ ಸತೀಶ್ ರೆಡ್ಡಿ ಅವರ ಮಗನ ಚೌಲ ಸಂಸ್ಕಾರ ಭಾನುವಾರ ಬೆಂಗಳೂರಿನಲ್ಲಿ ವಿಜೃಂಭಣೆಯಿಂದ ನೆರವೇರಿತು. ಚೌಲದ ಜತೆಗೆ ಹೊಂಗಸಂದ್ರ ಗ್ರಾಮದೇವತೆ ಮುನೇಶ್ವರಸ್ವಾಮಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ಆಯೋಜಿಸಲಾಗಿತ್ತು.

ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಉಪ ಮುಖ್ಯಮಂತ್ರಿ ಆರ್ ಅಶೋಕ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಮುಂತಾದ ಗಣ್ಯರು ಆಗಮಿಸಿ ಶುಭಕೋರಿದರು. ಬೊಮ್ಮನಹಳ್ಳಿ ವಿಭಾಗಕ್ಕೆ ಸೇರಿದ 9 ಮಂದಿ ನಗರಸಭಾ ಸದಸ್ಯರು ಶಾಸಕರ ಮನೆಹಬ್ಬದಲ್ಲಿ ಉತ್ಸುಕತೆಯಿಂದ ಭಾಗವಹಿಸಿದ್ದರು.

ಹೊಸೂರು ರಸ್ತೆ ಆರ್ ಎಂ ಎಸ್ ಮೋಟಾರ್ಸ್ ಬಳಿಯ ಸುಮಾರು ಒಂದು ಎಕರೆ ಖಾಲಿ ಖಾಸಗಿ ಭೂಮಿಯಲ್ಲಿ ಕಾರ್ಯಕ್ರಮ ಏರ್ಪಾಟಾಗಿತ್ತು. ವಿಶಾಲವಾಗಿ ಹರಡಲಾಗಿದ್ದ ಶಾಮಿಯಾನದಲ್ಲಿ ಸಾವಿರಾರು ಜನ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇತ್ತು. ಆಪತ್ಕಾಲಕ್ಕೆ ರೆಡಿ ಇರುವಂತೆ ಹೊರಗೆ ಆಂಬ್ಯುಲೆನ್ಸ್, ಫೈರ್ ಫೈಟಿಂಗ್ ಇಂಜಿನ್ಸ್, ಪೊಲೀಸ್ ಹಾಜರಾತಿ ವ್ಯವಸ್ಥೆಗಳು ಮನೆಮಾಡಿದ್ದವು.

ಈ ಕಾರ್ಯಕ್ರಮಕ್ಕೆ ಒಂದು ತಿಂಗಳಿನಿಂದಲೇ ತಯ್ಯಾರಿ ನಡೆದಿತ್ತು. 3000 ಆಕರ್ಷಕ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿ ಹಂಚಲಾಗಿತ್ತು. ಕಾರ್ಯಕ್ರಮ ಭಾನುವಾರ ಇದ್ದದ್ದರಿಂದ ಅತಿಥಿ ಅಭ್ಯಾಗತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅನುಕೂಲವಾಯಿತು. ಇಡೀ ಬೊಮ್ಮನಹಳ್ಳಿಗೆ ಬೊಮ್ಮನಹಳ್ಳಿಯೇ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು ಎಂದರೆ ಅತಿಶಯೋಕ್ತಿಯಾಗದು.

ಸುಮಾರು 30,000 ಆಮಂತ್ರಿತರು ಮತ್ತು ಶಾಸಕರ ಕುಟುಂಬದ ಅಭಿಮಾನಿಗಳು ನೆರೆದಿದ್ದರು. ಇಷ್ಟು ಅದ್ದೂರಿಯಾದ ಚೌಲ ಕಾರ್ಯಕ್ರಮವನ್ನು ನಮ್ಮ ಜೀವಮಾನದಲ್ಲೇ ಕಂಡಿಲ್ಲ ಎಂದು ರೆಡ್ಡಿ ಫ್ಯಾಮಿಲಿ ಫಂಕ್ಷನ್ ನಲ್ಲಿ ಭಾಗವಹಿಸಿದ್ದವರು ಉದ್ಗರಿಸಿದರು. ಈ ಹಿಂದೆ ಅಂದರೆ 8 ವರ್ಷದ ಹಿಂದೆ ಸತೀಶ್ ರೆಡ್ಡಿಯವರ ಮಗಳ ಕೂದಲು ಕೊಡುವ ಕಾರ್ಯಕ್ರಮದಲ್ಲಿ ಹತ್ತು ಸಾವಿರ ಜನತೆ ಪಾಲ್ಗೊಂಡಿದ್ದರು. ಆಗ ರೆಡ್ಡಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು.

ಮೂವತ್ತು ಸಾವಿರ ಜನಕ್ಕೆ ಊಟ ವ್ಯವಸ್ಥೆ ಮಾಡುವುದು ಸುಲಭವಲ್ಲ. ಆದರೆ, ರೆಡ್ಡಿಯವರು ಅದನ್ನು ಸುಲಭವಾಗಿ, ಅಚ್ಚುಕಟ್ಟಾಗಿ ಮಾಡಿ ತೋರಿಸಿದರು. ಶ್ರೀಸಾಮಾನ್ಯರಿಗೊಂದು, ಆಮಂತ್ರಿತರಿಗೊಂದು ಮತ್ತು ಗಣ್ಯಾತಿಗಣ್ಯರಿಗೊಂದು ಎಂಬಂತೆ ಮೂರು ವಿಭಾಗಗಳನ್ನು ತೆರೆಯಲಾಗಿತ್ತು. ಸಿಸಿ ಟಿವಿ, ಕಾರ್ಯಕ್ರಮದ ಮಾಹಿತಿ ಒದಗಿಸಲಿಕ್ಕೆ ಧ್ವನಿವರ್ಧಕ ವ್ಯವಸ್ಥೆ, ಆದರಾತಿಥ್ಯ, ಊಟೋಪಚಾರಗಳು ನಭೂತೋನಭಿವಷ್ಯತಿ ಎಂದಾಯಿತು.

ಬಾಡೂಟ ಮಾತ್ರ ಬಹಳ ದಿನ ನೆನಪಿನಲ್ಲಿ ಉಳಿಯುವಂತಿತ್ತು. 7,500 ಕೆಜಿ ಮಟನ್, 6,500 ಕೆಜಿ ಚಿಕನ್ ಬಳಸಿ ತಯಾರಿಸಲಾಗಿದ್ದ ಖಾದ್ಯಗಳು ಜನಸ್ತೋಮದ ನಾಲಗೆ ರುಚಿ ತಣಿಸಿದವು. ಮುದ್ದೆ, ತಟ್ಟೆ ಇಡ್ಲಿ, ಮಟನ್ ಬಿರಿಯಾನಿ, ಮಟನ್ ಚಾಪ್ಸ್ ಜತೆಗೆ ಚಿಕನ್ ನಲ್ಲಿ ಮೂರು ಐಟಂಗಳಿದ್ದವು. ಕಬಾಬ್, ಲಾಲಿ ಪಾಪ್, ಚಿಕನ್ ಮಸಾಲಾ ಖಾರಖಾರವಾಗಿ ರುಚಿಯಾಗಿತ್ತು.

ಸಸ್ಯಾಹಾರಿಗಳಿಗೆ ನಿರಾಶೆಯಾಗದಂತೆ ಎಚ್ಚರಿಕೆ ವಹಿಸಲಾಗಿತ್ತು. ಮುದ್ದೆ, ಇಡ್ಲಿ, ಸಾಂಬಾರ್, ತರತರತರದ ಪಲ್ಯಗಳು, ಡ್ರೈ ಜಾಮೂನು, ಆಪಲ್ ಕೇಕು, ವೆಜ್ ಪಲಾವು ಮುಂತಾದ್ದನ್ನು ಅಡುಗೆ ಕಂಟ್ರಾಕ್ಟರ್ ಶ್ರದ್ಧೆಯಿಂದ ತಯಾರಿಸಿದ್ದರು. ಊಟ ಮುಖ್ಯವಲ್ಲ, ಯಾರಿಗೂ ತೊಂದರೆ ಆಗದಂತೆ ರೆಡ್ಡಿಗಳು ಪ್ಲಾನ್ ಮಾಡಿದ್ದರು ಎಂದು ಪುಳಿಚಾರ್ ಊಟದ ಪ್ರೇಮಿಯೊಬ್ಬರು ಹೇಳಿದರು.

ರೆಡ್ಡಿಗಳ ಕುಟುಂಬ ನೆಟ್ ವರ್ಕ್ ತುಂಬಾ ದೊಡ್ಡದು. ಹುಡುಕಿಕೊಂಡು ಹೊರಟರೆ ಒಬ್ಬರಿಗೊಬ್ಬರು ಹಾಗೂ ಹೀಗೂ ಹೇಗೂ ನೆಂಟರೇ ಆಗುವರು. ಅಲ್ಲದೆ, ಸತೀಶ್ ರೆಡ್ಡಿ ಶಾಸಕರೂ ಆಗಿರುವುದರಿಂದ ಇಡೀ ಕ್ಷೇತ್ರವೇ ಅವರ ಕುಟುಂಬವಾಗಿರುತ್ತದೆ. ಬೊಮ್ಮನಹಳ್ಳಿಯಲ್ಲಿ ನೆಲೆಸಿರುವ ಪ್ರಜೆಗಳು, ಮತದಾರರು, ವಿಶೇಷವಾಗಿ ಗಾರ್ಮೆಂಟ್ಸ್ ಫ್ಯಾಕ್ಟರಿಗಳಲ್ಲಿ ಉದ್ಯೋಗ ಮಾಡುವವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

2008ರ ವಿಧಾನಸಭಾ ಚುನಾವಣೆಯಲ್ಲಿ ಸತೀಶ್ ರೆಡ್ಡಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಕುಪೇಂದ್ರ ರೆಡ್ಡಿಯವರನ್ನು 17 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದನ್ನು ಇಲ್ಲಿ ಸ್ಮರಿಸಬೇಕು. ಬೊಮ್ಮನಹಳ್ಳಿಯಲ್ಲಿ ನಾಗರಿಕರ ಸಮಸ್ಯೆಗಳು ಬಹಳಷ್ಟಿವೆ. ಮುಖ್ಯರಸ್ತೆ, ಒಳರಸ್ತೆಗಳಿಗೆ ಡಾಂಬರು ಹಾಕುವ ಕೆಲಸಗಳು, ಒಳಚರಂಡಿಗಳಿಗೆ ಕಾಯಕಲ್ಪ, ಮಳೆನೀರಿನ ನಿರ್ವಹಣೆ, ಭಾಗ್ಯಲಕ್ಷ್ಮಿ ಯೋಜನೆ ಅನುಷ್ಠಾನ, ಅಷ್ಟಿಷ್ಟು ನಡೆದಿವೆ, ನಿಜ. ಆದ್ರೆ ಉಳಿದಂತೆ ಬೊಮ್ಮನಹಳ್ಳಿ ನಿಮ್ಮ ಊರಿನಂತೆಯೇ ಇದೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್, ಉಪ ಮುಖ್ಯಮಂತ್ರಿ ಆರ್ ಅಶೋಕ್ ಹಾಗೂ ಇವತ್ತಿನ ನಮ್ಮ ಸುದ್ದಿಯ ಹೀರೋ ಸತೀಶ್ ರೆಡ್ಡಿ ಆಪ್ತಮಿತ್ರರು. ಮೂವರೂ ಧುರೀಣರು ಒಂದೇ ತುಳಸಿ ಮಾಲೆಯಲ್ಲಿ ಬಂದಿಯಾಗಿರುವ ಅಪರೂಪದ ಚಿತ್ರವನ್ನು ಇದೇ ಪುಟದಲ್ಲಿ ನೀವು ನೋಡುತ್ತಿದ್ದೀರಿ.

English summary
Bommanahalli legislator (BJP) Sathish Reddys sons hair offering ceremony (11th Oct) and Puja to town diety Muneshwara Swamy was a huge success. CM, Dy CM, BJP leader Ananth Kumar, area corporators took part in the function. Grand lunch was organized for about 30,000 people in and around the constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X