ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ ಯಡಿಯೂರಪ್ಪ ಬಿಜೆಪಿಗೆ ಹೇಳಿದ ಕಹಿ ಸತ್ಯ

By Mahesh
|
Google Oneindia Kannada News

BS Yeddyurappa
ಬೆಂಗಳೂರು, ಅ.30: ನನ್ನಿಂದ ಸರ್ಕಾರ ಬಿದ್ದು ಹೋಯಿತು ಎಂಬ ಅಪಖ್ಯಾತಿ ಬೇಡ. ನಾನು ಹೊಸ ಪಕ್ಷ ಸ್ಥಾಪಿಸಿದರೂ ನನ್ನ ಬೆಂಬಲಿಗರು ಜಗದೀಶ್ ಶೆಟ್ಟರ್ ಅವರ ಸರ್ಕಾರವನ್ನು ಕಾಯಲಿದ್ದಾರೆ. ಇದು ಸತ್ಯ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ನನ್ನ ಬೆಂಬಲಿಗ ಸಚಿವರು, ಶಾಸಕರು ಬಿಜೆಪಿಯಲ್ಲೇ ಇರಲಿ, ನಾವೇ ಕಟ್ಟಿದ ಸರ್ಕಾರ ನಮ್ಮಿಂದಲೇ ನಾಶವಾಗುವುದು ಬೇಡ. ನನ್ನ ಜೊತೆ ಬರುವಂತೆ ಯಾರಿಗೂ ಬಲವಂತ ಮಾಡುವುದಿಲ್ಲ.

ಸರ್ಕಾರ ಪೂರ್ಣಾವಧಿಯಾಗುವವರೆಗೂ ಸಭೆ ಸಮಾರಂಭಗಳಲ್ಲಿ ತಪ್ಪದೇ ಪಾಲ್ಗೊಳ್ಳುತ್ತೇನೆ. ಸರ್ಕಾರ ಉರುಳಿಸುವ ಯಾವ ಪ್ರಯತ್ನಗಳನ್ನು ನಾನಾಗಲಿ ನನ್ನ ಬೆಂಬಲಿಗರಾಗಲಿ ಮಾಡುವುದಿಲ್ಲ ಎಂದು ಮತ್ತೊಮ್ಮೆ ಯಡಿಯೂರಪ್ಪ ಹೇಳಿದರು.

ಸಂಧಾನ ಸಾಧ್ಯತೆ?: ಮೊದಲೇ ಹೇಳಿದಂತೆ ನಾನು ಬಿಜೆಪಿ ಬಿಡುವ ತೀರ್ಮಾನದಲ್ಲಿ ಬದಲಾವಣೆ ಇಲ್ಲ. ನನ್ನ ಪರವಾಗಿ ಕೆಲವು ಬೆಂಬಲಿಗರು ಹೈಕಮಾಂಡ್ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ ಎಂಬುದು ತಿಳಿದಿದೆ.

ಅವರನ್ನು ನಾನು ಕಳಿಸಿಲ್ಲ. ಇಷ್ಟಕ್ಕೂ ದೆಹಲಿ ವರಿಷ್ಠರು ಏನೇ ತೀರ್ಮಾನ ಕೈಗೊಂಡರೂ ಹೊಸ ಪ್ರಾದೇಶಿಕ ಪಕ್ಷ ರಚನೆ, ಸ್ಥಾಪನೆ ತಪ್ಪಿಸಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.

ನಾನು ಜನಸೇವೆ ಮಾಡಲು ಹೊಸ ಪಕ್ಷ ಸ್ಥಾಪಿಸಲು ಮುಂದಾದೆ. ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣಗೊಂಡಿದ್ದರಿಂದ ಹೊರ ಬರುವ ನಿರ್ಧಾರ ಕೈಗೊಂಡೆ. 40 ವರ್ಷ ರಾಜಕೀಯ ಅನುಭವ ಇರುವ ನನ್ನನ್ನು ಪಕ್ಷದ ಹಿರಿಯ ಮುಖಂಡರು ನಡೆಸಿಕೊಂಡ ರೀತಿ, ಆದ ಅಪಮಾನ, ಜೈಲುವಾಸ, ನೋವು ಕೊಟ್ಟಿದೆ ಎಂದು ಯಡಿಯೂರಪ್ಪ ಹೇಳಿದರು.

ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಉಪ ಮುಖ್ಯಮಂತ್ರಿಗಳಾದ ಈಶ್ವರಪ್ಪ, ಅಶೋಕ್, ಸಚಿವ ಸೋಮಣ್ಣ, ಗೋವಿಂದ ಕಾರಜೋಳ ಮುಂತಾದವರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.

ಶುಕ್ರವಾರ ಎಸ್ ಎಂಕೃಷ್ಣ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ, ಯಡಿಯೂರಪ್ಪ ನವೆಂಬರ್ ಮೊದಲ ವಾರದಲ್ಲೇ ಪಕ್ಷ ತೊರೆಯುವ ಮಾತನಾಡುತ್ತಿದ್ದಾರೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಬಿಜೆಪಿಯಲ್ಲಿ ಉಳಿಸಿಕೊಳ್ಳುವುದು ಅನಿವಾರ್ಯ ಎಂದು ಹೈಕಮಾಂಡ್ ಗೆ ಮನವರಿಕೆ ಮಾಡಿಸಲು ರಾಜ್ಯ ಬಿಜೆಪಿ ನಾಯಕರು ಕಾದಿದ್ದಾರೆ.

ಈ ನಡುವೆ ಬೆಂಗಳೂರಿನಲ್ಲಿ ಬಿಜೆಪಿ ಸಂಸದರು ಯಡಿಯೂರಪ್ಪ ಉಳಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಖಾಸಗಿ ಹೋಟೆಲ್ ನಲ್ಲಿ ಸಭೆ ಸೇರಿದ್ದ ಡಿಬಿ ಚಂದ್ರೇಗೌಡ, ಸುರೇಶ್ ಅಂಗಡಿ, ಜನಾರ್ಧನ ಸ್ವಾಮಿ, ಬಸವರಾಜು, ಜಿಎಂ ಸಿದ್ದೇಶ್, ಶಿವರಾಮೇಗೌಡ, ರಾಜ್ಯ ಸಭಾ ಸದಸ್ಯ ಆಯನೂರು ಮಂಜುನಾಥ್, ರಾಮಾ ಜೋಯಿಸ್ ಮುಂತಾದ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

English summary
My supporters in Jagadish Shettar government will stay no threat to BJP government and I don't want to take blame of breaking down the government said former CM BS Yeddyurappa
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X