ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ವಿರೋಧಿ ಎಫ್ಎಂ ಚಾನಲ್ ವಿರುದ್ಧ ದಂಗೆ

By Prasad
|
Google Oneindia Kannada News

Protest against anti-Kannada FM channels
ಬೆಂಗಳೂರು, ಅ. 30 : ಶೇಕಡಾ 80ರಷ್ಟು ಕನ್ನಡಿಗರಿರುವ ಪ್ರದೇಶದಲ್ಲಿ ಬಿತ್ತರವಾಗುತ್ತಿದ್ದರೂ ಕನ್ನಡವನ್ನು ಕಡೆಗಣಿಸುತ್ತಿರುವ ಎಫ್ಎಂ ರೇಡಿಯೋ ಚಾನಲ್‌ಗಳ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಲು ಕರ್ನಾಟಕ ಆಡಿಯೋ ವಿಡಿಯೋ ಮಾಲಿಕರ ಸಂಘ ಮಂಗಳವಾರ, ಅ.30ರಂದು ಬೆಂಗಳೂರಿನಲ್ಲಿ ಮಧ್ಯಾಹ್ನ 3 ಗಂಟೆಗೆ, ಗಾಂಧಿನಗರದಲ್ಲಿರುವ ಬಸಂತ್ ರೆಸಿಡೆನ್ಸಿ ಹೋಟೆಲಿನಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಲಾಗಿದೆ.

ಎಫ್ಎಂ ರೇಡಿಯೋಗಳು ಆಗಾಗ ಕನ್ನಡ ಹಾಡುಗಳನ್ನು, ಕನ್ನಡದಲ್ಲಿ ಜಾಹೀರಾತುಗಳನ್ನು ಬಿತ್ತರಿಸುತ್ತಿದ್ದರೂ ಅದರ ಪ್ರಮಾಣ ತೀರ ಕಡಿಮೆ. ರೇಡಿಯೋ ಜಾಕಿಗಳು ಕನ್ನಡವನ್ನು ಕಡೆಗಣಿಸಿ ಇಂಗ್ಲಿಷ್ ಅಥವಾ ಹಿಂದಿಯಲ್ಲಿಯೇ ಮಾತನಾಡುತ್ತಾರೆ. ಆಗಾಗ ಕನ್ನಡ ಮಾತನಾಡಿದರೂ ಕನ್ನಡವನ್ನೇ ಲೇವಡಿ ಮಾಡುವಂತಿರುತ್ತದೆ ಎಂಬುದು ಹಲವು ಪ್ರಮುಖ ಆರೋಪಗಳಲ್ಲಿ ಕೆಲವು.

ಕನ್ನಡ ನಾಡಿನಲ್ಲೇ ಇದ್ದುಕೊಂಡು ಕನ್ನಡವನ್ನೇ ನಿಕೃಷ್ಟ ದೃಷ್ಟಿಯಿಂದ ನೋಡಿದರೆ ಹೇಗೆ? ಕನ್ನಡ ರಾಜ್ಯೋತ್ಸವ ಹತ್ತಿರ ಬಂದಾಗ ಕನ್ನಡ ಪ್ರೇಮ ತೋರಿಸುತ್ತಾರೆಯೇ ವಿನಃ ಉಳಿದ ದಿನಗಳಲ್ಲಿ ಕಿವಿಗೊಟ್ಟು ಕೇಳಿದರೂ ಕನ್ನಡ ಪದಗಳು ಕಿವಿಗೆ ಬೀಳುವುದೇ ಇಲ್ಲ. ಈ ಕುರಿತು ಎಷ್ಟೇ ದೂರುಗಳನ್ನು ನೀಡಿದರೂ ಪ್ರಯೋಜನವಾಗಿಲ್ಲವಾಗಿದ್ದರಿಂದ ಪ್ರತಿಭಟಿಸಲು ಈ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಚಿತ್ರನಟ ಅಶೋಕ್, ಲಹರಿ ಕ್ಯಾಸೆಟ್‌ನ ಲಹರಿ ವೇಲು, ನಿರ್ಮಾಪಕ ಮುನಿರತ್ನ, ಅಗ್ನಿ ಪತ್ರಿಕೆ ಸಂಪಾದಕ ಅಗ್ನಿ ಶ್ರೀಧರ್, ಇಂದೂಧರ ಹೊನ್ನಾಪುರ, ಪಟಾಪಟ್ ನಾಗರಾಜ್, ಎಂ. ವೆಂಕಟಸ್ವಾಮಿ ಮುಂತಾದವರು ಭಾಗವಹಿಸುತ್ತಿದ್ದಾರೆ. ಪತ್ರಿಕಾಗೋಷ್ಠಿಗೆ ಎಫ್ಎಂ ಚಾನಲ್‌ನ ಕೆಲವರನ್ನೂ ಆಹ್ವಾನಿಸಲಾಗಿದೆ.

ಕೆಲ ಆರೋಪಗಳು ಕೆಳಗಿನಂತಿವೆ

* ಚಾನಲ್‌ಗಳು ಯಾವಾಗಲೂ ಹಿಂದಿ ಹಾಡನ್ನೇ ಬಿತ್ತರಿಸುತ್ತವೆ. ಕನ್ನಡ ಚಿತ್ರಸಂಗೀತ, ಜಾನಪದ ಸಂಗೀತ, ಕನ್ನಡ ಶಾಸ್ತ್ರೀಯ ಸಂಗೀತ ಆಗಾಗ ಮಾತ್ರ ಕೇಳಿಬರುತ್ತವೆ.

* ಜನರಿಗೆ ತೀರ ಅಗತ್ಯವಾಗಿ ಬೇಕಾಗುವ ಹವಾಮಾನ ಕುರಿತ ಸುದ್ದಿ, ವಾಹನ ದಟ್ಟಣೆ ಮಾಹಿತಿ, ಆರೋಗ್ಯ ಟಿಪ್ಸ್‌ಗಳೆಲ್ಲ ಹಿಂದಿ ಅಥವಾ ಇಂಗ್ಲಿಷಿನಲ್ಲಿ ಇರುತ್ತವೆ. ಬೆಂಗಳೂರಿನಲ್ಲಿ ಇರುವ ಕನ್ನಡಿಗರಿಗೆ ಇಂಥ ಮಾಹಿತಿಯಿಂದ ಎಳ್ಳಷ್ಟೂ ಪ್ರಯೋಜನವಾಗುತ್ತಿಲ್ಲ.

* ರೇಡಿಯೋ ಜಾಕಿಗಳು ಹೆಚ್ಚಾಗಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿಯೇ ಮಾತನಾಡುತ್ತಾರೆ. ಕನ್ನಡದಲ್ಲಿ ಮಾತನಾಡುವುದು ತೀರ ವಿರಳ.

* ಹಿಂದಿ ಸಿನೆಮಾ ಮತ್ತು ಹಿಂದಿ ಸಂಗೀತ ಮಾರುಕಟ್ಟೆಯನ್ನು ವಿಸ್ತರಿಸುವ ದೃಷ್ಟಿಯಿಂದ ಹೀಗೆ ಮಾಡುತ್ತಿವೆ. ಅಲ್ಲದೆ, ಕನ್ನಡಿಗರ ಮೇಲೆ ಹಿಂದಿಯನ್ನು ಹೇರುವ ಹುನ್ನಾರವನ್ನೂ ಈ ಚಾನಲ್‌ಗಳು ಹೊಂದಿವೆ.

* ಈ ಚಾನಲ್ಲುಗಳು ಕನ್ನಡಿಗರ ಹಕ್ಕನ್ನೇ ಕಿತ್ತುಕೊಳ್ಳುತ್ತಿವೆ.

ಈ ನಿಟ್ಟಿನಲ್ಲಿ petitiononline.comನಲ್ಲಿ ರೇಡಿಯೋ ಸಿಟಿ (91 MHz) ರೇಡಿಯೋ ಮಿರ್ಚಿ (93.3 MHz) ಚಾನಲ್ಲುಗಳ ವಿರುದ್ಧ ಕನ್ನಡಿಗರು ಆನ್‌ಲೈನ್ ಯುದ್ಧ ಸಾರಿದ್ದಾರೆ. ಈ ಕೂಡಲೆ ಕನ್ನಡ ಮತ್ತು ಕನ್ನಡಿಗರ ಮೇಲಾಗುತ್ತಿರುವ ಅನ್ಯಾಯವನ್ನು ನಿಲ್ಲಿಸಬೇಕು ಮತ್ತು ಕನ್ನಡಿಗರ ಮೇಲೆ ಹಿಂದಿ ಹೇರುವುದನ್ನು ಸ್ಥಗಿತಗೊಳಿಸಬೇಕು ಎಂದು ಆನ್‌ಲೈನ್ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.

English summary
Karnataka audio video owners' association has called for a press conference on 30th October at 3 pm at Basant Residency in Gandhi Nagar in Bangalore to protest against anti-Kannada attitude of private FM chennals in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X