ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಮಾಧ್ಯಮ ಓದಿದ ಪ್ರತಿಭಾವಂತರಿಗೆ ಸನ್ಮಾನ

By Prasad
|
Google Oneindia Kannada News

Talented Kannada medium students felicitated
ಬೆಂಗಳೂರು, ಅ. 29 : ಹಿಂದಿನ ಅನೇಕ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡುವುದರ ಮೂಲಕ ಇಂದು ವಿಶ್ವಕ್ಕೆ ಪರಿಚಯದ ವ್ಯಕ್ತಿಗಳಾಗಿ ಬೆಳೆದಿದ್ದು, ಅದೇ ರೀತಿ ಇಂದಿನ ವಿದ್ಯಾರ್ಥಿಗಳು ಸಹ ಹೆಚ್ಚು ಕನ್ನಡ ಮಾಧ್ಯಮದಲ್ಲಿ ಓದುವುದರ ಮೂಲಕ ಹೆಚ್ಚಿನ ಪ್ರಗತಿ ಸಾಧಿಸುವಲ್ಲಿ ಮುಂದಾಗುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಗೋವಿಂದ ಎಂ.ಕಾರಜೋಳ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಏರ್ಪಡಿಸಲಾಗಿದ್ದ ಕಳೆದ ಶೈಕ್ಷಣಿಕ ಸಾಲಿನಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಸಚಿವರು ಭಾನುವಾರ ಮಾತನಾಡುತ್ತಿದ್ದರು. ಕನ್ನಡ ರಾಜ್ಯೋತ್ಸವ ಹೊಸ್ತಿಲಲ್ಲಿರುವಾಗ ಕನ್ನಡಪರ ಚಟುವಟಿಕೆಗಳು ಗರಿಗೆದರುತ್ತಿವೆ.

ಪರಕೀಯರ ಆಳ್ವಿಕೆಯ ಕಾಲದಲ್ಲಿಯೂ ಸಹ ಕನ್ನಡ ಭಾಷೆಗೆ ಯಾವುದೇ ಕುಂದು ಬಂದಿಲ್ಲ. ಇಂಗ್ಲಿಷ್ ವ್ಯಾಮೋಹ ಬಿಡುವುದರ ಮೂಲಕ ಕನ್ನಡಿಗರು ಕನ್ನಡ ಭಾಷೆ ಬೆಳವಣಿಗೆಗೆ ಹೆಚ್ಚಿನ ಆಸಕ್ತಿ ತೋರಬೇಕು. ಹೊರ ದೇಶ ಹಾಗೂ ರಾಜ್ಯಗಳಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಇಂದು ಮಾಡುತ್ತಿರುವ ಕಾರ್ಯಕ್ಕೆ ತಮ್ಮ ಮೆಚ್ಚುಗೆಯನ್ನು ಕಾರಜೋಳ ಅವರು ವ್ಯಕ್ತಪಡಿಸಿದರು.

ನಶಿಸುತ್ತಿರುವ ಭಾಷೆಗಳು : ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ|| ಮುಖ್ಯಮಂತ್ರಿ ಚಂದ್ರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಪಂಚದಲ್ಲಿ ಆರು ಸಾವಿರಕ್ಕೂ ಹೆಚ್ಚು ಭಾಷೆಗಳಿದ್ದು, ಇತ್ತೀಚಿನ ಸಮೀಕ್ಷೆ ಪ್ರಕಾರ ಇಂಗ್ಲಿಷ್ ಭಾಷೆಯ ದಾಳಿಯಿಂದಾಗಿ 15 ದಿನಕ್ಕೊಂದು ಭಾಷೆ ನಶಿಸುತ್ತಿರುವುದಾಗಿ ಅಭಿಪ್ರಾಯಪಟ್ಟರು.

ನಮ್ಮ ರಾಜ್ಯದಲ್ಲಿ 180ಕ್ಕೂ ಹೆಚ್ಚು ಭಾಷೆಗಳಿದ್ದು ನಮ್ಮ ಮಾತೃಭಾಷೆಯಾದ ಕನ್ನಡವನ್ನು ಉಳಿಸಿ ಬೆಳೆಸಿ ಭಾಷೆಯ ವೈವಿಧ್ಯತೆಯನ್ನು ಎಲ್ಲ ಜನತೆಗೆ ತಿಳಿಸುವಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು. ಪರಕೀಯ ಭಾಷೆಯಿಂದ ದೊಡ್ಡ ವ್ಯಕ್ತಿಗಳಾಗಲು ಸಾಧ್ಯವಿಲ್ಲವಾದ್ದರಿಂದ ಕೀಳರಿಮೆಯನ್ನು ತೊರೆದು ಇಂಗ್ಲಿಷ್ ಭಾಷೆಯನ್ನು ಒಂದು ವಿಷಯವನ್ನಾಗಿ ಸ್ವೀಕರಿಸಿ 1ರಿಂದ 5ನೇ ತರಗತಿಯವರೆಗೆ ಕನ್ನಡ ಮಾತೃ ಭಾಷೆಯನ್ನು ಕಡ್ಡಾಯಗೊಳಿಸಬೇಕೆಂದರು. ನಾಡಗೀತೆಯ ಅವಧಿ ಹಾಗೂ ನಾಡಧ್ವಜದ ಬಗ್ಗೆ ಇರುವ ಗೊಂದಲವನ್ನು ಕೂಡಲೇ ಸರಿಪಡಿಸುವಂತೆಯೂ ಚಂದ್ರು ಅವರು ಕಾರಜೋಳ ಅವರನ್ನು ಒತ್ತಾಯಿಸಿದರು.

ಕನ್ನಡದಲ್ಲಿ ಎಸ್ಎಮ್ಎಸ್ ಕಳಿಸಿ : ಖ್ಯಾತ ಅಂತಾರಾಷ್ಟ್ರೀಯ ಕ್ರಿಕೆಟ್ ಪಟು ಹಾಗೂ ಐ.ಸಿ.ಸಿ. ಅಧ್ಯಕ್ಷರಾದ ಅನಿಲ್ ಕುಂಬ್ಳೆ ಅವರು, ಕನ್ನಡ ಭಾಷೆ ಕರ್ನಾಟಕ ರಾಜ್ಯಕಷ್ಟೇ ಸೀಮಿತವಾಗದೇ ಹೊರರಾಜ್ಯಗಳಲ್ಲಿಯೂ ಹೆಚ್ಚು ಬೆಳೆಯಬೇಕಾಗಿದೆ ಎಂದರು. ಭಾರತದ ಕ್ರಿಕೆಟ್ ತಂಡದಲ್ಲಿ ಕನ್ನಡಿಗರು ಹೆಚ್ಚು ಇರುವಂತೆ ಮಾಡಲು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕ್ರೀಡಾ ಪ್ರಾಧಿಕಾರಗಳನ್ನು ಪ್ರಾರಂಭಿಸಿ ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಹೆಚ್ಚು ಮೊಬೈಲ್‌ಗಳಲ್ಲಿ ಸಂದೇಶಗಳನ್ನು ಕಳುಹಿಸುತ್ತಿದ್ದು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ಸಂದೇಶಗಳನ್ನು ಕಳುಹಿಸುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸಿದರು.

ಖ್ಯಾತ ರಂಗಕರ್ಮಿಯಾದ ಡಾ|| ಮಾಸ್ಟರ್ ಹಿರಣ್ಣಯ್ಯ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಕನ್ನಡ ಭಾಷೆಯಬಗ್ಗೆ ಎಲ್ಲ ಜನತೆ ವಿಶಾಲವಾದ ಮನೋಭಾವವನ್ನು ಹೊಂದುವುದರ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಮುಂದಾಗಬೇಕೆಂದು ತಿಳಿಸಿದರು. ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ಅವರು ಸಾನಿಧ್ಯವಹಿಸಿ ವಿದ್ಯಾರ್ಥಿಗಳಿಗೆ ಆಶಿರ್ವಚನ ನೀಡಿದರು.

ಪ್ರತಿಭಾವಂತರಿಗೆ ಸನ್ಮಾನ : ಎಸ್.ಎಸ್.ಎಲ್.ಸಿ.ಯಲ್ಲಿ ಶೇ.98.08 ಅಂಕಗಳಿಸಿದ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆಯ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಎಸ್.ಪ್ರಜ್ವಲ್ ಹಾಗೂ ಪಿ.ಯು.ಸಿಯಲ್ಲಿ ಶೇ.95.33 ಅಂಕ ಗಳಿಸಿದ ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಎಚ್.ಎಸ್.ಶಾಹೀನ ಇವರಿಗೆ ತಲಾ 15,000 ರು.ಗಳ ನಗದು ಹಾಗೂ ಬೆಂಗಳೂರು ಮತ್ತು ಮೈಸೂರು ವಿಭಾಗದ ಅತಿ ಹೆಚ್ಚು ಅಂಕಗಳಿಸಿ ಕಳೆದ ವರ್ಷ ಉತ್ತೀರ್ಣರಾದ ಒಟ್ಟು 676 ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಶಿಕ್ಷಣಕ್ಕೆ ಪೂರಕವಾದ ಕನ್ನಡ, ಆಂಗ್ಲ ನಿಘಂಟು ಸೇರಿದಂತೆ ಇತರೆ ಪರಿಕರಗಳನ್ನು ವಿದ್ಯಾರ್ಥಿಗಳಿಗೆ ಕನ್ನಡ ಅಭಿವೃದ್ದಿ ಪ್ರಾಧಿಕಾರದಿಂದ ನೀಡಿ ಗೌರವಿಸಲಾಯಿತು.

English summary
Talented Kannada medium students who have secured top scores in SSLC and 2nd PUC were felicitated by Kannada Development Authority at Bala Bhavan in Bangalore on October 28, 2012. Govind Karjol, Anil Kumble, Mukhyamantri Chandru participated in the event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X