• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಯುಧಪೂಜೆಯ ನಿಮಿತ್ತ ಕ್ಲೀನಿಂಗ್ ಆರಂಭ

By Shami
|

ಬೆಂಗಳೂರು, ಅ. 21: ಆಯುಧಪೂಜೆಯ ಪೌರಾಣಿಕ ಮಹತ್ವಗಳೇನೇ ಇರಲಿ, ನವರಾತ್ರಿಯ ಎಂಟನೇ ದಿನ - ಮಹಾನವಮಿ, ಅಂದರೆ ಕಳೆದೊಂದು ವರ್ಷದಲ್ಲಿ ಮನೆ ಮಾಡುಗಳಲ್ಲಿ ಕಟ್ಟಿಕೊಂಡ ಕೊಳೆಯನ್ನು ಉಜ್ಜಿಉಜ್ಜಿ ತೊಳೆಯುವುದಕ್ಕೆ ಪವಿತ್ರವಾದ ದಿನ!

ಈಳಿಗೆ ಮಣೆಯಿಂದ ಸೂರ್ಯಕಿರಣ್ ಯುದ್ಧ ವಿಮಾನದವರೆಗೆ, ಬಿಎಂಡಬ್ಲ್ಯು ನಿಂದ ಹಳೇ ಹೀರೋ ಸೈಕಲ್ಲಿನ ಫೋಕ್ಸುಗಳನ್ನು ತಿಕ್ಕಿತಿಕ್ಕಿ ತೊಳೆದು ಫಳಫಳ ಹೊಳೆಯುವಂತೆ ಮಾಡುವವರೆಗೆ ಆಯುಧ ಪೂಜೆ ನಮ್ಮ ಪೂರ್ವಿಕರೇ ಹೇಳಿಕೊಟ್ಟ ದಿನ. ಮಂಚದ ಕೆಳಗೆ, ಬೀರುವಿನ ಮೇಲೆ, ಗೋಡೆ ಗಡಿಯಾರದ ಹಿಂದಿನ ಧೂಳು ಒರೆಸುವುದಕ್ಕೆ ಇದೇ ಶುಭಕಾಲ!

ಆಯುಧಪೂಜೆ 23ರ ಮಂಗಳವಾರವಾದರೂ ಹೋಲ್ ಸೇಲ್ ಕ್ಲೀನಿಂಗ್ ಕಾರ್ಯಕ್ರಮ ಹಾಕಿಕೊಳ್ಳುವುದಕ್ಕೆ ಗಳಿಗೆ ಮುಹೂರ್ತ ಅಂತ ಏನೂ ಇಲ್ಲ. ಅಖಿಲ ಕರ್ನಾಟಕದ ಮನೆ ಮನೆಗಳಲ್ಲಿ, ಫ್ಯಾಕ್ಟರಿಗಳಲ್ಲಿ, ಅಂಗಡಿ ಮುಂಗಟ್ಟುಗಳಲ್ಲಿ, ಹಿತ್ತಲು, ಟೆರೇಸುಗಳಲ್ಲಿನ ಗಲೀಜು ತೆಗೆಯುವ ಯಜ್ಞ ಈಗಾಗಲೇ ಬಿರುಸಿನಿಂದ ಆರಂಭವಾಗಿದೆ. ಜತೆಗೆ ಪೂಜೆ ಮಾಡಿಸಿಕೊಂಡು ಒಡೆಸಿಕೊಳ್ಳುವುದಕ್ಕೆ ಕುಂಬಳಕಾಯಿಗಳು ಕಾಯುತ್ತಿವೆ!

ಸಾಮಾನು ಸರಂಜಾಮುಗಳನ್ನು ಒರೆಸುವುದಕ್ಕೆ, ತೊಳೆಯುವುದಕ್ಕೆ ಮತ್ತೆ ಅದನ್ನ ಒಪ್ಪವಾಗಿ ಜೋಡಿಸಿಡುವುದಕ್ಕೆ ತಾಳ್ಮೆ ಬೇಕು. ನಮ್ಮ ಸಮಯಕ್ಕೆ ಸರಿಯಾಗಿ ಕೆಲಸದವರು ಸಿಗದಿದ್ದರೆ ನಮ್ಮ ಕೆಲಸ ನಾವೇ ಮಾಡಿಕೊಳ್ಳುವುದಕ್ಕೆ ಸೊಂಟ ಬಗ್ಗಿಸಬೇಕು, ಪೊರಕೆ, ವ್ಯಾಕ್ಯೂಮ್ ಕ್ಲೀನರ್, ಫ್ಲೋರ್ ಕ್ನೀನರುಗಳಿಗೆ ಕೆಲ್ಸ ಕೊಡ್ಬೇಕು. ಅದೇ ಕಷ್ಟ. ಜತೆಗೆ ನೀರಿನ ತಾಪತ್ರಯ. ಗಾಡಿ ವಾಷ್ ಮಾಡಕ್ಕೆ ನೀರು ಸಾಕಾಗ್ತಿಲ್ಲ.

ನಮಗೇ ತಿಳಿಯದಹಾಗೆ ಮನೆಯ ಸಂದಿಗೊಂದಿಗಳಲ್ಲಿ ಬೇಡದ ಸಾಮಾನು, ಕಸಕಡ್ಡಿ ಅದೂ ಇದೂ ಅದ್ಹೇಗೋ ಸೇರಿಕೊಂಡಿರುತ್ತದೆ. ಅದನ್ನೆಲ್ಲ ಕಿತ್ತಿ ಬಿಸಾಡುವ ಕಾರ್ಯಕ್ರಮ ನಿಮ್ಮ ಮನೆಯಲ್ಲೂ ಆರಂಭವಾಗಿದೆ ಎಂಬ ವಿಷ್ಯ ನಮ್ಮ ಬಾತ್ಮೀದಾರರಿಂದ ಗೊತ್ತಾಗಿದೆ.

ಕ್ಲೀನ್ ಮಾಡುವುದು ಒಂದು ಸಂತೋಷದ ಕೆಲಸ. ಅದರಿಂದ ದೊರಕುವ ಸಂತಸವನ್ನು ಅನುಭವಿಸಿದವನೇ ಬಲ್ಲ. ಆದರೆ, ಗುಡಿಸಿದ ಕಸವನ್ನು ಬಿಸಾಕುವುದು ಎಲ್ಲಿ ಎನ್ನುವುದೇ ಒಂದು ದೊಡ್ಡ ತಲೆನೋವು. ಅದೂ ನೀವು ಬೆಂಗಳೂರಿನ ನಾಗರಿಕರಾಗಿದ್ದರೆ ಮುಗಿತು ಕಥೆ.

ರಾಜಧಾನಿಯಲ್ಲಿ ದಿನವೊಂದಕ್ಕೆ 3,000 ದಿಂದ 4, 000 ಟನ್ ಕಸ ಉತ್ಪತ್ತಿ ಆಗತ್ತೆ. ಆಯುಧಪೂಜೆ ಬಂದರೆ ಕಸದ ಒಟ್ಟು ತೂಕ 10,000 ಮೆಟ್ರಿಕ್ ಟನ್ ದಾಟತ್ತೆ. ಇದರಲ್ಲಿ ಬಾಳೆಕಂದು, ಮಾವಿನ ಸೊಪ್ಪು ಮತ್ತು ಹೂವಿನ ಕೊಡುಗೆ ಅಧಿಕ. ಇನ್ನು ನಿಮ್ಮ ಮನೆ ಅಂಗಡಿಗಳು ಹೊರಹಾಕುವ ವಾರ್ಷಿಕ ಡ್ರೈ ವೇಸ್ಟುಗಳ ಲೆಕ್ಕ ಜಮೆ ಇಟ್ಟವರಿಲ್ಲ.

ಕಳೆದ ತಿಂಗಳು ಬೆಂಗಳೂರಿಗರು ಕಂಡ ಕಸ ವಿಲೇವಾರಿಯ ಬೃಹತ್ ಸಮಸ್ಯೆ ಇನ್ನೂ ಹಾಗೇ ಇದೆ. ಮಂಡೂರು ಕಸ ಶೇಖರಣಾ ಕೇಂದ್ರದಲ್ಲಿ ಪ್ರತಿಭಟನೆಯ ಕಾವೂ ಹಾಗೇ ಇದೆ. ಕಸ ವಿಲೇವಾರಿ ಸಮಸ್ಯೆ ನೀಗಿಸುವ ಭರವಸೆಯನ್ನು ಉಪ ಮುಖ್ಯಮಂತ್ರಿ ಆರ್ ಅಶೋಕ ಶನಿವಾರ ನೀಡಿದ್ದಾರೆ. ಭರವಸೆಗಳು ಹಣ್ಣಾಗುವವರೆಗೂ ಕಾಲುಕಾಲಿಗೆ ತಾಕುವ ಕಸವನ್ನು ಕಾಯುವವರು ಯಾರು?

English summary
Karnataka braced up to welcome/celebrate Ayudha pooja on Tuesday 23 Oct 2012. Worshiping whatever implements we use in our daily life is the significance of Ayudha pooja or Mahanavami, the 8th day of Hindu festival Navaratri. On this day Hindus take up elaborate annual cleaning of house, vechicles and surroundings.Ayudha pooja 2012 has thrown up additional challenge for City admin ( BBMP) to dispose garbage in Bangalore city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X