ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸದ ಮೂಟೆ ಮೇಲೆ ಮೂಗು ಮುಚ್ಚಿ ಕೂತ ಸಿಲಿಕಾನ್ ಸಿಟಿ

By Mahesh
|
Google Oneindia Kannada News

Garbage city Bangalore
ಬೆಂಗಳೂರು, ಅ.21: ಗಾರ್ಡನ್ ಸಿಟಿಯನ್ನು ಕಾಡುತ್ತಿರುವ ಕಸದ ಸಮಸ್ಯೆ ಇನ್ನಷ್ಟು ಉಲ್ಬಣಗೊಂಡಿದೆ. ಕಳೆದ ಐದು ದಿನಗಳಿಂದ ಎಲ್ಲಾ ವಾರ್ಡ್ ಗಳಲ್ಲಿ ಬಿದ್ದಿರುವ ರಾಶಿಗಟ್ಟಲೆ ಕಸ ವಿಲೇವಾರಿಯಾಗದೆ ಹಾಗೆ ಗಬ್ಬು ನಾರುತ್ತಿದೆ. ಇತ್ತ ಮಂಡೂರಿನ ಜನರ ಪ್ರತಿಭಟನೆ ನಡುವೆ ಮಂಡೂರು ಬಿಟ್ಟರೆ ಬೇರೆ ಜಾಗವಿಲ್ಲ ಎಂದು ಪುರಪಿತೃ ವೆಂಕಟೇಶ್ ಮೂರ್ತಿ ಅವರು ಘೋಷಿಸಿದ್ದಾರೆ.

ಆದರೆ, ಭಾನುವಾರ ಮಂಡೂರಿನ ಕಡೆ ತೆರಳುತ್ತಿದ್ದ ಕಸದ ಲಾರಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಬಳಿ ಬೆಟ್ಟದಾಸನಪುರ ಹಾಗೂ ಬಿಂಗಿಪುರದ ಗ್ರಾಮಸ್ಥರು ತಡೆದು ನಿಲ್ಲಿಸಿದ್ದಾರೆ. ಸುಮಾರು 50 ಲಾರಿಗಳು ರಸ್ತೆಯಲ್ಲೇ ನಿಂತಿದ್ದು, 100ಕ್ಕೂ ಅಧಿಕ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.

ಕಸದ ಸಮಸ್ಯೆ ಪರಿಹರಿಸಲು ಐಎಎಸ್ ದಂಪತಿ ರಜನೀಶ್ ಗೋಯಲ್ ಹಾಗೂ ಶಾಲಿನಿ ರಜನೀಶ್ ಅವರು ಶತಪ್ರಯತ್ನ ಪಡುತ್ತಿದ್ದರೆ, ಎಲ್ಲವೂ ಉಲ್ಟಾ ಹೊಡೆಯುತ್ತಿದೆ. ಮೊದಲಿಗೆ 'ಮನೆಯಲ್ಲಿಯೇ ಕಸ ವಿಂಗಡಿಸಿ' ಎಂದು ಕಸ ವಿಂಗಡನೆ ವಿಧಾನವನ್ನು ಶಾಲಿನಿ ರಜನೀಶ್ ಅವರು ಜಾರಿಗೊಳಿಸಿದರು.

ಮನೆಯಲ್ಲಿ ಹಸಿ ಮತ್ತು ಒಣ ಕಸ ವಿಂಗಡಿಸಬೇಕು. ಪಾಲಿಕೆಯ ಪೌರ ಕಾರ್ಮಿಕರಿಗೆ ಕಸವನ್ನು ನೇರವಾಗಿ ಹಸ್ತಾಂತರಿಸಬೇಕು ಎಂಬ ನಿಯಮ ಜಾರಿಗೆ ಬರುವಷ್ಟರಲ್ಲೇ ವಿಲೇವಾರಿ ಸಮಸ್ಯೆ ಎದುರಾಯಿತು.

ಬಿಬಿಎಂಪಿ ಆಯುಕ್ತ ರಜನೀಶ್ ಗೋಯಲ್ ಅವರು ಕಸ ವಿಲೇವಾರಿಗೆ ಚಾಲನೆ ನೀಡಿ ಟ್ರಕ್ ಗಳನ್ನು ಮಂಡೂರಿನತ್ತ ಕಳಿಸಿದರೆ, ಸ್ಥಳೀಯರು ಭಾರಿ ಪ್ರತಿರೋಧ ವ್ಯಕ್ತಪಡಿಸಿದರು. ಆದರೆ, ಈ ಸಂದರ್ಭದಲ್ಲಿ ಮೇಯರ್ ಡಿ ವೆಂಕಟೇಶ್ ಮೂರ್ತಿ ಅವರು ಮಧ್ಯ ಪ್ರವೇಶಿಸಿ, ಮಂಡೂರು ಜನತೆ ಜೊತೆ ಸಂಧಾನ ಮಾತುಕತೆ ನಡೆಸಲಾಗಿದೆ. ಶನಿವಾರ ರಾತ್ರಿಯಿಂದಲೇ ವಾಹನಗಳು ಮಂಡೂರಿಗೆ ತೆರಳಿದೆ ಎಂದು ಹೇಳಿದ್ದಾರೆ.

ಕಳೆದ ನಾಲ್ಕೈದು ದಿನಗಳಿಂದ ಬೆಂಗಳೂರಿನಲ್ಲಿ ಸುಮಾರು 14,000 ಮೆಟ್ರಿಕ್ ಟನ್ ಗಳಷ್ಟು ಕಸ ಉತ್ಪಾದನೆಯಾಗಿದೆ. ಬಿಬಿಎಂಪಿ ಕಚೇರಿ ಕಂಟ್ರೋಲ್ ರೂಮ್ ಗೆ ದೂರಿನ ಕರೆಗಳ ಮಹಾಪೂರವೇ ಹರಿದಿದೆ.

ಸಾಲು ಸಾಲು ರಜೆಯ ಜೊತೆ ಕಸದ ಸಮಸ್ಯೆಯಿಂದ ಸಿಕ್ಕಿರುವ ಸಾಂದರ್ಭಿಕ ಬಿಡುವಿನ ಲಾಭ ಪಡೆದಿರುವ ಪೌರ ಕಾರ್ಮಿಕರು ನಗರದ ಬಹುತೇಕ ವಾರ್ಡ್ ಗಳಲ್ಲಿ ತಳ್ಳುಗಾಡಿಯನ್ನು ಪಕ್ಕಕ್ಕೆ ಹಾಕಿ ಆರಾಮವಾಗಿ ಕುಳಿತುಬಿಟ್ಟಿದ್ದಾರೆ. ಜಯನಗರ, ಮಲ್ಲೇಶ್ವರ, ಭೂಪಸಂದ್ರ, ಸಂಜಯ ನಗರ, ಕೋರಮಂಗಲ, ಆನಂದ ನಗರ, ಬಸವನಗುಡಿ, ಹೊಸಕೆರೆಹಳ್ಳಿ ಸೇರಿದಂತೆ ಅನೇಕ ಕಡೆ ಮಳೆಯಲ್ಲಿ ಕಸದ ರಾಶಿ ನೆಂದು ತೊಪ್ಪೆಯಾಗುತ್ತಿದೆ.

ನಗರದಲ್ಲಿ ಈಗಾಗಲೇ ಡೆಂಘಿ ಜ್ವರದ ಭೀತಿ ಆವರಿಸಿದ್ದು, ಇಲಿಜ್ವರ, ಮಲೇರಿಯಾ, ಟೈಫಾಯ್ಡ್, ಜಾಂಡೀಸ್ ಮುಂತಾದ ಸಾಂಕ್ರಾಮಿಕ ರೋಗಗಳ ಭಯ ಆವರಿಸಿದೆ.

ಪ್ರಾಣಿಗಳ ಮಲಮೂತ್ರಗಳಿರುವ ಜಾಗದಲ್ಲಿ ಓಡಾಡುವಾಗ ಪಾದರಕ್ಷೆ ಹಾಗೂ ಕೈಚೀಲ ಉಪಯೋಗಿಸಬೇಕು, ಕುಡಿಯುವ ನೀರಿನ ಮೂಲದೊಂದಿಗೆ ಇಲಿ ಮತ್ತು ಇತರೆ ಪ್ರಾಣಿಗಳ ಮಲಮೂತ್ರ ವಿಶ್ರಣವಾಗದಂತೆ ಎಚ್ಚರವಹಿಸಬೇಕು, ಇಲಿಗಳ ನಿಯಂತ್ರಣ ಮಾಡಬೇಕು. ಶುದ್ಧ ನೀರು ಹಾಗೂ ಆಹಾರ ಸೇವಿಸಬೇಕು. ಕಸ ಹಾಗೂ ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

English summary
Garden city turns Garbage city.With over 14,000 metric tonnes of garbage un devlievered BBMP finds no solution to shift garbage to Mandur says Mayor D Venkatesh Murthy. BBMP commissioner Rajneesh goel said The talks held with the Mandur villagers have been successful and we are sending trucks there.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X