ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಹೋದರರ ಕಿತ್ತಾಟಕ್ಕೆ ಹಾಲಪ್ಪ ತುಪ್ಪ, ಬಂಗಾರಪ್ಪ ಪುತ್ಥಳಿ ಅನಾಥ

|
Google Oneindia Kannada News

Fomer CM Bangarappa statue inguaration programme cancelled in Soraba
ಸೊರಬ, ಅ 13: ಮಾಜಿ ಮುಖ್ಯಮಂತ್ರಿ ಸಾರೇಕೊಪ್ಪ ಬಂಗಾರಪ್ಪ ಅವರ ಅಂತ್ಯಸಂಸ್ಕಾರದ ಸಮಯದಲ್ಲೂ ಕಿತ್ತಾಡಿ ಕೊಂಡಿದ್ದ ಅವರ ಇಬ್ಬರು ಪುತ್ರರು ಈಗ ಅವರ ಪುತ್ಥಳಿ ಅನಾವರಣ ವಿಚಾರದಲ್ಲೂ ಬೀದಿ ರಂಪಾಟ ಮಾಡಿಕೊಂಡಿದ್ದಾರೆ.

ಅಭಿಮಾನಿಗಳು ನಿರ್ಮಿಸಿದ್ದ ಬಂಗಾರಪ್ಪ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಸೊರಬ ಶಾಸಕ ಮತ್ತು ಬಂಗಾರಪ್ಪ ಅವರ ಶಿಷ್ಯ ಹರತಾಳು ಹಾಲಪ್ಪ ಮತ್ತು ಕುಮಾರ ಬಂಗಾರಪ್ಪ ಅವರಿಗೆ ಆಹ್ವಾನ ನೀಡಿದ್ದು ಇಬ್ಬರು ಸಹೋದರರು ಮತ್ತು ಅವರವರ ಬೆಂಬಲಿಗರ ನಡುವೆ ಕಲಹಕ್ಕೆ ಕಾರಣವಾಗಿದೆ.

ಸೊರಬ ತಾಲೂಕು ವ್ಯಾಪ್ತಿಯಲ್ಲಿ ಬರುವ ಭದ್ರಾಪುರದಲ್ಲಿ ಅಭಿಮಾನಿಗಳು ನಿರ್ಮಿಸಿದ್ದ ಬಂಗಾರಪ್ಪ ಅವರ ಪುತ್ಥಳಿ ಉದ್ಘಾಟನಾ ಕಾರ್ಯಕ್ರಮವನ್ನು ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದ್ದರಿಂದ ಶಿವಮೊಗ್ಗ ಜಿಲ್ಲಾಡಳಿತ ರದ್ದುಗೊಳಿಸಿದೆ. ಪುತ್ಥಳಿಯನ್ನು ಕೊಠಡಿಯಲ್ಲಿ ಇಟ್ಟು ಬೀಗ ಹಾಕಿ ಬೀಗವನ್ನು ತನ್ನ ಬಳಿಯೇ ಇಟ್ಟುಕೊಂಡಿದೆ.

ಬಂಗಾರಪ್ಪ ಅವರ ಮೂರು ಜನ ಅಭಿಮಾನಿಗಳು ಸುಮಾರು ಒಂದೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಬಂಗಾರಪ್ಪ ಪುತ್ಥಳಿ ನಿರ್ಮಿಸಿದ್ದರು. ಉದ್ಘಾಟನೆಗೆ ಬಂಗಾರಪ್ಪ ಅವರ ಪತ್ನಿ ಶಕುಂತಲಮ್ಮ ಮತ್ತು ಎರಡನೇ ಪುತ್ರ ಮಧು ಬಂಗಾರಪ್ಪ ಅವರನ್ನು ಆಹ್ವಾನಿಸಿದ್ದರು.

ಆದರೆ ಗ್ರಾಮಸ್ಥರು ಈಡಿಗ ಸಮುದಾಯದ ಎಲ್ಲಾ ರಾಜಕೀಯ ನಾಯಕರುಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಸೂಚಿಸಿದ್ದರಿಂದ ಈ ಅಭಿಮಾನಿಗಳು ಸ್ಥಳೀಯ ಶಾಸಕ ಹರತಾಳು ಹಾಲಪ್ಪ, ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಕುಮಾರ್ ಬಂಗಾರಪ್ಪ ಅವರನ್ನು ಆಹ್ವಾನಿಸಿದರು.

ಕುಮಾರ್ ಬಂಗಾರಪ್ಪ ಮತ್ತು ಹಾಲಪ್ಪ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕೆ ಮಧು ಬಂಗಾರಪ್ಪ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹಾಲಪ್ಪ ಅವರಿಗೆ ನಿಯತ್ತು ಅನ್ನೋದೇ ಇಲ್ಲ. ಈ ಹಿಂದೆ ನನ್ನ ತಂದೆಯ ಫೋಟೋ ಕಿತ್ತು ಎಸೆದಿದ್ದರು. ನನ್ನ ತಂದೆಯ ಮೇಲೆ ಗೌರವ ಇಲ್ಲದವರು ಈ ಕಾರ್ಯಕ್ರಮಕ್ಕೆ ಬರಬಾರದು ಎಂದು ಮಧು ಕಿಡಿಕಾರಿದ್ದಾರೆ.

ಈ ನಡುವೆ, ಉದ್ಘಾಟನೆಯ ಮುನ್ನಾ ದಿನ ಬಂಗಾರಪ್ಪ ಪತ್ನಿ ಶಕುಂತಲಮ್ಮ ಅವರು, ಅಭಿಮಾನಿಗಳೆಂದು ಹೇಳಿಕೊಳ್ಳುವ ಕೆಲವರು ಬಂಗಾರಪ್ಪ ಅವರ ಪುತ್ಥಳಿ ಅನಾವರಣ ಮಾಡುತ್ತಿದ್ದಾರೆ. ಇದು ರಾಜಕೀಯ ಪ್ರೇರಿತ, ಪುತ್ಥಳಿ ಅನಾವರಣ ಮಾಡಲು ನನ್ನ ಅನುಮತಿ ಪಡೆದಿಲ್ಲ. ಹೀಗಾಗಿ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು.

ಈ ಪತ್ರದ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ಕಾರ್ಯಕ್ರಮ ರದ್ದು ಪಡಿಸಿ ಆದೇಶ ಹೊರಡಿಸಿ, ಪೋಲೀಸ್ ಇಲಾಖೆಗೆ ಸೂಕ್ತ ಬಂದೋಬಸ್ತ್ ಮಾಡುವಂತೆ ತಿಳಿಸಿದ್ದರು.

ನನ್ನ ತಂದೆ ಯಾವುದೇ ಜಾತಿಗೆ ಸೇರಿದವರಲ್ಲ. ತಂದೆಯ ಪುತ್ಥಳಿ ಅನಾವರಣ ನಡೆಸದಂತೆ ತಾಯಿ ತಡೆದಿದ್ದಾರೆ. ನನ್ನ ತಾಯಿ ತಂದೆಯ ಹೆಸರಿಗೆ ಮಸಿ ಬಳೆಯುವ ಕೆಲಸಕ್ಕೆ ಮುಂದಾಗಿಲ್ಲ ಎನ್ನುವ ನಂಬಿಕೆಯಿದೆ. ಮಧುವಿನ ಅನುಭವ ಕೊರತೆಯಿಂದಾಗಿ ಕಾರ್ಯಕ್ರಮ ರದ್ದಾಗಿದೆ. ಅದಕ್ಕಾಗಿ ಎಲ್ಲರ ಬಳಿ ಕ್ಷಮೆ ಕೇಳುತ್ತೇನೆ ಎಂದು ಕುಮಾರ ಬಂಗಾರಪ್ಪ ಹೇಳಿದ್ದಾರೆ.

ಒಟ್ಟಿನಲ್ಲಿ ಸಹೋದರರ ಕಲಹದಿಂದ ಬಂಗಾರಪ್ಪ ಪುತ್ಥಳಿ ಅನಾವರಣ ಕಾರ್ಯಕ್ರಮ ರದ್ದಾಗಿದೆ. ಜನತೆ ಆಕ್ರೋಶ ವ್ಯಕ್ತ ಪಡಿಸಿದ್ದರಿಂದ ಗ್ರಾಮದಲ್ಲಿ ಸದ್ಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

English summary
Former Chief Minister Late Bangarappa's statue inauguration programme cancelled in Soraba, Shimoga district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X