ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳ್ಳಿಯನ್ನು ಜೈಲಿಂದ ಬಿಡಿಸಿ ಮಾನವೀಯತೆ ಮೆರೆದ ಟೆಕ್ಕಿ

By Prasad
|
Google Oneindia Kannada News

Bangalore techie pardons thief maid
ಬೆಂಗಳೂರು, ಅ. 12 : ತಾನೇ ದೂರು ನೀಡಿ ಕಳ್ಳಿಯನ್ನು ಜೈಲಿಗೆ ಕಳಿಸಿದ ವ್ಯಕ್ತಿಯೇ ಮಾನವೀಯತೆ ಮೆರೆದು ಆ ಕಳ್ಳಿಯನ್ನು ಜಾಮೀನು ನೀಡಿ ಜೈಲಿನಿಂದ ಬಿಡಿದ ಕಥೆಯನ್ನು ಯಾವತ್ತಾದರೂ ಕೇಳಿದ್ದೀರಾ? ಇಲ್ಲವಾದರೆ ಇಲ್ಲೊಂದು ವಿಶಿಷ್ಟ ಬಗೆಯ ಸತ್ಯಕತೆಯಿದೆ. ಮನೆಗೆಲಸದವರನ್ನು ಅತಿಯಾಗಿ ನಂಬಬಾರದು ಎಂಬ ನೀತಿಯೂ ಇದೆ.

3.5 ಲಕ್ಷ ರು. ಮೌಲ್ಯದ ಚಿನ್ನಾಭರಣ ಕದ್ದು ಜೈಲುಪಾಲಾಗಿರುವ ಅಮ್ಮನ ಪ್ರೀತಿ ವಾತ್ಸಲ್ಯವನ್ನು ಕಳೆದುಕೊಂಡಿರುವ ಪುಟ್ಟಪುಟಾಣಿ ಮಕ್ಕಳ ಗೋಳನ್ನು ಸಹಿಸಲಾರದೆ, ಕದ್ದ ಮಾಲು ಸಿಕ್ಕ ಹಿನ್ನೆಲೆಯಲ್ಲಿ ಬೆಂಗಳೂರಿನ ಟೆಕ್ಕಿಯೊಬ್ಬರು ತಾವೇ ಶ್ಯೂರಿಟಿ ನೀಡಿ ಕಳ್ಳತನ ಮಾಡಿದ್ದ ಮನೆಗೆಲಸದವಳನ್ನು ಬಿಡಿಸಿದ್ದಾರೆ ಮತ್ತು ಮಾನವೀಯತೆ ಮೆರೆದಿದ್ದಾರೆ. ಈ ಸುದ್ದಿ ಬೆಂಗಳೂರು ಮಿರರ್‌ನಲ್ಲಿ ವರದಿಯಾಗಿದೆ.

ಫಿಡೆಲಿಟಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ 32 ವರ್ಷದ ಬ್ರಿಜೇಶ್ ತಮ್ಮ ಕುಟುಂಬದೊಡನೆ ದೊಮ್ಮಲೂರಿನಲ್ಲಿ ವಾಸವಿದ್ದು, ಮನೆಗೆಲಸಕ್ಕಾಗಿ ಕೋಕಿಲಾ ಎಂಬಾಕೆಯನ್ನು ನೇಮಿಸಿದ್ದರು. ಆಕೆ ಕಷ್ಟಪಟ್ಟು ದುಡಿಯುತ್ತಿದ್ದಳು, ಅಮಾಯಕಳಂತೆ ಕಾಣುತ್ತಿದ್ದಳು ಮತ್ತು ಬರಬರುತ್ತ ಮನೆಯವರ ಪ್ರೀತಿ, ನಂಬಿಕೆಯನ್ನೂ ಗಳಿಸಿದಳು.

ಎಲ್ಲವೂ ನಂಬಿಕೆಯ ಅಡಿಯಲ್ಲಿಯೇ ನಡೆಯುತ್ತಿದ್ದರಿಂದ ಮನೆಗೆಲಸದವಳಿಗೆ ಬ್ರಿಜೇಶ್ ಅವರ ಪತ್ನಿ ಮನೆಯ ಬೀಗದ ಕೈಯನ್ನು ನೀಡಿದ್ದರು. ಕೋಕಿಲಾ ಕೂಡ ಮಾಲಿಕರು ಮನೆಯಲ್ಲಿ ಇಲ್ಲದಿದ್ದರೂ ನಿಯತ್ತಾಗಿ ಅಚ್ಚುಕಟ್ಟಾಗಿ ಕೆಲಸ ಮಾಡಿ ಜಾಗ ಖಾಲಿ ಮಾಡುತ್ತಿದ್ದಳು. ಮನೆಯಲ್ಲಿ ಇರುತ್ತಿದ್ದ ಎಲ್ಲ ವಸ್ತುಗಳು ಅಲ್ಲಲ್ಲಿಯೇ ಇರುತ್ತಿದ್ದರಿಂದ ಕೋಕಿಲಾ ಮೇಲೆ ಬ್ರಿಜೇಶ್ ಅವರಿಗೆ ಯಾವ ಅನುಮಾನವೂ ಇರಲಿಲ್ಲ.

ಆದರೆ, ಬರಬರುತ್ತ ಏನಾಯಿತೆಂದರೆ, ಮನೆಯಲ್ಲಿ ಬೀರುವಿನಲ್ಲಿ ಇಟ್ಟಿರುತ್ತಿದ್ದ ಚಿನ್ನದ ಆಭರಣಗಳು ಒಂದೊಂದಾಗಿ ಕಣ್ಮರೆಯಾಗಲು ಆರಂಭಿಸಿದವು. ಕೋಕಿಲಾ ಅಮಾಯಕಿಯಂತೆ ಕಾಣುತ್ತಿದ್ದರಿಂದ ಮತ್ತು ಅವಳನ್ನು ಅತಿಯಾಗಿ ನಂಬಿದ್ದರಿಂದ ಆಕೆಯನ್ನು ಅನುಮಾನಿಸುವ ಹಾಗೂ ಇರಲಿಲ್ಲ. ಮತ್ತೊಂದು ಸಂಗತಿಯೆಂದರೆ, ಆಭರಣ ಕಾಣೆಯಾದ ಸಂದರ್ಭದಲ್ಲಿ ಬೇರೆ ಯಾರು ಕೂಡ ಮನೆಗೆ ಬಂದಿರಲಿಲ್ಲ.

ಏನೇ ಆಗಲಿ ಎಂದು ಬ್ರಿಜೇಶ್ ಅವರು ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಿದರು. ಕೋಕಿಲಾಳನ್ನು ಮನೆಯವರೇ ಬೆಂಬಲಿಸಿದ್ದರಿಂದ ಪೊಲೀಸರಿಗೆ ಇದು ಭಾರೀ ಸವಾಲಿನ ಕೇಸಾಗಿ ಪರಿಣಮಿಸಿತು. ಅನ್ಯ ದಾರಿಯಿಲ್ಲದೆ, ಮನೆಗೆಲಸದ ಕೋಕಿಲಾಳನ್ನು ವಿಚಾರಣೆಗೆ ಗುರಿಪಡಿಸಲೇಬೇಕಾಯಿತು. ವಿಚಾರಣೆಯ ರೀತಿ ಬಿಗಿಯಾಗುತ್ತಿದ್ದಂತೆ ಕೋಕಿಲಾ ತಾನು ಮಾಡಿದ ತಪ್ಪನ್ನು ಕೊನೆಗೂ ಒಪ್ಪಿಕೊಂಡಳು.

ಆಗಿದ್ದೇನೆಂದರೆ, ಕೋಕಿಲಾ ಚಿಟ್ ಫಂಡ್‌ನಲ್ಲಿ ಹಣ ಹೂಡಿದ್ದಳು. ಕ್ರಮೇಣ ಚಿಟ್ ಫಂಡ್‌ನಲ್ಲಿ ಹೆಚ್ಚುಹೆಚ್ಚು ಹಣ ಹೂಡಬೇಕಾಗಿ ಬಂದಿತು. ಕಡೆಗೆ ಉಂಡಮನೆಗೆ ಎರಡು ಬಗೆಯಲು ನಿರ್ಧರಿಸಿದ ಕೋಕಿಲಾ ಚಿನ್ನಾಭರಣ ಕದ್ದು, ಅವನ್ನು ಅಡವಿಟ್ಟು ಹಣ ಪಡೆದು ಚಿಟ್ ಫಂಡ್‌ನಲ್ಲಿ ತೊಡಗಿಸಲು ಪ್ರಾರಂಭಿಸಿದಳು. ಎಷ್ಟೇ ಚಾಲಾಕಿತನ ತೋರಿಸಿದರೂ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವೆ? ಕೊನೆಗೆ ಜೈಲುಪಾಲೂ ಆದಳು.

ಆದರೆ, ನೇಯುವ ಕಾಯಕ ಮಾಡುತ್ತಿದ್ದ ಆಕೆಯ ಗಂಡ ಬಂದು, ಅಮ್ಮನಿಲ್ಲದೆ ಮೂರು ಮಕ್ಕಳು ಅನಾಥ ಭಾವನೆಯಿಂದ ಅವಸ್ಥೆಪಡುತ್ತಿರುವ ಕರುಣಾಜನಕ ಕಥೆ ಹೇಳಿದಾಗ, ಬ್ರಿಜೇಶ್ ಮತ್ತು ಅವರ ಹೆಂಡತಿಯ ಕರಳು ಕೂಡ ಚುರುಕ್ ಅಂದಿತು, ಹೃದಯ ಕರಗಿತು. ಕಳ್ಳತನ ಮಾಡಿದ್ದ ಆಭರಣ ವಾಪಸ್ ಮಾಡಬೇಕೆಂಬ ಮಾತು ಪಡೆದು, ಅವು ವಾಪಸ್ ಸಿಕ್ಕನಂತರ ಬ್ರಿಜೇಶ್ ತಾವೇ ಸ್ವತಃ ಶ್ಯೂರಿಟಿ ನೀಡಿ ಕೋಕಿಲಾಳನ್ನು ಜೈಲಿನಿಂದ ಬಿಡುಗಡೆ ಮಾಡಿಸಿದರು.

ಈ ಪ್ರಕರಣದಲ್ಲಿ ತಪ್ಪು ಕೋಕಿಲಾಳದು ಮಾತ್ರವಲ್ಲ, ನಮ್ಮದೂ ಇದೆ ಎಂಬುದನ್ನು ಬ್ರಿಜೇಶ್ ಹೇಳುತ್ತಾರೆ. ಮುಂಜಾಗ್ರತೆ ವಹಿಸಿ ಚಿನ್ನಾಭರಣಗಳನ್ನು ಕೈಗೆ ಸಿಗುವಂತೆ ಇಡದೆ ಎಚ್ಚರ ವಹಿಸಿದ್ದರೆ ಕಳ್ಳತನ ಆಗುತ್ತಿರಲೇ ಇಲ್ಲ ಎಂದು ಹೇಳಿದ್ದಾರೆ. ಈಗಲೂ ಕೂಡ ಅನೇಕ ಜನರು ಮನೆಗೆಲಸದವರನ್ನು ನಂಬಿ ಬೀಗದ ಕೈ ಅವರ ಕೈಗೆ ಕೊಟ್ಟುಹೋಗುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಈ ಘಟನೆ ನಿಜಕ್ಕೂ ಮನೆಗೆಲಸದವರನ್ನು ಅತಿಯಾಗಿ ನಂಬುವ ಕುಟುಂಬದವರಿಗೆ ಕಲಿಸಿದ ಒಂದು ಪಾಠ. ಅವರನ್ನು ನಂಬುತ್ತೀರೋ ಬಿಡುತ್ತೀರೋ ನಿಮಗೆ ಬಿಟ್ಟಿದ್ದು, ಆದರೆ, ಅವರವರ ಎಚ್ಚರದಲ್ಲಿ ಅವರವರು ಇರಬೇಕು.

English summary
A Bangalore techie relieves house maid from jail, who had stole gold ornaments worth Rs. 3.5 lakhs. The plight of 3 kids of the maid made the owner of jewellery show mercy on her. Techie gave surety and freed her from jail. Owners, think twice before handing over home keys to the maids.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X