ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿಗಾಗಿ ಕ್ಯಾತೆ: ಸುಪ್ರೀಂಗೆ ಪುದುಚೇರಿ ಅರ್ಜಿ

By Mahesh
|
Google Oneindia Kannada News

KRS Dam
ಪುದುಚೇರಿ, ಅ.9: ತಮಿಳುನಾಡಿಗೆ ನೀರು ಬಿಟ್ಟು ಬೆವರು ಸುರಿಸುತ್ತಿರುವ ಕರ್ನಾಟಕ ಸರ್ಕಾರ ಮತ್ತೊಂದು ಸಂಕಷ್ಟ ಎದುರಾಗಿದೆ. ನಮಗೂ ಕಾವೇರಿ ನದಿ ನೀರು ಬೇಕು ಎಂದು ಪುದುಚೇರಿ (ಈ ಹಿಂದಿನ ಪಾಂಡಿಚೇರಿ) ರಾಜ್ಯ ಸುಪ್ರೀಂಕೋರ್ಟಿನಲ್ಲಿ ಮನವಿ ಸಲ್ಲಿಸಿದೆ.

ಕಾವೇರಿ ನದಿ ನೀರು ತಮಿಳುನಾಡು ಮಾತ್ರವಲ್ಲದೆ ಪುದುಚೇರಿ ಹಾಗೂ ಕೇರಳಕ್ಕೂ ಹಂಚಿಕೆಯಾಗುತ್ತಿದೆ. ಇಷ್ಟು ದಿನ ಸುಮ್ಮನಿದ್ದ ಪುದುಚೇರಿ ಈಗ ನಮಗೂ 1000 ಕ್ಯೂಸೆಕ್ಸ್ ನೀರಿನ ಅವಶ್ಯಕತೆ ಇದೆ ತಮಿಳುನಾಡು ಸಹಕಾರರಿಂದ ನಮಗೆ ನೀರು ಒದಗಿಸಿಕೊಡಿ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.

ಅರ್ಜಿ ಸ್ವೀಕರಿಸಿದ ಎನ್ ಕೆ ಜೈನ್ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 26ಕ್ಕೆ ಮುಂದೂಡಿದೆ. ಆದರೆ, ತಮಿಳುನಾಡು ಬೆಂಬಲಿತ ಪುದುಚೇರಿ ಅಲ್ಲಿ ತನಕ ಸುಮ್ಮನೆ ಕೂರುವ ಸಾಧ್ಯತೆ ಕಮ್ಮಿ ಎನ್ನಲಾಗಿದೆ.

ತಮಿಳುನಾಡು ಕುಮ್ಮಕ್ಕು?: ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ಕಾವೇರಿ ನದಿಯ ಕೊನೆಯ ಅಂಚನ್ನು ಹಿಡಿದು ಎಳೆಯದೆ ಸುಮ್ಮನಿದ್ದದ್ದು ಈಗ ಏಕಾಏಕಿ ನೀರು ಬಿಡು ಎನ್ನುತ್ತಿರುವುದು ಏಕೆ? ಎಂಬ ಪ್ರಶ್ನೆ ಕಾಡುತ್ತದೆ. ಕಾವೇರಿ ನದಿ ಪ್ರಾಧಿಕಾರದ ಸಭೆಗೂ ಮುನ್ನ ಸೆಪ್ಟೆಂಬರ್ ತಿಂಗಳಿನಲ್ಲೇ ಪುದುಚೇರಿ ಉಸ್ತುವಾರಿ ರಾಮಸ್ವಾಮಿ ಅವರು ತಮ್ಮ ರಾಜ್ಯದ ಕಾರೈಕಲ್ ಪ್ರದೇಶದ ಬೆಳೆಗೆ ನೀರು ಬೇಕು ಎಂದು ಹೇಳಿದ್ದರು.

ಆದರೆ, ಇಂತಿಷ್ಟೇ ನೀರು ಬೇಕು. ತಮಿಳುನಾಡು ಸಹಾಯ ಬೇಕು ಎಂದು ಕೇಳಿರಲಿಲ್ಲ. ಅಲ್ಲದೆ, ಕರ್ನಾಟಕದಿಂದ ಕಾವೇರಿ ನೀರಿಗಾಗಿ ಒತ್ತಾಯಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ, ಈಗ ತಮಿಳುನಾಡು ಬೆಂಬಲದಿಂದ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಈ ನಡುವೆ ಕಾವೇರಿ ನೀರು ಬಿಡುವುದನ್ನು ನಿಲ್ಲಿಸಿರುವ ಕರ್ನಾಟಕ ಸರ್ಕಾರದ ವಿರುದ್ಧ ತಮಿಳುನಾಡು ಸರ್ಕಾರ ನ್ಯಾಯಾಂಗ ನಿಂದನೆ ಅರ್ಜಿಯನ್ನು ಬುಧವಾರ(ಅ.10) ಸಲ್ಲಿಸಲಿದೆ ಎಂದು ತಮಿಳುನಾಡು ಪರ ವಕೀಲ ವೈದ್ಯನಾಥನ್ ಹೇಳಿದ್ದಾರೆ.

ಕಾವೇರಿ ನದಿ ಪ್ರಾಧಿಕಾರ ನೀಡಿರುವ ಆದೇಶವನ್ನು ಪಾಲಿಸಿ ಕರ್ನಾಟಕ ಸರ್ಕಾರ 9 ಸಾವಿರ ಕ್ಯೂಸೆಕ್ಸ್ ಗೂ ಅಧಿಕ ನೀರು ಬಿಟ್ಟಿರುವುದರಿಂದ ಮಧ್ಯಂತರ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ ನೀಡಲು ನಿರಾಕರಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತ್ತು.

ಈ ನಡುವೆ ಪ್ರಾಧಿಕಾರ ನೇಮಿಸಿದ ನೀರಾವರಿ ಅಧ್ಯಯನ ತಂಡ ತನ್ನ ವರದಿಯನ್ನು ಅಕ್ಟೋಬರ್ 11 ರಂದು CRAಗೆ ಸಲ್ಲಿಸುವ ಸಾಧ್ಯತೆಯಿದ್ದು, ನಂತರವಷ್ಟೇ ಪ್ರಧಾನಿ ಮನಮೋಹನ್ ಸಿಂಗ್ ಅವರು ಎರಡೂ ರಾಜ್ಯಗಳ ಮುಖಂಡರೊಡನೆ ಸಭೆ ನಡೆಸಲಿದ್ದಾರೆ ಎಂಬ ಸುದ್ದಿಯಿದೆ.

ಈ ಸಭೆಯಲ್ಲಿ ತಮಿಳುನಾಡು ಜೊತೆಗೂಡಿ ಪುದುಚೇರಿ ಕೂಡಾ ತನ್ನ ಪಾಲಿನ ನೀರಿಗಾಗಿ ಹಾಹಾಕಾರ ಎಬ್ಬಿಸುವ ಲಕ್ಷಣಗಳು ಗೋಚರಿಸಿದೆ. ಕೇರಳ ರಾಜ್ಯದ ಕಡೆಯಿಂದ ಯಾವುದೇ ಕೂಗು ಎದ್ದಿಲ್ಲದಿರುವುದು ಕರ್ನಾಟಕದ ಪಾಲಿಗೆ ನಿರಾಳವಾದ ಸಂಗತಿ.

English summary
Supreme Court accepted Puducherry government plea for release of Cauvery water from Karnataka. The case is adjourned to Oct.26. Puducherry is impleading itself with Tamil Nadu in the SC to get its share of Cauvery river water for irrigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X