ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಿಕೋದ್ಯಮದ ದ್ರೋಣಾಚಾರ್ಯ ಸುಬ್ಬರಾಯರ ನೆನಪು

By Mahesh
|
Google Oneindia Kannada News

VN Subbarao
ಬೆಂಗಳೂರು, ಅ.9: ಹಿರಿಯ ಪತ್ರಕರ್ತ ವಿಎನ್ ಸುಬ್ಬರಾವ್ ಅವರು ಮಂಗಳವಾರ ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರಿಗೆ 81 ವರ್ಷ ವಯಸ್ಸಾಗಿತ್ತು.

ಕೆಲ ತಿಂಗಳಿನಿಂದ ಅಸ್ವಸ್ಥರಾಗಿದ್ದ ಸುಬ್ಬರಾವ್ ಅವರು, ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಜುಲೈ ತಿಂಗಳಿನಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಸುಬ್ಬರಾವ್ ಅವರ ಆರೋಗ್ಯ ಸುಧಾರಣೆಗೆ ಹಾರೈಸಿದ್ದರು.

ಕನ್ನಡ ಮತ್ತು ಇಂಗ್ಲೀಷ್ 'ಪತ್ರಿಕೋದ್ಯಮದ ದ್ರೋಣಾಚಾರ್ಯ' ಎಂದೇ ಖ್ಯಾತಿ ಗಳಿಸಿದ್ದ ಸುಬ್ಬರಾಯರು ಅನೇಕಾನೇಕ ಯುವ ಪತ್ರಕರ್ತರನ್ನು ತಿದ್ದಿತೀಡಿದ್ದಾರೆ. ಆ ಯುವ ಸಮೂಹದಲ್ಲಿ ಅನೇಕರು ಇಂದು ದೇಶದ ಪತ್ರಿಕೋದ್ಯಮದಲ್ಲಿ ಆಯಕಟ್ಟಿನ ಮತ್ತು ಮಹತ್ತರ ಜಾಗಗಳನ್ನು ಅಲಂಕರಿಸಿದ್ದಾರೆ. ಇದು ಸುಬ್ಬರಾಯರ ಹೆಗ್ಗಳಿಕೆಯೂ ಹೌದು.

ವೈವಿಧ್ಯ ಪತ್ರಕರ್ತ ಸುಬ್ಬರಾವ್: ಚಿತ್ರರಂಗದ ಜೊತೆ ಸಾಕಷ್ಟು ಬಲವಾದ ನಂಟು ಬೆಳೆಸಿಕೊಂಡಿದ್ದ ಸುಬ್ಬರಾವ್‌, ಪತ್ರಿಕೋದ್ಯಮ ಮತ್ತು ಪತ್ರಿಕಾಪ್ರಚಾರದ ನಡುವಣ ಅಂತರವನ್ನು ಕಿತ್ತೊಗೆದ ಕ್ರಾಂತಿಕಾರರು ಕೂಡ.

ಅದೇ ಕಾರಣಕ್ಕೆ ಒಂದು ಕಾಲದಲ್ಲಿ ಸಿನಿಮಾ ಮಂದಿಗೆ ಅತ್ಯಂತ ಪ್ರಿಯರಾಗಿದ್ದವರು ಎನ್ನಬಹುದು. ಸುಬ್ಬರಾವ್‌ ಹೆಚ್ಚು ಸಾರಿ ಮನೆ ಬದಲಾಯಿಸಿದ್ದಾರೋ ಕೆಲಸ ಬದಲಾಯಿಸಿದ್ದಾರೋ ಎಂಬ ಬಗ್ಗೆ ಸಾಕಷ್ಟು ವಿವಾದಗಳು ನಡೆದಿತ್ತು.

ಅವರ ವೃತ್ತಿ ಜೀವನ ಕನ್ನಡ ಸಿನಿಮಾ ಪತ್ರಿಕೆ ಮೇನಕಾ ಇಂದ ತದನಂತರ ಇಂಡಿಯನ್‌ ಎಕ್ಸ್‌ಪ್ರೆಸ್‌ನಿಂದ ಆರಂಭವಾಯಿತು ಎನ್ನುವುದು ಅಧಿಕೃತ ಮಾಹಿತಿ.

ಅರುಣ್‌ ಶೌರಿ ಇಂಡಿಯನ್‌ ಎಕ್ಸ್‌ಪ್ರೆಸ್‌ ಸಂಪಾದಕರಾಗಿದ್ದಾಗ ಅವರ ಜೊತೆ ಸುಬ್ಬರಾವ್‌ ಕೆಲಸ ಮಾಡಿದರು. ಕೊನೆಗೆ ತಾವೇ ಬೆಳೆಸಿದ ಈ. ರಾಘವನ್‌ ತಮ್ಮನ್ನೇ ಮೀರಿ ಬೆಳೆದು ನಿಂತಾಗ ಸುಬ್ಬರಾವ್‌ ಕಂಗಾಲಾದದ್ದೂ ಉಂಟು. ಒಂದೋ ನಾನಿರಬೇಕು ಇಲ್ಲ ರಾಘವನ್‌ ಎಂದು ಸುಬ್ಬರಾವ್‌ ಹೊರ ನಡೆದಿದ್ದರು ಕೂಡ. ಅದು 1981ರ ಕತೆ.

1982ರಲ್ಲಿ ಸುಬ್ಬರಾವ್‌ ಸಂಡೇ ಮಿಡ್ಡೇಯ ರೆಸಿಡೆಂಟ್‌ ಎಡಿಟರ್‌ ಆಗಿ ಅಧಿಕಾರ ಸ್ವೀಕರಿಸಿದರು. ಮುಂದೆ 1984ರಲ್ಲಿ ಅರುಣ್‌ ಶೌರಿ ಎಕ್ಸ್‌ಪ್ರೆಸ್‌ನಿಂದ ಹೊರಬಿದ್ದಾಗ ಸುಬ್ಬರಾವ್‌ ಮತ್ತೆ ಎಕ್ಸ್‌ಪ್ರೆಸ್‌ ಸೇರಿದರು. ಅಲ್ಲಿದ್ದ ವಿ. ರಾಘವನ್‌ ತಮ್ಮ ಏಳು ಮಂದಿಯ ಟೀಮ್‌ನೊಂದಿಗೆ ಟೈಮ್ಸ್‌ಆಫ್‌ ಇಂಡಿಯಾ ಸೇರಿಕೊಂಡಾಗ, ಅಲ್ಲಿಗೂ ಸುಬ್ಬರಾವ್‌ ಕಾಲಿಟ್ಟರು.

ಸುಬ್ಬರಾವ್‌ ಒಳ್ಳೆಯ ಟೀಮ್‌ ಕಟ್ಟಿದ್ದರು. 84ರಲ್ಲಿ ಟಿಜೆಎಸ್‌ ಜಾರ್ಜ್‌ ಆಗಮನ ಆಗುವವರೆಗೂ ಸುಬ್ಬರಾವ್‌ ನೆಮ್ಮದಿಯಿಂದಲೇ ಇದ್ದರು. ಅತ್ತ ಅರುಣ್‌ ಶೌರಿ ಸ್ಥಾನಕ್ಕೆ ಸುಮನ್‌ ದುಬೆ ಬಂದು ಕೂತರು. ಸುಬ್ಬರಾವ್‌ ಕುರ್ಚಿ ಮತ್ತೆ ಅಲ್ಲಾಡಿತು ! 1985ರಲ್ಲಿ ಎಕ್ಸ್‌ಪ್ರೆಸ್‌ನಿಂದ ಸುಬ್ಬರಾವ್‌ ಅವರನ್ನು ಹೊರ ಹಾಕಿದ ಟೆಲೆಕ್ಸ್‌ ಸಂದೇಶ ಅವರ ಕೈ ತಲುಪುವ ಹೊತ್ತಿಗೆ ಅವರೆದುರು ಕೆ. ಸತ್ಯನಾರಾಯಣ ಕುಳಿತಿದ್ದರು.

ಸುಬ್ಬರಾವ್‌ ಅವರದು ಬಹುಮುಖ ಪ್ರತಿಭೆ. ಆರತಿ- ಅನಂತ್‌ ಅಭಿನಯದ ಪ್ರೇಮಾಯಣ ಚಿತ್ರ ನಿರ್ಮಿಸಿ ಸೋತದ್ದರಿಂದ ಹಿಡಿದು ಮಗನೊಂದಿಗೆ ಆಡ್‌ ಏಜೆನ್ಸಿ ಶುರುಮಾಡಿ ಕೈ ಸುಟ್ಟುಕೊಂಡದ್ದರ ತನಕ ಅವರ ಪ್ರತಿಭಾ ವಿಸ್ತಾರ ಇದೆ.

ನ್ಯೂಸ್‌ ಟೈಮ್‌, ಸ್ಕ್ರೀನ್‌, ತಾರಾಲೋಕ, ಸಂಯುಕ್ತ ಕರ್ನಾಟಕ, ನೋಡು ಪತ್ರಿಕೆ, ಡೆಕನ್‌ ಹೆರಾಲ್ಡ್‌ ಹೀಗೆ ಅನೇಕ ಪತ್ರಿಕೆಗಳ ಜೊತೆ ರಾಯರು ತಮ್ಮನ್ನು ಗುರುತಿಸಿಕೊಂಡಿದ್ದಾರೆ.

ಕೊನೆಗೆ ಸಂಯುಕ್ತ ಕರ್ನಾಟಕದ ಒಂದು ಆಯಕಟ್ಟಿನ ಜಾಗದಲ್ಲಿ ಇದ್ದರು. ಡಾಟ್‌ಕಾಮ್‌, ಚಾನಲ್‌ ಮುಂತಾದ ಕಡೆ ತಮ್ಮ ಅದೃಷ್ಟವನ್ನು ಪರೀಕ್ಷಿಸಿದ್ದುಂಟು. ಮಾಧ್ಯಮ ಅಕಾಡೆಮಿ ನಂತರ ಅವರ ಇನ್ನೊಂದು ಆಸೆ ಫಿಲಂ ಅಕಾಡೆಮಿ ಅಧ್ಯಕ್ಷ ಪಟ್ಟ.

ಆದರೆ ಫಿಲಂ ಅಕಾಡೆಮಿ ಸ್ಥಾಪನೆಯಾಗುವ ಸೂಚನೆಯೇ ಹೊರಬೀಳಲೇ ಇಲ್ಲ. ಸುಚಿತ್ರ ಫಿಲಂ ಸೊಸೈಟಿಯಲ್ಲಿ ಈ ಆಸೆ ಪೂರೈಸಿದ್ದು ಸಂತಸದ ಸಂಗತಿ. ತಂಡ ಕಟ್ಟಿ ಬೆಳೆಸಿದ ಸಂಪಾದಕರ ಪೈಕಿ ಸುಬ್ಬರಾವ್ ಅವರು ಇಂದಿಗೂ ನೆನಪಾಗಿ ಉಳಿಯುತ್ತಾರೆ.

.

English summary
Veteran Journalist VN Subbarao passed away in MS Ramaiah hospital, Bangalore today(Oct.9) after a brief illness. He was 81. Over a six decades VN Subbarao worked in various Media houses, English and Kannada. He was associated with Suchitra Film Society, Karnataka Media academy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X