ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಬ್ಬನ್ ಪಾರ್ಕಿನಲ್ಲಿ ಅಪಘಾತ, ಪಾರಿವಾಳ ಸಾವು

By ಸುನಿಲ್ ಜಿಎಸ್, ಪಬ್ಲಿಕ್ ಟಿವಿ, ಬೆಂಗಳೂರು
|
Google Oneindia Kannada News

ಕರ್ನಾಟಕ ಹೈಕೋರ್ಟ್ ಅಂದ ಕೂಡ್ಲೆ ಕಣ್ಣ ಮುಂದೆ ಬರೋದು ಕೆಂಪು ಕೆಂಪಾದ ಬೃಹತ್ ಕಟ್ಟಡ. ಅದರ ಜೊತೆಗೆ ಕಟ್ಟಡದ ಮುಂದೆ ಸಂತೆಗೆ ಸೇರಿದವ್ರಂತೆ ಇರೋ ಬೂದು ಪಾರಿವಾಳಗಳು. ಸಾವಿರಾರು ಪಾರಿವಾಳಗಳು ಆಗಾಗ ಪಟಪಟ ಸದ್ದು ಮಾಡ್ತಾ ಪಕ್ಷಿಪ್ರಿಯರ ಸಖತ್ ಸ್ಪಾಟ್ ಆಗಿತ್ತು. ಅದರೆ ಈಗ ಪಾರಿವಾಳಗಳ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯತೊಡಗಿದೆ.

ಕರುನಾಡಿನ ಶಕ್ತಿ ಸೌಧದ ಎದುರಿರೋ ಕರ್ನಾಟಕ ಹೈಕೋರ್ಟ್ ಬಿಲ್ಡಿಂಗ್ ನ್ಯಾಯದಾನಕ್ಕೆ ಹೆಸರುವಾಸಿ. ಅದರ ಅಂದ ಹೆಚ್ಚಿಸುವಂತೆ ಅದರ ಸುತ್ತಾ ಮೇಯುತ್ತಾ, ಆಗಾಗ ಹಾರಾಡುವ ಬೂದು ಪಾರಿವಾಳಗಳು ಕಟ್ಟಡದಷ್ಟೇ ತೀವ್ರವಾಗಿ ದಾರಿಹೋಕರನ್ನ ಸೆಳೆಯೋದುಂಟು. ಸಾವಿರಕ್ಕೂ ಹೆಚ್ಚಿದ್ದ ಈ ಪಾರಿವಾಳಗಳ ಸಂಖ್ಯೆ ಈಗ 300-400ಕ್ಕೆ ಇಳಿದಿವೆ.

ಕಾರಣ ಇಷ್ಟೆ. ಪಾರ್ಕ್ ಬಳಿ ನಡೆಯುತ್ತಿರೋ ರಸ್ತೆ ಅಪಘಾತಗಳು. ಇಲ್ಲಿರುವ ಪಾರಿವಾಳಗಳು ಮೊದಲು ಹೈಕೋರ್ಟ್ ನ ಮುಂಭಾಗದಲ್ಲಿ ವಾಸವಾಗಿದ್ದವು. ಅಲ್ಲಿ ಪ್ರತಿನಿತ್ಯ ಪಕ್ಷಿಪ್ರಿಯರು ಅವುಗಳಿಗೆ ಕಾಳು ಬೇಳೆ ಆಹಾರ ನೀಡ್ತಾಯಿದ್ರು. ಆದ್ರೆ ಪಕ್ಷಿಗಳಿಗೆ ನೀಡುವ ಆಹಾರವನ್ನು ತಿನ್ನಲು ಇಲಿ ಹೆಗ್ಗಣಗಳು ಅಲ್ಲಿಗೆ ನುಗ್ಗುವುದಷ್ಟೇ ಅಲ್ಲ, ಹೈಕೋರ್ಟಿನಲ್ಲಿರುವ ಮಹತ್ವದ ಫೈಲುಗಳನ್ನು ಸಹ ನಾಶ ಮಾಡ್ತಾಯಿದ್ವು.

ಇದರಿಂದ ಅಲ್ಲಿನ ಪಾರಿವಾಳಗಳನ್ನ ಬೇರೆಡೆಗೆ ಶಿಫ್ಟ್ ಮಾಡಲು ನ್ಯಾಯಮೂರ್ತಿಗಳು ಆದೇಶಿಸಿದ್ರು. ಕೋರ್ಟ್ ಎದುರು ಅವಕ್ಕೆ ಜನತೆ ಮೇವು ಹಾಕಬಾರದು. ಹೈಕೋರ್ಟಿನಿಂದ ಸ್ವಲ್ಪ ದೂರದಲ್ಲಿರುವ ರಸ್ತೆ ಬಳಿ ಮೇವು ಹಾಕಬಹುದು ಎಂದು ಜಾಗವನ್ನೂ ಕೋರ್ಟ್ ಸೂಚಿಸಿತು. ಆದ್ರೆ ಅಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ಬರುವ ಪಾರಿವಾಳಗಳು ವೇಗವಾಗಿ ಸಾಗುವ ವಾಹನಗಳಿಗೆ ಢಿಕ್ಕಿ ಹೊಡೆದು ಸಾಯಲಾರಂಭಿಸಿವೆ. [ಗ್ಯಾಲರಿ : ಕಬ್ಬನ್ ಪಾರ್ಕಿನಲ್ಲಿ ಪಾರಿವಾಳಗಳ ದುರಂತ ಸಾವು]

ಈ ಹಕ್ಕಿಗಳ ಸಾವಿಗೆ ಯಾರು ಹೊಣೆ?

ಈ ಹಕ್ಕಿಗಳ ಸಾವಿಗೆ ಯಾರು ಹೊಣೆ?

ಕರ್ನಾಟಕ ಹೈಕೋರ್ಟ್ ಮತ್ತು ಕೇಂದ್ರ ಗ್ರಂಥಾಲಯದ ನಡುವಿನಿಂದ ಕಂಠೀರವ ಸ್ಟೇಡಿಯಂಗೆ ಹಾದುಹೋಗುವ ರಸ್ತೆಯಲ್ಲಿ ಈ ಪಾರಿವಾಳಗಳು ಗುಟುರ್ ಗುಟುರ್ ಮಾಡುತ್ತ ಕಾಳುಕಡಿ ತಿನ್ನುತ್ತಿರುತ್ತವೆ. ಟೆನ್ನಿಸ್ ಸ್ಟೇಡಿಯಂ ಎದುರಿಗಿರುವ ಭರ್ತಿ ಟ್ರಾಫಿಕ್ ಇರುವ ಈ ರಸ್ತೆಯೇ ಈ ಪಾರಿವಾಳಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಅವುಗಳನ್ನು ಹಾರಿಸಲು ಹುಷ್ ಅನ್ನಬೇಕಿಲ್ಲ, ಕಾರಿನ ಒಂದು ಹಾರ್ನ್ ಸಾಕು ಪಾರಿವಾಳಗಳು ಪುರ್ರನೆ ಹಾರಲು. ಹಾರಾರುತ್ತಲೇ ಭರ್ರನೆ ಸಾಗುವ ವಾಹನಗಳಿಗೆ ಬಡಿದು ಈ ಹಕ್ಕಿಗಳು ದಾರುಣ ಸಾವನ್ನು ಪಡೆಯುತ್ತಿವೆ. ಇವುಗಳ ಸಾವಿಗೆ ಯಾರು ಹೊಣೆ?

ಲಾಲ್ ಬಾಗಿನಲ್ಲಿ ಪಾರಿವಾಳಗಳಿಗೆ ಸ್ಥಾನ

ಲಾಲ್ ಬಾಗಿನಲ್ಲಿ ಪಾರಿವಾಳಗಳಿಗೆ ಸ್ಥಾನ

ಕೆಂಪು ತೋಟದಲ್ಲಿ ಹಚ್ಚ ಹಸುರಿನ ನಡುವೆ ಸ್ವಚ್ಛಂದವಾಗಿ ವಿಹರಿಸಲು ಪಾರಿವಾಳಗಳಿಗೆ ಒಂದು ಸ್ಥಾನವನ್ನು ಮೀಸಲಿಡಲಾಗಿದೆ. ಅಲ್ಲಿ ವಾಹನಗಳ ಕಾಟವಿಲ್ಲ, ಯಾರ ಭಯವೂ ಇಲ್ಲ. ಜನರು ಹಾಕುವ ಕಾಳುಕಡಿಗಳನ್ನು ತಿಂದು ಸಂತೋಷದಿಂದ ಹಾರಾಡುತ್ತಿರುತ್ತವೆ. ಇಂಥದೇ ಸ್ಥಳವನ್ನು ಕಬ್ಬನ್ ಪಾರ್ಕಿನಲ್ಲಿಯೂ ಏಕೆ ಮೀಸಲಿಡಬಾರದು. ಸುಮಾರು 100 ಎಕರೆಯ ಪ್ರದೇಶದಲ್ಲಿ ವಿಸ್ತರಿಸಿಕೊಂಡಿರುವ ಕಬ್ಬನ್ ಪಾರ್ಕಿನಲ್ಲಿ ಪಾರಿವಾಳಗಳಿಗೊಂದು ಪುಟ್ಟ ಸ್ಥಾನ ದೊರಕಿಸಿಕೊಡಲು ಸಾಧ್ಯವಿಲ್ಲವೆ? ಈ ನಿಟ್ಟಿನಲ್ಲಿ ಸಂಬಂಧಿತ ಅಧಿಕಾರಿಗಳು ಚಿಂತಿಸಬೇಕಿದೆ.

ಹಕ್ಕಿಗಳಿಗೆ ಆಹಾರ ಹಾಕಿ ನೋಡುವುದೇ ಒಂದು ಮಜಾ

ಹಕ್ಕಿಗಳಿಗೆ ಆಹಾರ ಹಾಕಿ ನೋಡುವುದೇ ಒಂದು ಮಜಾ

ಶಾಂತಿಯ ಸಂಕೇತವಾಗಿರುವ ಈ ನಿರುಪದ್ರವಿ ಹಕ್ಕಿಗಳೆಂದರೆ ದೊಡ್ಡವರು ಚಿಕ್ಕವರೆಲ್ಲರಿಗೂ ಬಲು ಪ್ರೀತಿ. ಗುಟುರ್ ಗುಟುರ್ ಮಾಡುತ್ತ ಸಿಕ್ಕಿದ್ದನ್ನು ತಿನ್ನುತ್ತ ಅತ್ತಿಂದಿತ್ತ ಹಾರಾಡುವುದನ್ನು ನೋಡಲು ಮಕ್ಕಳು ಬಲು ಇಷ್ಟಪಡುತ್ತವೆ. ಇಂಥಹ ನಿರುಪದ್ರವಿ ಪಕ್ಷಿಗಳು ಮಾನವನಿಂದಾಗಿಯೇ ಇಂದು ಅಪಾಯದಲ್ಲಿವೆ. ದಿನದಿನಕ್ಕೂ ಪಾರಿವಾಳಗಳ ಸಂಖ್ಯೆಯೂ ಬೆಂಗಳೂರಿನಲ್ಲಿ ಕುಸಿಯುತ್ತಿದೆ. ಇನ್ನು ಕೆಲ ವರ್ಷಗಳು ಗತಿಸಿದರೆ ಇವುಗಳನ್ನು ಕೂಡ ಪ್ರಾಣಿ ಸಂಗ್ರಹಾಲಯದಲ್ಲಿ ನೋಡಬೇಕಾಗುತ್ತದೆ.

ಪಕ್ಷಿಪ್ರಿಯ ಶ್ರೀನಿವಾಸ್ ಕಳಕಳಿಯ ಮನವಿ

ಪಕ್ಷಿಪ್ರಿಯ ಶ್ರೀನಿವಾಸ್ ಕಳಕಳಿಯ ಮನವಿ

ಕಬ್ಬನ್ ಪಾರ್ಕ್ ತುಂಬಾ ವಿಶಾಲವಾಗಿದೆ. ಪಾರಿವಾಳಗಳಿಗೆ ರೋಡಿನಲ್ಲಿ ಆಹಾರ ಹಾಕುವುದು ಬಿಟ್ಟು, ಪಾರ್ಕಿನಲ್ಲಿ ಪ್ರತ್ಯೇಕ ಸ್ಥಳ ಗುರುತಿಸಿ ಅಲ್ಲಿ ಆಹಾರ ಹಾಕಿದ್ರೆ ಉಳಿದ ಪಾರಿವಾಳಗಳಾದ್ರು ಬದುಕುತ್ತವೆ. ಮೊಬೈಲ್ ಟವರ್ ಗಳ ಹಾವಳಿಯಿಂದ ಈಗಾಗ್ಲೆ ಗುಬ್ಬಿ ಮರಿಗಳನ್ನೇ ಕಳೆದುಕೊಂಡಿದ್ದೇವೆ. ಈಗ ಬಿಜಿ ಟ್ರಾಫಿಕ್ ನಿಂದ ಕೋರ್ಟ್ ಎದುರಿನ ಪಾರಿವಾಳಗಳನ್ನು ಕಳೆದುಕೊಳ್ಳಬೇಕೆ ಎಂದು ಪಕ್ಷಿಪ್ರಿಯ ಶ್ರೀನಿವಾಸ್ ಕೇಳುತ್ತಾರೆ.

ವಾಹನ ಚಾಲಕರು ಏನು ಮಾಡಬೇಕು?

ವಾಹನ ಚಾಲಕರು ಏನು ಮಾಡಬೇಕು?

ವಾಹನ ಅಪಘಾತದಿಂದ ಪಾರಿವಾಳಗಳು ಸಾಯುತ್ತಿವೆ ಎಂಬುದನ್ನು ವಾಹನ ಚಾಲಕರು ತಿಳಿದಮೇಲಾದರೂ ಈ ಭಾಗದಲ್ಲಿ ಸಂಚರಿಸುವಾಗ ನಿಧಾನಗತಿಯಲ್ಲಿ ಸಾಗಬೇಕು. ಪೀಂಪೀಂ ಅಂತ ಹೆಚ್ಚು ಸದ್ದು ಮಾಡದೆ ನಿಶ್ಚಿಂತೆಯಿಂದ ಪಾರಿವಾಳಗಳು ತಮ್ಮ ಲೋಕದಲ್ಲಿ ವಿಹರಿಸಲು ಜನರು ಅನುವು ಮಾಡಿಕೊಡಬೇಕು.

English summary
Displaced pigeons meet their fate on Cubbon park road accidents. Thousands of birds changed their hub from High Court yards to Sheshadri Memorial Library premises as per direction of Karnataka High Court. Earlier rodents used to eat bird feeds in HC compounds plus chewing HC documents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X