• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಧಾನಿ ಸಿಂಗ್ ವಿರುದ್ಧ ರೊಚ್ಚಿಗೆದ್ದು ಅಂಗಿ ಬಿಚ್ಚಿದ

By Prasad
|

ನವದೆಹಲಿ, ಸೆ. 22 : ಕೇಂದ್ರ ಸರಕಾರದ ಆರ್ಥಿಕ ನೀತಿಯ ವಿರುದ್ಧ ವಿರೋಧ ಪಕ್ಷಗಳು ಅಷ್ಟೇ ಏಕೆ ಯುಪಿಎನ ಅಂಗ ಪಕ್ಷಗಳು ಕೂಡ ಆಕ್ರೋಶ ವ್ಯಕ್ತಪಡಿಸಿವೆ. ಬೆಲೆ ಏರಿಕೆ ಇಳಿಸಿ, ಬಡಬಗ್ಗರನ್ನು ಕಾಪಾಡಿ ಎಂದು ವಿರೋಧಪಕ್ಷಗಳು ಗೋಗರೆಯುತ್ತಿವೆ. ವಿರೋಧ ಪಕ್ಷಗಳಿಗೇ ಬೆಲೆ ಏರಿಕೆಯ ಬಿಸಿ ತಟ್ಟಿರುವಾಗ ಶ್ರೀಸಾಮಾನ್ಯನಿಗೆ ಬಿಸಿ ತಟ್ಟದೆ ಇದ್ದೀತೆ?

ಭಾರತ ಪ್ರಸ್ತುತ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ವಿಷಯವನ್ನು ದೇಶದ ಮುಂದಿಡುವ ಉದ್ದೇಶದಿಂದ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರಿಗೆ ಭಾಷಣ ಆರಂಭಿಸುವ ಮುನ್ನ ಒಂದು ಆಘಾತ ಕಾದಿತ್ತು. ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ತನ್ನ ಅಂಗಿಯನ್ನು ಬಿಚ್ಚಿ ಕುರ್ಚಿಯ ಮೇಲೆ ನಿಂತುಕೊಂಡು ಪ್ರಧಾನಿಯ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭಿಸಿದ.

ಕೂಡಲೆ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿಗಳು, 'ಪ್ರಧಾನಿ ವಾಪಸ್ ಹೋಗಿ' ಎಂದು ಕೂಗುತ್ತಿದ್ದ ವ್ಯಕ್ತಿಯನ್ನು ಹಿಡಿದು ಹೊರಗೆ ಕರೆದುಕೊಂಡು ಹೋದರು. ಈ ಘಟನೆ ಪ್ರಧಾನಿಗೆ ಒದಗಿಸಿರುವ ಭದ್ರತೆಯ ಕುರಿತಂತೆ ಪ್ರಶ್ನೆಗಳೇಳುವಂತೆ ಮಾಡಿದೆ. ಆತನನ್ನು ದೆಹಲಿ ಪೊಲೀಸರಿಗೆ ಒಪ್ಪಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಈ ಘಟನೆಯಿಂದ ವಿಚಲಿತರಾಗದ ಪ್ರಧಾನಿ ಮನಮೋಹನ ಸಿಂಗ್ ಅವರು, ಭಾರತ 1991ರಲ್ಲಿ ಎದುರಿಸಿದ್ದ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಈಗ ಎದುರಿಸುತ್ತಿದೆ. ದುಡ್ಡು ಗಿಡದಲ್ಲಿ ಹುಟ್ಟುವುದಿಲ್ಲ. ಆಂತರಿಕವಾಗಿ ಮತ್ತು ಜಾಗತಿಕವಾಗಿ ಬಂಡವಾಳ ಹರಿದುಬರಲು ನಾವು ಕೆಲವೊಂದು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲೇಬೇಕಾಗುತ್ತದೆ. ಇದಕ್ಕೆ ನಾಡಿನ ಜನತೆ ಸಿದ್ಧರಾಗಿರಬೇಕು ಎಂದು ಭಾಷಣದಲ್ಲಿ ಹೇಳಿದ್ದಾರೆ.

ಸಿಂಗ್ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು ಇದು ಮೊದಲೇನಲ್ಲ. 2009ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಅಹ್ಮದಾಬಾದಿನಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರ ಮೇಲೆ, ಬಹಿರಂಗ ಪ್ರಚಾರ ಸಭೆಯಲ್ಲಿ ನಾಗರಿಕನೋರ್ವ ಬೂಟನ್ನು ಎಸೆದು ತನ್ನ ಆಕ್ರೋಶ ವ್ಯಕ್ತಪಡಿಸಿದ್ದ. ಅದು ಅವರಿಗೆ ತಾಗದೆ ಬಳಿಯಿಂದ ಹಾರಿಹೋಗಿತ್ತು.

2010ರಲ್ಲಿ ಕರ್ನಾಟಕದಲ್ಲಿ ಯಡಿಯೂರಪ್ಪನವರ ವಿರುದ್ಧ ಭಿನ್ನಮತದ ದಂಗೆ ಎದ್ದಿದ್ದಾಗ ಅವರಿಗೆ ವಿಶ್ವಾಸಮತ ಯಾಚಿಸಬೇಕೆಂದು ರಾಜ್ಯಪಾಲರು ಆದೇಶ ನೀಡಿದ್ದರು. ಆಗ ಅಮಾನತುಗೊಂಡಿದ್ದ ಭಿನ್ನಮತೀಯರಲ್ಲಿ ಒಬ್ಬರಾದ ಗೂಳಿಹಟ್ಟಿ ಶೇಖರ್ ತಾವು ಹಾಕಿಕೊಂಡ ಅಂಗಿಯನ್ನು ಹರಿದು ಚಿಂದಿಚಿಂದಿ ಮಾಡಿ ವಿಧಾನಸಭೆಗೆ ಅವಮಾನ ಮಾಡಿದ್ದರು.

ಮೇಲಿಂದ ಮೇಲೆ ದೇಶ ಉದ್ದೇಶಿಸಿ ಸಿಂಗ್ ಮಾತನಾಡಲಿ : ಮುಂಬೈನಲ್ಲಿ ಉಗ್ರರ ದಾಳಿ ನಡೆದ ನಂತರ ದೇಶದ ಜನತೆಯನ್ನು ಉದ್ದೇಶಿಸಿ ದೂರದರ್ಶನದ ಮುಖಾಂತರ ಭಾಷಣ ಮಾಡಿದ ಮೇಲೆ ಪ್ರಧಾನಿ ಸಿಂಗ್ ಅವರು ದೇಶವನ್ನುದ್ದೇಶಿಸಿ ಮಾತನಾಡುತ್ತಿರುವುದು ಇದೇ ಮೊದಲು. ದೇಶದ ಜನತೆಯಲ್ಲಿ ಧೈರ್ಯ ತುಂಬಲು, ಆರ್ಥಿಕ ಸ್ಥಿತಿಗತಿಯ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ಪ್ರಧಾನಿ ಮೇಲಿಂದ ಮೇಲೆ ಹೀಗೆ ಭಾಷಣ ಏಕೆ ಮಾಡಬಾರದು ಎಂಬ ಮಾತು ಕೇಳಿಬಂದಿದೆ.

ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಅವರು ಪ್ರತಿ ಭಾನುವಾರ ಜನತೆಯನ್ನು ಉದ್ದೇಶಿಸಿ ಮಾತನಾಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಅಮೆರಿಕದ ಅಧ್ಯಕ್ಷರೇ ಹೀಗಿರುವಾಗ ಭಾರತದ ಪ್ರಧಾನಿ ಕೂಡ, ಕನಿಷ್ಠ ಪಕ್ಷ ತಿಂಗಳಿಗೊಮ್ಮೆಯಾದರೂ ಜನತೆಯನ್ನು ಉದ್ದೇಶಿಸಿ ಮಾತನಾಡಲಿ ಎಂಬ ಆಶಯ ಕೂಡ ವ್ಯಕ್ತಪಡಿಸಲಾಗಿದೆ.

English summary
As the Prime Minister was all set to address a meet on economic growth at the Indian Law Institute in New Delhi on Saturday, Sept 22, he encountered a minor protest. A man took out his shirt and shouted slogans against Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X