ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸ್ ಮುಷ್ಕರ ವಾಪಸ್; ರಸ್ತೆಗಿಳಿದ ಸರಕಾರಿ ಬಸ್

By Srinath
|
Google Oneindia Kannada News

ksrtc-employee-union-strike-called-off-complete-sept-15
ಬೆಂಗಳೂರು, ಸೆ. 15: ಬೆಂಗಳೂರು, ಸೆ. 15: ಬಿಎಂಟಿಸಿ ಸೇರಿದಂತೆ ರಾಜ್ಯಾದ್ಯಂತ ಕೆಎಸ್ಸಾರ್ಟಿಸಿ ನೌಕರರು ನಡೆಸುತ್ತಿದ್ದ ಮುಷ್ಕರ ಮೂರನೇ ದಿನಕ್ಕೆ ಮುಕ್ತಾಯವಾಗಿದೆ. ಎಂದಿನಂತೆ ಶನಿವಾರ ಬೆಳಗ್ಗೆಯಿಂದಲೇ ಎಲ್ಲ ಸರಕಾರಿ ಬಸ್ ಗಳು ಸಂಚರಿಸಲಿವೆ. ಪ್ರಯಾಣಿಕರು ನಿರಾತಂಕವಾಗಿ ಬಸ್ ನಿಲ್ದಾಣಗಳತ್ತ ಹೆಜ್ಜೆಹಾಕುತ್ತಿದ್ದಾರೆ.

ಶುಕ್ರವಾರ ರಾತ್ರಿ ಸರಕಾರ ಮತ್ತು ರಾಜ್ಯದ ರಸ್ತೆ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳ ಮುಖಂಡರ ಜತೆ ನಡೆದ ಮಾತುಕತೆ ಯಶಸ್ವಿಯಾದ ಫಲವಾಗಿ ಬಸ್ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ. ನೌಕರರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪಿರುವ ಕಾರಣ ಕರ್ತವ್ಯಕ್ಕೆ ಹಾಜರಾಗಲು ನೌಕರರು ಸಮ್ಮತಿಸಿದ್ದಾರೆ. ಇದರಿಂದ ಮೂರು ದಿನಗಳಿಂದ ಬಸ್ಸುಗಳಿಲ್ಲದೆ ಪರದಾಡುತ್ತಿದ್ದ ಪ್ರಯಾಣಿಕರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.

ಸಾರಿಗೆ ಸಚಿವ ಆರ್. ಅಶೋಕ್ ನೇತೃತ್ವದಲ್ಲಿ ನೌಕರರ ಸಂಘಟನೆಗಳ ಮುಖಂಡರ ಜೊತೆ ವಿಧಾನಸೌಧದಲ್ಲಿ ಶುಕ್ರವಾರ ರಾತ್ರಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ. ನೌಕರರ ಮೂಲವೇತನದಲ್ಲಿ ಶೇ. 86.75 ರಷ್ಟು ತುಟ್ಟಿಭತ್ಯೆಯನ್ನು ಕಳೆದ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ವಿಲೀನಗೊಳಿಸಲು ಸರ್ಕಾರ ಒಪ್ಪಿಗೆ ನೀಡಿದ ಕಾರಣ ಕಾರ್ಮಿಕ ಮುಖಂಡರು ಮುಷ್ಕರ ಕೈಬಿಡಲು ಒಪ್ಪಿದ್ದಾರೆ.

ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ. ರವಿಕುಮಾರ್, ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ವ್ಯವಸ್ಥಾಪಕ ನಿರ್ದೇಶಕ ಎನ್. ಮಂಜುನಾಥ ಪ್ರಸಾದ್, ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಗಳ ಜಂಟಿ ಸಮಿತಿಯ ಸಂಚಾಲಕ ಎಚ್.ವಿ. ಅನಂತಸುಬ್ಬರಾವ್, ರಾಜ್ಯ ರಸ್ತೆ ಸಾರಿಗೆ ನಿಗಮಗಳ ಮಹಾಮಂಡಲದ ಗೌರವಾಧ್ಯಕ್ಷ ಡಾ.ಕೆ.ಎಸ್. ಶರ್ಮ ಮತ್ತಿತರರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಶುಕ್ರವಾರ ತಡರಾತ್ರಿ ಅಂತ್ಯಗೊಂಡ ಸಭೆಯ ನಂತರ ಸುದ್ದಿಗಾರರಿಗೆ ವಿವರ ನೀಡಿದ ಅಶೋಕ್, ನೌಕರರ ಸಂಘಟನೆಗಳ ಜೊತೆ ಹಿಂದೆ ಮಾಡಿಕೊಂಡ ಒಪ್ಪಂದದ ಅನ್ವಯ ಇಷ್ಟು ಪ್ರಮಾಣದ ತುಟ್ಟಿ ಭತ್ಯೆಯನ್ನು 2016ರಿಂದ ಮೂಲ ವೇತನದಲ್ಲಿ ವಿಲೀನ ಮಾಡಬೇಕಿತ್ತು. ಆದರೆ ಅದನ್ನು ಏಪ್ರಿಲ್‌ನಿಂದಲೇ ಪೂರ್ವಾನ್ವಯ ಆಗುವಂತೆ ಜಾರಿಗೊಳಿಸಲು ಒಪ್ಪಿದ್ದೇವೆ. ಈ ನಿರ್ಧಾರದಿಂದ ನಿಗಮಗಳಿಗೆ ನಾಲ್ಕು ವರ್ಷಕ್ಕೆ ಒಟ್ಟು 250 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ ಎಂದರು.

ತರಬೇತಿ (ಟ್ರೈನಿ) ಚಾಲಕರು ಮತ್ತು ನಿರ್ವಾಹಕರ ಸಂಬಳದಲ್ಲಿ ಒಂದು ಸಾವಿರ ರೂಪಾಯಿ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಇದು ಈ ತಿಂಗಳಿಂದಲೇ ಜಾರಿಗೆ ಬರಲಿದೆ. ಮುಷ್ಕರ ನಿರತ ಮೂರು ಸಾವಿರ ಟ್ರೈನಿಗಳನ್ನು ವಜಾ ಮಾಡುವ ನಿರ್ಧಾರ ಕೈಬಿಡಲಾಗಿದೆ, ಅವರಿಗೆ ನೀಡಿರುವ ನೋಟಿಸ್ ಹಿಂಪಡೆಯಲಾಗುವುದು. ಎರಡು ವರ್ಷದ ತರಬೇತಿ ಅವಧಿ ಪೂರೈಸಿದ ತಕ್ಷಣ ಟ್ರೈನಿಗಳ ಸೇವೆಯನ್ನು ಕಾಯಂಗೊಳಿಸಲಾಗುವುದು. ನೌಕರರ ವಿರುದ್ಧ ಇದೇ ಮಾರ್ಚ್ 13ರ ನಂತರ ಹೂಡಿರುವ ಮೊಕದ್ದಮೆಗಳನ್ನು ಹಿಂಪಡೆಯಲು ಸಹ ಒಪ್ಪಿಗೆ ಸೂಚಿಸಲಾಗಿದೆ ಎಂದು ಅವರು ವಿವರಿಸಿದರು.

ಈ ವರ್ಷದ ಮಾರ್ಚ್ 13ರ ನಂತರ ಹೊರಡಿಸಲಾದ ವರ್ಗಾವಣೆ ಆದೇಶಗಳನ್ನು ರದ್ದು ಮಾಡಲಾಗುವುದು. ನೌಕರರ ಸಣ್ಣ-ಪುಟ್ಟ ಸಮಸ್ಯೆಗಳನ್ನು ನಿವಾರಿಸಲು ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ದೇಶಕರ (ಸಿಬ್ಬಂದಿ ವಿಭಾಗ) ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು. ಸಮಸ್ಯೆಗಳನ್ನು ಪರಿಹರಿಸಲು ಸಮಿತಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದರು.

ವೇತನ ಹೆಚ್ಚಿಸುವುದೂ ಸೇರಿದಂತೆ 42 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ನೌಕರರು ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಮುಷ್ಕರ ಆರಂಭಿಸಿದ್ದರು. ಆದರೆ ಮುಷ್ಕರದ ಬಿಸಿ ಕೆಲವೆಡೆ ಬುಧವಾರ ಸಂಜೆಯಿಂದಲೇ ತಟ್ಟಿತ್ತು.

English summary
As the govr yeilded allmost all demands of the employees the KSRTC workers union called-off 3 days strike today (Saturday Monrning Sept 15)says Minister R Ashok.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X