ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ ಕರೆಯನ್ನು ಗಿರೀಶ ಎಂದೂ ಮರೆಯಲಾರರು!

By Prasad
|
Google Oneindia Kannada News

ಬೆಂಗಳೂರು, ಸೆ. 12 : ಲಂಡನ್ನಿನಲ್ಲಿ ಜರುಗಿದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿಯ ಜಿಗಿತ ಜಿಗಿದು, ಇದೀಗ ತಾನೆ ತವರೂರಿಗೆ ಮರಳಿರುವ ಕನ್ನಡಿಗ ಗಿರೀಶ ಹೊಸನಗರ ನಾಗರಾಜೇಗೌಡ ಅವರಿಗೆ ಎಲ್ಲೆಡೆಯಿಂದ ಅಭಿನಂದನೆಗಳ ಸುರಿಮಳೆ ಮತ್ತು ಕಾಂಚಾಣದ ಹೊಳೆ ಹರಿದುಬರುತ್ತಿದೆ. ಲಂಡನ್ನಿನ ರೆಡಿಂಗ್‌ನಲ್ಲಿ ಕನ್ನಡಿಗರುಯುಕೆ ಕನ್ನಡ ಕೂಟ ಸನ್ಮಾನ ಕೂಡ ಮಾಡಿತು.

Girisha H.N. felicitated by Karnataka Govt

ಎಲ್ಲವೂ ಅವಿಸ್ಮರಣೀಯ ಘಳಿಗೆಗಳೇ. ಹೈಜಂಪ್ ವಿಭಾಗದಲ್ಲಿ 1.74 ಮೀಟರ್ ಜಿಗಿದಿರುವ ಗಿರೀಶ ಅವರಿಗೆ ಎಲ್ಲೆಡೆಯಿಂದ ಬರುತ್ತಿರುವ ಪ್ರಶಂಸೆಗಳಿಂದಾಗಿ ತೊಯ್ದು ತೊಪ್ಪೆಯಾಗಿದ್ದಾರೆ. ಫೋನ್ ಮೂಲಕ ಅವರನ್ನು ಎಲ್ಲರೂ ಅಭಿನಂದಿಸುವವರೆ. ಆದರೆ, ಇವೆಲ್ಲವುಗಳ ಮಧ್ಯೆ ಬುಧವಾರ ಸಂಜೆ ಬಂದ ಆ ಮೊಬೈಲ್ ಕರೆಯನ್ನು ಗಿರೀಶ ಅವರು ಜೀವಮಾನದಲ್ಲಿ ಮರೆಯಲಿಕ್ಕಿಲ್ಲ. ಆ ಕರೆಯಿಂದ ಅವರ ಸಂತಸ ನೂರ್ಮಡಿಯಾಗಿದೆ.

ಆ ಕರೆ ಮಾಡಿದ್ದು ಮತ್ತಾರೂ ಅಲ್ಲ, ಕ್ರಿಕೆಟ್ ಲೋಕದ ಧ್ರುವತಾರೆ ಸಚಿನ್ ತೆಂಡೂಲ್ಕರ್. "ಹಲೋ, ನಾನು ಸಚಿನ್ ಮಾತಾಡ್ತಿದ್ದೀನಿ..." ಅಂತ ಕರೆ ಬಂದಾಗ ಗಿರೀಶ ಅವರಿಗೆ ಅವರ ಕಿವಿಯನ್ನೇ ನಂಬಲಾಗಲಿಲ್ಲ, ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಇನ್ನು ಅವರಿಂದ ಬಂದಿರುವ ಮೆಚ್ಚುಗೆಯ ಮಾತುಗಳು ಗಿರೀಶ ಅವರನ್ನು ಮತ್ತಷ್ಟು ಸಾಧನೆ ಮಾಡಲು ಪ್ರೇರೇಪಿಸಿವೆ.

ಈ ಸಂಗತಿಯನ್ನು ಗಿರೀಶ ಅವರು ಬೆಂಗಳೂರಿನಲ್ಲಿ ಕರ್ನಾಟಕ ಸರಕಾರದ ವತಿಯಿಂದ ಸನ್ಮಾನಿಸಿದಾಗ ಹಂಚಿಕೊಂಡರು. ಅಮೋಘ ಸಾಧನೆ ಮಾಡಿರುವ ಗಿರೀಶ ಅವರನ್ನು ಕರ್ನಾಟಕದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ತಮ್ಮ ಅಧಿಕೃತ ನಿವಾಸಕ್ಕೆ ಕರೆಯಿಸಿಕೊಂಡು ಗುರುವಾರ ಆತ್ಮೀಯವಾಗಿ ಸನ್ಮಾನಿಸಿದರು. ಅವರಿಗೆ ಗೌರವಪೂರಕವಾಗಿ 20 ಲಕ್ಷ ರು. ಪ್ರೋತ್ಸಾಹಧನವನ್ನು ಸರಕಾರದ ವತಿಯಿಂದ ನೀಡಲಾಯಿತು. ಈ ಸಂದರ್ಭದಲ್ಲಿ ಗೃಹ ಸಚಿವ ಆರ್ ಅಶೋಕ ಅವರು ಕೂಡ ಉಪಸ್ಥಿತರಿದ್ದರು.

ಕರೆ ಮಾಡಿ ಅಭಿನಂದಿಸಿದ ಸಚಿನ್ ತೆಂಡೂಲ್ಕರ್ ಅವರು, ಇಲ್ಲಿಗೆ ಸುಮ್ಮನಾಗದೆ ಮುಂದೆ ಇನ್ನೂ ಉತ್ತಮ ಸಾಧನೆ ತೋರಿ ಮತ್ತಷ್ಟು ಪದಕ ಗೆಲ್ಲಬೇಕೆಂದು ಹಾರೈಸಿದರು ಎಂದು ಗಿರೀಶ ಅವರು ತಿಳಿಸಿದರು. ಕೆಲ ದಿನಗಳಲ್ಲಿ ತಮ್ಮ ಆರಾಧ್ಯ ದೈವವಾಗಿರುವ ಸಚಿನ್ ಅವರನ್ನು ಭೇಟಿ ಮಾಡುವ ಇರಾದೆಯನ್ನು ಗಿರೀಶ ವ್ಯಕ್ತಪಡಿಸಿದ್ದಾರೆ.

ಒಲಿಂಪಿಕ್ ನಲ್ಲಿ ಕಂಚಿನ ಪದಕ ಗೆದ್ದಿರುವ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರಂತೆ ಸಚಿನ್ ತೆಂಡೂಲ್ಕರ್ ಅವರು ಕೂಡ ನಗದು ನೀಡುವ ಭರವಸೆ ನೀಡಿದ್ದಾರಾ ಎಂಬ ಬಗ್ಗೆ ಪ್ರಸ್ತಾಪಿಸಿದಾಗ, ನಾನು ಸಚಿನ್ ಅವರಿಂದ ಯಾವುದನ್ನೂ ನಿರೀಕ್ಷಿಸುವುದಿಲ್ಲ, ಸಚಿನ್ ಅವರಿಂದ ಮೊಬೈಲ್ ಕರೆ ಬಂದಿದ್ದೇ ಸಾಕಷ್ಟು ಸಂತೋಷ ತಂದಿದೆ. ನಾನು ಅವರ ಆಟವನ್ನು ಅತೀವವಾಗಿ ಮೆಚ್ಚುತ್ತೇನೆ ಎಂದು ಗಿರೀಶ ಅವರು ಉತ್ತರಿಸಿ, ಪ್ರಬುದ್ಧತೆಯನ್ನು ಮೆರೆದರು.

ಲಂಡನ್ ಒಲಿಂಪಿಕ್ಸ್‌ನಲ್ಲಿ ಕುಸ್ತಿಯಲ್ಲಿ ಬೆಳ್ಳಿ ಪದಕ ಗೆದ್ದಿರುವ ಮತ್ತು ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಸುಶೀಲ್ ಕುಮಾರ್ ಅವರೇ ತನ್ನ ರೋಲ್ ಮಾಡೆಲ್ ಎಂದು ಹೇಳಿದ ಗಿರೀಶ ಅವರು, ಸುಶೀಲ್ ಅವರ ಮೆತ್ತನೆಯ ವ್ಯಕ್ತಿತ್ವವನ್ನು ತುಂಬಾ ಮೆಚ್ಚುವುದಾಗಿ ಹೇಳಿದರು. ಕರ್ನಾಟಕ ಸರಕಾರದಿಂದ ಸನ್ಮಾನ ಮಾಡುವ ಮುನ್ನ ಬೆಂಗಳೂರಿಗೆ ಬಂದಿಳಿದ ಗಿರೀಶ ಅವರನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭರ್ಜರಿಯಾಗಿ ಸ್ವಾಗತಿಸಲಾಯಿತು.

English summary
London Paralympics 2012 high jump silver medalist Girisha H.N., a Kannadiga, will never forget call from none other than Sachin Tendulkar. Girisha was accorded warm welcome in Bangalore and Karnataka govt presented him Rs. 20 lakh as token appreciation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X