ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೌಟುಂಬಿಕ ಕೇಸಿನಿಂದ ನ್ಯಾ.ಭಕ್ತವತ್ಸಲಗೆ ಗೇಟ್‌ಪಾಸ್!

By Prasad
|
Google Oneindia Kannada News

Family cases taken away from Justice Bhaktavatsala
ಬೆಂಗಳೂರು, ಸೆ. 8 : ಗಂಡನಿಂದ ಥಳಿತಕ್ಕೊಳಗಾದ ಮಹಿಳೆಯ ಬಗ್ಗೆ ಮುಕ್ತ ಕೋರ್ಟಿನಲ್ಲಿ ಅವಹೇಳನಕಾರಿ ಮಾತು ಆಡಿದರೆಂಬ ಹಿನ್ನೆಲೆಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ 60 ವರ್ಷ ವಯಸ್ಸಿನ ಡಾ. ಕೋದಂಡರಾಮ್ ನಾಯ್ಡು ಭಕ್ತವತ್ಸಲ (ಬಿ.ಕಾಂ., ಎಲ್ಎಲ್.ಎಮ್., ಪಿಎಚ್.ಡಿ) ಅವರನ್ನು ಮಗುವಿನ ರಕ್ಷಣೆ ಮತ್ತು ಪಾಲನೆ ಸೇರಿದಂತೆ ಎಲ್ಲ ಕೌಟುಂಬಿಕ ಕೇಸುಗಳಿಂದ ಶನಿವಾರ ಮುಕ್ತಗೊಳಿಸಲಾಗಿದೆ.

ನ್ಯಾ.ಭಕ್ತವತ್ಸಲ ಮತ್ತು ನ್ಯಾ. ಇಂದ್ರಕಲಾ ಅವರ ವಿಭಾಗೀಯ ಪೀಠದ ಮುಂದಿದ್ದ ಕೌಟುಂಬಿಕ ಕೇಸುಗಳನ್ನು ನ್ಯಾ. ಕೆ.ಎಲ್.ಮಂಜುನಾಥ್ ಮತ್ತು ವಿ. ಸೂರಿ ಅಪ್ಪರಾವ್ ಅವರಿರುವ ವಿಭಾಗೀಯ ಪೀಠಕ್ಕೆ ನೀಡಲಾಗಿದ್ದು, ಉಳಿದಂತೆ ಎಲ್ಲ ಕೇಸುಗಳು ನ್ಯಾ.ಭಕ್ತವತ್ಸಲ ಅವರಲ್ಲಿಯೇ ಉಳಿಯಲಿವೆ. ಈ ಬದಲಾವಣೆ ಸೆ.10ರಿಂದ ಜಾರಿಗೆ ಬರಲಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕೌಟುಂಬಿಕ ದೌರ್ಜನ್ಯ ಕುರಿತ ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದಾಗ, "ಗಂಡ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರೂ, ಗಂಡ ಥಳಿಸುವ ಮಾತನ್ನೇ ಆಡುತ್ತಿರುವಿಯಲ್ಲ. ಎಲ್ಲರ ಮದುವೆಯಲ್ಲಿ ಆಗುವಂಥದ್ದೇ, ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಬೇಕು" ಎಂದು ನ್ಯಾ.ಭಕ್ತವತ್ಸಲ ಅವರು ಆಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಮಹಿಳೆ ಬಗ್ಗೆ ಅವಹೇಳನಕಾರಿಯಾಗಿ ಮಾತನ್ನಾಡಿದ್ದಾರೆ ಎಂದು ನ್ಯಾ.ಭಕ್ತವತ್ಸಲ ಅವರ ವಿರುದ್ಧ ಮಹಿಳಾ ವಕೀಲರು, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಪ್ರಮೀಳಾ ನೇಸರ್ಗಿ ಅವರ ನೇತೃತ್ವದಲ್ಲಿ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ಸೇಠ್ ಅವರಿಗೆ ದೂರು ನೀಡಿದ್ದರು.

ಆದರೆ, ತಾವು ಆ ರೀತಿ ಹೇಳಿಯೇ ಇಲ್ಲ. ಮಾಧ್ಯಮಗಳು ತಮ್ಮ ಮಾತನ್ನು ತಿರುಚಿ ಬರೆದಿವೆ ಎಂದು ಭಕ್ತವತ್ಸಲ ಅವರು ಶುಕ್ರವಾರ ಬೇರೊಂದು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. "ಮಹಿಳೆಯನ್ನು ಥಳಿಸಲು ನಾನು ಯಾವತ್ತೂ ಅನುಮತಿ ನೀಡುವುದಿಲ್ಲ. ನನ್ನ ಪ್ರಯತ್ನ ಕುಟುಂಬ, ಮದುವೆಯನ್ನು ಉಳಿಸಲು ಇರುತ್ತದೆ. ನಾನು ಹೇಳಿದ್ದೇನೆಂದರೆ, ಹಳೆಯದನ್ನು ಮರೆತು ಮತ್ತೆ ಒಂದಾಗಿ ಬಾಳಿ ಎಂದು. ಇದನ್ನೇ ಅಪಾರ್ಥ ಮಾಡಿಕೊಂಡು ಮಾಧ್ಯಮಗಳು ವ್ಯತಿರಿಕ್ತವಾಗಿ ಪ್ರಸಾರ ಮಾಡಿವೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯಾ.ಭಕ್ತವತ್ಸಲ ಅವರು ವಿವಾದದಲ್ಲಿ ಸಿಲುಕಿರುವುದು ಇದೇ ಮೊದಲೇನಲ್ಲ. ಕಳೆದ ತಿಂಗಳು ಮತ್ತೊಂದು ವಿವಾಹ ವಿಚ್ಛೇದನ ಕುರಿತ ಪ್ರಕರಣದ ವಿಚಾರಣೆ ನಡೆಸುವಾಗ, ಮಹಿಳಾ ವಕೀಲೆಯೊಬ್ಬರು ಇನ್ನೂ ಕುವರಿಯಾಗಿರುವ ಕಾರಣ ಅವರು ವಾದ ಮಂಡಿಸಲು ಅನರ್ಹರು ಎಂದು ಅವರು ಹೇಳಿಕೆ ನೀಡಿ ಮಹಿಳಾಮಣಿಗಳ ಆಕ್ರೋಶಕ್ಕೆ ತುತ್ತಾಗಿದ್ದರು.

ನ್ಯಾ.ಭಕ್ತವತ್ಸಲ ಬಗ್ಗೆ : 'ನ್ಯಾಯಾಂಗ ಪ್ರಕ್ರಿಯೆಯ ಮೂಲಕ ಭಾರತದಲ್ಲಾಗುತ್ತಿರುವ ಸಾಂವಿಧಾನಿಕ ಅಭಿವೃದ್ಧಿ' ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡಿಸಿದ್ದಕ್ಕಾಗಿ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಿಂದ ಡಾಕ್ಟರೇಟ್ ಪಡೆದಿರುವ ಡಾ. ಕೆ. ಭಕ್ತವತ್ಸಲ ಅವರು ಹುಟ್ಟಿದ್ದು 1952ರ ಡಿಸೆಂಬರ್ 10ರಂದು. ಎಸ್‌ಜೆಆರ್ ಕಾನೂನು ಕಾಲೇಜಿನಲ್ಲಿ ಪದವಿ ಗಳಿಸಿದ ಅವರು 1980ರಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದರು.

ಕೆಳ ನ್ಯಾಯಾಲಯ ಮತ್ತು ಕರ್ನಾಟಕ ಹೈಕೋರ್ಟಿನಲ್ಲಿ ಹಲವಾರು ವರ್ಷ ಪ್ರಾಕ್ಟೀಸ್ ಮಾಡಿದರು. 1988ರಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಕರ್ನಾಟಕ ನ್ಯಾಯಾಂಗ ಸೇವೆ ಸೇರಿದರು. ನಂತರ ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಮುಂದೆ 2002ರಲ್ಲಿ ಕರ್ನಾಟಕ ಹೈಕೋರ್ಟಿನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕವಾದ ಭಕ್ತವತ್ಸಲ ಅವರು, 2004ರಲ್ಲಿ ಪರ್ಮನೆಂಟ್ ಜಡ್ಜ್ ಆದರು.

English summary
Family cases including child custody and guardianship have been taken away from Karnataka High Court justice Dr. K. Bhaktavatsala following protest by women advocates against some remarks by the judge. He had said, it is OK to get beaten up as long as husband takes good care of wife.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X