ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗದ ಈ ರೈತ ಏನು ಮಾಡಿದ್ದಾನೆ ನೋಡಿ!

By Srinath
|
Google Oneindia Kannada News

shimoga-farmer-umesh-rests-51-minutes-on-elbows-toes
ಶಿವಮೊಗ್ಗ, ಸೆ. 3: ನಾಡಿನಲ್ಲಿ ಬರಬಿದ್ದು ಜನ ದಿಕ್ಕೆಟ್ಟು ಕುಳಿತಿದ್ದಾರೆ. ಆದರೆ ಜನ ಪರಿಪಾಲಕರು ವಿದೇಶೀ ಮೋಜುಮಸ್ತಿಯಲ್ಲಿ 'ಕರ್ನಾಟಕ ಏನೂ ಬರ ಬಿದ್ದಿಲ್ಲ. ಅಲ್ಲೆಲ್ಲರೂ ಸೌಖ್ಯವಾಗಿದ್ದಾರೆ. ನೀವೇನೂ ವರಿ ಮಾಡ್ಕೋಬ್ಯಾಡಿ' ಎಂದು ವಿದೇಶದಲ್ಲಿ ಮಾಧ್ಯಮಗಳ ಮುಂದೆ ಅರೆಬರೆ ಇಂಗ್ಲೀಷಿನಲ್ಲಿ (ಸನ್ಮಾನ್ಯ ಬಿಸಿ ಪಾಟೀಲ) ಉಲಿಯುತ್ತಿದ್ದಾರೆ.

ಜನನಾಯಕರೇ ಹೀಗೆ ದಿಕ್ಕುತಪ್ಪಿಸುತ್ತಿರುವಾಗ ಶಿವಮೊಗ್ಗದ ರೈತಪುತ್ರನೊಬ್ಬ ಬರಬಂತೆಂದು ತಲೆ ಮೇಲೆ ಕೈಹೊತ್ತುಕೊಂಡು ಕುಳಿತುಕೊಳ್ಳದೆ ತನ್ನ ಕಾಲು ಬೆರಳುಗಳು ಮತ್ತು ಮೊಳಕೈಗಳ ಮೇಲೆ ಬರೋಬ್ಬರಿ 51 ನಿಮಿಷ ಕುಳಿತು ಇನ್ನೇನು ಗಿನ್ನಿಸ್ ದಾಖಲೆಗೆ ಸೇರ್ಪಡೆಗೊಳ್ಳುವ ಹಾದಿಯಲಿದ್ದಾನೆ.

ಗಾಂಧೀಜಿ ಹೇಳಿದ್ದರು ಆರಾಮ್ ಹರಾಮ್ ಹೈ ಅಂತ. ಹಾಗಾಗಿ ನಮ್ಮೀ ಶಿವಮೊಗ್ಗದ ರೈತನೂ ಬರದಿಂದ ಬೇಕಾರ್ ಆಗಿ ಜೀವನ ತಳ್ಳದೇ 'ಏನಾದರೂ ಮಾಡುತಿರು ತಮ್ಮ, ಸುಮ್ನೇ ಕೂಡಬ್ಯಾಡ' ಎಂಬ ಮಾತಿಗೆ ನ್ಯಾಯವೊದಗಿಸಿ, ಅಪರೂಪದ ಸಾಧನೆಯನ್ನೇ ಮಾಡಿದ್ದಾನೆ.

ಟ್ರಾಕ್ಟರ್ ಹೊಡೆಯುವ ಉಮೇಶ: ಜಿಲ್ಲೆಯ ಗೊದ್ನಿಚಟ್ನಹಳ್ಳಿಯ 35 ವರ್ಷದ ಜಿಸಿ ಉಮೇಶ ರೈತರಿಗಾಗಿ ಟ್ರಾಕ್ಟರ್ ಹೊಡೆಯುತ್ತಿದ್ದ. ಆದರೆ ಬರ ಬಂದು ಆ ಅನ್ನದಾತನ ಬಾಳಬಂಡಿಯೇ ನಿಂತುಹೋಗಿದೆ. ಹಾಗಾಗಿ ಉಮೇಶನಿಗೆ ಟ್ರಾಕ್ಟರ್ ಹೊಡೆಯುವ ಕೆಲಸ ಇಲ್ಲವಾಯಿತು.

ಅಂತಹ ದುರ್ಭರ ಪರಿಸ್ಥಿತಿಯಲ್ಲೇ ಟ್ರಾಕ್ಟರ್ ಉಮೇಶನಿಗೆ ಏನಾದರೂ ಸಾಧನೆ ಮಾಡಬೇಕು ಅನ್ನಿಸಿದ್ದು. ತನ್ನ ದೈಹಿಕ ತಾಕತ್ತೇನು ಎಂಬುದನ್ನು ಪರೀಕ್ಷಿಸಲು ಉಮೇಶ ನಿರ್ಧರಿಸಿದ. ಅಪ್ಪಾ ನಿನ್ನ ಕಾಲ ಮೇಲೆ ನೀನು ನಿಂತ್ಕೋ ಅಂದರೆ ಇವಯ್ಯ ತನ್ನ ಕಾಲು ಬೆರಳುಗಳು ಮತ್ತು ಮೊಳಕೈಗಳನ್ನೇ ಆಧಾರವಾಗಿಸಿಕೊಂಡು ಭೂತಾಯಿಗೆ ಅಡ್ಡಬಿದ್ದ. ಮೊನ್ನೆ ಸಾರ್ವಜನಿಕರೆದುರು ಹೀಗೆ 51 ನಿಮಿಷಗಳ ಕಾಲ ನಿಂತು (ಮಲಗಿ) ಜನರಿಂದ ಶಹಬ್ಬಾಸ್ ಎನಿಸಿಕೊಂಡ.

'ಆಸ್ಟ್ರೇಲಿಯಾದ ಅರವತ್ತೆಂಟು ವರ್ಷದ ಅಜ್ಜನೊಬ್ಬ ಇಂತಹ ಭಂಗಿಯಲ್ಲಿ 33 ನಿಮಿಷ 40 ಸೆಕೆಂಡ್ ಪವಡಿಸಿದ್ದ ಎಂಬ ದಾಖಲೆ ಎಲ್ಲೋ ಓದಿದ್ದು ನೆನಪಿಗೆ ಬಂತು. ಕೆಲಸವಿಲ್ಲದೆ ಮನೆಯಲ್ಲಿ ಸುಮ್ಮನೆ ಕುಳಿತಾಗಲೆಲ್ಲ ಅದನ್ನೇ ಮೆಲಕು ಹಾಕುತ್ತಿದ್ದೆ.

ಸುಮ್ನೆ ಹಾಗೇ ಕುಳಿತುಕೊಳ್ಳುವ ಬದಲು ಆ ನಿಟ್ಟಿನಲ್ಲಿ ಸಾಧನೆಯನ್ನಾದರೂ ಮಾಡುವ ಎಂದು ದಿನಾ ಒಂದಷ್ಟು ಪ್ರಾಕ್ಟೀಸ್ ಮಾಡತೊಡಗಿದೆ. ಅದೇ ಅಭ್ಯಾಸವಾಗಿಹೋಯಿತು. ಅದು ದಾಖಲೆಯ ಮಟ್ಟಕ್ಕೂ ಮುಂದುವರಿಯಿತು' ಎಂದ ಉಮೇಶನ ಮೊಗದಲ್ಲಿ ಸಾಧನೆಯ ಹೆಮ್ಮೆ ತುಳುಕುತ್ತಿತ್ತು.

English summary
At a time when drought is having a disastrous effect on the farming community in Karnataka, 35-year-old G C Umesh, a resident of Godnichatnahalli in Shimoga district, a jobless tractor driver who hails from a village, chose it to set a record by performing a feat of physical endurance: Balancing himself flat on ground just with his elbow and toes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X