ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ ಮಗ ಭಯೋತ್ಪಾದಕ ಅಲ್ರಿ, ಬಿಟ್ಟುಬಿಡ್ರಿ!

By Prasad
|
Google Oneindia Kannada News

My son is innocent : Arrested terrorists father
ಬೆಂಗಳೂರು, ಆ. 31 : ಕರ್ನಾಟಕದ ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್, ಕನ್ನಡ ಅಂಕಣಕಾರ ಪ್ರತಾಪ್ ಸಿಂಹ, ಸಂಸದ ಪ್ರಹ್ಲಾದ್ ಜೋಶಿ, ಪತ್ರಿಕೋದ್ಯಮಿ ವಿಜಯ ಸಂಕೇಶ್ವರ್ ಅವರು ಸೇರಿದಂತೆ ರಾಜ್ಯದ ಕೆಲ ಪ್ರಮುಖರನ್ನು ಹತ್ಯೆಗೈಯಲು ಸಂಚುಹೂಡಿದ ಆರೋಪ ಹೊತ್ತಿರುವ ಶಂಕಿತ ಉಗ್ರರು ಅಮಾಯಕರೆ?

ಅವರನ್ನು ಬಂಧಿಸಿರುವ ಬೆಂಗಳೂರು ಸಿಟಿ ಕ್ರೈಂ ಬ್ರಾಂಚ್ ಪೊಲೀಸರು ಮತ್ತು ನಾಡಿನ ಸಮಸ್ತ ಜನರು ನಂಬಲು ಸಿದ್ಧರಿಲ್ಲ. ಆದರೆ, ಬಂಧಿತರಾಗಿರುವ ಕೆಲ ಶಂಕಿತ ಉಗ್ರರನ್ನು ಹೆತ್ತಿರುವ ಪಾಲಕರು ಈ ಆರೋಪಗಳನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ತಮ್ಮ ಮಕ್ಕಳು ಅಮಾಯಕರು, ಅವರನ್ನು ಸಂಚು ಮಾಡಿ ಬಂಧಿಸಲಾಗಿದೆ. ಅವರು ಯಾರ ಕೊಲೆಗೂ ಸಂಚು ರೂಪಿಸಿರಲಿಲ್ಲ ಎಂದು ಅಲವತ್ತುಕೊಳ್ಳುತ್ತಿದ್ದಾರೆ.

ಬೆಂಗಳೂರಿನಲ್ಲಿ ಬಂಧಿತನಾಗಿರುವ ಡಿಆರ್‌ಡಿಒ ಅಂಗಸಂಸ್ಥೆಯಲ್ಲಿ ಇಂಜಿನಿಯರ್ ಆಗಿದ್ದ ಇಜಾಜ್ ಮೊಹಮ್ಮದ್ ಮಿರ್ಜಾ ಅವರು ಅಪ್ಪ ಎ.ಎಮ್.ಮಿರ್ಜಾ ಅವರು ತಮ್ಮ ಮಗ ಉಗ್ರರೊಂದಿಗೆ ಸೇರಿ ಕೊಲೆ ಮಾಡುವಂಥ ಹೀನಾಯ ಕೆಲಸ ಮಾಡಲು ಸಾಧ್ಯವೇ ಇಲ್ಲ. ಅವನನ್ನು ಬಿಟ್ಟುಬಿಡಿ ಎಂದು ಅಲವತ್ತುಕೊಂಡಿದ್ದಾರೆ. ಆತನ ಬೆಂಬಲಕ್ಕೆ ಆತನ ನೆರೆಹೊರೆಯವರು ಕೂಡ ಬಂದಿದ್ದಾರೆ. ಇಜಾಜ್ ಒಬ್ಬ ಅಮಾಯಕನಾಗಿದ್ದು, ತನ್ನಷ್ಟಕ್ಕೆ ತಾನಿದ್ದ ಎಂದು ಅಕ್ಕಪಕ್ಕದವರು ಹೇಳಿದ್ದಾರೆ.

ಹಳೆ ಹುಬ್ಬಳ್ಳಿಯಲ್ಲಿ ಬಂಧಿತನಾಗಿರುವ ಶೋಯಾಬ್ ಅಹ್ಮದ್ ಮಿರ್ಜಾನ ತಾಯಿ ಕೂಡ ತನ್ನ ಮಗ ಅಮಾಯಕನಾಗಿದ್ದಾನೆ ಎಂದು ಕಣ್ಣೀರುಗರೆದಿದ್ದಾರೆ. "ಅರಿಬಿ(ಬಟ್ಟೆ) ಮಾರಿಕೊಂಡು ಜೀವನ ಸಾಗಿಸುತ್ತಿದ್ದ. ಅದು ಬಿಟ್ರ ಬ್ಯಾರೇ ಏನೂ ಗೊತ್ತಿಲ್ಲ ಅವಂಗ. ಒಂದಿನದ ಊಟಕ್ಕೂ ಭಾರೀ ಕಷ್ಟ ಐತಿ. ಭಾರೀ ಕಷ್ಟಪಟ್ಟು ದುಡೀತಿದ್ದ. ಅಂಥಾವ ಭಯೋತ್ಪಾದಕ ಆಗಲಿಕ್ಕೆ ಹೆಂಗ ಸಾಧ್ಯ ಐತಿ. ಅವನ್ನ ಬಿಟ್ಟಬಿಡ್ರಿ" ಎಂದು ಕಂಬನಿ ಮಿಡಿದರು.

ಜಾಫರ್ ಎಂಬಾತನ ತಂದೆ ಕೂಡ, "ಸಾದಾ ದಿರಿಸಿನಲ್ಲಿದ್ದ ಪೊಲೀಸರು ಹಠಾತ್ತನೆ ಬಂದು ಮಲಗಿದ್ದ ತಮ್ಮ ಮಗನನ್ನು ಕರೆದೊಯ್ದಿದ್ದಾರೆ. ಆತನ ಲ್ಯಾಪ್ಟಾಪ್ ಮತ್ತು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಕರೆದೊಯ್ದಿದ್ದಕ್ಕೆ ಸರಿಯಾದ ಕಾರಣ ಕೂಡ ನೀಡಿಲ್ಲ. ತಮ್ಮ ಮಗ ಡ್ರಗ್ ಅಡಿಕ್ಟ್ ಇದ್ದಾನಾ ಎಂದು ವಿಚಾರಿಸಿದವರೆ ಆತನನ್ನು ಎಳೆದೊಯ್ದಿದ್ದಾರೆ. ತಮ್ಮ ಮಗ ಅಮಾಯಕ" ಎಂದು ಗೋಳು ತೋಡಿಕೊಂಡಿದ್ದಾರೆ.

ಸಿಸಿಬಿ ಪೊಲೀಸರು ಓರ್ವ ಪತ್ರಕರ್ತ ಸೇರಿದಂತೆ ಒಟ್ಟು 11 ಜನರನ್ನು ಬಂಧಿಸಿದ್ದಾರೆ. ಅವರಲ್ಲಿ 6 ಜನರು ಬೆಂಗಳೂರಿನಲ್ಲಿ ಬಂಧಿತರಾಗಿದ್ದರೆ, 5 ಜನರು ಹಳೆ ಹುಬ್ಬಳ್ಳಿಯ ಯಲ್ಲಾಪುರ ಓಣಿಯಲ್ಲಿ ಸಿಕ್ಕುಬಿದ್ದಿದ್ದಾರೆ. ಅವರಿಂದ ವಿದೇಶಿ 7.62 ಮಿ.ಮೀ. ಪಿಸ್ತೂಲು, ಏಳು ಗುಂಡುಗಳು, ಲ್ಯಾಪ್ ಟಾಪ್, ಹಾರ್ಡ್ ಡಿಸ್ಕ್, ಜಿಹಾದಿ ಸಾಹಿತ್ಯದ ಪುಸ್ತಕಗಳು, ಸಿಡಿ ಮುಂತಾದವುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರೆಲ್ಲರೂ ಇಪ್ಪತ್ತರ ಹರೆಯದಲ್ಲಿದ್ದಾರೆ. ಅವರಲ್ಲಿ ಕೆಲವರು ವಿದ್ಯಾವಂತರಾಗಿದ್ದು ಉನ್ನತ ಹುದ್ದೆಯನ್ನು ಕೂಡ ಅಲಂಕರಿಸಿದ್ದಾರೆ.

ಇಂಥವರು ದೇಶವಿರೋಧಿ ಚಟುವಟಿಕೆಗಳಲ್ಲಿ ಯಾಕೆ ಬಿದ್ದರು? ಇವರೆಲ್ಲರ ಉದ್ದೇಶ ಪತ್ರಕರ್ತರನ್ನು ಮುಗಿಸುವುದೇ ಆಗಿತ್ತಾ, ಅಥವಾ ಇನ್ನೂ ಬೇರೆ ಚಟುವಟಿಕೆಯಲ್ಲಿ ತೊಡಗಿದ್ದರಾ ಎಂದುದನ್ನು ಪೊಲೀಸರು ಬಗೆಹರಿಸಬೇಕಾಗಿದೆ. ಮುಸ್ಲಿಂ ವಿರೋಧಿ ಲೇಖನಗಳನ್ನು ಬರೆದಿದ್ದಕ್ಕೆ ಕನ್ನಡ ಅಂಕಣಕಾರನನ್ನು ಮುಗಿಸಲು ಇವರು ಸಂಚು ಹೂಡಿದ್ದರೆಂದು ಆರೋಪಿಸಲಾಗಿದೆ. ಇವರೆಲ್ಲರು ಇಂಡಿಯನ್ ಮುಜಾಹಿದ್ದೀನ್, ಲಷ್ಕರ್-ಎ-ತಯ್ಬಾ, ಹರ್ಕತ್-ಉಲ್-ಜಿಹಾದಿ ಅಲ್-ಇಸ್ಲಾಮಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗಿದೆ.

English summary
Father of a suspected terrorist arrested in Bangalore and mother of another person arrested in Hubballi say that their kids are innocent and never conspired to kill anyone including Kannada journalists. Totally 11 people have been arrested by Bangalore CCB police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X