ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಾದ್ಯಂತ 108 ಆಂಬುಲನ್ಸ್ ಸೇವೆ ಸಂಪೂರ್ಣ ಸ್ಥಗಿತ

By Prasad
|
Google Oneindia Kannada News

Arogya Kavach 108 ambulance service halted across Karnataka
ಬೆಂಗಳೂರು, ಆ. 29 : ಆರೋಗ್ಯ ಸಚಿವ ಅರವಿಂದ ಲಿಂಬಾವಳಿಯವರು ಬೇಷರತ್ ಕ್ಷಮೆಕೋರಲು ಹಿಂದೇಟು ಹಾಕಿರುವ ಕಾರಣ ದಿನದ 24 ತಾಸು ಉಚಿತ ತುರ್ತು ಸೇವೆ ಸಲ್ಲಿಸುತ್ತಿದ್ದ 108 ಆರೋಗ್ಯ ಕವಚ ಆಂಬುಲನ್ಸ್ ಸೇವೆಗಳು ರಾಜ್ಯಾದ್ಯಂತ ಸಂಪೂರ್ಣ ಸ್ಥಗಿತವಾಗಿವೆ. ಇವರಿಬ್ಬರ ಜಗಳದಿಂದಾಗಿ ಉಚಿತ ಸೇವೆಯನ್ನು ನಂಬಿದ್ದ ಸಾವಿರಾರು ಬಡ ರೋಗಿಗಳು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ಬುಧವಾರ ಸಂಜೆ 5 ಗಂಟೆಯೊಳಗೆ ಆರೋಗ್ಯ ಸಚಿವರಾದ ಅರವಿಂದ ಲಿಂಬಾವಳಿಯವರು 108 ಆರೋಗ್ಯ ಕವಚ ಆಂಬುಲನ್ಸ್ ಸೇವೆ ಸಲ್ಲಿಸುತ್ತಿರುವ ನೌಕರರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು. ಆರೋಗ್ಯ ಕವಚ ನೌಕರರ ಬೇಡಿಕೆ ಮತ್ತು ಸಚಿವರ ಹಠಮಾರಿತನದಿಂದಾಗಿ ರಾಜ್ಯಾದ್ಯಂತ ರೋಗಿಗಳು ಉಚಿತ ಆಂಬುಲನ್ಸ್ ಸೇವೆಯಿಂದ ವಂಚಿತರಾಗಿದ್ದಾರೆ.

ಆಗಿದ್ದೇನೆಂದರೆ, ಮಂಗಳವಾರ ಸಂಜೆ ಬಾಗಲಕೋಟೆಯಲ್ಲಿ ಆರೋಗ್ಯ ಕವಚ ಸಂಘದ ಕೆಲ ನೌಕರರು ಅನೇಕ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಚಿವರನ್ನು ಭೇಟಿಯಾಗಿದ್ದರು. ಆ ಸಮಯದಲ್ಲಿ ಅರವಿಂದ ಲಿಂಬಾವಳಿಯವರು ಬೇಡಿಕೆಗಳನ್ನು ತಳ್ಳಿಹಾಕಿದ್ದಲ್ಲದೆ, 'ನಿಮಗೆ ಇಲ್ಲಿ ಬಾ ಎಂದು ಯಾರು ಹೇಳಿದರು' ಎಂದು ಬಾಯಿಗೆ ಬಂದಂತೆ ಬೈದರು, ಜಾತಿ ನಿಂದನೆ ಮಾಡಿದರು ಎಂದು ಆರೋಪಿಸಲಾಗಿದೆ. ಸಚಿವರ ನಿಂದನೆಯಿಂದ ಬೇಸತ್ತ ಈರಯ್ಯ ಎಂಬ ನೌಕರನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ ಎಂದು ತಿಳಿದುಬಂದಿದೆ.

ತಮ್ಮ ಬಗ್ಗೆ ಕಾಳಜಿಯಿಲ್ಲದ ಸಚಿವರ ವಿರದ್ಧ ರೊಚಿಗೆದ್ದ ಆರೋಗ್ಯ ಕವಚ ನೌಕರರು, ಜಾತಿ ನಿಂದನೆ ಮಾಡಿದ ಸಚಿವರು ಬುಧವಾರ ಸಂಜೆ 5ರೊಳಗೆ ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಆದರೆ, ನೌಕರರ ಈ ಬೇಡಿಕೆಗೆ ಸಚಿವರು ಕವಡೆಕಾಸಿನ ಕಿಮ್ಮತ್ತು ನೀಡಲಿಲ್ಲ, ಕ್ಷಮೆ ಕೇಳುವುದನ್ನು ಸಾರಾಸಗಟಾಗಿ ನಿರಾಕರಿಸಿದರು.

ಸಚಿವರ ನಡವಳಿಕೆಯಿಂದ ಬೇಸತ್ತ ಆರೋಗ್ಯ ಕವಚ ನೌಕರರ ಸಂಘ ಸಂಜೆಯಿಂದ ರಾಜ್ಯಾದ್ಯಂತ ಆಂಬುಲನ್ಸ್ ಸೇವೆಯನ್ನು ಸ್ಥಗಿತಗೊಳಿಸಿದೆ. 517 ಆಂಬುಲನ್ಸ್ ವಾಹನಗಳು ಇದ್ದಲ್ಲಿಯೇ ಇರಬೇಕು, ಯಾವುದೇ ಸೇವೆಯನ್ನು ನೀಡಬಾರದು ಎಂದು ನೌಕರರಿಗೆ ಆದೇಶ ನೀಡಿವೆ. ಆರೋಗ್ಯ ಕವಚ ನೌಕರರಿಗೆ ಸಚಿವರ ಮೇಲೆ ಸಿಟ್ಟಿರುವುದೇನೋ ಸರಿ, ಆದರೆ ಇವರ ಆಕ್ರೋಶದಿಂದಾಗಿ ಬಡರೋಗಿಗಳು ಏಕೆ ಸೇವೆಯಿಂದ ವಂಚಿತರಾಗಬೇಕು ಎಂದು ಸಾರ್ವಜನಿಕರು ಕೇಳುತ್ತಿರುವ ಪ್ರಶ್ನೆ.

ಕುಚೋದ್ಯ : ಆರೋಗ್ಯ ಕವಚ ನೌಕರರಿಂದ ತೀವ್ರ ಟೀಕೆಗೆ, ಅವರ ಆಕ್ರೋಶಕ್ಕೆ ಒಳಗಾಗಿರುವ ಅರವಿಂದ ಲಿಂಬಾವಳಿಯವರು, ಆರೋಗ್ಯ ನೀಡುವಲ್ಲಿ ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅವರು ಹೀಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವ ಸಂದರ್ಭದಲ್ಲಿಯೇ, ಅವರ ವಿರುದ್ಧ ಆರೋಗ್ಯ ಕವಚ ನೌಕರರು ಸಿಡಿದು ನಿಂತಿರುವುದು ವಿಡಂಬನೆಗೆ ಹಿಡಿದ ಕನ್ನಡಿಯಾಗಿದೆ.

ಜನ ಸಾಮಾನ್ಯರ ಆರೋಗ್ಯ ರಕ್ಷಣೆ, ಉತ್ತಮ ವೈದ್ಯಕೀಯ ಸೌಲಭ್ಯ ನೀಡಿಕೆಯಲ್ಲಿ ಕರ್ನಾಟಕವು ಇತರ ರಾಜ್ಯಗಳಿಗಿಂತ ಮುಂದಿದೆ. ವೈದ್ಯ ಶಿಕ್ಷಣ ಪಡೆದ ಯುವ ವೈದ್ಯರುಗಳು ದೇಶದಿಂದ ಹೊರಗೆ ವಲಸೆ ಹೋಗುವುದು ಆರೋಗ್ಯ ಕ್ಷೇತ್ರ ಎದುರಿಸುತ್ತಿರುವ ಪ್ರಮುಖ ಸಮಸ್ಯೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಅರವಿಂದ ಲಿಂಬಾವಳಿಯವರು ಕಾರ್ಯಾಗಾರವೊಂದರಲ್ಲಿ ಹೇಳಿದ್ದಾರೆ.

English summary
108 arogya kavach ambulance services has been stopped across Karnataka, after health minister Aravind Limbavali refused to tender apology for his remarks made against Arogya Kavach workers in Bagalkot. Due to fight between these two poor people are suffering. Who is to be blamed for this mess?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X