ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಟಾಪ್ 15 ಬ್ರಾಂಡ್ : ಅಮುಲ್ 1, ಕಿಂಗ್ ಫಿಷರ್ 2

By ಕೋವರ್ ಕೊಲ್ಲಿ ಇಂದ್ರೇಶ್
|
Google Oneindia Kannada News

Amul India
ಆಧುನಿಕ ಜಗತ್ತಿನಲ್ಲಿ ಕಂಪನಿಗಳ ಬ್ರಾಂಡ್ ಹೆಸರುಗಳು ಅವುಗಳ ಬೆಲೆಬಾಳುವ ಆಸ್ತಿಯಾಗಿದೆ. ಬ್ರಾಂಡ್ ನಿಂದಲೇ ಈ ಕಂಪೆನಿಗಳ ಕೋಟಿಗಟ್ಟಲೆ ರೂಪಾಯಿಗಳ ವಹಿವಾಟು ನಡೆಸುತ್ತಿವೆ. ಜಾಗತಿಕ ಪ್ರಮುಖ ಪತ್ರಿಕೆ ಕ್ಯಾಂಪೇನ್ ನಡೆಸಿದ ಸಮೀಕ್ಷೆಯಲ್ಲಿ ದೇಶದ ಅಮುಲ್ ಬ್ರಾಂಡ್ ನಂಬರ್ ಒನ್ ಸ್ಥಾನದಲ್ಲಿದ್ದು ಇತರ ಮುಂಚೂಣಿಯಲ್ಲಿರುವ ಕಂಪೆನಿಗಳ ಪಟ್ಟಿ ಇಂತಿದೆ.

1 ಅಮುಲ್ : ಜಾಗತಿಕ ಬ್ರಾಂಡ್ 1000 ದ ಪಟ್ಟಿಯಲ್ಲಿ ಅಮುಲ್ ಗೆ 89 ನೇ ಸ್ಥಾನ ನೀಡಿದ್ದು, ಇದು ಗುಜರಾತ್ ಕೋ ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್ ನ ಮಾಲೀಕತ್ವದ್ದಾಗಿದೆ. ವಿಶ್ವದ ಟಾಪ್ 100 ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ಕಂಪೆನಿಯೂ ಆಗಿದೆ. ಕಂಪೆನಿ ಕಳೆದ ವರ್ಷ 73 ನೇ ಸ್ಥಾನ ಪಡೆದಿತ್ತು.

ಸತತ ಮೂರನೇ ವರ್ಷ ಕಂಪೆನಿ ಟಾಪ್ 100 ಪಟ್ಟಿಯಲ್ಲಿದ್ದು ಇದರ 2011-12 ರ ಮಾರಾಟ 9774 ಕೋಟಿ ರೂಪಾಯಿಗಳಾಗಿವೆ. ಇದು ಉತ್ಪನ್ನಗಳನ್ನು ಯುಎಇ, ಅಮೆರಿಕಾ, ಬಾಂಗ್ಲಾದೇಶ, ಚೀನಾ, ಸಿಂಗಪುರ ಹಾಗೂ ಆಸ್ಟ್ರೇಲಿಯಾಕ್ಕೂ ರಫ್ತು ಮಾಡುತ್ತಿದೆ.

2. ಕಿಂಗ್ ಫಿಷರ್ ಏರ್ ಲೈನ್ಸ್ : ಕರ್ನಾಟಕ ಮೂಲದ ವಿಜಯ್ ಮಲ್ಯ ಮಾಲೀಕತ್ವದ ಕಿಂಗ್ ಫಿಷರ್ ಆರ್ಥಿಕ್ ಸಂಕಷ್ಟದ ನಡುವೆಯೂ ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದು ಜಾಗತಿಕವಾಗಿ 116 ನೇ ಸ್ಥಾನದಲ್ಲಿದೆ.

3. ಬಿಗ್ ಬಜಾರ್: 2001 ರಲ್ಲಿ ಕೋಲ್ಕತಾ, ಬೆಂಗಳೂರು, ಇಂದೋರ್ ಹಾಗೂ ಹೈದರಾಬಾದಿನಲ್ಲಿ ನಾಲ್ಕು ಮಳಿಗೆಗಳ ಮೂಲಕ ಪಾದಾರ್ಪಣೆ ಮಾಡಿದ ಬಿಗ್ ಬಜಾರ್ ದೇಶದ 80 ನಗರಗಳಲ್ಲಿ 148 ಮಳಿಗೆಗಳನ್ನು ತೆರೆದಿದೆ. ಇದು ಫ್ಯೂಚರ್ ಗ್ರೂಪ್ ನ ಮಾಲೀಕತ್ವದ್ದಾಗಿದ್ದು ಪಂಟಲೂನ್ ರೀಟೇಲ್ ಇಂಡಿಯಾದ ಸಹಯೋಗಿ ಕಂಪೆನಿಯೂ ಆಗಿದೆ.

4. ಐಸಿಐಸಿಐ ಬ್ಯಾಂಕ್ : ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಐಸಿಐಸಿಐ ಬ್ಯಾಂಕ್ ದೇಶದ ಎರಡನೇ ಅತೀ ದೊಡ್ಡ ಬ್ಯಾಂಕ್ ಆಗಿದ್ದು, ಕಳೆದ ಮಾರ್ಚ್ 31 ಕ್ಕೆ 4062 ಬಿಲಿಯನ್ ರೂಪಾಯಿಗಳ ಸ್ಥಿರಾಸ್ಥಿ ಹೊಂದಿದೆ. ಇದು 1994 ರಲ್ಲಿ ಸ್ಥಾಪಿತವಾಗಿದ್ದು ಇಂದು 2533 ಶಾಖೆಗಳೊಂದಿಗೆ ದೇಶದಲ್ಲಿ 6301 ಎಟಿಎಂಗಳನ್ನೂ ಹೊಂದಿದ್ದು 19 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.

5. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ : ದೇಶದ ಅತೀ ದೊಡ್ಡ ಬ್ಯಾಂಕ್ ಆಗಿರುವ ಎಸ್ ಬಿಐ ಮುಂಬೈನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ್ದು ದೇಶದ ಬ್ರಾಂಡ್ ಗಳಲ್ಲಿ 5 ನೇ ಹಾಗೂ ಜಾಗತಿಕ ಬ್ರಾಂಡ್ ಗಳಲ್ಲಿ 216 ನೇ ಸ್ಥಾನದಲ್ಲಿದೆ.

6. ಭಾರ್ತಿ ಏರ್ ಟೆಲ್ : 19 ದೇಶಗಳಲ್ಲಿ 2ಜಿ ಹಾಗೂ 3ಜಿ ಸೇವೆ ಒದಗಿಸುತ್ತಿರುವ ಭಾರ್ತಿ ಏರ್ ಟೆಲ್ ವಿಶ್ವದ 5 ನೇ ಅತೀ ದೊಡ್ಡ ಮೊಬೈಲ್ ಕಂಪೆನಿಯೂ ಆಗಿದೆ. ದೇಶದ ಅತಿ ದೊಡ್ಡ ಮೊಬೈಲ್ ಕಂಪೆನಿಯೂ ಆಗಿರುವ ಇದು 185 ಮಿಲಿಯನ್ ಗೂ ಅಧಿಕ ಚಂದಾದಾರರನ್ನು ಹೊಂದಿದೆ.

7. ಎಲ್‍ಐಸಿ : 1956 ರಲ್ಲಿ ಸ್ಥಾಪನೆಗೊಂಡ ಲೈಫ್ ಇನ್ಸೂರೆನ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಬ್ರಾಂಡ್ 7 ನೇ ಸ್ಥಾನದಲ್ಲಿದ್ದು ಜಾಗತಿಕ ಬ್ರಾಂಡ್ ಪಟ್ಟಿಯಲ್ಲಿ 252 ನೇ ಸ್ಥಾನ ಪಡೆದಿದೆ. 8 ಪ್ರಾದೇಶಿಕ ಕಚೇರಿ, 109 ವಿಭಾಗೀಯ ಕಚೇರಿ ಹಾಗೂ 992 ಶಾಖಾ ಕಚೇರಿಗಳನ್ನು ಹೊಂದಿರುವ ಇದು ದೇಶದ ವಿಮಾ ಮಾರುಕಟ್ಟೆಯಲ್ಲಿ ಸಿಂಹ ಪಾಲು ಹೊಂದಿದೆ.

8. ಕೆಫೆ ಕಾಫಿ ಡೇ : ದೇಶದ ಅತಿ ದೊಡ್ಡ ಕಾಫಿ ಚಿಲ್ಲರೆ ಮಾರಾಟ ಕಂಪೆನಿ ಅಮಾಲ್ಗಮೇಟೆಡ್ ಬೀನ್ ಕಾಫೀ ಯ ಅಂಗ ಕಂಪನಿಯಾಗಿರುವ ಇದು ಅಮೆರಿಕಾ, ಯೂರೋಪ್ ಹಾಗೂ ಜಪಾನ್ ನಲ್ಲೂ ಗ್ರಾಹಕರನ್ನು ಹೊಂದಿದೆ. 1996 ರಲ್ಲಿ ಮೊದಲು ಬೆಂಗಳೂರಿನಲ್ಲಿ ಮಳಿಗೆ ತೆರೆದ ಇದು ಇಂದು ದೇಶಾದ್ಯಂತ 1000 ಕ್ಕೂ ಅಧಿಕ ಮಳಿಗೆಗಳನ್ನು ಹೊಂದಿದ್ದು ಜಾಗತಿಕವಾಗಿ ಬ್ರಾಂಡ್ 264 ನೇ ಸ್ಥಾನದಲ್ಲಿದೆ.

9. ಟೈಟಾನ್ : ಜಾಗತಿಕವಾಗಿ 270 ನೇ ಸ್ಥಾನ ಪಡೆದಿರುವ ಟಾಟಾದ ಅಂಗ ಕಂಪೆನಿ ಟೈಟಾನ್ ಇಂಡಸ್ಟ್ರೀಸ್ ವಿಶ್ವದ 5 ನೇ ಅತೀ ದೊಡ್ಡ ಗಡಿಯಾರ ತಯಾರಿಕಾ ಕಂಪೆನಿಯೂ ಆಗಿದೆ. ಟೈಟಾನ್, ಸೊನಾಟ, ನೆಬ್ಯುಲಾ, ರಾಗ, ರೆಗಾಲಿಯ, ಆಕ್ಟೇನ್, ಹಾಗೂ ಕ್ಸೈಲಸ್ ಹೆಸರಿನಲ್ಲಿ ಇದು ಗಡಿಯಾರಗಳನ್ನು ಮಾರಾಟ ಮಾಡುತ್ತಿದೆ.

10. ಲ್ಯಾಕ್ಮೆ ಕಾಸ್ಮೆಟಿಕ್ಸ್ : ಟಾಟಾ ಸಮೂಹದ ಅಂಗ ಕಂಪೆನಿಯಾಗಿ (Tomco) ಆಗಿ ಬೆಳೆದ ಲ್ಯಾಕ್ಮೆ ಕಾಸ್ಮೆಟಿಕ್ಸ್ ಜಾಗತಿಕ ಬ್ರಾಂಡ್ ಪಟ್ಟಿಯಲ್ಲಿ 288 ನೇ ಸ್ಥಾನ ಪಡೆದಿದೆ. 1952 ರಲ್ಲಿ ಪ್ರಾರಂಭಗೊಂಡ ಕಂಪೆನಿ ಈಗ ಹಿಂದೂಸ್ತಾನ್ ಲಿವರ್ ಒಡೆತನಕ್ಕೆ ಸೇರಿದ್ದು ದೇಶಾದ್ಯಂತ ಸುಮಾರು 110ಕ್ಕೂ ಅಧಿಕ ಬ್ಯೂಟಿ ಸಲೂನ್ ಗಳನ್ನೂ ಹೊಂದಿದೆ.

11. ಎಚ್ ಡಿಎಫ್ ಸಿ ಬ್ಯಾಂಕ್ : 1994 ರಲ್ಲಿ ಸ್ಥಾಪಿತವಾದ ಈ ಬ್ಯಾಂಕ್ ಇಂದು ದೇಶದ 780 ನಗರಗಳಲ್ಲಿ 5000 ಕ್ಕೂ ಅಧಿಕ ಎಟಿಎಂಗಳು ಹಾಗೂ 1725 ಶಾಖೆಗಳನ್ನು ಹೊಂದಿದೆ. 2010-11 ರಲ್ಲಿ ಬ್ಯಾಂಕು 3926 ಕೋಟಿ ರೂಪಾಯಿಗಳ ಲಾಭ ಗಳಿಸಿತ್ತು. ಇದು ಜಾಗತಿಕ ಬ್ರಾಂಡ್ ಪಟ್ಟಿಯಲ್ಲಿ 290 ನೇ ಸ್ಥಾನದಲ್ಲಿದೆ.

12. ಅಪೋಲೋ ಫಾರ್ಮಸಿ : ಅಪೋಲೋ ಹಾಸ್ಪಿಟಲ್ಸ್ ನ ಅಂಗವಾಗಿರುವ ಅಪೋಲೋ ಫಾರ್ಮಸಿ ದೇಶಾದ್ಯಂತ 950 ಮಳಿಗೆಗಳನ್ನು ಹೊಂದಿದೆ. ಇದು ಜಾಗತಿಕ ಪಟ್ಟಿಯಲ್ಲಿ 304 ನೇ ಸ್ಥಾನದಲ್ಲಿದೆ.

13. ತಾಜ್ ಹೋಟೆಲ್ : ಟಾಟಾ ಸಮೂಹದ ತಾಜ್ ಹೋಟೆಲ್ ರೆಸಾರ್ಟ್ ಹಾಗೂ ಪ್ಯಾಲೇಸಸ್ ವಿಶ್ವಾದ್ಯಂತ ಸರಪಳಿ ಹೋಟೆಲ್ ಗಳನ್ನು ಹೊಂದಿದೆ.ಇದರ ಮೊದಲ ಹೋಟೆಲ್ 1903 ರಲ್ಲಿ ಮುಂಬೈನಲ್ಲಿ ಆರಂಭಗೊಂಡಿತು.

ಜೆಮಶೇಟ್ ಜಿ ನುಸ್ಸರವಾನ್ಜಿ ಟಾಟಾ ಅವರಿಗೆ ಬ್ರಿಟಿಷ್ ಮಾಲೀಕತ್ವದ ವಾಟ್ಸನ್ ಹೋಟೇಲಿನಲ್ಲಿ ಭಾರತೀಯರೆಂಬ ಏಕೈಕ ಕಾರಣಕ್ಕೆ ಪ್ರವೇಶ ನಿರಾಕರಿಸಿದರಿಂದಲೇ ಛಲದಿಂದ ಆರಂಭಿಸಲಾದ ಈ ಹೋಟೆಲ್ ಇಂದು 12 ದೇಶಗಳಲ್ಲಿ 76 ಹೋಟೆಲ್ ಗಳ ಮೂಲಕ ಕಾರ್ಯ ನಿರ್ವಹಿಸುತ್ತಿದೆ. ಇದು ಜಾಗತಿಕವಾಗಿ 336 ನೇ ಸ್ಥಾನದಲ್ಲಿದೆ.

14. ಕಿಸಾನ್ : ಯುಬಿ ಸಮೂಹದ ಮಾಲೀಕತ್ವದಲ್ಲಿದ್ದ ಕಿಸಾನ್ ಜಾಮ್, ಜೂಸ್ ಉತ್ಪನ್ನ ಗಳನ್ನು 1994 ರಲ್ಲಿ ಹಿಂದುಸ್ಥಾನ್ ಯುನಿಲಿವರ್ ಖರೀದಿಸಿತ್ತು. ಇದು ಜಾಗತಿಕವಾಗಿ 358 ನೇ ಸ್ಥಾನದಲ್ಲಿದೆ.

15. ಕೆಲ್ವಿನೇಟರ್ : ಗೃಹ ಬಳಕೆ ಉತ್ಪನ್ನಗಳಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಎಲೆಕ್ಟ್ರೊಲಕ್ಸ್ ಕೆಲ್ವಿನೇಟರ್ ನ ಶೇ 91.85 ರಷ್ಟು ಪಾಲನ್ನು ವೀಡಿಯೋಕಾನ್ 2005 ರಲ್ಲಿ ಖರೀದಿಸಿತು. ಇದು ಜಾಗತಿಕವಾಗಿ ಬ್ರಾಂಡ್ ನಲ್ಲಿ 360ನೇ ಸ್ಥಾನ ಪಡೆದಿದ್ದು ದೇಶದಲ್ಲಿ 15 ನೇ ಸ್ಥಾನದಲ್ಲಿದೆ.

English summary
Financial crisis hit Kingfisher Airlines also featured in the top 15 brands of India list. Amul India branded as top firm. List also has ICICI, big bazaar, Bharti Airtel, SBI,LIC, Cafe Coffee Day, HDFC bank, Taj hotel and Kisan Jam. Many TATA and Reliance brand missed from the list
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X