ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ ಡಿ ಬಾಲಕೃಷ್ಣ ಗೌಡ ವಿರುದ್ಧ ತನಿಖಾ ವರದಿ ಸಲ್ಲಿಕೆ

By Srinath
|
Google Oneindia Kannada News

hd-balakrishana-gowda-asset-case-lokayukta-charge-sheet
ಬೆಂಗಳೂರು, ಆಗಸ್ಟ್ 7: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಹಿರಿಯ ಪುತ್ರ ಎಚ್‌.ಡಿ. ಬಾಲಕೃಷ್ಣ ಗೌಡರು ಕೆಎಎಸ್‌ ಅಧಿಕಾರಿಯಾಗಿದ್ದಾಗ ತಮ್ಮ ಅಧಿಕಾರವಧಿಯಲ್ಲಿ 5.24 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ಮಂಗಳವಾರ ನ್ಯಾಯಾಲಯಕ್ಕೆ ಸಲ್ಲಿಸಿದ ಅಂತಿಮ ತನಿಖಾ ವರದಿಯಲ್ಲಿ ತಿಳಿಸಿದ್ದಾರೆ.

ಲೋಕಾಯುಕ್ತ ಡಿವೈಎಸ್‌ಪಿ ಪ್ರಸನ್ನರಾಜು ನೇತೃತ್ವದಲ್ಲಿ ನಡೆದ ಸುಮಾರು 10 ತಿಂಗಳ ತನಿಖೆಯ ನಂತರ ನೂರಾರು ಪುಟಗಳ ದಾಖಲೆಯೊಂದಿಗೆ ಸುಮಾರು 176 ಪುಟಗಳ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ವಿಚಾರಣೆಯನ್ನು ಆ. 10ಕ್ಕೆ ಮುಂದೂಡಲಾಗಿದೆ.

ಈ ವರದಿಯಲ್ಲಿ ಬಾಲಕೃಷ್ಣ ಗೌಡರು ಕೆಎಎಸ್‌ ಅಧಿಕಾರಿಯಾಗಿದ್ದ 1985ರಿಂದ 2005ರವರೆಗೆ ಗಳಿಸಿದ ಅಕ್ರಮ ಆಸ್ತಿ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದ್ದಾರೆ. ಬಾಲಕೃಷ್ಣ ಗೌಡರು ತಮ್ಮ ಸೇವಾವಧಿಯಲ್ಲಿ ಗಳಿಸಿದ ಒಟ್ಟು ಆಸ್ತಿಯ ಮೊತ್ತ 15.18 ಕೋಟಿ ರೂ. ಇದರಲ್ಲಿ 5.24 ಕೋಟಿ ರೂ. ಅಕ್ರಮ ಆಸ್ತಿಯಾಗಿದ್ದು, ಅವರ ಗಳಿಕೆಯ ಶೇ. 43ರಷ್ಟು ಆಸ್ತಿ ಅಕ್ರಮ ಮೂಲಗಳಿಂದ ಬಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದಲ್ಲದೆ, ಲೋಕಾಯುಕ್ತ ಪೊಲೀಸರು ಬಾಲಕೃಷ್ಣ ಗೌಡರು 1985ರಿಂದ 2012ರವರೆಗೆ ಹೊಂದಿರುವ ಆಸ್ತಿಗಳ ಬಗ್ಗೆಯೂ ತನಿಖೆ ನಡೆಸಲಾಗಿದೆ. ಇದರ ಪ್ರಕಾರ ಸ್ವಯಂ ನಿವೃತ್ತಿ ನಂತರವೂ ಬಾಲಕೃಷ್ಣ ಗೌಡರು ಸುಮಾರು 75 ಕೋಟಿ ರೂ. ಗಳಷ್ಟು ಆಸ್ತಿ ಗಳಿಸಿದ್ದಾರೆ ಎಂದು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದರು.

ಆದರೆ, ಬಾಲಕೃಷ್ಣ ಗೌಡರ ವಿರುದ್ಧ ಅವರು ಕೆಎಎಸ್‌ ಅಧಿಕಾರಿಯಾಗಿ ಸಂಪಾದಿಸಿದ್ದ ಅಕ್ರಮ ಆಸ್ತಿ ಬಗ್ಗೆ ಮಾತ್ರ ದೂರುದಾರರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ವಯಂ ನಿವೃತ್ತಿ ಬಳಿಕ ಅವರು ಗಳಿಸಿದ ಅಕ್ರಮ ಆಸ್ತಿ ಬಗ್ಗೆ ನ್ಯಾಯಾಲಯವೇ ಮುಂದಿನ ತೀರ್ಮಾನವನ್ನು ಕೈಗೊಳ್ಳುತ್ತದೆ ಎಂದು ನ್ಯಾಯಾಧೀಶ ಸುಧೀಂದ್ರ ರಾವ್‌ ಹೇಳಿದರು.

ಬಾಲಕೃಷ್ಣ ಗೌಡರು ಮತ್ತು ಅವರ ಕುಟುಂಬವು 2006-07ರಲ್ಲಿ ಅತಿ ಹೆಚ್ಚು ಆಸ್ತಿಗಳನ್ನು ಖರೀದಿ ಮಾಡಿದ್ದಾರೆ ಎಂಬುದನ್ನು ತನಿಖಾ ವರದಿ ಬಹಿರಂಗಪಡಿಸಿದೆ. ಈ ಅವಧಿಯಲ್ಲಿ ಬಾಲಕೃಷ್ಣ ಗೌಡರ ಪತ್ನಿ ಕವಿತಾ ಹೆಸರಿನಲ್ಲಿ ಸುಮಾರು 12ಕ್ಕೂ ಹೆಚ್ಚು ಆಸ್ತಿಗಳನ್ನು ಖರೀದಿ ಮಾಡಲಾಗಿದೆ.

ಅಲ್ಲದೆ, ಬಾಲಕೃಷ್ಣ ಗೌಡರು ಭೂ ಕಾಯ್ದೆಯನ್ನು ಉಲ್ಲಂಘಿಸಿ ಅಪಾರ ಪ್ರಮಾಣದ ಕೃಷಿ ಜಮೀನನ್ನು ಬೇನಾಮಿ ಹೆಸರಿನಲ್ಲಿ ಖರೀದಿಸಿದ್ದಾರೆ. ಹಾಗೆಯೇ ಅವರ ಸಂಬಂಧಿಕರ ಹೆಸರಿನಲ್ಲಿಯೂ ಕೋಟ್ಯಂತರ ಮೌಲ್ಯದ ಆಸ್ತಿ ಖರೀದಿಸಿದ್ದಾರೆ. ಅಂದರೆ, ಬಾಲಕೃಷ್ಣ ಗೌಡರ ಕುಟುಂಬವು ಶೇ. 80ರಷ್ಟು ಆಸ್ತಿಗಳನ್ನು ಈ ಎರಡು ವರ್ಷದಲ್ಲಿ ಖರೀದಿಸಿದ್ದಾರೆ ಎಂದು ವರದಿ ಹೇಳಿದೆ.

ಈ ನಡುವೆ ಬಾಲಕೃಷ್ಣ ಗೌಡರ ಹೆಸರಿನಲ್ಲಿರುವ ಹಲವು ಕಂಪನಿಗಳು, ವಿದ್ಯಾ ಸಂಸ್ಥೆಗಳ ವ್ಯವಹಾರಗಳ ಬಗ್ಗೆ ನ್ಯಾಯಾಧೀಶರು ತನಿಖಾಧಿಕಾರಿಗಳಲ್ಲಿ ಸ್ಪಷ್ಟನೆ ಕೇಳಿದರು. ಜ್ಞಾನ ಸ್ವೀಕಾರ ಸ್ಕೂಲ್‌, ಗದಗದ ವಿಂಡ್‌ ಮಿಲ್‌ ಸೇರಿದಂತೆ ಅನೇಕ ವಹಿವಾಟು ಕುರಿತಂತೆ ಅವರು ಹೊಂದಿರುವ ಕಂಪನಿ ಷೇರು, ತೆರಿಗೆ ಪಾವತಿ ಮತ್ತಿತರ ಅಂಶಗಳ ಬಗ್ಗೆ ನಿಖರ ಮಾಹಿತಿ ನೀಡುವಂತೆ ತನಿಖಾಧಿಕಾರಿಗಳಿಗೆ ನ್ಯಾ. ಸುಧೀಂದ್ರರಾವ್‌ ಸೂಚಿಸಿದರು.

ಬಾಲಕೃಷ್ಣ ಗೌಡರು ತಮ್ಮ ಅಧಿಕಾರವಧಿಯಲ್ಲಿ ಮತ್ತು ನಿವೃತ್ತಿ ಬಳಿಕ ಇಲ್ಲಿವರೆಗೆ ಗಳಿಸಿದ ಆಸ್ತಿಗಳ ವಿವರಗಳನ್ನು ಒಂದೇ ಕಡೆ ಕ್ರೋಢೀರಿಸಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿ ಪ್ರಕರಣದ ವಿಚಾರಣೆಯನ್ನು ಆ. 10ಕ್ಕೆ ಮುಂದೂಡಿದರು.

ಲೋಕಾಯುಕ್ತ ಪೊಲೀಸರು ಅಧೋಗತಿಗೆ: 'ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರರ ಕುಮ್ಮಕ್ಕಿನಿಂದ ಲೋಕಾಯುಕ್ತ ಪೊಲೀಸರು ನನ್ನ ವಿರುದ್ಧ ಆರೋಪಪಟ್ಟಿ ದಾಖಲಿಸಿದ್ದಾರೆ. ಇದು ರಾಜಕೀಯ ಪ್ರೇರಿತ. ಇದರಿಂದ ಲೋಕಾಯುಕ್ತ ಪೊಲೀಸರು ಎಷ್ಟು ಅಧೋಗತಿಗೆ ಇಳಿದ್ದಾರೆ ಎಂಬುದು ಗೊತ್ತಾಗುತ್ತದೆ. ಆದರೂ ನ್ಯಾಯಲಯದಲ್ಲೇ ಹೋರಾಡುವೆ' ಎಂದು ಎಚ್.ಡಿ. ಬಾಲಕೃಷ್ಣ ಗೌಡ ಅವರು ಪ್ರತಿಕ್ರಿಯಿಸಿದ್ದಾರೆ.

English summary
HD Balakrishana Gowda disappropriate assets case Lokayukta Police have filed charge sheet today (Aug 7).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X