ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಕೈಗೂ ಗನ್ ಕೊಡಿ: ರಾಜಧಾನಿ ಮಹಿಳೆಯರು

By Srinath
|
Google Oneindia Kannada News

new-delhi-women-seek-gun-licences-more
ನವದೆಹಲಿ, ಆ.4: ತಮ್ಮ ಮೇಲಿನ ನಿರಂತರ ಹಲ್ಲೆಗಳಿಂದ ಘಾಸಿಗೊಂಡಿರುವ ರಾಜಧಾನಿ ದೆಹಲಿ ಭಾಗದ ಮಹಿಳೆಯರು 'ನಮ್ಮ ಕೈಗೂ ಗನ್ ಕೊಡಿ. ನಮ್ಮನ್ನು ನಾವೇ ರಕ್ಷಿಸಿಕೊಳ್ಳುತ್ತೇವೆ' ಎಂದು ಗುಡುಗಿದ್ದಾರೆ. ಇದು ರಾಷ್ಟ್ರದ ರಾಜಧಾನಿಯಲ್ಲಿ ರಾಚುತ್ತಿರುವ ಕಾನೂನು ಸುವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

'ಯಾರದೋ ಕುಮ್ಮಕ್ಕಿನ ಮೇಲೆ ಮಹಿಳೆಯರು ಹೀಗೆ ಬೀದಿಗೆ ಬಂದು ಅಬ್ಬರಿಸುತ್ತಿರಬಹುದು, ಅಷ್ಟೇ. ಅಂಥಾದ್ದೇನೂ ಆಗಿಲ್ಲ' ಎಂದು ದೆಹಲಿ ಪೊಲೀಸರು ಸುಮ್ಮನೆ ಕುಳಿತುಕೊಳ್ಳುವ ಹಾಗಿಲ್ಲ.

ಏಕೆಂದರೆ ಅತ್ಯಾಚಾರ, ಲೈಂಗಿಕಿ ಕಿರುಕುಳಗಳ ರಾಜಧಾನಿಯಾದ ದೆಹಲಿ ಭಾಗದ ಪೊಲೀಸ್ ಠಾಣೆಗಳಲ್ಲಿ ಶಸ್ತ್ರಾಸ್ತ್ರ ಪರವಾನಿಗಿ ಕೋರಿ ಅರ್ಜಿ ಸಲ್ಲಿಸುವ ಮಹಿಳಾಮಣಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅಂದಹಾಗೆ ನಿಮ್ಮೂರಿನಲ್ಲಿ ಪರಿಸ್ಥಿತಿ ಹೇಗಿದೆ?

ಕಳೆದ 2 ವರ್ಷಗಳಲ್ಲಿ ದೆಹಲಿ ಪೊಲೀಸರಿಗೆ 900 ಮಹಿಳೆಯರು ಶಸ್ತ್ರಾಸ್ತ್ರ ಕೋರಿ ಅರ್ಜಿ ಸಲ್ಲಿಸಿದ್ದಾರೆ. 2010ರಲ್ಲಿ 320 ಅರ್ಜಿಗಳು ಬಂದಿದ್ದರೆ ಕಳೆದ ವರ್ಷ ಸುಮಾರು 500 ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಆತಂಕದ ವಿಷಯವೆಂದರೆ ಮಹಿಳೆಯರು ಹೀಗೆ ಶಸ್ತ್ರಾಸ್ತ್ರ ಕೋರಿ ಅರ್ಜಿ ಸಲ್ಲಿಸುವಾಗ ನೀಡುವ ಕಾರಣಗಳು ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ಏಕೆಂದರೆ ರಾಜಧಾನಿಯಲ್ಲಿ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆ ಬಗ್ಗೆ ಮಹಿಳೆಗಿರುವ ಆತಂಕ, ಅನುಮಾನಗಳನ್ನು ಇವು ಎತ್ತಿಹಿಡಿದಿವೆ.

ಹೀಗೆ 'ಸ್ವಯಂ-ರಕ್ಷಣೆಗಾಗಿ' ಶಸ್ತ್ರಾಸ್ತ್ರ ಕೇಳಿದ 33 ಮಹಿಳೆಯರೊಗೆ ಕಳೆದ ವರ್ಷ ಪರವಾನಿಗಿ ನೀಡಲಾಗಿದೆ. ಇನ್ನು ಈ ವರ್ಷ ಮೊನ್ನೆ ಜುಲೈವರೆಗೂ ಐದು ಮಹಿಳೆಯರಿಗೆ ಶಸ್ತ್ರಾಸ್ತ್ರ ಹೊಂದಲು ತಥಾಸ್ತು ಅನ್ನಲಾಗಿದೆ.

ಈ ಮಧ್ಯೆ, ಕಳೆದೆರಡು ವರ್ಷಗಳಲ್ಲಿ ಅರ್ಜಿ ಸಲ್ಲಿಸಿದ ಸುಮಾರು 600 ಮಹಿಳೆಯರಿಗೆ 'ಸುರಕ್ಷತೆಯ ಭಯ ಅಷ್ಟಾಗಿ ಇಲ್ಲದಿರುವುದರಿಂದ' ಅವರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಸ್ವತಃ ಗನ್ ಲೈಸೆನ್ಸ್ ಹೊಂದಿರುವ ರಾಜ್ಯಸಭಾ ಸದಸ್ಯೆ ರೇಣುಕಾ ಚೌಧರಿ ಅವರೂ ಮಹಿಳೆಯರಿಗೂ ಶಸ್ತ್ರಾಸ್ತ್ರ ಪರವಾನಿಗಿ ಬೇಕೇಬೇಕು ಎನ್ನುತ್ತಾರೆ.

ರಾತ್ರಿಯಾಗುತ್ತಿದ್ದಂತೆ ರಸ್ತೆ ಮೇಲೆ ಹೆಜ್ಜೆಯಿಡಲು ಭಯವಾಗುತ್ತದೆ. ನನಗೆ ಲೈಸೆನ್ಸ್ ಕೊಟ್ಟಾಕ್ಷಣ ನಾನೇನು ಶೂಟ್ ಮಾಡಿ ಸಾಯಿಸುತ್ತೇನೆ ಅಂತಲ್ಲ. ಆದರೆ ನನ್ನ ವ್ಯಾನಿಟಿ ಬ್ಯಾಗಿನಲ್ಲಿ ಗನ್ನೊಂದು ಭದ್ರವಾಗಿದೆ ಎಂಬುದು ನನ್ನ ಆತ್ಮವಿಶ್ವಾಸವನ್ನು, ಭದ್ರತೆಯ ಭಾವವನ್ನು ಹೆಚ್ಚಿಸುತ್ತದೆ. ಮಹಿಳೆಯರಿಗೆ ಇದೇ ಬೇಕಾಗಿರುವುದು ಎನ್ನುತ್ತಾರೆ ಲೈಸೆನ್ಸ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿರುವ ಮಹಿಳೆಯೊಬ್ಬರು.

ಆದರೂ ಮಹಿಳೆಯರಿಗೆ ಶಸ್ತ್ರಾಸ್ತ್ರ ಪರವಾನಿಗಿ ನೀಡಲು ಪೊಲೀಸರು ತುಂಬಾ ಸ್ಟ್ರಿಕ್ಟ್ ಆಗುತ್ತಾರೆ. ಇದು ಅನಗತ್ಯ. ಮೇಲಾಧಿಕಾರಿಗಳಿಂದ ಶಿಫಾರಸ್ಸು ಮಾಡಿಸಿ ಎಂದೂ ಪೊಲೀಸರು ಅಲವತ್ತುಕೊಳ್ಳುತ್ತಾರೆ. ಇದು ಬೇಸರ ತರಿಸುತ್ತದೆ ಎಂಬುದು ಬಹುತೇಕ ಮಹಿಳೆಯರ ಅಭಿಪ್ರಾಯ.

ಆದರೆ ಪೊಲೀಸರು ಹೇಳುವಂತೆ ಯಾವುದೇ ಮಹಿಳೆಗೆ ಗನ್ ಲೈಸೆನ್ಸ್ ನೀಡುವ ಮುನ್ನ ಈ ಮೂರು ಮುಖ್ಯಾಂಶಗಳನ್ನು ತುಲನೆ ಮಾಡಿ ನೋಡಲಾಗುತ್ತದೆ: ಅರ್ಜಿದಾರ ಮಹಿಳೆ ರಾತ್ರಿ ವೇಳೆ ಒಬ್ಬರೇ ಹೊರಗಡೆ ಸಂಚರಿಸುತ್ತಾರಾ? ಅವರನ್ನು ಯಾರಾದರೂ ಚುಡಾಯಿಸುವುದು/ ಅವರ ಮೇಲೆ ಹಲ್ಲೆ ನಡೆಯುವ ಸಾಧ್ಯತೆ ಇದೆಯೇ? ಅಪರಾಧ ಚಟುವಟಿಕೆ ಹೆಚ್ಚಾಗಿರುವ ತಾಣಗಳಿಗೆ ಆ ಮಹಿಳೆ ಭೇಟಿ ನೀಡುತ್ತಾರಾ? ಎಂಬ ಪ್ರಶ್ನೆಗಳಿಗೆ ಸಿಗುವ ಉತ್ತರವನ್ನು ಆಧರಿಸಿ, ಲೈಸೆನ್ಸ್ ಮಂಜೂರು ಮಾಡಲಾಗುತ್ತದೆ.

English summary
Off late, New Delhi women seek gun licences more. The trend is in response to the city's lawlessness. And also reflect the growing need of women to be in control, claim senior officers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X