ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಡ್ಮಿಂಟನ್ : ಕರಗಿ ಹೋದ ಸೈನಾ ಚಿನ್ನದ ಕನಸು

By Mahesh
|
Google Oneindia Kannada News

Saina Nehwal
ಲಂಡನ್, ಆ.3: ಲಂಡನ್ ಒಲಿಂಪಿಕ್ಸ್ 2012ರಲ್ಲಿ ಸೈನಾ ನೆಹ್ವಾಲ್ ಅವರು ಶುಕ್ರವಾರ(ಆ.3) ನಡೆದ ಮಹಿಳೆಯರ ಸಿಂಗಲ್ಸ್ ಸೆಮಿ ಫೈನಲ್ ನಲ್ಲಿ ಚೀನಾದ ಎದುರಾಳಿ ವಿರುದ್ಧ ಸೋಲುಂಡಿದ್ದಾರೆ. ಹೀಗಾಗಿ ಸೈನಾ ನೆಹ್ವಾಲ್ ಅವರ ಚಿನ್ನ ಅಥವಾ ಬೆಳ್ಳಿ ಪದಕದ ಕನಸು ಕಮರಿದೆ. ಶನಿವಾರ (ಆ.4)ಕಂಚಿನ ಪದಕಕ್ಕಾಗಿ ಕಾದಾಡಲಿದ್ದಾರೆ.

ಇದೇ ಪ್ರಪ್ರಥಮ ಬಾರಿಗೆ ಸೆಮಿಫೈನಲ್ಸ್ ಹಂತ ತಲುಪಿದ್ದ ವಿಶ್ವದ 5ನೇ ಶ್ರೇಯಾಂಕದ ಸೈನಾ ನೆಹ್ವಾಲ್ ಅವರು 21-13, 21-13 ಅಂತರದಲ್ಲಿ ವಿಶ್ವದ ನಂ.1 ಎದುರಾಳಿ ಚೀನಾದ ವಾಂಗ್ ಯಿಹಾನ್ ವಿರುದ್ಧ ಸೋಲು ಅನುಭವಿಸಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ಹಂತಕ್ಕೇರಿದ ಮೊದಲ ಭಾರತೀಯ ಬಾಡ್ಮಿಂಟನ್ ಆಟಗಾರ್ತಿ ಸೈನಾ ಅವರ ಪದಕದ ಕನಸು ಭಗ್ನಗೊಂಡಿದೆ.

22 ವರ್ಷದ ವಿಶ್ವದ 5ನೇ ಶ್ರೇಯಾಂಕಿತ ಸೈನಾ ಅವರು ವೆಂಬ್ಲಿ ಅರೀನಾದ ಕೋಟ್ ನಂ.1 ರಲ್ಲಿ ನಡೆದ ಸೆಮಿಫೈನಲ್ ನಲ್ಲಿ ಉತ್ತಮ ಆಟದ ನಡುವೆಯೂ ಚೀನಾದ ಪ್ರಬಲ ಎದುರಾಳಿ ಹೊಡೆತಕ್ಕೆ ತಕ್ಕ ಉತ್ತರ ನೀಡುವಲ್ಲಿ ವಿಫಲರಾದರು. ಲಂಡನ್ ಒಲಿಂಪಿಕ್ಸ್ 2012ರಲ್ಲಿ ಇದುವರೆವಿಗೂ ಒಂದು ಗೇಮ್ ಕೂಡಾ ಎದುರಾಳಿಗೆ ಬಿಟ್ಟು ಕೊಡದಿದ್ದ ಸೈನಾ ಸೆಮಿಫೈನಲ್ಸ್ ನಲ್ಲಿ ನೇರ ಸೆಟ್ ಗಳ ಅಂತರದಿಂದ ಸೋತಿರುವುದು ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ.

ಮೊದಲ ಗೇಮ್ ನಲ್ಲೇ ಮುಗ್ಗರಿಸಿದ ಸೈನಾಗೆ ಯಿಹಾನ್ ಭಾರಿ ಹೊಡೆತ ಕೊಟ್ಟರು. 13-6ರ ಮುನ್ನಡೆ ಪಡೆದ ಚೀನಾ ಆಟಗಾರ್ತಿ ಸುಲಭವಾಗಿ ಕೇವಲ 20 ನಿಮಿಷದಲ್ಲಿ ಮೊದಲ ಗೇಮ್ ಅನ್ನು 21-13ರಲ್ಲಿ ಗೆದ್ದರು.

ಎರಡನೇ ಗೇಮ್ ನಲ್ಲಿ ಹೋರಾಟದ ಮನೋಭಾವ ತೋರಿದ ಸೈನಾ 8-10ರಿಂದ ಹಿಂದೆ ಉಳಿದಿದ್ದರೂ ನಂತರ 11-10ರ ಮುನ್ನಡೆ ಪಡೆದರು. ಆದರೆ, ಸೈನಾ ಸರ್ವೀಸ್ ನಲ್ಲಿ ಅನಗತ್ಯ ತಪ್ಪುಗಳನ್ನು ಮಾಡುವ ಮೂಲಕ ಎದುರಾಳಿಗೆ ಸುಲಭವಾಗಿ ಅಂಕಗಳನ್ನು ನೀಡಿದರು. 24 ವರ್ಷದ ಚೀನಾ ಆಟಗಾರ್ತಿ 42 ನಿಮಿಷಗಳಲ್ಲಿ ಫೈನಲ್ ಗೇರುವ ಸೈನಾ ಆಸೆಗೆ ಭಂಗ ತಂದರು.

ವಿಶ್ವದ ಅಗ್ರ ಶ್ರೇಯಾಂಕಿತ ಯಿಹಾನ್ ವಿರುದ್ಧ ಇದುವರೆವಿಗೂ ಸೈನಾ ನೆಹ್ವಾಲ್ ಗೆದ್ದಿಲ್ಲ. 5 ಬಾರಿ ಪರಸ್ಪರ ಸಂಧಿಸಿದ್ದು, ಐದು ಬಾರಿ ಕೂಡಾ ಯಿಹಾನ್ ಗೆಲುವು ಸಾಧಿಸಿ ಹೂಂಕರಿಸಿದ್ದಾರೆ.

* ಮಲೇಶಿಯಾ ಓಪನ್ (14.1.2012) ಯಿಹಾನ್ ಗೆ ಗೆಲುವು 21-15, 21-16
* ಬಿಡಬ್ಲ್ಯೂ ಎಫ್ ವಿಶ್ವ ಸೂಪರ್ ಸೀರಿಸ್ (18.12.2011) ಯಿಹಾನ್ ಗೆ ಗೆಲುವು 18-21, 21-13, 21-13
* ಚೀನಾ ಮಾಸ್ಟರ್ಸ್ (16.9.2011) ಯಿಹಾನ್ ಗೆ ಗೆಲುವು 21-8, 21-12
* ಇಂಡೋನೇಶಿಯಾ ಓಪನ್ (26.06.2011) ಯಿಹಾನ್ ಗೆ ಗೆಲುವು 12-21, 23-21, 21-14
* ಥಾಮಸ್ ಉಬೇರ್ ಕಪ್ (12.5.2010) ಯಿಹಾನ್ ಗೆ ಗೆಲುವು 14-21, 21-11, 21-18

ಕಂಚು ಸಿಗಬಹುದೇ?: ಸೈನಾ ಕ್ವಾರ್ಟರ್ ಫೈನಲಿನಲ್ಲಿ ನೆದರ್ಲೆಂಡ್ ನ ಜಿ ಯೊ ವಿರುದ್ಧ 21-4, 21-16ರಿಂದ ಗೆಲುವು ಸಾಧಿಸಿದ್ದರು.ಡೆನ್ಮಾರ್ಕಿನ ಬಾನ್ (ವಿಶ್ವದ 7ನೇ ಶ್ರೇಯಾಂಕಿತ) ಅವರನ್ನು 21-15, 22-20 ಅಂತರದಲ್ಲಿ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರು. ಆದರೆ, ಚೀನಾದ ಪ್ರಬಲ ಎದುರಾಳಿ ಯಿಹಾನ್ ವಿರುದ್ಧ ನೇರ ಸೆಟ್ ಗಳಲ್ಲಿ 21-13, 21-13 ಅಂತರದಲ್ಲಿ ಸೋತಿದ್ದಾರೆ.

ಹೀಗಾಗಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಚೀನಾ ದೇಶದ ಎದುರಾಳಿ ವಿರುದ್ಧವೇ ಅಡಬೇಕಾಗಿದೆ. ಯಿಹಾನ್ ಫೈನಲ್ ಪ್ರವೇಶಿಸಿದ್ದರೆ, ಉಳಿದ ಸೆಮಿಫೈನಲ್ ನಲ್ಲೂ ಚೀನಾದ ಆಟಗಾರ್ತಿಯರಿದ್ದಾರೆ. ಶನಿವಾರ (ಆ .4) ಕ್ಸಿನ್ ವಿರುದ್ಧ ಸೈನಾ ಸೆಣಸಲಿದ್ದಾರೆ.

English summary
It was heartbreak for Saina Nehwal and Indian fans as she went down fighting to Wang Yihan in the semi-finals of London Olympics 2012. The world number one won 21-13, 21-13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X