ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಂ.1 ಡಿಸಿಎಂ ಯಾರು ಈಶ್ವರಪ್ಪನವ್ರಾ, ಅಶೋಕಾ?

|
Google Oneindia Kannada News

Who is number one DCM of Karnataka
ಬೆಂಗಳೂರು, ಜು 27: ರಾಜ್ಯದ ಇತಿಹಾಸದಲ್ಲಿ ಎರಡೆರಡು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿ ಶಿಸ್ತಿನ ಪಡೆಯ ಅಶಿಸ್ತನ್ನು ಬಿಜೆಪಿ ವರಿಷ್ಠರು ತಕ್ಕ ಮಟ್ಟಿಗೆ, ಸದ್ಯದ ಮಟ್ಟಿಗೆ ಶಮನಗೊಳಿಸಲು ಯಶಸ್ವಿಯಾಗಿದ್ದಾರೆ. ಈಗಿರುವ ಇಬ್ಬರು ಉಪಮುಖ್ಯಮಂತ್ರಿಗಳ ಪೈಕಿ ಯಾರಿಗೆ ನಂಬರ್ 1 ಪಟ್ಟ ನೀಡಬೇಕು?

ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಅಷ್ಟೊಂದು ಕುತೂಹಲವಿಲ್ಲದಿದ್ದರೂ ವಿರೋಧ ಪಕ್ಷದವರಿಗಂತೂ ಈ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಸದಾ ಆಡಳಿತ ಪಕ್ಷವನ್ನು ಮುಜುಗರಕ್ಕೆ ಈಡು ಮಾಡುವುದೇ ತಮ್ಮ ಏಕೈಕ ಜನ್ಮಸಿದ್ದ ಹಕ್ಕು ಎಂದಂತಿರುವ ಪ್ರತಿಪಕ್ಷಗಳಿಗೆ ಈ ವಿಷಯ ಈಗ ಬಾಡೂಟವಾಗಿ ಒಲಿದಿದೆ.

ಈಶ್ವರಪ್ಪ ಅವರನ್ನು ಉಪಮುಖ್ಯಮಂತ್ರಿ ಎಂದು ಕರೆಯುವುದೋ ಅಥವಾ ಅಶೋಕ್ ಅವರನ್ನು ಕರೆಯೋದೋ ಎನ್ನೋದೇ ಅವರಿಗೆ ಇರುವ ಸಂದೇಹ. ಅದೂ ಇಬ್ಬರೂ ಅಸೆಂಬ್ಲಿಯಲ್ಲಿ ಹಾಜರಾಗಿದ್ದಾಗ ಯಾರನ್ನು ಡಿಸಿಎಂ ಎಂದು ಕರೆಯುವುದು. ಒಬ್ಬರನ್ನು ಕರೆದರೆ ಇನ್ನೊಬ್ಬರಿಗೆ ನೋವಾಗಬಾರದು ಎನ್ನವುದು ಅವರ ಚಿಂತೆ.

ಈ ಚಿಂತೆಯನ್ನು ಮನಸಿನಲ್ಲಿ ಇಟ್ಟುಕೊಂಡು ವೃಥಾ ಕೊರಗುವುದಕ್ಕಿಂತ ಗೊಂದಲವನ್ನು ಪರಿಹರಿಸಿಕೊಳ್ಳೋಣ ಎಂದು ಜೆಡಿಎಸ್ ಪಕ್ಷದ ಬಸವರಾಜ್ ಹೊರಟ್ಟಿ ತನ್ನ ಮನದ ಗೊಂದಲವನ್ನು ಸಭಾಪತಿ ಬಳಿ ಹೇಳಿಯೇ ಬಿಟ್ಟರು. ಅಲ್ಲಾ ಸ್ವಾಮಿ, ನಾವು ಯಾರನ್ನು ಡಿಸಿಎಂ ಎಂದು ಕರೆಯೋಣ. ಇಬ್ಬರು ಡಿಸಿಎಂ ಹುದ್ದೆ ಸೃಷ್ಟಿಸಿರುವವರು ನಿಮ್ಮ ಪಕ್ಷದವರೇ, ನೀವೇ ಈಗ ನಮ್ಮ ರಕ್ಷಣೆಗೆ ಬಂದು ಗೊಂದಲ ಪರಿಹರಿಸಬೇಕೆಂದು ವ್ಯಂಗ್ಯ ಧಾಟಿಯಲ್ಲಿ ತಮ್ಮ ನೋವು ನಲಿವನ್ನು ತೋಡಿಕೊಂಡರು.

ಸದ್ಯ ಇಬ್ಬರು ಡಿಸಿಎಂಗಳ ಪೈಕಿ ಮಾನ್ಯ ಈಶ್ವರಪ್ಪನವರು ಮಾತ್ರ ಸದನದಲ್ಲಿದ್ದಾರೆ, ಒಂದು ವೇಳೆ ಅಶೋಕ್ ಕೂಡಾ ಸದನದಲ್ಲಿ ಇದ್ದಿದ್ದರೆ? ಇಬ್ಬರೂ ಸದನದಲ್ಲಿ ಇದ್ದರೆ ನಾವು ಯಾರನ್ನಾದರೂ ಒಬ್ಬರನ್ನು ಡಿಸಿಎಂ ಎಂದು ಕರೆದರೆ ಇನ್ನೊಬ್ಬರ ಮನಸಿಗೆ ನೋವಾಗುವುದಿಲ್ಲವೇ. ನಮಗ್ಯಾಕೆ ಬೇಕು ಸ್ವಾಮಿ ಆ ಪಾಪ ? ಎಷ್ಟಾದರೂ ನಮ್ಮದು ಸ್ಟೇಟ್ ಲೆವೆಲ್ ಪಕ್ಷ. ರಾಜ್ಯದ ಜನತೆಯ ಗೊಂದಲವನ್ನು ಬಗೆಹರಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಮಾತಿನ ಚಾಟಿ ಬೀಸಿದರು.

ಹೊರಟ್ಟಿ ಅವರ ಹೇಳಿಕೆಗೆ ನಗುನಗುತಾ ಉತ್ತರ ನೀಡಿದ ಸಚಿವ ಗೋವಿಂದ ಕಾರಿಜೋಳ, ರಾಜ್ಯದ ಜನತೆಗೆ ಈ ಬಗ್ಗೆ ಗೊಂದಲವಿಲ್ಲದಿದ್ದರೂ ನಿಮಗಿರುವುದು ಸಹಜ. ಅದು ನಿಮ್ಮ ತಪ್ಪಲ್ಲ ಎಷ್ಟಾದರೂ ನಿಮ್ಮದು ವಿರೋಧ ಪಕ್ಷವಲ್ಲವೇ? ಆದರೂ ನಿಮ್ಮ ಮನಸಿನ ಗೊಂದಲಕ್ಕೆ ಉತ್ತರ ನೀಡುವುದು ನಮ್ಮ ಧರ್ಮ.

ಈಶ್ವರಪ್ಪ ಅವರನ್ನು ಕಂದಾಯ ಡಿಸಿಎಂ ಎಂದು ಕರೆಯಿರಿ. ಅಶೋಕ್ ಅವರನ್ನು ಗೃಹ ಸಾರಿಗೆ ಡಿಸಿಎಂ ಎಂದು ಕರೆಯಿರಿ ಎನ್ನುವ ಜಾಣ್ಮೆಯ ಉತ್ತರ ನೀಡಿದರು. ಆಗ ಮಧ್ಯಪ್ರವೇಶಿಸಿದ ಜೆಡಿಎಸ್ ಪಕ್ಷದ ಇನ್ನೊಬ್ಬ ಹಿರಿಯ ನಾಯಕ ಎಂ ಸಿ ನಾಣಯ್ಯ, 'ಉಪಮುಖ್ಯಮಂತ್ರಿ ಸ್ಥಾನಕ್ಕೆ ಸಂವಿಧಾನದ ಮಾನ್ಯತೆ ಇಲ್ಲ. ನಿಮ್ಮ ರಾಜಕೀಯ ಅನುಕೂಲಕ್ಕಾಗಿ ಈ ಹುದ್ದೆ ಸೃಷ್ಟಿಸಲಾಗಿದೆ. ವಿಧಾನ ಪರಿಷತ್ತಿನ ವ್ಯವಹಾರಗಳಲ್ಲಿ ಆ ಪದ ಬಳಸಬಾರದೆಂದು ಆಗ್ರಹಿಸಿದರು.

ಎಲ್ಲಾ ವಾದವಿವಾದಗಳನ್ನು ತದೇಕಚಿತ್ತದಿಂದ ಆಲಿಸಿದ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಕ್ಲೈಮ್ಯಾಕ್ಸ್ ನಲ್ಲಿ ಮಾತನಾಡಿ, ಇದು ರಾಷ್ಟ್ರಮಟ್ಟದಲ್ಲಿ ಚರ್ಚೆ ನಡೆಸಬೇಕಾದ ವಿಚಾರ. ಬರೀ ಇಲ್ಲಿ ಚರ್ಚೆ ಮಾಡಿದರೆ ಸಾಲದು' ಎಂದು ಹೇಳಿಕೆ ನೀಡಿ ಚರ್ಚೆಗೆ ಮಂಗಳ ಹಾಡಿದರು.

English summary
An interesting debate in Upper House, who is number one Deputy Chief Minister either Eswarappa or Ashok. This question raised by JDS leader Basavaraj Horatti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X