ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಹಕಾರ ಸಾಲ ಮನ್ನಾ: ಸಚಿವ ಬಿಜೆಪಿ ಕಾಲ್ಗುಣ

By Srinath
|
Google Oneindia Kannada News

farm-loans-waived-off-what-is-yeddyurappa-strategy
ಬೆಂಗಳೂರು, ಜುಲೈ 25: ರಾಜ್ಯದಲ್ಲಿನ ಬರ ಪರಿಸ್ಥಿತಿ ಬಗ್ಗೆ ಮೊನ್ನೆ ಇನ್ನಿಲ್ಲದ ಕಾಳಜಿ ತೋರಿಸಿದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಕೀರ್ತಿಪತಾಕೆ ಈಗ ಜೋರಾಗಿ ಪಟಪಟಿಸಿದೆ. ಆದರೆ ಇದರ ಕೀರ್ತಿ ಬಿಜೆಪಿಗೆ ಸಲ್ಲಬೇಕೋ ಅಥವಾ ಬಿಜೆಪಿಗೆ ಸಲ್ಲಬೇಕೋ ಎಂಬುದು ನಾಡಿನ ಜನತೆಗೆ ತಿಳಿಯದಾಗಿದೆ.

ರಾಜ್ಯ ಭೀಕರ ಬರ ಕಂಡಿರುವ ವೇಳೆ ತಮ್ಮ ಅಸ್ತ್ರವನ್ನು ಭರ್ಜರಿಯಾಗಿಯೇ ಝಳಪಿಸಿದ ಸನ್ಮಾನ್ಯ ಯಡಿಯೂರಪ್ಪನವರು ನೇರವಾಗಿ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರಿಗೆ ಮರ್ಮಘಾತ ನೀಡಿದ್ದರೆ, ಖುದ್ದು ಪ್ರತಿಪಕ್ಷದ ನಾಯಕನನ್ನೇ ಬೆಚ್ಚಿಬೀಳಿಸಿದರು. ಜತೆಗೆ, ಬಿಜೆಪಿ ಪಕ್ಷದೊಳಗೇ ತಮ್ಮ ವಿರುದ್ಧ ಇರುವವರು ಯಾರು ಎಂಬುದನ್ನು ಗೊತ್ತು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಅಷ್ಟೇ ಅಲ್ಲ, ಸಿಎಂ ಜಗದೀಶ್ ಶೆಟ್ಟರ್ ಅವರ ಕಿವಿ ಹಿಂಡಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಮೂಲಕ ಪಕ್ಷದ ಮೇಲೆ ತಮ್ಮ ಹಿಡಿತ ಎಷ್ಟು ಬಲಿಷ್ಠವಾಗಿದೆ ಎಂಬುದುನ್ನೂ ಯಡಿಯೂರಪ್ಪ ರುಜುವಾತು ಪಡಿಸಿಕೊಂಡಿದ್ದಾರೆ.

ಕೀರ್ತಿ ಪಕ್ಷ ಬಿಜೆಪಿಗೋ ಅಥವಾ ಸಚಿವ ಬಿಜೆಪಿಗೆ ಸಲ್ಲಬೇಕೋ:
ಆದರೆ ಮೇಲೆ ಕೇಳಿದಂತೆ ಇದರ ಕೀರ್ತಿ ಬಿಜೆಪಿಗೆ ಸಲ್ಲಬೇಕೋ ಅಥವಾ ಬಿಜೆಪಿಗೆ ಸಲ್ಲಬೇಕೋ ಎಂಬುದು ತಿಳಿಯದಾಗಿದೆ. ಹಾಗೆ ನೋಡಿದರೆ ಯಡಿಯೂರಪ್ಪನವರು ಸದನದಲ್ಲಿ ತೋರಿದ ಶಿವತಾಂಡವಕ್ಕೆ ಅನೇಕ ಒಳಮರ್ಮಗಳಿವೆ. ಆದರೆ ಮುಖ್ಯವಾಗಿ ಯಡಿಯೂರಪ್ಪನವರು ಮಂಡಿಸಿದ್ದ ಒಂದು ಬರಗೆಟ್ಟ ಬೇಡಿಕೆ ಬಗ್ಗೆ ಇಲ್ಲಿ ವಿಶೇಷವಾಗಿ ಪ್ರಸ್ತಾಪಿಸಲೇಬೇಕಾಗಿದೆ.

ಯಡಿಯೂರಪ್ಪ ಮನವಿಗೆ ಸೊಪ್ಪುಹಾಕಿದ ಸಿಎಂ ಶೆಟ್ಟರ್, ಕೃಷಿ ಸಹಕಾರ ಸಂಘಗಳಿಂದ ರೈತರು ಪಡೆದಿರುವ ಬೆಳೆ ಸಾಲವನ್ನು ಬಡ್ಡಿ ಸಹಿತ ಮನ್ನಾ ಮಾಡಿದ್ದಾರೆ. ಈ ವಿಶೇಷ ಆರ್ಥಿಕ ನೆರವಿನಿಂದ 16 ಲಕ್ಷ ರೈತ ಕುಟುಂಬಗಳು ಪ್ರಯೋಜನ ಪಡೆಯಲಿವೆ. ಆದರೆ ಸರಕಾರದ ಬೊಕ್ಕಸಕ್ಕೆ 3,500 ಕೋಟಿ ರುಪಾಯಿ ಹೊರೆ ಬೀಳಲಿದೆ ಎಂದು ಅವರೇ ಹೇಳಿದ್ದಾರೆ.
ಇಲ್ಲಿ ಈ ಯೋಜನೆಯ ಫಲಾನುಭವಿ ರೈತರನ್ನು ಪಕ್ಕಕ್ಕಿಟ್ಟು ತುಸು ರಾಜಕೀಯ ಲೆಕ್ಕಾಚಾರ ಹಾಕಿದರೆ ಯಡಿಯೂರಪ್ಪನವರು ಹಾಗೆ ವಿಧಾನಸಭೆಯಲ್ಲಿ ಆರ್ಭಟಿಸಿದ್ದರ ಮರ್ಮ ಏನು ಎಂಬುದು ಅರ್ಥವಾಗುತ್ತದೆ.

ಸಚಿವ ಬಿಜೆ ಪುಟ್ಟಸ್ವಾಮಿ ಕಾಲ್ಗುಣ:
ಮೊಟ್ಟಮೊದಲನೆಯದಾಗಿ ಯೋಜನೆಯಿಂದ ಉಪಕೃತವಾಗಿರುವುದು ಕೃಷಿ ಸಹಕಾರ ಸಂಘಗಳು ಅಂದರೆ ಇದರ ಶ್ರೇಯಸ್ಸು ಸಹಕಾರ ಸಚಿವರಿಗೇ ಸಲ್ಲಬೇಕು. ಇನ್ನು ಯಾರಪ್ಪಾ ಆ ಸಹಕಾರ ಸಚಿವರು ಎಂದು ಸಂಪುಟ ಸದಸ್ಯರ ಪಟ್ಟಿ ಪರಿಶೀಲಿಸಿದಾಗ ಬಿಜೆ ಪುಟ್ಟಸ್ವಾಮಿ ಅವರ ಹೆಸರು ಲಕಲಕ ಹೊಳೆಯುತ್ತದೆ. ಅದಕ್ಕೇ ಹೇಳಿದ್ದು ಯಡಿಯೂರಪ್ಪ ಹಾರಿಸಿರುವ ಕೀರ್ತಿ ಪತಾಕೆಯು ಭಾರತೀಯ ಜನತಾ ಪಕ್ಷಕ್ಕಿಂತ (ಬಿಜೆಪಿ) ಬಿಜೆಪಿಗೆ (ಸಹಕಾರ ಸಚಿವ ಬಿಜೆ ಪುಟ್ಟಸ್ವಾಮಿ) ಸಲ್ಲುತ್ತದೆ ಎಂದು.

ಹೇಳಿ ಕೇಳಿ, ಬಿಜೆ ಪುಟ್ಟಸ್ವಾಮಿಯವರು ಯಡಿಯೂರಪ್ಪನವರ ಅತ್ಯಾಪ್ತರು. ಮತ್ತು ಒಂದಷ್ಟು ಬಂಡಾಯ ಶಾಸಕರು ಇವರ ಬಗ್ಗೆ ಭಾರಿ ತಕರಾರು ತೆಗೆದಿದ್ದರು. ಮೊನ್ನೆಮೊನ್ನೆಯಷ್ಟೇ ಮೇಲ್ಮನೆ ಸದಸ್ಯರಾದ ಈ ಬಿಜೆಪಿಗೆ ಯಡಿಯೂರಪ್ಪನವರು ಹಠಕ್ಕೆ ಬಿದ್ದು ಮಂತ್ರಿಗಿರಿ ಕರುಣಿಸಿದ್ದು ಬಂಡಾಯ ಧುರೀಣರಿಗೆ ಜೀರ್ಣಿಸಿಕೊಳ್ಳಲು ಆಗಿಲ್ಲ.

ಆದ್ದರಿಂದ ಸಚಿವ ಬಿಜೆಪಿಗೆ ಅಂಟಿದ್ದ ಕಳಂಕವನ್ನು ತೊರೆಯುವ ಒಳಮರ್ಮದೊಂದಿಗೆ ಯಡಿಯೂರಪ್ಪನವರು ಪ್ರಧಾನವಾಗಿ ಸಹಕಾರ ಸಂಘಗಗಳಿಗೆ ಭಾರಿ ಆರ್ಥಿಕ ನೆರವು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಸಚಿವ ಬಿಜೆಪಿ ಅವರು ಸಹಕಾರ ಇಲಾಖೆಗೆ ಅಧಿನಾಯಕರಾಗಿದ್ದೆ ತಡ ಇಲಾಖೆ ಈಗ ಉದ್ಧಾರವಾಗಿ ಹೋಗಿದೆ. ಎಲ್ಲವೂ 'ಸಚಿವ ಬಿಜೆಪಿಯ ಕಾಲ್ಗುಣ' ಎಂದು ರೈತಾಪಿ ಜನ ಈಗಾಗಲೇ ಮಾತನಾಡಿಕೊಳ್ಳುತ್ತಿದ್ದಾರೆ. ರೈತಾಪಿ ಜನಕ್ಕೆ ಇದರ ಹಿಂದಿನ ರಾಜಕೀಯ ಕಟ್ಟಿಕೊಂಡು ಏನಾಗಬೇಕು. 'ನಮ್ಮ ಆರ್ಥಿಕ ಸಂಕಷ್ಟಕ್ಕೆ ನೆರವಾಗಿದ್ದು ಸಚಿವ ಬಿಜೆಪಿ' ಎಂಬುದಷ್ಟೇ ಮನಸ್ಸಿನಲ್ಲಿ ಉಳಿದುಹೋಗುತ್ತದೆ. ಮತ್ತು ಸನ್ಮಾನ್ಯ ಯಡಿಯೂರಪ್ಪನವರಿಗೂ ಇದೇ ಬೇಕಾಗಿದ್ದು.

ಜಿಲ್ಲಾ ಸಹಕಾರಿ ಬ್ಯಾಂಕುಗಳಲ್ಲಿ ಆರ್ಥಿಕ ಅಕ್ರಮಗಳು:
ಹಾಗೆ ನೊಡಿದರೆ ಇತ್ತೀಚನ ದಿನಗಳಲ್ಲಿ ಜಿಲ್ಲಾ ಸಹಕಾರಿ ಬ್ಯಾಂಕುಗಳಲ್ಲಿ ಆರ್ಥಿಕ ಅಕ್ರಮಗಳು ಅವ್ಯಾಹತವಾಗಿ ನಡೆದಿವೆ. ಈ ಬ್ಯಾಂಕುಗಳು ನೂರಾರು ಕೋಟಿ ರುಪಾಯಿ ತಿಂದುತೇಗಿವೆ. ಕೆಲವು ಬ್ಯಾಂಕುಗಳು ಸೂಪರ್ ಸೀಡ್ ಆಗುವ ಹಂತಕ್ಕೂ ಬಂದು ನಿಂತಿವೆ. ಇದರ ಮರ್ಮ ಅರಿತಿರುವ ಯಡಿಯೂರಪ್ಪ ಮತ್ತು ನೂತನ ಸಹಕಾರ ಸಚಿವ ಬಿಜೆಪಿ ಅವರು ಒಂದೇ ಏಟಿಗೆ ಬ್ಯಾಂಕುಗಳಿಗೆ ಜೀವದಾನ ನೀಡಿದ್ದಾರೆ.

ಇನ್ನೂ ಮುಖ್ಯವಾದ ವಿಷಯವೆಂದರೆ ಈ ಅಕ್ರಮಗಳ ಬಗ್ಗೆ ಹಿಂದಿನ ಸಿಎಂ ಸದಾನಂದ ಗೌಡರು ಉಗ್ರ ಕಣ್ಬಿಟ್ಟಾಗ ಆಯಾ ಬ್ಯಾಂಕುಗಳ ಅಧ್ಯಕ್ಷರು ಒಳಗೊಳಗೇ ಸದಾನಂದರ ವಿರುದ್ಧ ಕತ್ತಿ ಮಸೆಯಲಾರಂಭಿಸಿದ್ದರು. ಇದೀಗ ಸದಾನಂದರೇ ಸ್ಥಾನ ಕಳೆದುಕೊಂಡು ಮೇಲೆ.... ಮತ್ತು ಸದಾನಂದರ ವಿರೋಧಿ ಯಡಿಯೂರಪ್ಪ ಪಟಾಲಂನ ಬಿಜೆಪಿ ಸಚಿವಾರಾದಾಗ ಸಹಕಾರ ಕ್ಷೇತ್ರದ ಈ ಧುರೀಣರು ಸುಮ್ಮನಿರುತ್ತಾರೆಯೇ? ಹಾಗಾಗಿ, ನಯವಾಗಿ ತಮ್ಮ ಕಾರ್ಯ ಸಾಧಿಸಿಕೊಂಡಿದ್ದಾರೆ. ಎಲ್ಲಿಗೆ ಬಂತು ನೋಡಿ, ನಮ್ಮೀ ಜನನಾಯಕರ ಸಾಮಾಜಿಕ ಕಾಳಜಿ!

English summary
Karnataka ex CM BS Yeddyurappa was able to get much needed relief for farmers through waiv off their loans. But What is BS Yeddyurappa's strategy?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X