ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿನೋಟಿಫಿಕೇಶನ್ ತೊಡಕು 'ಬಿಡಿಸಿಕೊಂಡ' ಸಿಎಂ ಶೆಟ್ಟರ್

By Srinath
|
Google Oneindia Kannada News

cm-jagadish-shettar-absolved-denotification-lokayukta
ಬೆಂಗಳೂರು, ಜುಲೈ 24: ಮುಖ್ಯಮಂತ್ರಿಯಾದ ದಿನದಂದೇ ಡಿನೋಟಿಫಿಕೇಶನ್ ಆರೋಪಕ್ಕೆ ಗುರಿಯಾಗಿದ್ದ ಜಗದೀಶ್‌ ಶೆಟ್ಟರ್‌ ಆರೋಪ ಮುಕ್ತರಾಗಿದ್ದಾರೆ. ಆರೋಪದ ಸಂಬಂಧ ಕೋರ್ಟಿಗೆ ಸೂಕ್ತ ದಾಖಲೆ ಒದಗಿಸಲು ದೂರುದಾರ ವಿಫ‌ಲವಾದ ಕಾರಣ ಶೆಟ್ಟರ್‌ ವಿರುದ್ಧದ ಖಾಸಗಿ ದೂರನ್ನು ವಜಾಗೊಳಿಸಲಾಗಿದೆ.

ಜತೆಗೆ, ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿದ ಕಾರಣವೊಡ್ಡಿ ಲೋಕಾಯುಕ್ತ ನ್ಯಾಯಾಲಯ ದೂರುದಾರ, ಬೆಂಗಳೂರಿನ ಪತ್ರಿಕೋದ್ಯಮ ವಿದ್ಯಾರ್ಥಿ ಎಸ್ ಎಂ ಚೇತನ್ ಎಂಬುವರಿಗೆ 10 ಸಾವಿರ ರೂ. ದಂಡವನ್ನು ವಿಧಿಸಿದ್ದು, ಆತನನ್ನು ತೀವ್ರವಾಗಿ ತರಾಟೆಗೂ ತೆಗೆದುಕೊಂಡಿದೆ.

2006ರಲ್ಲಿ ಕಂದಾಯ ಸಚಿವರಾಗಿದ್ದ ವೇಳೆ ಜಗದೀಶ್‌ ಶೆಟ್ಟರ್‌ ಅವರು, ದಾಸನಪುರದಲ್ಲಿ ಮೆಗಾ ಕೃಷಿ ಮಾರುಕಟ್ಟೆಗೆಂದು 188 ಎಕರೆ ಜಮೀನನ್ನು ಅಕ್ರಮ ಡಿನೋಟಿಫಿಕೇಷನ್‌ ಮಾಡಲು ಸೂಚನೆ ನೀಡಿದ್ದರು ಎಂದು ಚೇತನ್‌ ಎಂಬುವವರು ಖಾಸಗಿ ದೂರು ದಾಖಲಿಸಿದ್ದರು. ಈ ಬಗ್ಗೆ ಸೋಮವಾರ ವಿಚಾರಣೆ ನಡೆಸಿದ ನ್ಯಾಯಾಧೀಶ ಎನ್‌ಕೆ ಸುಧೀಂದ್ರರಾವ್‌ ಅರ್ಜಿ ವಜಾಗೊಳಿಸಿದರು.

ಒಂದು ಗಂಟೆ ಕಾಲ ತರಾಟೆಗೆ: ಇದೇ ವೇಳೆ, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚೇತನ್‌ನನ್ನು ತರಾಟೆ ತೆಗೆದುಕೊಂಡ ನ್ಯಾಯಾಧೀಶರು, 'ಅಖಿಲ ಭಾರತ ಕ್ರಿಯಾ ಸಮಿತಿ ಪರಿಷತ್‌ ಎಂಬ ಹೆಸರಿನ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿ, ಸುಳ್ಳು ಆರೋಪಗಳನ್ನು ಮಾಡುವುದು ಸರಿಯಲ್ಲ. ಮುಂದೆ ಇಂತಹ ಪ್ರಕರಣಗಳನ್ನು ನ್ಯಾಯಾಲಯಕ್ಕೆ ತರಬಾರದು. ಒಂದು ವೇಳೆ ಬಂದರೆ, ಕಾನೂನು ಕ್ರಮ ಎದುರಿಸಬೇಕಾಗುತ್ತದೆ' ಎಂದು ಎಚ್ಚರಿಸಿದರು.

'ಲೋಕಾಯುಕ್ತ ನ್ಯಾಯಾಲಯ ಎಂದರೆ ಏನೆಂದು ತಿಳಿದುಕೊಂಡಿದ್ದೀರಿ. ಯಾವುದೇ ಪ್ರಕರಣವನ್ನು ಬೇಕಾದರೂ ಇಲ್ಲಿಗೆ ತರಬಹುದು ಅಂದುಕೊಂಡಿದ್ದೀರಾ? ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಮುನ್ನ, ಅದರ ಗಾಂಭೀರ್ಯತೆ ಅರಿತಿರಬೇಕು. ಆಮೇಲಷ್ಟೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಬೇಕು' ಎಂದು ಝಾಡಿಸಿದರು.

ಇದೇ ವೇಳೆ, ದೂರು ದಾಖಲಿಸಿ ನ್ಯಾಯಾಲಯದ ಅನುಮತಿ ಇಲ್ಲದೆ, ಶುಕ್ರವಾರ ವಿಚಾರಣೆಗೆ ದೂರದಾರ ಗೈರು ಹಾಜರಾಗಿದ್ದ ಬಗ್ಗೆಯೂ ತರಾಟೆ ತೆಗೆದುಕೊಂಡರು. ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾದ ಚೇತನ್‌, ದೂರನ್ನು ಹಿಂಪಡೆಯುವ ಬಗ್ಗೆ ಅರ್ಜಿ ಸಲ್ಲಿಸಿದರು.

ಪ್ರಕರಣ ಹಿನ್ನೆಲೆ :
ಚೇತನ್ ಅವರ ದೂರಿನ ಪ್ರಕಾರ ಬೆಂಗಳೂರು ಉತ್ತರ ತಾಲೂಕು ದಾಸನಪುರ-ಯಶವಂತಪುರ ಹೋಬಳಿಗೆ ಸೇರಿದ ಒಟ್ಟು 356.36 1/2ಎಕರೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳಲು ದಿನಾಂಕ 20.03.2001ರಲ್ಲಿ 4(1) ಹಾಗು 6(1) ಕಲಂನ ಅಡಿಯಲ್ಲಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.

ಭೂಸ್ವಾಧೀನ ಕಾಯ್ದೆಯ ಅಡಿಯಲ್ಲಿ 356 ಎಕರೆ(188 ಎಕರೆ ಖಾಸಗಿ ಜಮೀನು) ಜಾಗವನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡಿತ್ತು. ಈ ಜಾಗದಲ್ಲಿ ಎಪಿಎಂಸಿ ಕಾಯಿದೆ ಪ್ರಕಾರ ರೈತರಿಗೆ ಮೆಗಾ ಮಾರುಕಟ್ಟೆ ನಿರ್ಮಿಸಲು ಉದ್ದೇಶಿಸಲಾಗಿತ್ತು. ಹೀಗೆ ವಶಪಡಿಸಿಕೊಂಡಿದ್ದ ಜಮೀನಿನಲ್ಲಿ 168.27 ಎಕರೆ ಸರ್ಕಾರಿ ಭೂಮಿಯಾದರೆ, ಉಳಿದ 188.9 1/2 ಎಕರೆ ಭೂಮಿ ಖಾಸಗಿಯವರದ್ದಾಗಿತ್ತು.

ಜೆಡಿ(ಎಸ್)-ಬಿಜೆಪಿ ಸರ್ಕಾರದಲ್ಲಿ ಕಂದಾಯ ಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್‌ ಅವರ ಸೂಚನೆ ಮೇರೆಗೆ ಕಂದಾಯ ಅಧಿಕಾರಿಗಳು ಸ್ವಾಧೀನ ಭೂಮಿಯನ್ನು ಕೈಬಿಡುವ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಇದಾದ ನಂತರ 04/03/2006ರಂದು ಸಚಿವ ಸಂಪುಟದ ಗಮನಕ್ಕೆ ತರದೆ 186.9 1/2 ಎಕರೆಯನ್ನು ಡಿನೋಟಿಫಿಕೇಶನ್ ಮಾಡುವ ಮೂಲಕ ಖಾಸಗಿಯವರಿಗೆ ಅನುಕೂಲ ಮಾಡಿಕೊಟ್ಟಿರುವ ಅರೋಪ ಹೊರೆಸಲಾಗಿತ್ತು.

ಅಲ್ಲದೆ ಸ್ವಾಧೀನಪಡಿಸಿಕೊಂಡ ಭೂಮಿಯ ಮೂಲ ಒಡೆಯರಿಗೆ ಪರಿಹಾರ ಧನ ಇನ್ನೂ ಸಿಕ್ಕಿಲ್ಲ. ಈ ಜಮೀನನ್ನು ಮೂಲ ಮಾಲೀಕರಿಗೆ ಕೊಟ್ಟಿದ್ದರೆ ನಮ್ಮ ಅಭ್ಯಂತರವಿರಲಿಲ್ಲ, ಅದು ಬಿಟ್ಟು ಖಾಸಗಿಯವರಿಗೆ ನೀಡಿರುವುದು ಸರಿಯಿಲ್ಲ. ಇಲ್ಲಿ ಅವ್ಯವಹಾರ ನಡೆದಿದೆ ಎಂದು ಅವರು ಆರೋಪಿಸಿದ್ದರು.

English summary
The Chief Minister Jagadish Shettar is absolved in land scam (denotification). A journalism student SM Chethan had given a complaint against Shettar for illegally denotifiing 188 acres of land belonging to APMC in Banaglore North Dasanapura.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X