ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೌನ ಮುರಿದ ಯಡಿಯೂರಪ್ಪ : ಸದನದಲ್ಲಿ ಕೋಲಾಹಲ

By Prasad
|
Google Oneindia Kannada News

Yeddyurappa breaks silence lambasts govt
ಬೆಂಗಳೂರು, ಜು. 23 : ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದೆ, ಅನ್ನದಾತ ಸಂಕಷ್ಟದಲ್ಲಿದ್ದಾನೆ, ಆತನ ಕಣ್ಣೀರೊರೆಸುವ ಕೆಲಸ ಸರಕಾರದಿಂದ ತ್ವರಿತವಾಗಿ ಆಗಬೇಕಿದೆ. ಇಲ್ಲದಿದ್ದರೆ, ನಾನು ಸೇರಿದಂತೆ ಯಾರೂ ಮುಂದಿನ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿ ಬರುವುದು ಕಷ್ಟಕರ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಗದ್ದುಗೆಗಾಗಿ ಬಿಜೆಪಿಯಲ್ಲಿಯೇ ಕಚ್ಚಾಟ ನಡೆದಾಗ ಹೈಕಮಾಂಡ್ ತಾಕೀತಿನಂತೆ ಒಂದು ತಿಂಗಳಿನಿಂದ ಬಾಯಿಮುಚ್ಚಿಕೊಂಡಿದ್ದ ಯಡಿಯೂರಪ್ಪ ಬಹುದಿನಗಳ ನಂತರ ತಮ್ಮ ವಾಗ್ಝರಿಯನ್ನು ಹರಿಯಬಿಟ್ಟಿದ್ದಾರೆ. ವಿರೋಧ ಪಕ್ಷದ ನಾಯಕರೂ ನಾಚಿಕೊಳ್ಳುವಂತೆ, ಬರ ಪರಿಹಾರ ಕಾಮಗಾರಿಗೆ ಸಂಬಂಧಿಸಿದಂತೆ ಆಡಳಿತ ಪಕ್ಷವನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಯಡಿಯೂರಪ್ಪ ಅವರ ಸ್ಫೋಟ ನುಡಿಗಳನ್ನು ಮೇಜು ತಟ್ಟಿ ವಿರೋಧ ಪಕ್ಷದವರು ಸ್ವಾಗತಿಸಿದರು.

ಬಿಜೆಪಿ ಸರಕಾರ 1 ಲಕ್ಷ ಕೋಟಿ ರು. ಬಜೆಟ್ ಮಂಡಿಸಿದೆ. ಅದರಲ್ಲಿ ಬರದ ಹೊಡೆತದಿಂದ ತತ್ತರಿಸಿರುವ ರೈತರಿಗಾಗಿ ಅನುದಾನವನ್ನು ಮೀಸಲಾಗಿಟ್ಟಿಲ್ಲವೆ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರ ವಿರುದ್ಧ ಕಿಡಿಕಾರಿದ ಅವರು, ರೈತರು ಸಹಕಾರ ಸಂಘದಲ್ಲಿ ಪಡೆದಿರುವ 2,300 ಕೋಟಿ ರು. ಸಾಲವನ್ನು ತಕ್ಷಣ ಮನ್ನಾಮಾಡಿ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು. ಇಲ್ಲದಿದ್ದರೆ, ಪ್ರತಿ ಮನೆಗೆ 5 ಸಾವಿರ ರು.ಯಂತೆ 30 ಲಕ್ಷ ರೈತರಿಗೆ ಸಹಾಯಧನ ನೀಡಬೇಕು ಎಂದು ಕಿವಿಮಾತು ಹೇಳಿದರು.

ಸಚಿವರು ವಿದೇಶ ಪ್ರವಾಸ ಕೈಗೊಳ್ಳಲು ಇದು ಸಕಾಲವಲ್ಲ. ವಿದೇಶ ಪ್ರವಾಸ ಕೈಬಿಟ್ಟು ರೈತರ ನೆರವಿಗೆ ನಾವು ಧಾವಿಸಬೇಕಿದೆ. ಮನೆಯಲ್ಲಿ ಯಾರಿಗಾದರೂ ಆರೋಗ್ಯ ಸರಿಯಿಲ್ಲದಾಗ ಯಾರೂ ಮನೆಬಿಟ್ಟು ಹೋಗುವುದಿಲ್ಲ. ಹಾಗೆಯೆ, ರೈತ ತುತ್ತು ಅನ್ನಕ್ಕಾಗಿ ಪರದಾಡುತ್ತಿರುವಾಗ ದೇಶ ಬಿಟ್ಟು ವಿದೇಶಕ್ಕೆ ಹೋಗುವುದು ತರವಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಆಲಸ್ಯತನದಿಂದ ತಮ್ಮ ಕ್ಷೇತ್ರಗಳಿಗೆ ತೆರಳುವ ಯತ್ನವನ್ನೇ ಮಾಡುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆ ಡಿಸೆಂಬರ್ ತಿಂಗಳಲ್ಲಿ ಬಂದರೂ ಬರಬಹುದು. ನಮಗೆ ಮತ್ತೊಂದು ಬಜೆಟ್ ಮಂಡಿಸಲು ಅವಕಾಶ ಸಿಗುತ್ತದೋ ಇಲ್ಲವೋ ಬಲ್ಲವರಾರು? ನಾವು ಈಗಲೆ ರೈತರ ನೆರವಿಗೆ ಹೋಗುವ ಸಂಕಲ್ಪ ಮಾಡಬೇಕು. ಸರಕಾರ ರೈತರ ಶಾಪಕ್ಕೆ ಗುರಿಯಾದರೆ ಮತ್ತೆ ಅಧಿಕಾರಕ್ಕೆ ಬರುವುದಿರಲಿ, ಮತ್ತೆ ಮೇಲೇಳುವುದು ಕಷ್ಟ. ಆದ್ದರಿಂದ ನಾವೆಲ್ಲ ಸೇರಿಕೊಂಡು ರೈತರ ನೆರವಿಗೆ ಧಾವಿಸಬೇಕು. ದನಕರುಗಳು ಕಸಾಯಿಖಾನೆಗೆ ಹೋಗುವುದನ್ನು ತಪ್ಪಿಸಬೇಕು ಎಂದು ಯಡಿಯೂರಪ್ಪ ಕಿವಿಮಾತು ಹೇಳಿದರು.

ನೆರವಿಗಾಗಿ ಕೇಂದ್ರದ ನೆರವನ್ನು ನಂಬಿಕೊಂಡು ಇರುವುದು ಬೇಡ. ನಮ್ಮಲ್ಲೇ ಉದಾರವಾಗಿ ದಾನ ಮಾಡಲು ಅನೇಕ ಉದ್ಯಮಿಗಳಿದ್ದಾರೆ. ಅವರಿಂದ 10 ಸಾವಿರ ಕೋಟಿ ರು. ಸಂಗ್ರಹ ಮಾಡಿ ರೈತರಿಗೆ ಹಂಚೋಣ. ನಾಳಿನ ಕಷ್ಟ ನಾಡಿದ್ದು ಇರುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಿಸೋಣ. ರೈತರ ಆತ್ಮವಿಶ್ವಾಸ ಹೆಚ್ಚಿಸೋಣ. ಇಲ್ಲದಿದ್ದರೆ, ರೈತರು ನೀಡುವ ಶಾಪ ನಮ್ಮನ್ನು ತಿಪ್ಪೆಗೆ ಎಸೆಯುತ್ತದೆ ಎಂಬುದನ್ನು ಮರೆಯಬಾರದು ಎಂದು ಅವರು ಜಗದೀಶ್ ಶೆಟ್ಟರ್ ಸರಕಾರದ ಕಿವಿ ಹಿಂಡಿದರು.

ಈಶ್ವರಪ್ಪ, ಸಿದ್ದು ಮಾತಿಗೆ ಮಾತು : ಬರ ಪರಿಸ್ಥಿತಿ ನಿರ್ವಹಣೆ ಕುರಿತು ಸದನದಲ್ಲಿ ಚರ್ಚೆ ನಡೆಯುತ್ತಿದ್ದಾಗ ಸರಕಾರವನ್ನೇ ಯಡಿಯೂರಪ್ಪ ತರಾಟೆಗೆ ತೆಗೆದುಕೊಳ್ಳುತ್ತಿದ್ದಾಗ, ಬೆಂಕಿಗೆ ತುಪ್ಪ ಸುರಿದಂತೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಟೀಕಿಸಲು ಪ್ರಾರಂಭಿಸಿದರು. ಆಗ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಮಾತಿನ ಚಕಮಕಿ ನಡೆಯಿತು.

ರೈತರ ನೆರವಿಗೆ ಸರಕಾರ ಧಾವಿಸಬೇಕೆಂದು ಹೇಳುತ್ತಿರುವ ಯಡಿಯೂರಪ್ಪ ಅವರು ಸರಕಾರವನ್ನು ಟೀಕಿಸುತ್ತಿಲ್ಲ, ರೈತರ ಬಳಿ ಹೋಗಬೇಕೆಂದು ಸಲಹೆ ನೀಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷ ನಮ್ಮ ನಡುವೆಯೇ ಬೆಂಕಿ ಹಚ್ಚಲು ಯತ್ನಿಸುತ್ತಿದ್ದು, ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಈಶ್ವರಪ್ಪ ಕಿಡಿಯಂತೆ ಚಟಪಡಿಸಿದರು.

ಇದಕ್ಕೆ ಪ್ರತಿಯಾಗಿ ಮಾತಿಗಿಳಿದ ಸಿದ್ದರಾಮಯ್ಯ, ಕಾಂಗ್ರೆಸ್ ಬೆಂಕಿ ಹಚ್ಚಲು ಯತ್ನಿಸುತ್ತಿಲ್ಲ. ಬೆಂಕಿ ಹಚ್ಚಲು ನಿಮ್ಮಲ್ಲಿಯೇ ಅನೇಕರು ಇದ್ದಾರೆ. ಅದು ರಾಷ್ಟ್ರಪತಿ ಚುನಾವಣೆಯ ಸಂದರ್ಭದಲ್ಲಿ ಬಯಲಾಗಿದೆ. ಯಡಿಯೂರಪ್ಪನವರೇ ನಿಮ್ಮೆಲ್ಲರನ್ನು ಎಕ್ಸ್‌ಪೋಸ್ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು. ರೈತರಿಗಾಗಿ ಉದ್ಯಮಿಗಳಿಂದ ಚಂದಾ ವಸೂಲಿ ಮಾಡಬೇಕು ಎಂದು ಯಡಿಯೂರಪ್ಪ ಹೇಳಿದಾಗ, ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿಗೆ ಎಷ್ಟು ಉದ್ಯಮಿಗಳ ಹೆಸರುಗಳು ಗೊತ್ತಿವೆ ಹೇಳಲಿ ನೋಡೋಣ ಎಂದು ಮತ್ತೆ ಕಿಚಾಯಿಸಿದರು.

English summary
Former chief minister of Karnataka BS Yeddyurappa has asked the Jagadish Shettar govt to rush to the aid of farmers have been suffering due to failure of monsoon. BSY warned that if they do not go to farmers, none of them may win in the next assembly election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X