ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೋಭಾಗೆ ಗೃಹ ಖಾತೆ, ಶೆಟ್ಟರ್ ಸಂಪುಟಕ್ಕೆ ಸರ್ಜರಿ?

By Mahesh
|
Google Oneindia Kannada News

Shobha to get Home Ministry
ಬೆಂಗಳೂರು. ಜು. 23: ವಿಧಾನಮಂಡಲ ಅಧಿವೇಶನ ಪೂರ್ಣಗೊಂಡ ನಂತರ ಆಗಸ್ಟ್ ಮೊದಲ ವಾರದಲ್ಲಿ ಜಗದೀಶ್ ಶೆಟ್ಟರ್ ಅವರ ಸಂಪುಟಕ್ಕೆ ಭಾರಿ ಸರ್ಜರಿಯಾಗುವ ಸುದ್ದಿ ದಟ್ಟವಾಗಿದೆ. ಶೆಟ್ಟರ್ ಅವರ ಸಂಪುಟದ ಪ್ರಮುಖ ಸಚಿವರ ಖಾತೆಗಳಲ್ಲಿ ಮಹತ್ತರ ಬದಲಾವಣೆಯಾಗುವ ನಿರೀಕ್ಷೆಯಿದೆ. ಸದ್ಯ ಹಬ್ಬಿರುವ ಸುದ್ದಿಯಂತೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಗೃಹ ಖಾತೆ ನೀಡಲು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮುಂದಾಗಿದ್ದಾರೆ.

ಉಪಮುಖ್ಯಮಂತ್ರಿ ಆರ್. ಅಶೋಕ್ ಅವರಿಂದ ಗೃಹ ಖಾತೆ ಕಸಿದುಕೊಂಡು ಅವರ ಮೇಲಿನ ಖಾತೆ ಹೊರೆ ಇಳಿಸುವ ಮಾತುಕತೆ ನಡೆದಿದೆ. ಸಂಪುಟದಲ್ಲಿರುವ ಏಕೈಕ ಮಹಿಳಾ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಸೂಕ್ತ ಸ್ಥಾನ ಮಾನ ನೀಡುವ ಬಗ್ಗೆ ಹೈ ಕಮಾಂಡ್ ಕೂಡಾ ಉತ್ಸುಕವಾಗಿದೆ. ಅಲ್ಲದೆ, ಪ್ರಮುಖ ಖಾತೆಗಳು ಯಡಿಯೂರಪ್ಪ ಬಣದ ಸಚಿವರ ಕೈಲಿ ಇರುವಂತೆ ನೋಡಿಕೊಳ್ಳುವುದು ಇದರ ಉದ್ದೇಶ ಎನ್ನಲಾಗಿದೆ.

ಕೆ.ಎಸ್.ಈಶ್ವರಪ್ಪ ಅವರ ಕಂದಾಯ ಖಾತೆ ಮುಂದುವರೆಯಲಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತೊಮ್ಮೆ ಶೆಟ್ಟರ್ ವಶಕ್ಕೆ ಬರಲಿದೆ.
ಶೋಭಾ ಕರಂದ್ಲಾಜೆ ಅವರನ್ನು ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿ ಮಾಡಲು ಪ್ರಯತ್ನ ಪಟ್ಟು ಸಾಧ್ಯವಾಗದೇ ಕೈ ಚೆಲ್ಲಿ ಕುಳಿತಿರುವ ಯಡಿಯೂರಪ್ಪ ಅವರ ಮನಸ್ಸಿಗೆ ಒಂದಿಷ್ಟು ಸಂತಸ ತರುವ ಉದ್ದೇಶದಿಂದ ಈ ಕಾರ್ಯಕ್ಕೆ ಶೆಟ್ಟರ್ ಮುಂದಾಗಿದ್ದಾರೆ.

ಹೋಮ್ ಕಳೆದುಕೊಂಡದ್ದಕ್ಕೆ ಹೋಂ ಮಿನಿಸ್ಟ್ರು ಯೋಗ : ಅನಿವಾರ್ಯವಾಗಿ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಸ್ಧಾನದಲ್ಲಿ ಕೂರಿಸಲಾಗಿದೆಯಾದರೂ ಯಡಿಯೂರಪ್ಪ ಅವರು ತಮ್ಮ ದಾಳವನ್ನು ಉದುರಿಸುತ್ತಿದ್ದಾರೆ. ಇದರ ಜತೆಗೆ ರೇಸ್ ಕೋರ್ಸ್ ರಸ್ತೆಯ ಬಂಗಲೆಯನ್ನು ಶೋಭಾ ಅವರಿಗೆ ದೊರಕಿಸಿಕೊಟ್ಟಿದ್ದು, ಅದನ್ನು ದಕ್ಕಿಸಿಕೊಳ್ಳಲು ಸಾಧ್ಯವಾಗದ ನೋವು ಯಡಿಯೂರಪ್ಪ ಅವರಲ್ಲಿ ಹೆಪ್ಪುಗಟ್ಟಿದೆ. ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಅತಿಕ್ರಮಣದ ಮೂಲಕ ಈ ಮನೆಯನ್ನು ತಮ್ಮ ವಶಕ್ಕೆ ಪಡೆದುಕೊಂಡರು.

ಶೋಭಾ ಕರಂದ್ಲಾಜೆ ಅವರನ್ನು ಸಮಾಧಾನಪಡಿಸಲು ಮುಂದಿನ ಖಾತೆಗಳ ಮರು ಹಂಚಿಕೆ ಸಂದರ್ಭದಲ್ಲಿ ಗೃಹ ಇಲಾಖೆಯನ್ನು ದೊರಕಿಸಿಕೊಡಬೇಕು. ಜತೆಗೆ ಗೃಹ ಇಲಾಖೆಯ ಜವಾಬ್ದಾರಿಯನ್ನು ರಾಜ್ಯದಲ್ಲಿ ಒಬ್ಬ ಮಹಿಳೆಗೆ ವಹಿಸಿದ ಖ್ಯಾತಿಗೂ ಪಾತ್ರರಾಗಬೇಕೆಂಬ ಉದ್ದೇಶ ಯಡಿಯೂರಪ್ಪ ಅವರದ್ದಾಗಿದೆ.

ಖಾತೆಗಳಲ್ಲಿ ಬದಲಾವಣೆಯಾಗಬೇಕೆಂದು ಮಾಜಿ ಮುಖ್ಯಮಂತ್ರಿ ಸದಾನಂದಗೌಡರ ಬಣ ಪಟ್ಟು ಹಿಡಿದಿದ್ದು, ಅಧಿವೇಶನ ಪೂರ್ಣಗೊಂಡ ನಂತರ ವರಿಷ್ಠರು ರಾಜ್ಯಕ್ಕೆ ಆಗಮಿಸಿ ಸರ್ವಸಮ್ಮತವಾಗುವ ರೀತಿಯಲ್ಲಿ ಸಮಸ್ಯೆ ಬಗೆಹರಿಸಲು ಉದ್ದೇಶಿಸಿದ್ದಾರೆ. ಈ ಸಂದರ್ಭವನ್ನು ನೋಡಿಕೊಂಡು, ಬಹುಕಾಲದಿಂದ ಗೃಹ ಖಾತೆಯ ಜವಾಬ್ದಾರಿ ಹೊಂದಿರುವ, ಹಾಗೂ ಕಷ್ಟ ಕಾಲದಲ್ಲಿ ದ್ವಿಮುಖ ಧೋರಣೆ ಅನುಸರಿಸಿದ ಅಶೋಕ್ ಅವರಿಂದ ಈ ಖಾತೆಯನ್ನು ಕಸಿಯಲು ಯಡಿಯೂರಪ್ಪ ಬಣ ಹೊಂಚು ಹಾಕಿ ಕಾಯುತ್ತಿದೆ.

ಈ ಮಧ್ಯೆ ಅಶೋಕ್ ಸಹ ಗೃಹ ಖಾತೆಯನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದು, ಅಧಿವೇಶನ ಮುಗಿದ ನಂತರ ಬಿಜೆಪಿಯಲ್ಲಿ ಖಾತೆಗಳಿಗಾಗಿ ಕ್ಯಾತೆ ತೀವ್ರಗೊಳ್ಳುವ ಸಾಧ್ಯತೆಯಿದೆ.

English summary
Jagadish Shettar Cabinet is likely to see a major reshuffle soon after the Legislative session concludes on August 3. A change of portfolios is likely to happen Shobha Karandlaje is set to get Home Ministry as sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X