ಹಾಲಿ ಸಚಿವರ ಪೈಕಿ ಜೈಲಿಗೆ ಹೋಗೋರ್ ಯಾರು, ಸ್ವಾಮಿ?

Posted By:
Subscribe to Oneindia Kannada
Lakshman Hoogar, TV9
ಬೆಂಗಳೂರು, ಜುಲೈ 13: 'ನಿಮ್ಗೆ ಸಚಿವ ಸ್ಥಾನ ಸಿಗಲಿಲ್ವಾ?' ಅಂತ ಕೇಳಿದರೆ 'ನೋ ಪ್ರಾಬ್ಲಂ. ಈಗಿರುವ ಸಚಿವರ ಪೈಕಿ ಯಾರಾದ್ರೂ ಜೈಲಿಗೆ ಹೋಗ್ತಾರೆ ಬಿಡಿ' ಎಂದು ಕ್ಯಾಮರಾ ಎದುರು ಮಾರ್ಮಿಕವಾಗಿ ನಗೆಯಾಡಿದ್ದಾರೆ ನಮ್ಮ ಶಾಸಕ ಮಹಾಶಯರೊಬ್ಬರು.

Height of hopes ಅಂದರೆ ಇದಪ್ಪಾ! TV9 ಹಿರಿಯ ವರದಿಗಾರ ಲಕ್ಷ್ಮಣ್ ಹೂಗಾರ್ ಅವರು 'ಏನಾದರೂ ಒಂದು news bite ಸಿಗುತ್ತಾ' ಎಂದು ಹೊಸ ಕಳೆ ಹೊತ್ತ ವಿಧಾನಸೌಧದ ಕಾರಿಡಾರಿನಲ್ಲಿ ಶುಕ್ರವಾರ ಅಡ್ಡಾಡುತ್ತಿದ್ದರು. ಸರಿಯಾಗಿ ಅದೇ ವೇಳೆಗೆ ...

ಅವರಿಗೆ ಎದುರಿಗೆ ಸಿಕ್ಕವರು ಮೂಡಿಗೆರೆಯ ಜನಪ್ರತಿನಿಧಿ ಯಾನೆ ಶಾಸಕ, ಅರ್ಥಾತ್ ಸಚಿವ ಸ್ಥಾನ ವಂಚಿತ ಎಂಪಿ ಕುಮಾರಸ್ವಾಮಿ. 'ಏನ್ಸಾರ್ ಸಮಾಚಾರ? ಪಾಪ! ನಿಮ್ಗೆ ಮಿನಿಸ್ಟರ್ ಆಗೋ ಯೋಗಾ ಇಲ್ವಂತೆ' ಅಂತ ಕುಮಾರಸ್ವಾಮಿಯ ಕಾಲೆಳೆಯಲು ಹೂಗಾರ್ ಯತ್ನಿಸಿದ್ದಾರೆ.

ಅದೆಲ್ಲಿತ್ತೋ ನಮ್ಮ ಶಾಸಕ ಮಹಾಶಯನಿಗೆ ಆ ಪಾಟಿ ಹಾಸ್ಯಪ್ರಜ್ಞೆ ಅಥವಾ ಅಭಾವ ವೈರಾಗ್ಯವೋ!? ಅಂತೂ 32 ಹಲ್ಲೂ ತೋರಿಸಿ ನಗಾಡಿದ್ದಾರೆ. ಮಧ್ಯೆ ಅರ್ಥಗರ್ಭಿತರಾಗಿ 'ನೋ ಪ್ರಾಬ್ಲಂ. ಯಾರಾದರೂ ಜೈಲಿಗೆ ಹೋಗ್ತಾರೆ ಬಿಡಿ. ಆಗ ಸಚಿವ ಸ್ಥಾನ ಖಾಲಿಯಾಗುತ್ತೆ. ನಾನು ಭರ್ತಿಯಾಗ್ತೇನೆ' ಎಂದು ಆಶಾಭಾವದ ಪರಮಾವಧಿಯನ್ನು ಪ್ರದರ್ಶಿಸಿದ್ದಾರೆ. 'ಧನ್ಯನಾದೆ' ಎಂದು ಹೂಗಾರರೂ ನಗಾಡಿದ್ದಾರೆ.

ನಿಜಕ್ಕೂ ನಮ್ಮ ಕುಮಾರಣ್ಣನದು High Hopes. ಆದರೆ ಇದು ಆಡಳಿತಾರೂಢ ಬಿಜೆಪಿ ಮಂದಿಯ ಕಿವಿಗೆ ಬಿತ್ತಾ? ಅದಕ್ಕಿಂತ ಹೆಚ್ಚಿಗೆ, ನಿನ್ನೆಯಷ್ಟೇ ಸಚಿವರಾಗಿ ಕಾಣದ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಯಾವುದಾದರೂ ಸಚಿವರ ಕಿವಿಗೆ ಬಿತ್ತಾ? ಅವರ ಪ್ರತಿಕ್ರಿಯೆ ಏನು? ಎಂಬುದಕ್ಕೆ ಆಗಾಗ TV9 ವೀಕ್ಷಿಸುತ್ತಿರಿ. ನಾವಂತೂ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು 'ನೆಕ್ಸ್ಟ್, ಜೈಲಿಗೆ ಹೋಗುವ ಪುಣ್ಮಾತ್ಮ ಯಾರಪ್ಪಾ' ಅಂತ ಕಾದುನೋಡುತ್ತಿರುತ್ತೇವೆ.

ರಾಜ್ಯಪಾಲ ಭಾರದ್ವಾಜರದೂ Height of hopes ...
ಈ ಮಧ್ಯೆ ರಾಜ್ಯಪಾಲ ಭಾರದ್ವಾಜ್ ಅವರು ನಮ್ಮೀ ಕುಮಾರಸ್ವಾಮಿ ವಿಶ್ವಾಸಕ್ಕೆ ಮತ್ತಷ್ಟು ಶಕ್ತಿ ತುಂಬಿದ್ದಾರೆ: ಹೊಸ ಬಿಜೆಪಿ ಮಂತ್ರಿ ಮಂಡಲದಲ್ಲಿ ಅನೇಕ 'ಕಳಂಕಿತ- ಅಪರಾಧಿ' ಸಚಿವರಿದ್ದಾರೆ ಎಂದು ಷರಾ ಬರೆದಿದ್ದಾರೆ. 'ಕೋರ್ಟ್ ಕೇಸುಗಳನ್ನು ಎದುರಿಸುತ್ತಿರುವವರ ಹೆಸರುಗಳನ್ನು ಕೈಬಿಡುವಂತೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರಿಗೇ ಸಲಹೆ ನೀಡಿದ್ದೆ. ಆದರೆ ಸ್ವತಃ ಅವರ ವಿರುದ್ಧವೇ ಈಗ ಕೇಸೊಂದು ಇದೆಯಲ್ಲಾ' ಎಂದು ಭಾರದ್ವಾಜರು ನಗೆಯಾಡಿದರಂತೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka BJP crisis: As Mudigere BJP MLA MP Kumaraswamy waits the mute question is who will go jail in the present Jagadish Shettar cabinet?
Please Wait while comments are loading...