ಶಾಸಕ ಸ್ಥಾನಕ್ಕೆ ಹಾಲಾಡಿ ಶ್ರೀನಿವಾಸ ಶೆಟ್ಟಿ ರಾಜೀನಾಮೆ

Posted By:
Subscribe to Oneindia Kannada
Halad
ಕುಂದಾಪುರ, ಜು.13: ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿ ವಂಚನೆ ಮಾಡಿರುವ ಬಿಜೆಪಿ ವಿರುದ್ಧ ಕರೆದಿದ್ದ ಕುಂದಾಪುರ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಶುಕ್ರವಾರ ಬೆಳಗ್ಗಿನಿಂದಲೇ ಶಾಲಾ ಕಾಲೇಜು, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.

ಇದೀಗ ಬಂದ ಸುದ್ದಿ: ಸಚಿವ ಸ್ಥಾನ ವಂಚಿತ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಸ್ಪೀಕರ್ ಬೋಪಯ್ಯ ಅವರ ಕಚೇರಿಗೆ ಮಧ್ಯಾಹ್ನ 3.15ರ ಹ್ಹೊತ್ತಿಗೆ ತೆರಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸ್ಪೀಕರ್ ಕಚೇರಿ ಕಾರ್ಯದರ್ಶಿ ಓಂಪ್ರಕಾಶ್ ಅವರು ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಹಾಲಾಡಿ ಶೆಟ್ಟಿ ಅವರು ಸ್ಪರ್ಧಿಸುವ ಸಾಧ್ಯತೆಯಿದೆ.

ಹಲವು ಸಂಘಟನೆಗಳ ಜೊತೆಗೆ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಪ್ರತಿಭಟನೆಗೆ ಇಳಿದಿದ್ದಾರೆ. ಈ ನಡುವೆ ಸಚಿವ ಸ್ಥಾನ ವಂಚಿತರಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಅಚಲ, ಚಂಚಲವಲ್ಲ ಎಂದು ಸ್ಪಷ್ಟಪಡಿಸಿದ್ದರು.

'ಯಾವುದೇ ಕಾರಣಕ್ಕೂ ರಾಜೀಯಾಗುವುದಿಲ್ಲ. ರಾಜೀನಾಮೆ ನೀಡುವುದು ಖಚಿತ. ಈ ಬಗ್ಗೆ ನಮ್ಮ ಸ್ಪೀಕರ್ ಕೆಜೆ ಬೋಪಯ್ಯ ಅವರೊಟ್ಟಿಗೆ ಮಾತನಾಡಿದ್ದೇನೆ. ಪ್ರಸ್ತುತ ಅವರು ಖಾಸಗಿ ಕಾರ್ಯಕ್ರಮದ ನಿಮಿತ್ತ ಮಡಿಕೇರಿಯಲ್ಲಿದ್ದಾರೆ. ನಾನು ಮಡಿಕೇರಿಗೆ ಬಂದು ರಾಜೀನಾಮೆ ಪತ್ರ ಕೊಡುತ್ತೇನೆ ಎಂದೆ. ಅದಕ್ಕೆ ಅವರು ನಾಲ್ಕೈದು ದಿನ ಕಾಯುವಂತೆ ಹೇಳಿದರು. ನಾನು ಸಂಧಾನಗಳಿಗೆ ಬಗ್ಗುವುದಿಲ್ಲ. ನನ್ನ ನಿರ್ಧಾರ ಅಚಲವಾಗಿದ್ದು, ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ಪತ್ರ ನೀಡುತ್ತೇನೆ' ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಹೇಳಿದರು.

ಕುಂದಾಪುರ ಕ್ಷೇತ್ರದ ಅಭಿವೃದ್ಧಿಗೆ ದುಡಿದ, ಜನರ ಕಷ್ಟ-ಸುಖಗಳಿಗೆ ಸದಾ ಸ್ಪಂದಿಸುವ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡುತ್ತೇನೆ ಎಂದು ಅವಮಾನಿಸಿದ ಪಕ್ಷದ ನಾಯಕರ ತೀರ್ಮಾನವನ್ನು ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಮುತ್ತಪ್ಪ ರೈ ಅವರು ಖಂಡಿಸಿದ್ದಾರೆ. ನಮ್ಮ ಬಂಟರ ನಾಯಕ ಹಾಲಾಡಿ ಶೆಟ್ಟರಿಗೆ ಇಡೀ ಜಿಲ್ಲೆಯಲ್ಲಿ ಒಳ್ಳೆ ಹೆಸರುಂಟು. ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ಅವಮಾನ ಮಾಡಿ ಕಳಿಸಿದ್ದಾರೆ. ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಬಂಟ ಸಮುದಾಯ ಹಾಲಾಡಿ ಶೆಟ್ಟರ ಬೆನ್ನ ಹಿಂದಿದೆ. ಅವರ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಹಾಗೂ ಅವರ ನಿರ್ಣಯವನ್ನು ಪ್ರೋತ್ಸಾಹಿಸುತ್ತೇವೆ ಎಂದರು.

ಬಿಜೆಪಿ ಬಾವುಟಕ್ಕೆ ಬೆಂಕಿ: ಶ್ರೀನಿವಾಸ ಶೆಟ್ಟಿ ಅವರ ತವರೂರಾದ ಹಾಲಾಡಿ, ಕುಂದಾಪುರ ನಗರ, ಬಿದ್ಕಲ್‌ಕಟ್ಟೆ, ನೇರಳಕಟ್ಟೆ, ಮಾವಿನಕಟ್ಟೆ, ಹಾಗೂ ಗುಲ್ವಾಡಿ ಮುಂತಾದೆಡೆ ಪ್ರತಿಭಟನಾ ಮೆರವಣಿಗೆಗಳು ನಡೆದಿದೆ. ರಸ್ತೆಯಲ್ಲಿ ಟಯರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸಂದರ್ಭದಲ್ಲಿ ಬಿಜೆಪಿ ಬಾವುಟಕ್ಕೂ ಬೆಂಕಿ ಇಡಲಾಯಿತು. ಕುಂದಾಪುರದ ನಂತರ ಬಂದ್ ಬಿಸಿ ಇತರ ತಾಲೂಕುಗಳಿಗೂ ಹಬ್ಬುತ್ತಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಹಾಲಾಡಿ ಶೆಟ್ಟಿ ಅವರಿಗೆ ಸಚಿವ ಸ್ಥಾನ ತಪ್ಪಿಸಿರುವುದರ ಹಿಂದೆ ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಕೆಲ ಆರೆಸ್ಸೆಸ್ ನಾಯಕ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ ಎಂದು ಆಕ್ರೋಶಿತ ಬೆಂಬಲಿಗರು ಕೂಗಾಡುತ್ತಿದ್ದರು.

ಉಡುಪಿ ಕ್ಷೇತ್ರದ ಶಾಸಕ ರಘುಪತಿಭಟ್, ಸಚಿವ ಸಂಪುಟ ವಿಸ್ತರಣೆ ವೇಳೆ ಮೋಸದ ರಾಜಕೀಯ ಮಾಡಲಾಗಿದೆ. ಹಾಲಾಡಿ ಶ್ರೀನಿವಾಸಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಹೇಳಿ ವಂಚನೆ ಮಾಡಲಾಗಿದೆ. ಹೀಗಾಗಿ ನಾವು ಶಾಸಕರಾಗಿ ಮುಂದುವರೆಯುವುದರಲ್ಲಿ ಅರ್ಥವಿಲ್ಲ. ಈ ಕೂಡಲೇ ನಾವಿಬ್ಬರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇವೆ ಎಂದು ಘೋಷಿಸಿದರು.

ಹಾಲಾಡಿ ಶ್ರೀನಿವಾಸಶೆಟ್ಟಿ ಅವರಿಗೆ ಸಚಿವ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಬೇಸತ್ತಿರುವ ಮಾಜಿ ಸಚಿವ ಬಿ.ನಾಗರಾಜಶೆಟ್ಟಿ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ತಮ್ಮ ನಾಯಕನಿಗೆ ಸಚಿವ ಸ್ಥಾನ ಸಿಗದಿರುವ ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ಸರ್ಕಾರದ ಧೋರಣೆ ಖಂಡಿಸಿದ ಕುಂದಾಪುರ ಪುರಸಭೆ, ತಾಲೂಕು ಪಂಚಾಯತ್, ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ರಾಜೀನಾಮೆ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Halady Srinivasa Shetty, who is populary known as 'Vajapayee of Kundapur' has submitted his resigned to MLA post today(Jul.13). In support of Haladi Srinivas Shetty Kundapura is observing Bandh on July 13. Kundapur came to a standstill on Friday July 13 with the entire taluk supporting the call.
Please Wait while comments are loading...