ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಕೈ ಕೊಟ್ಟಿದ್ದು ಕಾಲ್ ಅಂತೆ

Posted By:
Subscribe to Oneindia Kannada
kundapur-srinivasa-shetty-miss-cabinet-berth-phone-call
ಬೆಂಗಳೂರು, ಜುಲೈ 13: ಅತ್ತ ಕರಾವಳಿ ಭಾಗದ ಶಾಸಕರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶಗೊಂಡು ಕುಂದಾಪುರದಲ್ಲಿ ಇಂದು ಬಂದ್ ಆಚರಿಸಲಾಗುತ್ತಿದೆ. ಈ ಮಧ್ಯೆ, ಕರಾವಳಿ ಭಾಗದ ರಾಜಕೀಯ ತುಮುಲಕ್ಕೆ ಬೆಂಕಿ ಹಚ್ಚಿದವರು ಯಾರು ಎಂದು ವಾಸ್ತವಕ್ಕೆ ಕನ್ನಡಿಹಿಡಿಯುವ ಕಹಿಸತ್ಯವೊಂದು ಹೊರಬಿದ್ದಿದೆ.

ಏನಾಯಿತೆಂದರೆ, ಕುಂದಾಪುರದಿಂದ ಮೂರು ಬಾರಿ ಶಾಸಕರಾಗಿರುವ, ಬಂಟ ಸಮುದಾಯದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಬುಧವಾರ ರಾತ್ರಿ ಕರೆ ಮಾಡಿದ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರು 'ನಿಮಗೆ ಸಚಿವ ಸ್ಥಾನ ಪ್ರಾಪ್ತಿಯಾಗಿದೆ. ಸೀದಾ ಹೊರಟು ಬನ್ನಿ' ಎಂದಿದ್ದರು.

ಪಕ್ಷದ ವರಿಷ್ಟರ ಕರೆಯ ಮೇರೆಗೆ ಸಚಿವ ಸ್ಥಾನ ಸ್ವೀಕರಿಸಲು ಬೆಂಬಲಿಗರೊಂದಿಗೆ ಹಾಲಾಡಿ ಶ್ರೀನಿವಾಸ ಶೆಟ್ಟರೂ ಕುಂದಾಪುರದಿಂದ ಹೊರಟು ಬಂದಿದ್ದರು. ಆದರೆ ಅವರನ್ನು ಹಿಂಬಾಲಿಸಿ, ಅಲ್ಲಿಂದಲೇ ಒಂದು ದೂರವಾಣಿ ಕರೆಯೂ ಬಂದಿದೆ.

ಖಚಿತ ಮಾಹಿತಿಯ ಪ್ರಕಾರ ಹಾಲಾಡಿ ಶೆಟ್ಟರಿಗೆ ಸಚಿವ ಸ್ಥಾನ ತಪ್ಪಿಸಿದ್ದು ಅದೇ ದೂರವಾಣಿ ಕರೆಯಂತೆ. ಆದರೆ ಆ ಕರೆ ಮಾಡಿದವರು ಆ ಭಾಗದ ಆರ್ ಎಸ್ಎಸ್ ನ 'ಪ್ರಭಾ'ವಿ ಮುಖಂಡರೊಬ್ಬರು.

'ನೋಡಿ ಅದೇನೋ ಶ್ರೀನಿವಾಸನಿಗೆ ಸಚಿವ ಸ್ಥಾನ ಕೊಡಬೇಕು ಅಂತ ನಿರ್ಧರಿಸಿದ್ದೀರಂತೆ! ಅದೆಲ್ಲಾ ಏನು ಬೇಡ. ಆತನ ಬದಲಿಗೆ ವಿಧಾನ ಪರಿಷತ್ ಸದಸ್ಯ, ಬಿಲ್ಲವ ಸಮಾಜದ ಕೋಟ ಶ್ರೀನಿವಾಸ ಪೂಜಾರಿಗೆ ಮಂತ್ರಿಗಿರಿ ನೀಡಿ' ಎಂಬ ಫರ್ಮಾನು ಆ ದೂರವಾಣಿಯಿಂದ ಹೊರಬಿತ್ತಂತೆ.

ಅದನ್ನು ಶಿರಸಾವಹಿಸಿ ಪಾಲಿಸಿ ವರಿಷ್ಠರು ಕೊನೆಯ ಘಳಿಗೆಯಲ್ಲಿ ಹೆಸರುಗಳನ್ನು ಅದಲು ಬದಲು ಮಾಡಿದ್ದಾರೆ. 'ನನಗೆ ಸಚಿವ ಸ್ಥಾನ ತಪ್ಪಿಸಿದ್ದು ಬೇರೆ ಯಾರು ನಮ್ಮವರೇ' ಎಂದು ಸ್ವತಃ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರೂ ಗೋಳಾಡಿದ್ದಾರೆ. ಆದರೆ ಶೆಟ್ಟರಿಗೆ ಸಚಿವ ಸ್ಥಾನ ತಪ್ಪಿಸಿದ ಆ ಪ್ರಭಾವಿ ಆರ್ ಎಸ್ಎಸ್ ನಾಯಕ ಯಾರು ಎಂಬುದು ಬಹಿರಂಗವಾಗಿಲ್ಲ.

ಶೋಭಾ ಕರಂದ್ಲಾಜೆ ನಮ್ಮವರಲ್ಲ:
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಅವಳಿ ಜಿಲ್ಲೆಗಳಿಂದ ಬಿಜೆಪಿ ವತಿಯಿಂದ 13 ಶಾಸಕರು ಆಯ್ಕೆಗೊಂಡಿದ್ದಾರೆ. ಆದರೆ ಅವರ ಪೈಕಿ ಮೇಲ್ಮನೆ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿಗೆ ಮಾತ್ರ ಸಚಿವ ಸ್ಥಾನ ಪ್ರಾಪ್ತಿಯಾಗಿದೆ. ಇದೇ ವೇಳೆ ಪುತ್ತೂರಿನ ಶೋಭಾ ಸಹ ಸಚಿವೆಯಾಗಿದ್ದಾರಾದರೂ ಅವರು ಆಯ್ಕೆಗೊಂಡಿರುವುದು ಬೆಂಗಳೂರಿನ ಯಶವಂತಪುರದಿಂದ. ಇದರಿಂದ ಶೋಭಾ ಕರಂದ್ಲಾಜೆ ಅವರು ನಮ್ಮವರಲ್ಲ ಎಂಬ ಭಾವನೆ ಈಗಾಗಲೇ ಇಲ್ಲಿನ ಜನರಲ್ಲಿ ಆಳವಾಗಿ ಬೇರೂರಿದೆ. ಮುಖ್ಯಮಂತ್ರಿಯನ್ನೇ (ಸದಾನಂದ ಗೌಡರು) ನೀಡಿದ್ದ ಈ ಭಾಗಕ್ಕೆ ಈಗ ಒಂದೇ ಸಚಿವ ಸ್ಥಾನ ದಕ್ಕಿದೆ ಎಂಬ ಕೂಗು, ಕೊರಗು ಕರಾವಳಿ ಭಾಗದಿಂದ ಕೇಳಿಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a fresh crisis in ruling BJP in Karnataka Kunadapura is all set to revolt. Thanks to Halady Srinivasa Shetty, who is populary known as 'Vajapayee of Kundapur' who missed cabinet berth in Jagadish Shettar cabinet by a phone call. As such Kundapura is observing Bandh on July 13.
Please Wait while comments are loading...