ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೆಟ್ಟರ್ ಸಿಎಂ: ಅಡ್ವಾಣಿ ರಾಗ ಬದಲಿದ್ದು ಹೇಗೆ?

By Srinath
|
Google Oneindia Kannada News

how-advani-accepted-jagadish-shettar-next-cm
ಬೆಂಗಳೂರು, ಜುಲೈ 7: ಸದಾನಂದ ಗೌಡರ ಪದಚ್ಯುತಿ ಸನ್ನಿಹಿತ, ಆಷಾಢ ಮುಗಿಯುತ್ತಿದ್ದಂತೆ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗುವುದು ಖಚಿತ. ಆದರೆ ಡಿಸಿಎಂ ಯಾರಾಗಬೇಕು ಎಂಬುದು ರಾಜ್ಯ ಬಿಜೆಪಿಯ ಸದ್ಯದ ಕೋಲಾಹಲ ಸ್ಥಿತಿ.

ಆರೇಳು ತಿಂಗಳ ಭಿನ್ನಮತಕ್ಕೆ ಬ್ರೇಕ್ ಹಾಕಿ, ಕೊನೆಗೂ ಈ ನಿರ್ಣಾಯಕ ಘಟ್ಟ ಹತ್ತಲು ಬಿಜೆಪಿಗೆ ಕಾರಣವಾಗಿದ್ದಾದರೂ ಏನೆಂಬುದನ್ನು ಕೆದಕಿದಾಗ... ಘಟ್ಟ ಹತ್ತಿದ ಬಿಜೆಪಿ ಅಲ್ಲಿಂದ ನೇರವಾಗಿ ಪ್ರಪಾತದೊಳಕ್ಕೆ ಬೀಳುತ್ತದೆ ಎಂಬ ಭಯ ತೀವ್ರವಾಗಿ ಕಾಡಿದ್ದೇ ಇದಕ್ಕೆಲ್ಲ ಕಾರಣವಾಗಿದೆ. ಆದರೂ ಈ ಮಧ್ಯೆ, ಸಾಕಷ್ಟು ಲೆಕ್ಕಾಚಾರಗಳೂ, ಅಪವಿತ್ರ ಸಂಧಾನಗಳು ಶಿಸ್ತಿನ ಪಕ್ಷದಲ್ಲಿ ಬೇಜಾನಾಗಿ ನಡೆದಿವೆ ಎನ್ನಲಾಗಿದೆ.

ತಾಜಾ ವರದಿಗಳ ಪ್ರಕಾರ ಅಡ್ವಾಣಿ ಅವರ ಬುಲಾವ್ ಮೇರೆಗೆ ಸದಾನಂದ ಗೌಡರು ಶನಿವಾರ ಮಧ್ಯಾಹ್ನ ನವದೆಹಲಿಗೆ ತೆರಳಲಿದ್ದಾರೆ.

ಕೊನೆಯ ಕ್ಷಣದವರೆಗೂ, ಶೆಟ್ಟರ್ ಅವರು ಯಡಿಯೂರಪ್ಪಗೆ ನಿಷ್ಠರು ಎಂಬ ಏಕೈಕ ಕಾರಣಕ್ಕೆ ಶೆಟ್ಟರ್ ಮುಖ್ಯಮಂತ್ರಿಯಾಗುವುದು ಬೇಡ ಎಂದು ಹಠ ಹಿಡಿದಿದ್ದ ಪಕ್ಷದ ಭೀಷ್ಮ ಪಿತಾಮಹ ಅಡ್ವಾಣಿಯವರು ರಾಗ ಬದಲಿಸಿದ್ದು ಗಮನಾರ್ಹ ಮತ್ತು ಪಕ್ಷ ಎಂಥ ಅಧೋಗತಿಗೆ ಬಂದಿದೆ ಎಂಬುದೂ ಇದರಿಂದ ಜಗಜ್ಜಾಹೀರಾಗಿದೆ. ಇಲ್ಲಿ ಅಡ್ವಾಣಿಗೆ ಕಾಡಿದ್ದು ಪಕ್ಷದ ಭವಿಷ್ಯವಾಣಿ. ರಾಜ್ಯ ವಿಧಾನಸಭೆಯ ಅವಧಿ 2013 ರ ಮೇ ತಿಂಗಳಲ್ಲಿ ಅಂತ್ಯಗೊಳ್ಳಲಿದೆ. ಮತ್ತು ಎಲ್ಲದಕ್ಕು ಕಾರಣವಾಗಿರುವುದು ಈ ಚುನಾವಣೆಯೇ!

'ವಿಧಾನಸಭೆ ವಿಸರ್ಜಿಸಿ, ಸೀದಾ ಮತದಾರನ ಬಾಗಿಲಿಗೆ ಹೋಗೋಣ' ಎಂದು ಅಡ್ವಾಣಿ ಹೇಳುತ್ತಿದ್ದಂತೆ ಗಡ್ಕರಿ ವಗೈರೆಗಳು ಅಕ್ಷರಶಃ ದುಃಸ್ವಪ್ನ ಕಂಡವರಂತೆ ಬೆಚ್ಚಿಬಿದ್ದಿದ್ದಾರೆ. 'ಏನಂದ್ಕೊಂಡ್ ಬಿಟ್ರೀ? ಈಗಿನ ಹಿನ್ನೆಲೆಯೊಂದಿಗೆ ಮತದಾರ ಪ್ರಭುವಿನ ಎದುರು ಹೋಗೋದೇ? ದೂರದಿಂದ ಆತನ ಮುಖವನ್ನು ಕದ್ದುಮುಚ್ಚಿ ನೋಡುವುದಕ್ಕೂ ಯಾರಿಗೂ ಚೈತನ್ಯವಿಲ್ಲ...

... ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಅಧಿಕಾರಕ್ಕೆ ಬಂದು, 4 ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಕಂಡ ದೌರ್ಭಾಗ್ಯ ನಮ್ಮದಾಗಿದೆ. ಅಧಿಕಾರಕ್ಕಾಗಿ ನಡೆದಿರುವ ಕಿತ್ತಾಟ ಪಕ್ಷದ ವರ್ಚಸ್ಸಿಗೆ ಹಾನಿ ಮಾಡಿದೆ. ಅಂತಹುದರಲ್ಲಿ ಚುನಾವಣೆಗೆ ಹೋದರೆ ಪಕ್ಷದ ಗತಿಯೇನು' ಎಂದು ಗಡ್ಕರಿ ವಗೈರೆಗಳು ಕಟುವಾಸ್ತವವನ್ನು ತೆರೆದಿಟ್ಟಿದ್ದಾರೆ. ಚುನಾವಣೆಯ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದೆ ಎಂಬುದನ್ನು ಪಕ್ಷದ ಹಿರಿಯ ತಲೆ ಅಡ್ವಾಣಿ ತಲೆಗೆ ಹೋಗುತ್ತಿದ್ದಂತೆ...

ಒಮ್ಮೆ ಮೈಚಿವುಟಿಕೊಂಡು ನೋಡಿಕೊಂಡ ಅಡ್ವಾಣಿ, ಹೌದಾ ಪರಿಸ್ಥಿತಿ ಅಷ್ಟೊಂದು ಭೀಕರವಾಗಿದೆಯಾ? ಆ ಯಡಿಯೂರಪ್ಪ ಪಕ್ಷವನ್ನು ಇಷ್ಟೊಂದು ಹಾಳು ಮಾಡಿದರಾ? ಅಕಟಕಟಾ ಎಂದು ಹಲ್ಲು ಕಡಿದ ವಯೋವೃದ್ಧ ಅಡ್ವಾಣಿ ಸರಿ ನೀವು ಹೇಳಿದ ಹಾಗೆಯೇ ಆಗಲಿ ಎನ್ನುವ ಮೂಲಕ ಶೆಟ್ಟರ್ ಪಟ್ಟಕ್ಕೆ ತಥಾಸ್ತು ಎಂದಿದ್ದಾರೆ ಅಷ್ಟೆ.

'ನೋಡಿ, ಆ ಶೆಟ್ಟರ್ ಮುಖ್ಯಮಂತ್ರಿ ಆಗುವುದಕ್ಕೆ ನನ್ನ ವಿರೋಧವಿಲ್ಲ. ಆದರೆ, ಅವರ ಹಿಂದೆ ಯಡಿಯೂರಪ್ಪ ಇದ್ದಾರೆ ಎಂಬ ಏಕೈಕ ಕಾರಣಕ್ಕೆ ವಿರೋಧ ಮಾಡಿದೆ ಅಷ್ಟೇಯಾ' ಎಂದು ರಾಗ ಬದಲಿಸಿದ ಅಡ್ವಾಣಿ ಸಾಹೇಬರು, 'ಶೆಟ್ಟರ್ ಇಡೀ ಕುಟುಂಬ ನನಗೆ ಚೆನ್ನಾಗಿ ಗೊತ್ತು ಬಿಡಿ. ಆದರೆ ಮಾ.ಮು. ಯಡಿಯೂರಪ್ಪನ ತಾಳಕ್ಕೆ ಕುಣಿಯದೆ ಆತನನ್ನು ದೂರವಿಟ್ಟು ಆಡಳಿತ ನಡೆಸಲು ಸೂಚಿಸಿ ಸಾಕು. ಕುಗ್ಗಿರುವ ಸರ್ಕಾರದ ವರ್ಚಸ್ಸು ಹೆಚ್ಚಿಸಲು ಗಮನ ಕೊಟ್ಟರೆ ಪಕ್ಷ ತಂತಾನೇ ಅಧಿಕಾರ ಉಳಿಸಿಕೊಳ್ಳುತ್ತದೆ ಎಂದು ಅಡ್ವಾಣಿ ಬಾಯಲ್ಲಿ ಭವಿಷ್ಯವಾಣಿ ಹೇಳಿಸುವಲ್ಲಿ ಇದೇ ಗಡ್ಕರಿ ವಗೈರೆಗಳು ಯಶಸ್ವಿಯಾಗಿದ್ದಾರೆ.

ಘೋರ ಸತ್ಯ: ಆದರೆ ಮತದಾರ ಪ್ರಭು ಮಾತ್ರ - ನಾಲ್ಕು ವರ್ಷಗಳಿಂದ ರಾಜ್ಯವನ್ನು ಹಾಳು ಮಾಡಿದ ನಿಮಗೆ ಜನರ ಬಗ್ಗೆ ಕಾಳಜಿಯಿಲ್ಲ. ಚುನಾವಣೆ ಎದುರಿಸಲೂ ಮುಖವಿಲ್ಲದೆ ಮತ್ತೆ ಅನೈತಿಕ ಸಂಧಾನ, ರಾಜಿಕಬೂಲಿಗೆ ಇಳಿದಿರಾ? ಇಂದಲ್ಲಾ ನಾಳೆ ನಮ್ಹತ್ರಕ್ಕೆ ಬರಲೇ ಬೇಕು. ಆಗ ನೋಡ್ಕೋತೀವಿ ಒಂದು ಕೈ - ಎಂದು ಹಲ್ಲು ಮಸೆಯುತ್ತಿದ್ದಾನೆ ಎಂಬುದು ಘೋರ ಸತ್ಯ.

English summary
Karnataka BJP crisis: How LK Advani accepted Jagadish Shettar as next CM?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X