ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ರತಿಮ ಪ್ರಾಮಾಣಿಕ ಸೈನಿಕನಿಗೊಂದು ಸೆಲ್ಯೂಟ್

By Prasad
|
Google Oneindia Kannada News

Let's salute true son of India (Pic : The Hindu)
ಮೈಸೂರು, ಜು. 2 : ಅವರು ಎರಡನೇ ಮಹಾ ಯುದ್ಧದ ಸಮಯದಲ್ಲಿ ಭಾರತದ ಪರ ಹೋರಾಡಿದ ವೀರ ಸೇನಾನಿ, ಮೈಸೂರಿನವರು, ವಯಸ್ಸು 89, ಕಣ್ಣಿನ ತೊಂದರೆಯಿಂದ ಬಳಲುತ್ತಿದ್ದಾರೆ, ಹೃದಯಬೇನೆಯಿದೆ, ಸರಕಾರ ನೀಡುತ್ತಿರುವ ಪಿಂಚಣಿ ಯಾತಕ್ಕೂ ಸಾಲುವುದಿಲ್ಲ, ಹೃದಯ ಚಿಕಿತ್ಸೆಗೆ ತ್ವರಿತ ಹಣದ ಅವಶ್ಯಕತೆಯಿದೆ. ಆದರೆ, ಅವರಿಗೆ ಸೇರದ ಹಣ ಅವರ ಬಳಿ ಬಂದಿದ್ದರೂ ತಿರಸ್ಕರಿಸಿದ್ದಾರೆ.

ರಸ್ತೆ ಮೇಲೆ ಸಾಗುವಾಗ 10 ರು. ನೋಟು ಸಿಕ್ಕರೂ ಸಾಕು, ಯಾರದಾದರೂ ಇರಬಹುದೆ ಎಂದು ಹಿಂದೆಮುಂದೆ ನೋಡದೆ ಜೇಬಿಗಿಳಿಸುವ ಜನರು ನಾವು. ಇನ್ನು ನಮ್ಮದಲ್ಲದಿದ್ದರೂ ತಾನೇತಾನಾಗಿ ನಮ್ಮ ಬ್ಯಾಂಕ್ ಖಾತೆಗೆ ಹಣ ಬಂದು ಬಿದ್ದರೆ ಸುಮ್ಮನಿರುತ್ತೇವಾ? ಅಯ್ಯೋ, ಮುಂದೆ ನೋಡಿಕೊಂಡರಾಯಿತು ಎಂದು ಸುಮ್ಮನಿದ್ದುಬಿಡುತ್ತೇವೆ ಅಥವಾ ಹೆಂಡತಿಗೊಂದು ರೇಷ್ಮೆ ಸೀರೆತಂದು ಎಲ್ಲವನ್ನೂ ಮೊಕಳೀಕ್ ಮಾಡುತ್ತೇವೆ.

ಹಾಗಂತ, ಭಾರತದ ವಾಯು ಸೇನೆಯಲ್ಲಿ ಸೇವೆಗೈದಿರುವ ಮೈಸೂರಿನ ನಿವೃತ್ತ ಸೇನಾನಿ ಚಾರ್ಲ್ಸ್ ವಿಲಿಯಂಸ್ (89) ಅವರ ಪಿಂಚಣಿ ಬ್ಯಾಂಕ್ ಖಾತೆಗೆ ಕೋಟಿಗಟ್ಟಲೆ ಹಣವೇನೂ ಬಂದುಬಿದ್ದಿಲ್ಲ. ಪ್ರತಿ ತಿಂಗಳು ವೈದ್ಯಕೀಯ ಚಿಕಿತ್ಸೆಗೆಂದು ಅವರ ಖಾತೆಗೆ ಸೇರುತ್ತಿದ್ದದು ಕೇವಲ 300 ರು.! 2007ರಿಂದ ಜಮಾ ಆಗಿ ಇಲ್ಲಿಯವರೆಗೆ ಆಗಿದ್ದು ಬರೀ 15,200 ರು. ಮಾತ್ರ. ಪ್ರಾಮಾಣಿಕತೆಯೇ ಮೂರ್ತಿವೆತ್ತಂತಿರುವ ಚಾರ್ಲ್ಸ್ ಅವರ ಈ ಕಥೆ ದಿ ಹಿಂದೂ'ದಲ್ಲಿ ಪ್ರಕಟವಾಗಿದೆ.

ಇದು ತಿಳಿದದ್ದು ಹೇಗೆಂದರೆ, ನಿವೃತ್ತರಾದನಂತರ ಅವರ ಪಿಂಚಣಿ ಖಾತೆಗೆ ಹಣ ಸರಿಯಾಗಿ ಸಂದಾಯವಾಗುತ್ತಿರಲಿಲ್ಲ. ಆಗ ಅವರು ಸೈನಿಕ ಕಲ್ಯಾಣ ಮತ್ತು ಮರುವಸತಿ ಮಂಡಳಿಯನ್ನು ಸಂಪರ್ಕಿಸಿದ್ದಾರೆ. ಅಲ್ಲಿ ಅವರಿಗೆ ಯಾವ ಸಹಾಯವೂ ದೊರೆತಿಲ್ಲ. ಆಗ ಅವರು ಮೈಸೂರಿನಲ್ಲಿರುವ ನಿವೃತ್ತ ಸೈನಿಕರ ಟ್ರಸ್ಟ್‌ನ ಅಧ್ಯಕ್ಷ ಸುಬ್ರಮಣಿ ಅವರನ್ನು ಸಂಪರ್ಕಿಸಿದ್ದಾರೆ. ಆಗ, ಅವರದಲ್ಲದ ಹಣ ಸಂದಾಯವಾಗುತ್ತಿರುವುದು ಅವರ ಗಮನಕ್ಕೆ ಬಂದಿದೆ.

ಆಗ ಮಂಗಳೂರಿನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಕೇಂದ್ರೀಕೃತ ಪಿಂಚಣಿ ವಿತರಣಾ ಕೇಂದ್ರ ಈ ಹಣವನ್ನು ಚಾರ್ಲ್ಸ್ ಅವರ ಖಾತೆಗೆ ತಪ್ಪಾಗಿ ಜಮಾ ಮಾಡಿರುವುದು ತಿಳಿದುಬಂದಿದೆ. ಆಗ ಚಾರ್ಲ್ಸ್ ಮಾಡಿದ್ದೇನೆಂದರೆ, ತಮಗೆ ತೊಂದರೆಯಾಗದಂತೆ ಪ್ರತಿ ತಿಂಗಳು ಅಲ್ಪ ಮೊತ್ತವನ್ನು ತಮ್ಮ ಖಾತೆಯಿಂದ ಕಡಿತ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಇದಕ್ಕೆ ಚಾರ್ಲ್ಸ್ ಅವರು ನೀಡುವ ವಿವರಣೆಯೇನೆಂದರೆ, ಭಾರತದ ಬೊಕ್ಕಸಕ್ಕೆ ನನ್ನಿಂದಾಗಿ ನಷ್ಟವಾಗಬಾರದು. ಅಸಲಿಗೆ, ಅವರ ಹೃದಯ ಚಿಕಿತ್ಸೆಗಾಗಿ ಕೂಡಲೆ 1.5 ಲಕ್ಷ ರು.ಗಳ ಅಗತ್ಯವಿದೆ. ಇಷ್ಟಿದ್ದರೂ ನನ್ನದಲ್ಲದ ಹಣವನ್ನು ನಾನೇಕೆ ಸ್ವೀಕರಿಸಲಿ ಎಂದು ಹಣವನ್ನು ತಿರಸ್ಕರಿಸಿದ್ದಾರೆ. ಈ ದೇಶದ ನಿಜವಾದ ಮಗ ಅಂದರೆ ಇವರೇ ಅಲ್ಲವೆ? ದೇಶಕ್ಕಾಗಿ ಹೋರಾಡಿದ ಹೀರೋ ಮಾತ್ರವಲ್ಲ, ನಿಜ ಜೀವನದಲ್ಲೂ ಚಾರ್ಲ್ಸ್ ನಿಜವಾದ ಹೀರೋ.

ಭಾರತದ ಬೊಕ್ಕಸವನ್ನೇ ಬರಿದು ಮಾಡುತ್ತಿರುವವರು ನಮ್ಮ ದೇಶದಲ್ಲಿ ಸಾವಿರಗಟ್ಟಲೆ ಸಿಗುತ್ತಿದ್ದಾರೆ. ನಾಲ್ಕು ತಲೆಮಾರಿಗಾಗುವಷ್ಟು ಹಣ ಪೇರಿಸಿ ಇಟ್ಟಿದ್ದರೂ, ಮತ್ತಷ್ಟು ಬೇಕೆಂದು, ಭ್ರಷ್ಟಾಚಾರದ ಮುಖಾಂತರ ತಿಂಗುತೇಗಿ ಲೂಟಿ ಹೊಡೆಯುತ್ತಿದ್ದಾರೆ. ಅನೇಕರು ವಿದೇಶಿ ಬ್ಯಾಂಕುಗಳಲ್ಲಿ ಭಾರತದ ಬಡತನ ನೀಗಿಸುವಷ್ಟು ಹಣದ ಸೂರೆ ಹೊಡೆದಿದ್ದಾರೆ. ಮತ್ತೊಂದಿಷ್ಟು ಜನರು ಭೂಮಿಯನ್ನೇ ಬಗೆದು ತಿನ್ನುತ್ತಿದ್ದಾರೆ. ಅಂಥವರ ಮಧ್ಯದಲ್ಲಿ ಚಾರ್ಲ್ಸ್ ಇದ್ದಾರೆ. ಇಂಥ ಅಪ್ರತಿಮ ಪ್ರಮಾಣಿಕ ವ್ಯಕ್ತಿ, ದೇಶಕ್ಕಾಗಿ ಪ್ರಾಣದ ಹಂಗು ತೊರೆದು ಹೋರಾಡಿದ ಸೇನಾನಿಗೊಂದು ಸೆಲ್ಯೂಟ್ ಹೊಡೆಯಲೂ ನಮ್ಮಿಂದ ಸಾಧ್ಯವಿಲ್ಲವೆ?

English summary
Human interest story : Charlies Williams (89), a retired Air Force soldier from Mysore, ailing from eye problem and yet to undergo heart operation. But, still he refused to accept money which was credited to his bank account. Let's salute true son of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X