ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜು.5ರೊಳಗೆ ಜಗದೀಶ್ ಶೆಟ್ಟರ್ ರನ್ನು ಸಿಎಂ ಮಾಡಿ

By Mahesh
|
Google Oneindia Kannada News

BS Yeddyurappa and Jagadish Shettar
ಬೆಂಗಳೂರು, ಜು.1: ನಾಯಕತ್ವದ ಬದಲಾವಣೆಗೆ ಆಗ್ರಹಿಸಿ ಜಗದೀಶ್ ಶೆಟ್ಟರ್ ಸೇರಿದಂತೆ 9 ಜನ ರಾಜೀನಾಮೆ ನೀಡಿದ ಯಡಿಯೂರಪ್ಪ ಬಣ ಭಾನುವಾರ ವಾರದ ರಜೆ ಎಂದೂ ಕೂಡಾ ನೋಡದೆ ಬಿರುಸಿನ ಚರ್ಚೆ, ಚಹಾಕೂಟ ಸಭೆಗಳನ್ನು ನಡೆಸಿತು.

ಈ ಘಟನೆಗಳ ನಡುವೆ ಯುಪಿಎಯ ರಾಷ್ಟ್ರಪತಿ ಅಭ್ಯರ್ಥಿ ಪ್ರಣಬ್ ಮುಖರ್ಜಿ ಅವರು ಬೆಂಗಳೂರಿಗೆ ಬಂದು ಮತಯಾಚಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಬೆಂಬಲವನ್ನು ಕೇಳಿದ್ದಾರೆ.

ಬೆಳಗ್ಗೆ ಜಗದೀಶ್ ಶೆಟ್ಟರ್ ಮನೆಯಲ್ಲಿ ಯಡಿಯೂರಪ್ಪ ಬೆಂಬಲಿಗ ಶಾಸಕರು, ಸಚಿವರು ಹಾಗೂ ಸಂಸದರು ಸಭೆ ನಡೆಸಿ, ಹೈಕಮಾಂಡ್ ಮುಂದೆ ಹೊಸ ಡೆಡ್ ಲೈನ್ ಇಟ್ಟಿದ್ದಾರೆ. ಜುಲೈ 5, 2012ರೊಳಗೆ ಜಗದೀಶ್ ಶೆಟ್ಟರ್ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸುವಂತೆ ಆಗ್ರಹಿಸಿದ್ದಾರೆ.

ಜಗದೀಶ್ ಶೆಟ್ಟರ್ ರನ್ನು ಮುಖ್ಯಮಂತ್ರಿಯಾಗಿ ಮಾಡಲು ಸಭೆಯಲ್ಲಿ ಒಕ್ಕೊರಲ ಬೆಂಬಲ ವ್ಯಕ್ತವಾಗಿದೆ. ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುಮಾರು 55 ಶಾಸಕರು, 10 ಸಚಿವರು, 8 ಸಂಸದರು ಮತ್ತು 15 ವಿಧಾನಪರಿಷತ್ ಸದಸ್ಯರ ಬೆಂಬಲ ವ್ಯಕ್ತವಾಗಿದೆ.

ಸಭೆಯಲ್ಲಿ ಸಚಿವರಾದ ರೇಣುಕಾಚಾರ್ಯ, ಉದಾಸಿ, ಬೊಮ್ಮಾಯಿ, ಉಮೇಶ್ ಕತ್ತಿ, ರಾಜೂ ಗೌಡ, ವಿ ಸೋಮಣ್ಣ ಮುಂತಾದ ಪ್ರಮುಖ ನಾಯಕರು ಭಾಗವಹಿಸಿದ್ದರು ಎಂದು ರಾಜೂ ಗೌಡ ಹೇಳಿದರು.

ಸಂಸದ ಸುರೇಶ್ ಅಂಗಡಿ ಮಾತನಾಡಿ, ಕೇಂದ್ರ ನಾಯಕರ ನಿರ್ಲಕ್ಷತನದಿಂದ ಈ ಬಿಕ್ಕಟ್ಟು ಉಂಟಾಗಿದೆ. ನಿತಿನ್ ಗಡ್ಕರಿ, ಎಲ್ ಕೆ ಅಡ್ವಾಣಿ, ಸುಷ್ಮಾ ಸ್ವರಾಜ್ ಹಾಗೂ ಅರುಣ್ ಜೇಟ್ಲಿ ಅವರಲ್ಲಿ ಒಮ್ಮತ ಮೂಡಿಸಲು ಸಾಕಷ್ಟು ಬಾರಿ ಯತ್ನಿಸಿದ್ದೇನೆ.

ರಾಜ್ಯದ ನಾಯಕರಾದ ಎಚ್ ಎನ್ ಅನಂತ್ ಕುಮಾರ್ ಅವರು ಕೂಡಾ ಯಾವುದೇ ಸಮಸ್ಯೆ ಇಲ್ಲ ಎಂಬಂತೆ ಇದ್ದು ಬಿಟ್ಟಿದ್ದು ಈಗ ಬಿಕ್ಕಟ್ಟು ಉಲ್ಬಣಕ್ಕೆ ಕಾರಣವಾಗಿದೆ. ಹೈಕಮಾಂಡ್ ಜುಲೈ 5 ರ ಗಡುವಿನಲ್ಲಿ ಯಾವುದೇ ತೀರ್ಮಾನ ಕೈಗೊಳ್ಳದಿದ್ದರೆ. ಮುಂದಿನ ಅನಾಹುತದ ಹೊಣೆಯನ್ನು ಅವರೇ ಹೊರಬೇಕಾಗುತ್ತದೆ ಎಂದರು.

ಸಭೆಗೆ ಬಂದಿದ್ದ ಸಂಸದರಲ್ಲಿ ಜಿಎಸ್ ಬಸವರಾಜ್, ಜಿಎಂ ಸಿದ್ದೇಶ್ವರ್, ಯಡಿಯೂರಪ್ಪ ಅವರ ಪುತ್ರ ಬಿವೈ ರಾಘವೇಂದ್ರ, ರಾಜ್ಯ ಸಭಾ ಸದಸ್ಯ ಪ್ರಭಾಕರ ಕೋರೆ ಅವರು ಪ್ರಮುಖರಾಗಿದ್ದರು.

ಹೈಕಮಾಂಡ್ ಕಾದು ನೋಡುವ ತಂತ್ರ: ರಾಜೀನಾಮೆ ನೀಡಿರುವ 9 ಸಚಿವರಿಗೆ ಮತ್ತೊಮ್ಮೆ ಮನವಿ ಮಾಡಿಕೊಂಡಿರುವ ಹೈಕಮಾಂಡ್, ರಾಜೀನಾಮೆ ಹಿಂಪಡೆಯುವಂತೆ ಕೇಳಿಕೊಂಡಿದೆ. ರಾಜೀನಾಮೆ ಪತ್ರಗಳನ್ನು ಅಂಗೀಕರಿಸದಂತೆ ಸದಾನಂದ ಗೌಡರಿಗೆ ಸೂಚಿಸಿದೆ. ನಿತಿನ್ ಗಡ್ಕರಿ ಅವರ ಪುತ್ರನ ಮದುವೆ ಆರತಕ್ಷಣೆ ಸಮಾರಂಭದ ತನಕ ರಾಜ್ಯ ಸರ್ಕಾರ ಅಥವಾ ಹೈಕಮಾಂಡ್ ಯಾವುದೇ ಕ್ರಮ ಜರುಗಿಸದಿರಲು ನಿರ್ಧರಿಸಿದೆ.

ಏಟಿಗೆ ಎದಿರೇಟು ಬರೀ ಮಾತಿನ ಪೆಟ್ಟು: ಪಕ್ಷದಲ್ಲಿ ಕೆಲವು ಜೊಳ್ಳುಗಳಿವೆ ಅವುಗಳನ್ನು ಸರಿಯಾಗಿ ಜಾಲಿಸಿ ತೆಗೆದರೆ, ಪಕ್ಷದಲ್ಲಿ ಗಟ್ಟಿ ತಲೆಗಳು ಉಳಿಯುತ್ತದೆ. ಪಕ್ಷದ ಸದ್ಯದ ಪರಿಸ್ಥಿತಿ ನೋಡಿದರೆ ಡಿಸೆಂಬರ್ ವೇಳೆಗೆ ಅಸೆಂಬ್ಲಿ ಚುನಾವಣೆ ಎದುರಿಸಬೇಕಾಗಬಹುದು ಎಂದು ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ಗೌರಿಬಿದನೂರಿನಲ್ಲಿ ಭಾನುವಾರ (ಜು.1) ರಂದು ಹೇಳಿದರು.

ಇದಕ್ಕೆ ಪ್ರತಿಯಾಗಿ ಉತ್ತರಿಸಿದ ರೇಣುಕಾಚಾರ್ಯ, ಜೊಳ್ಳು ಯಾರು ಗಟ್ಟಿಯಾರು ಸದ್ಯದಲ್ಲೇ ತಿಳಿಯಲಿದೆ. ಸದಾನಂದ ಗೌಡರ ಎಡ ಬಲದಲ್ಲಿ ನಿಂತು ಬಹುಪರಾಕ್ ಹೇಳಿದ್ದ ಮಂದಿ ಅಡ್ಡ ಮತದಾನ ಮಾಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೇಳಿದರೆ ನಮ್ಮ ಮೇಲೆ(6 ಜನ ಸಚಿವರು) ಹೈಕಮಾಂಡ್ ಗೆ ದೂರು ನೀಡುತ್ತಾರೆ. ನಾವು ರಾಜಿಯಾಗಿ ರಾಜೀನಾಮೆ ಕೊಟ್ಟಿಲ್ಲ ಎಂದಿದ್ದಾರೆ.

'ಸಿಎಂ ಉದಾಸಿ ಅವರು ನಮ್ಮ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಲಿ, ಜೆಡಿಎಸ್ ಸರ್ಕಾರವಿದ್ದಾಗ ವೈಯಕ್ತಿಕ ಕೆಲಸವೊಂದನ್ನು ಮಾಡಿಕೊಡಿ ಎಂದು ಬೇಡುತ್ತಾ ಅವರ ಮಗನೊಂದಿಗೆ ಮನೆಗೆ ಬಂದಿದ್ದರು. ಲೋಕೊಪಯೋಗಿ ಇಲಾಖೆಯ ಅವ್ಯವಹಾರಗಳ ಮೊತ್ತ 300 ಕೋಟಿ ರು ದಾಟುತ್ತದೆ. ಸಿಪಿ ಯೋಗೇಶ್ವರ್ ಅವರು ಸಿಎಂ ಉದಾಸಿ ಅವರ ಬಗ್ಗೆ ಬರೆದ ಪತ್ರ ಮುಂತಾದ ದಾಖಲೆಗಳನ್ನು ಸುದ್ದಿಗೋಷ್ಠಿಯಲ್ಲಿ ಬಹಿರಂಗ ಪಡಿಸುತ್ತೇನೆ' ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಉದಾಸಿ ಅವರು, 'ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಬಗ್ಗೆ ನನಗೆ ಗೌರವವಿದೆ. ಆದರೆ, ನನ್ನ ಮೇಲೆ ಅವರ ಪುತ್ರ ಕುಮಾರಸ್ವಾಮಿ ಅವರು ವೃಥಾ ಆರೋಪ ಮಾಡುತ್ತಿದ್ದಾರೆ.ಹಾವೇರಿ ಭಾಗದಲ್ಲಿ ಜೆಡಿಎಸ್ ಸೋಲು ಅವರನ್ನು ಹತಾಶೆಗೆ ನೂಕಿದೆ. ಹೀಗಾಗಿ ಏನೇನೋ ಹೇಳುತ್ತಿದ್ದಾರೆ. ನಾನು ಯಾವುದೇ ಅಕ್ರಮ ಎಸೆಗಿಲ್ಲ. ಬೇಕಾದ ದಾಖಲೆ ಬಹಿರಂಗ ಪಡಿಸಲಿ ಅದಕ್ಕೆ ಸೂಕ್ತ ವೇದಿಕೆ ಇದೆ' ಎಂದಿದ್ದಾರೆ.

English summary
BS Yeddyurappa faction in Karnataka continued on Sunday and dissident leaders demanded BJP highcommand to make Shettar as CM by July 5, 2012. Shettar had meeting with state MLAs, MLCs, MPs today at his residence. Eshwarappa slams Renukacharya and Udasi hits back at HD Kumaraswamy was highlights of the day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X