ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲ ಆ ತಿರುಪತಿ ತಿಮ್ಮಪ್ಪನ ಪ್ರಸಾದ: ಕೃಷ್ಣಯ್ಯ ಶೆಟ್ಟಿ

By Srinath
|
Google Oneindia Kannada News

krishnaiah-shetty-pledges-loyal-with-sadananda-gowda
ಬೆಂಗಳೂರು. ಜುಲೈ 1: ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ರಾಜಕೀಯ ಸನ್ನಿವೇಶ, ಸಮೀಕರಣಗಳಿಗೆ ತಕ್ಕಂತೆ ತಾವೂ ಬಣ್ಣ ಬದಲಿಸುವುದು ರಾಜಕಾರಣಿಗಳ ಹುಟ್ಟುಗುಣ. ಹಾಗೆಂದೇ, ಮಾಜಿ ಸಚಿವ ಎಸ್ಎನ್ ಕೃಷ್ಣಯ್ಯ ಶೆಟ್ಟಿ ಅವರೂ ಮುಖ್ಯಮಂತ್ರಿ ಸದಾನಂದ ಗೌಡರ ನಿವಾಸದಲ್ಲಿ ನಿನ್ನೆ ಕಾಣಿಸಿಕೊಂಡು, ನೆರೆದಿದ್ದವರಿಗೆ ತುಸು ಅಚ್ಚರಿ ಮೂಡಿಸಿದರು.

ಆಷಾಢದ ಕೊನೆಯ ಶನಿವಾರ ಹೀಗೆ ದಿಢೀರನೆ ಸದಾನಂದ ಗೌಡರಿಗೆ ನಿಷ್ಠೆ ತೋರುವ ಮುನ್ನ ಸನ್ಮಾನ್ಯ ಕೃಷ್ಣಯ್ಯ ಶೆಟ್ಟಿ ಅವರ ನಿಷ್ಠೆ ಯಾರಿಗೆ ಮೀಸಲಾಗಿತ್ತು ಎಂಬುದು ಜಗತ್ತಿಗೇ ಗೊತ್ತಿರುವ ವಿಷಯ. ಆದರೂ ಪ್ರಸ್ತಾಪಕ್ಕೆ ಹೇಳುವುದಾದರೆ ಕೃಷ್ಣಯ್ಯ ಶೆಟ್ಟಿ ಮೊದಲಿನಿಂದಲೂ ಬಿಎಸ್ ಯಡಿಯೂರಪ್ಪನವರಿಗೆ ತಮ್ಮ ಅಖಂಡ ನಿಷ್ಠೆ ತೋರುತ್ತಾ ಬಂದವರು. ಅವರೊಂದಿಗೆ ಪರಪ್ಪನ ಅಗ್ರಹಾರ ಜೈಲು ಶಿಕ್ಷೆಯನ್ನೂ ಹಂಚಿಕೊಂಡವರು ಎಂಬುದು ಗೊತ್ತೇ ಇದೆ. ಮೂರು ತಿಂಗಳ ಹಿಂದೆ ಗೋವಿಂದಾ ನನ್ನದು ಏಡುಕೊಂಡಲವಾಡ ಬಣ ಎಂದಿದ್ದರು ಇದೇ ಕೃಷ್ಣಯ್ಯ ಶೆಟ್ಟಿ.

ಇಂತಿಪ್ಪ ಮಾಲೂರಿನ ವೀರಪುತ್ರ ಕೃಷ್ಣಯ್ಯ ಶೆಟ್ಟಿಗಾರು 'ಏಡುಕೊಂಡಲವಾಡಾ!' ಎನ್ನುತ್ತಾ ನಿನ್ನೆ ಸದಾನಂದರ ಮನೆಯ ಮುಂದೆ ಎಡವಿ ಬಿದ್ದಿದ್ದಾರೆ. ಯಾಕೆ ಹೀಗೆ ಎಂದು ಕೇಳಿದ್ದಕ್ಕೆ ಆ ತಿರುಪತಿ ತಿಮ್ಮಪ್ಪನೇ ಒಮ್ಮೆ ಎಡವಿ ಬಿದ್ದು ನಗೆಪಾಡಲಿಗೀಡಾಗಿದ್ದ. ಹೆಣ್ಣು ಕೊಟ್ಟ ಮಾವನ ಮನೆಯವರ ಮುಂದೆ ನಗೆಪಾಟಲಿಗೀಡಾಗಬಾರದು ಎಂದು ಹಣೆಯ ಮೇಲಿನ ಗಾಯವನ್ನು ಮರೆಮಾಚಲು ಬಿಳಿಯ ನಾಮ ಹಚ್ಚಿಕೊಳ್ಳುತ್ತಾನೆ ಎನ್ನುತ್ತದೆ ಪುರಾಣ ಪುಣ್ಯ ಕಥೆಯೊಂದು. ಮುಂದೆ ಅದೇ ಟ್ರೇಡ್ ಮಾರ್ಕ್ ತಿಮ್ಮಪ್ಪನ ನಾಮವಾಗುತ್ತದೆ.

ಅಂಥಾದ್ದರಲ್ಲಿ, ಬಡ್ಡಿ ಕಾಸಿನ ಪಿತಾಮಹ ತಿಮ್ಮಪ್ಪನ ಪರಮ ಭಕ್ತ ಕೃಷ್ಣಯ್ಯ ಶೆಟ್ಟಿಗಾರು 'ಈ ಹಂತದಲ್ಲಿ ನಾನು ಯಡಿಯೂರಪ್ನೋರನ್ನು ಬೆಂಬಲಿಸಿದರೆ ಅದರಿಂದ ತಿಪ್ಪಮ್ಮನಿಗೆ ಸಿಟ್ಟು ಬರುತ್ತದೆ. ಆದ್ದರಿಂದ ತಿಮ್ಮಪ್ಪನಿಗೆ ಕೋಪ ಬರಿಸಿ, ಆತನ ಅವಕೃಪೆಗೆ ತುತ್ತಾಗಲು ನನಗೆ ಸುತರಾಂ ಇಷ್ಟವಿಲ್ಲ. ಆದ್ದರಿಂದ ಹೀಗೇ ಅನುಗ್ರಹದತ್ತ ಹೆಜ್ಜೆ ಹಾಕುತ್ತಾ ಬಂದೆ' ಎಂದು ಮೂಗಿನ ಮೇಲಿನ ಕನ್ನಡಕ ತೆಗದು, ಪ್ಯಾಲಿ ನಗೆನಕ್ಕರು.

'ನೋಡಿ ನನ್ನ ಈ ನಡೆಯಿಂದ ಯಡಿಯೂರಪ್ಪ ಬೇಕಾದರೆ ಕೋಪ ಮಾಡಿಕೊಳ್ಳಲಿ. ಆದರೆ ತಿಮ್ಮಪ್ಪನಾಣೆಗೂ ಆ ತಿಮ್ಮಪ್ಪನಿಗೆ ಕೋಪ ಬರಿಸುವ ಧೈರ್ಯ ನನಗಿಲ್ಲ. ಯಡಿಯೂರಪ್ಪ ನಿಜಕ್ಕೂ ನಮ್ಮ ವಿವಾದಾತೀತ (ವಿವಾದಿತ?) ನಾಯಕನೇ ಸರಿ. ಅದರಲ್ಲಿ ಎರಡು ಮಾತಿಲ್ಲ. ಆದರೆ ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ವಿಚಾರ ಬಂದಾಗ ಸದಾ ನನ್ನ ನಿಷ್ಠೆ ಏನಿದ್ದರೂ ಸದಾನಂದರಿಗೇ ಮೀಸಲು. ಇಲ್ಲಾಂದ್ರೆ ಗೊತ್ತಲ್ಲಾ... ತಿಮ್ಮಪ್ಪ ಸಿಟ್ಟು ಮಾಡಿಕೊಂಡು ಬಿಡ್ತಾರಂತೆ' ಎಂದು ಮತ್ತೊಮ್ಮೆ ಮೂಗಿನ ಮೇಲಿನ ತಮ್ಮದೆ ಕನ್ನಡಕವನ್ನು ಸರಿಪಡಿಸಿಕೊಂಡರು.

'ಏನ್ ಹೇಳ್ತಿದ್ದೀರಿ ಶೆಟ್ರೇ? ನಮಗೇನು ಅರ್ಥಾ ಆಗಕ್ಕಿಲ್ಲ' ಅಂತ ಯಾರೋ ಕೇಳಿದ್ದಕ್ಕೆ 'ನೋಡಿ. ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದ ನಾವೊಂದಿಷ್ಟು ಶಾಸಕರು 2011ರ ಆಗಸ್ಟಿನಲ್ಲಿ ತಿರುಪತಿಗೆ ಹೋಗಿದ್ದೆವು. ಅಲ್ಲಿ ತಿಮ್ಮಪ್ಪನ ಸನ್ನಿಧಿಯಲ್ಲಿ ಸದಾನಂದ ಗೌಡರೇ ನಮ್ಮ ನಾಯಕ ಎಂದು ಪ್ರತಿಜ್ಞೆ ಮಾಡಿದೆವು. ತಿಮ್ಮಪ್ಪನ ಸಮ್ಮುಖದಲ್ಲಿ ಸದಾನಂದ ಗೌಡರ ಹೆಸರು ಹಾಗೆ ಅಂತಿಮವಾಗಿತ್ತು' ಎಂಬ ರಹಸ್ಯವನ್ನು ಬಿಚ್ಚಿಟ್ಟರು.

'ಆದರೆ ಈಗ ರಾಜಕೀಯ ಸನ್ನಿವೇಶ ಬದಲಾಗುತ್ತಿದೆ ಎಂದು ನಾನೂ ನನ್ನ ನಿಷ್ಠೆ ಬದಲಾಯಿಸಿಬೇಕಾ? ನಮ್ಮ ಮನೆ ದೇವರು ಅದನ್ನೆಲ್ಲ ಮೆಚ್ಚಾಕಿಲ್ಲಾ. ಆದ್ದರಿಂದ ಅಂದು ನಾವೆಲ್ಲ ಕೈಗೊಂಡಿದ್ದ ಪ್ರತಿಜ್ಞೆಯಂತೆ ಸದಾನಂದರೆ ನಮ್ಮ ನಾಯಕರು' ಎಂದು ತಮ್ಮ ಬೆನ್ನನ್ನು ತಾವೇ ಸವರಿಕೊಂಡರು. ಅದಾದ ಮರುಘಳಿಗೆಯೇ 'ಅಷ್ಟಕ್ಕೂ ಅವರೇನು ತಪ್ಪು ಮಾಡಿದ್ದಾರೆ ಅಂತ ಅವರನ್ನು ಕೆಳಗಿಳಿಸಬೇಕು?' ಎಂದು ತಮ್ಮ ರಾಜಕೀಯ ವರಸೆ ಶುರುವಿಟ್ಟುಕೊಂಡರು.

'ಅದೆಲ್ಲ ಓಕೆ! ಆದರೆ ಪ್ರಧಾನರ ಕೈಗೆ ಲಡ್ಡು ಏಕೆ?' ಎಂದು ಕೇಳಿದ್ದೇ ತಡ ಹಾವು ತುಳಿದವರಂತೆ ಎಚ್ಚೆತ್ತ ಕೃಷ್ಣಯ್ಯ ಶೆಟ್ಟಿಗಾರು, 'ಓ ಅದಾ ಅದೇಮಿ ಲೇದು. ಪಕ್ಷದಲ್ಲಿನ ವಿಪ್ಲವ ಕಂಡು ಎಲ್ಲ ಸರಿ ಹೋಗಲಿ ಎಂದು ತಿಮ್ಮಪ್ಪನಿಗೆ ಕೈಮುಗಿದು ಬಂದಿದ್ದ ಅಭಿಮಾನಿಯೊಬ್ಬರು ಲಡ್ಡು ಪ್ಯಾಕೆಟನ್ನು ನನ್ನ ಕೈಯಲ್ಲಿಟ್ಟರು. ತಕ್ಷಣ ಏನೋ ಹೊಳೆದಂತವನಾಗಿ ಅದೇ ಸ್ಪೀಡಿನಲ್ಲಿ ಒಂದು ಲಡ್ಡನ್ನು ಧರ್ಮೇಂದ್ರರ ಕೈಯಲ್ಲಿ ಮಡಗಿದೆ ಅಷ್ಟೇಯಾ' ಎಂದು ಕಣ್ಮರೆಯಾದರು.

English summary
BS Yeddyurappa loyalist SN Krishnaiah Shetty pledges his loyallity with CM Sadananda Gowda And says it is because of the sworn he had taken at Lord Tirupati in 2011 August.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X