ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದೇನು ಬಸ್ ನಿಲ್ದಾಣವೋ, ಕೆರೆಯೋ, ನರಕವೋ

By * ಸಾಗರ್ ದೇಸಾಯಿ, ಯಾದಗಿರಿ
|
Google Oneindia Kannada News

ಯಾದಗಿರಿ, ಜೂ. 28 : ಯಾದಗಿರಿ ಜಿಲ್ಲೆಯಲ್ಲಿರುವ ಅವ್ಯವಸ್ಥೆಯ ಬಗ್ಗೆ ಎಷ್ಟು ಬರೆದರೂ ಕಡಿಮೆಯೆ. ಶಾಲಾ ಮಕ್ಕಳಿಗೆ ತಲೆ ಮೇಲೊಂದು ಸೂರಿಲ್ಲ, ಸೂರಿದ್ದರೂ ಕುಳಿತುಕೊಳ್ಳಲು ಬೆಂಚಿಲ್ಲ, ಕೆಲ ಗ್ರಾಮಗಳಲ್ಲಿ ವಿದ್ಯುತ್ ಇಲ್ಲವೇ ಇಲ್ಲ, ಸುಸಜ್ಜಿತ ಹೆರಿಗೆ ಆಸ್ಪತ್ರೆಯಿಲ್ಲ, ಕುಡಿಯಲು ನೀರಿಲ್ಲ... ಇನ್ನು ಧೋಧೋ ಮಳೆ ಸುರಿದರಂತೂ ಜನರ ರಕ್ಷಣೆಗೆ ದೇವರೇ ಬರಬೇಕು.

Sorry state of Yadgir bus stand

ಮಂಗಳವಾರ ಮತ್ತು ಬುಧವಾರ ಸುರಿದ ಭಾರೀ ಮಳೆ ಆಕಾಶಕ್ಕೆ ಮಾತ್ರ ಕನ್ನಡಿ ಹಿಡಿದಿಲ್ಲ, ಸರಕಾರ ತೋರುತ್ತಿರುವ ಅನಾದರಕ್ಕೆ, ಯಾದಗಿರಿಯ ಅವ್ಯವಸ್ಥೆಯ ಆಗರಕ್ಕೆ ಕನ್ನಡಿ ಹಿಡಿದಿದೆ. ಇದೇನು ಜಿಲ್ಲಾ ಕೇಂದ್ರದ ಬಸ್ ನಿಲ್ದಾಣವೋ, ಹೊಲಸು ತುಂಬಿರುವ ಕೆರೆಯೋ ಎಂಬಂತಾಗಿದೆ. ಎರಡು ದಿನ ಸುರಿದ ಮಳೆಯಿಂದಾಗಿ ಬಸ್ ನಿಲ್ದಾಣದ ತುಂಬಾ ನೀರು ತುಂಬಿಕೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ನಿಲ್ದಾಣದಲ್ಲಿ ತುಂಬಿದ ನೀರು ಹರಿದುಹೋಗಲು ವ್ಯವಸ್ಥೆ ಮಾಡಲಾಗಿಲ್ಲ. ಜನರಂತೂ ಬಸ್ ತಲುಪಲು ಕೊಚ್ಚೆ ನೀರಿಗಿಳಿಯದೆ ಬೇರೆ ದಾರಿಯೇ ಇಲ್ಲದಂತಾಗಿದೆ. ಸರಕಾರವನ್ನು ಬೈದುಕೊಳ್ಳುತ್ತ, ಅಧಿಕಾರಿಗಳನ್ನು ಶಪಿಸುತ್ತ ಜನರು ತಾವು ತಲುಪಬೇಕಾದ ಗಮ್ಯಾ ತಲುಪುತ್ತಿದ್ದಾರೆ. ಯಾವ ಕರ್ಮಕ್ಕೆ ಯಾದಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕಾಗಿತ್ತು ಎಂದು ಹೀಯಾಳಿಸುತ್ತಿದ್ದಾರೆ. ಸರಕಾರ ಮಾತ್ರ ತನಗೂ ಯಾದಗಿರಿಗೂ ಸಂಬಂಧವೇ ಇಲ್ಲ ಎಂಬಂತೆ ಕಣ್ಣುಮುಚ್ಚಿ ಕುಳಿತಿದೆ.

ಮಂಗಳವಾರ ಮತ್ತು ಬುಧವಾರ ಸುರಿದ ಮುಂಗಾರು ಮಳೆಗೆ ಇಲ್ಲಿಯ ಬಸ್ ನಿಲ್ದಾಣದಲ್ಲಿ ಹೊಲಸು ನೀರು ತುಂಬಿದ ಕೆರೆಯಂತಾಗಿದೆ. ಪ್ರಯಾಣಿಕರು ಕೆಸರು ನೀರಲ್ಲಿ ಈಜುತ್ತಾ ಈಜುತ್ತಾ ಬಸ್ ಏರಬೇಕಿದೆ. ಇನ್ನು ಮದುವೆ, ಮುಂಜಿಗೆಂದು ಜರತಾರಿ ಸೀರೆಯುಟ್ಟು ಅಲಂಕಾರ ಮಾಡಿಕೊಂಡು ಬಂದ ಹೆಣ್ಣುಮಕ್ಕಳ ಪಾಡಂತೂ ಮುಗಿದೇ ಹೋಯಿತು. ಯಾರಾದರೂ ಯಾದಗಿರಿ ಬಸ್ ನಿಲ್ದಾಣಕ್ಕೆ ಬರುವವರು ಮತ್ತೊಂದು ಜೊತೆ ಬಟ್ಟೆ ತರಲು ಮರೆಯದಿರಿ.

ಪ್ರತಿ ವರ್ಷ ಸಂತೆ ಮೈದಾನದಂತಿರುವ ನಿಲ್ದಾಣದಲ್ಲಿ ಮಳೆ ಬಂದರೆ ಸಾಕು ಕೆರೆ ನಿರ್ಮಾಣವಾಗುತ್ತದೆ. ಇಲ್ಲದಿದ್ದರೆ ಧೂಳುಮಯ. ಇದನ್ನು ಸಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾದ ನಗರಸಭೆ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಇನ್ನೂ ಪಕ್ಕದ ಶೌಚಾಲಯವಂತೂ ಮಳೆಯಿಂದಾಗಿ ಸಹಿಸಲಸಾಧ್ಯ ದುರ್ನಾತ ಬೀರುತ್ತಿದೆ. ಇಷ್ಟು ಮಾತ್ರವಲ್ಲ, ಅಲ್ಲಲ್ಲೇ ಸುತ್ತಾಡುವ ಹಂದಿಗಳು, ಗೋಡೆ ಕಂಡಾಗಲೆಲ್ಲ ಪರಿಸರ ಕರೆಗೆ ಓಗೊಡುವ (ಅ)ನಾಗರಿಕರು. ಜಿಲ್ಲಾ ಕೇಂದ್ರಕ್ಕೆ ಬಂದ ಗ್ರಾಮಸ್ಥರು ಬಸ್ ಬರುವವರೆಗೆ ನರಕ ಸದೃಶ ವಾತಾವರಣದಲ್ಲಿ ಕಳೆಯಬೇಕಾಗಿದೆ.

ಡಾಂಬರೇ ಇಲ್ಲ : ಇಲ್ಲಿಯ ಬಸ್ ನಿಲ್ದಾಣಕ್ಕೆ ಈ ದುಸ್ಥಿತಿ ಬಂದಿದ್ದು ಇವತ್ತೇ ಅಲ್ಲ, ಮೊದಲಿಂದಲೂ ಹೀಗೆ ಇದೆ. ನಿಲ್ದಾಣದ ಕೆರೆಯ ಆವರಣದಲ್ಲಿ ಕೆಂಪು ನೀರು ತುಂಬಿ ನಿಂತಿರುತ್ತದೆ. ಬಿಸಿಲು ಬಂದರೂ ಆರದ್ದರಿಂದ ಪರಿಸ್ಥಿತಿ ನಿರ್ಮಾಣವಾಗಿದೆ. ನಿಲ್ದಾಣದ ಆವರಣದ ಡಾಂಬರು ಕಿತ್ತು ವರ್ಷವೇ ಕಳೆದರೂ ಇದುವರೆಗೂ ಸಾರಿಗೆ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.

ಎರಡು ದಿನ ಮಳೆ ಬಂದರೆ ಹೀಗೆ. ಇನ್ನು ಇಡೀ ತಿಂಗಳು ಮಳೆ ಬಂದರೆ ಪರಿಸ್ಥಿತಿ ಹೇಗಿರಬಹುದು ಎಂದು ಸರಕಾರಿ ಅಧಿಕಾರಿಗಳು ಯೋಚಿಸಬೇಕು. ಈ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಬಸ್ ನಿಲ್ದಾಣದಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಂಡು ಪ್ರಯಾಣಿಕರಿಗೆ ಸುಖ ಪ್ರಯಾಣ ನೀಡುವಲ್ಲಿ ಸಾರಿಗೆ ಇಲಾಖೆ ಮುಂದಾಗಬೇಕಿದೆ. ಗೃಹ ಮತ್ತು ಸಾರಿಗೆ ಸಚಿವರಾದ ಆರ್ ಅಶೋಕ್ ಅವರು ಮಳೆಗಾಲದಲ್ಲಿ ಒಂದು ಇಲ್ಲಿ ಬರುವ ಕಾರ್ಯಕ್ರಮ ಹಾಕಿಕೊಳ್ಳಲಿ.

English summary
Dear transport minister R Ashok please come to Yadgir once during monsoon to know the sorry state of district bus stand. Just two days rain has turned bus stand into dirty lake. The place has created real hell for the commuters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X