ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುರೇಶ್ ತಪ್ಪು ಮಾಡಿಲ್ಲ; ರಾಜೀನಾಮೆ ವಾಪಸ್: CM

By Srinath
|
Google Oneindia Kannada News

suresh-kumar-will-withdraw-resignation-sadananda-gowda
ಬೆಂಗಳೂರು, ಜೂನ್ 26: ನಗರಾಭಿವೃದ್ಧಿ ಹಾಗೂ ಕಾನೂನು ಸಚಿವ ಎಸ್. ಸುರೇಶ್ ಕುಮಾರ್ ಅವರು ಯಾವುದೇ ತಪ್ಪು ಮಾಡಿಲ್ಲ. ಸುರೇಶ್ ಕುಮಾರ್ ಅವರು ಕಾನೂನು ಉಲ್ಲಂಘಿಸಿ BDA ಸೈಟ್ ಪಡೆದಿಲ್ಲ ಎಂದು ಅಡ್ವೊಕೇಟ್ ಜನರಲ್ ವರದಿ ದೃಢಪಡಿಸಿದೆ.

ಆದ್ದರಿಂದ ಸುರೇಶ್ ಅವರು ರಾಜೀನಾಮೆಯನ್ನು ಹಿಂಪಡೆಯುತ್ತಾರೆ. ಮತ್ತು ಎಂದಿನಂತೆ ಕೆಲಸಕ್ಕೆ ಮರಳುತ್ತಾರೆ ಎಂದು ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಮಂಗಳವಾರ ಘೋಷಿಸಿದ್ದಾರೆ.

ಕಳೆದ ಶನಿವಾರ ಬೆಳ್ಳಂಬೆಳಗ್ಗೆಯೇ ಪತ್ರಿಕೆಯೊಂದರಲ್ಲಿ ತಮ್ಮ ವಿರುದ್ಧ ಬಂದ ವರದಿಯನ್ನು ಆಧರಿಸಿ, ಅಕ್ರಮ ನಿವೇಶನ ಆರೋಪದ ಮೇಲೆ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಸುರೇಶ್ ಕುಮಾರ್ ರಾಜಕೀಯ ಬಿರುಗಾಳಿ ಎಬ್ಬಿಸಿದ್ದರು.

ಇದಕ್ಕೂ ಮುನ್ನ, BDA ನಿವೇಶನ ಪಡೆಯುವ ಪ್ರಕ್ರಿಯೆಯಲ್ಲಿ ಸುರೇಶ್‌ ಕುಮಾರ್‌ ಕಾನೂನು ಉಲ್ಲಂಘಿಸಿಲ್ಲ ಎಂದು ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ಅಡ್ವೊಕೇಟ್‌ ಜನರಲ್‌ ಎಸ್‌. ವಿಜಯಶಂಕರ್‌ ಅವರು ಸೋಮವಾರ ವರದಿ ಸಲ್ಲಿಸಿದ್ದರು.

AG ಕ್ಲೀನ್‌ಚಿಟ್‌: ಸುಳ್ಳು ಮಾಹಿತಿ ನೀಡಿ ಜಿ ಕೆಟಗರಿ ನಿವೇಶನ ಪಡೆದಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸುರೇಶ್‌ ಕುಮಾರ್‌ ಅವರಿಗೆ AG ವಿಜಯಶಂಕರ್‌ ಕ್ಲೀನ್‌ಚಿಟ್‌ ಕೊಟ್ಟಿದರು.

ಸುರೇಶ್‌ ಕುಮಾರ್‌ ವಿರುದ್ಧದ ಆರೋಪಗಳಲ್ಲಿರುವ ಕಾನೂನಾತ್ಮಕ ಅಂಶಗಳನ್ನು ಪರಾಮರ್ಶೆ ಮಾಡಿ ವರದಿ ನೀಡಿದ ಅಡ್ವೊಕೇಟ್‌ ಜನರಲ್‌, ನಿವೇಶನ ಪಡೆಯುವ ಪ್ರಕ್ರಿಯೆಯಲ್ಲಿ ಕಾನೂನು ಉಲ್ಲಂಘನೆ ಆಗಿಲ್ಲವಾದ್ದರಿಂದ ಪ್ರಕರಣದ ತನಿಖೆ ನಡೆಸುವ ಅಗತ್ಯವೂ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಮುಖ್ಯಮಂತ್ರಿ ಸೂಚನೆ ಮೇರೆಗೆ ಪ್ರಕರಣದ ಅಧ್ಯಯನ ನಡೆಸಿದ ಅಡ್ವೊಕೇಟ್‌ ಜನರಲ್‌ ಸೋಮವಾರ ಸಂಜೆ ಮುಖ್ಯಮಂತ್ರಿಗೆ ವರದಿ ಸಲ್ಲಿಸಿದ್ದು, ಸುರೇಶ್‌ ಕುಮಾರ್‌ ಅವರು ಶಾಸಕರಾಗಿ ನಿಯಮ ಪ್ರಕಾರವೇ ನಿವೇಶನ ಪಡೆದಿದ್ದಾರೆ. ಮೇಲ್ನೋಟಕ್ಕೆ ಯಾವುದೇ ತಪ್ಪು ಕಂಡುಬರುತ್ತಿಲ್ಲ ಎಂದು ವರದಿಯಲ್ಲಿ ತಿಳಿಸಿದ್ದರು ಎನ್ನಲಾಗಿದೆ.

ಕ್ಲೀನ್‌ಚಿಟ್‌ಗೆ ಭಾಸ್ಕರನ್‌ ಪ್ರತಿಕ್ರಿಯೆ:
ಸುಳ್ಳು ಪ್ರಮಾಣ ಪತ್ರ ನೀಡಿ ಜಿ ಕ್ಯಾಟಗೆರಿಯಲ್ಲಿ ಬಿಡಿಎ ನಿವೇಶನ ಪಡೆದಿರುವ ಸಂಬಂಧ ಸುರೇಶ್‌ ಕುಮಾರ್‌ ಕುರಿತು ಅಡ್ವೋಕೇಟ್‌ ಜನರಲ್‌ ಕ್ಲೀನ್‌ಚಿಟ್‌ ನೀಡಿರುವುದು ನಿರೀಕ್ಷಿತ ಎಂದು ಆರ್‌ಟಿಐ ಕಾರ್ಯಕರ್ತ ಭಾಸ್ಕರನ್‌ ಪ್ರತಿಕ್ರಿಯಿಸಿದ್ದಾರೆ.

'ಅಡ್ವೋಕೇಟ್‌ ಜನರಲ್‌ ರಾಜಕೀಯ ನೇಮಕಾತಿ. ಸರ್ಕಾರದ ವಿಶ್ವಾಸಕ್ಕೆ ಅನುಗುಣವಾಗಿ ಅವರು ವರದಿ ನೀಡಬೇಕಾಗುತ್ತದೆ. ಹೀಗಾಗಿ, ಸುರೇಶ್‌ ಕುಮಾರ್‌ ವಿಚಾರದಲ್ಲಿಯೂ ಸರ್ಕಾರದ ಪರವಾಗಿಯೇ ವರದಿ ನೀಡಿರುವುದು ಸಹಜ' ಎಂದು ಸುರೇಶ್‌ ಕುಮಾರ್‌ ವಿರುದ್ಧ ಕಾನೂನು ಬಾಹಿರವಾಗಿ ನಿವೇಶನ ಪಡೆದ ಆರೋಪ ಮಾಡಿದ ಭಾಸ್ಕರನ್‌ ಹೇಳಿದ್ದಾರೆ.

'ಅಡ್ವೋಕೇಟ್‌ ಜನರಲ್‌ ಅವರನ್ನು ಆಯ್ಕೆ ಮಾಡುವುದು ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರು. ಇದೀಗ ಕಾನೂನು ಸಚಿವರ ಮೇಲೆಯೇ ಆರೋಪ ಬಂದಿರುವ ಬಗ್ಗೆ ಅಭಿಪ್ರಾಯ ಕೊಡಿ ಎಂದರೆ ಯಾವ ರೀತಿಯ ಅಭಿಪ್ರಾಯ ಕೊಡ್ತಾರೆ?' ಎಂದು ಪ್ರಶ್ನಿಸಿದ್ದಾರೆ.

English summary
Karnataka BJP Minister S Suresh Kumar will withdraw resignation declared the Chief Minisiter DV Sadananda gowda a short while ago in Bangalore (June 26).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X