ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಕಾರಿ ಕನ್ನಡ ಶಾಲೆಗಳಿಗೆ ಬೀಗ ಜಡಿದ ಕೋರ್ಟ್

By Prasad
|
Google Oneindia Kannada News

Karnataka HC permits govt to close Kannada schools
ಬೆಂಗಳೂರು, ಜೂ. 20 : ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿರುವ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಮುಚ್ಚಲು ಅವಕಾಶ ನೀಡಬಾರದು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಕನ್ನಡದ ಸಾಹಿತಿಗಳಿಗೆ ಹಿನ್ನಡೆಯುಂಟಾಗಿದ್ದು, ಮೂರು ಸಾವಿರಕ್ಕೂ ಹೆಚ್ಚಿನ ಸರಕಾರಿ ಶಾಲೆಗಳನ್ನು ಮುಚ್ಚಲು ಕರ್ನಾಟಕ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ.

ಕರ್ನಾಟಕದಲ್ಲಿ ಕನ್ನಡ ಶಾಲೆಗಳೇ ಕಣ್ಮರೆಯಾಗುತ್ತಿದ್ದು, ಐದಕ್ಕೂ ಕಡಿಮೆ ವಿದ್ಯಾರ್ಥಿಗಳಿರುವ ಸರಕಾರಿ ಶಾಲೆಗಳನ್ನು ಮುಚ್ಚಿ ಬೇರೆ ಶಾಲೆಗಳೊಂದಿಗೆ ವಿಲೀನ ಮಾಡುವ ರಾಜ್ಯ ಸರಕಾರದ ಆದೇಶವನ್ನು ತಡೆಹಿಡಿಯಬೇಕು ಎಂದು ಸಾಹಿತಿಗಳಾದ ಡಾ. ಯು.ಆರ್. ಅನಂತ ಮೂರ್ತಿ, ಡಾ. ಚಂದ್ರಶೇಖರ ಕಂಬಾರ, ಡಾ. ಗಿರೀಶ್ ಕಾರ್ನಾಡ್, ಚನ್ನವೀರ ಕಣವಿ ಮುಂತಾದವರು ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ಆದರೆ, ಸಾಹಿತಿಗಳು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಳ್ಳಿಹಾಕಿದ್ದು, ಮೂರು ಸಾವಿರಕ್ಕೂ ಅಧಿಕವಿರುವ ಸರಕಾರಿ ಕನ್ನಡ ಶಾಲೆಗಳು ಬೆರಳೆಣಿಕೆಯಷ್ಟು ಇರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸದ್ಯದಲ್ಲೇ ಸೆಂಡ್ ಆಫ್ ನೀಡಲಿವೆ. ಕಡಿಮೆ ವಿದ್ಯಾರ್ಥಿಗಳಿದ್ದರೂ ಇತರ ವಿದ್ಯಾರ್ಥಿಗಳನ್ನು ಆಕರ್ಷಿಸಲು ಮತ್ತು ಹೊಸ ಶಿಕ್ಷಕರನ್ನು ನೇಮಿಸಲು ಸರಕಾರ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂಬ ಕೂಗಿಗೆ ಭಾರೀ ಹೊಡೆತ ಬಿದ್ದಿದೆ.

ಕರ್ನಾಟಕ ಹೈಕೋರ್ಟ್ ಪ್ರಕಾರ, ಐದಕ್ಕೂ ಕಡಿಮೆ ವಿದ್ಯಾರ್ಥಿಗಳಿರುವ ಸರಕಾರಿ ಶಾಲೆಗಳನ್ನು 1 ಕಿ.ಮೀ. ವ್ಯಾಪ್ತಿಯಲ್ಲಿರುವ ಮತ್ತೊಂದು ಶಾಲೆಯೊಂದಿಗೆ ವಿಲೀನಗೊಳಿಸಬೇಕು. ಆ ಮತ್ತೊಂದು ಶಾಲೆ 3 ಕಿ.ಮೀ. ವ್ಯಾಪ್ತಿಯಲ್ಲಿ ಇರದಿದ್ದರೆ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆಯನ್ನು ಸರಕಾರ ಕಲ್ಪಿಸಿಕೊಡಬೇಕು. ಹಾಗೆಯೆ, 6ನೇ ತರಗತಿಯಿಂದ 8ನೇ ತರಗತಿಯವರೆಗೆ ಸರಕಾರಿ ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ವಿದ್ಯಾರ್ಥಿ, ವಿದ್ಯಾರ್ಥಿನಿಯರಿದ್ದರೆ ಅಂತಹ ಶಾಲೆಗಳನ್ನು ಕೂಡ 3 ಕಿ.ಮೀ. ವ್ಯಾಪ್ತಿಯೊಳಗಿನ ಮತ್ತೊಂದು ಶಾಲೆಯೊಂದಿಗೆ ವಿಲೀನಗೊಳಿಸಬೇಕು.

6ನೇ ತರಗತಿಯಿಂದ ಕರ್ನಾಟಕದಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಬೇಕೆಂದು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಚಿಂತನೆ ನಡೆಸುತ್ತಿರುವ ಸಂದರ್ಭದಲ್ಲಿಯೇ ಕರ್ನಾಟಕ ಹೈಕೋರ್ಟಿನಿಂದ ಈ ಆದೇಶ ಬಂದಿದೆ. ರಾಜ್ಯದಲ್ಲಿ ಶಿಕ್ಷಕರಿದ್ದೆಡೆ ಮಕ್ಕಳಿಲ್ಲ, ಭರ್ತಿ ಮಕ್ಕಳಿದ್ದೆಡೆ ಶಿಕ್ಷಕರೇ ಇಲ್ಲ ಎಂಬಂತಹ ಪರಿಸ್ಥಿತಿ ಇದೆ. ಹಾಗೆಯೆ, ಶಿಕ್ಷಕರಿದ್ದು, ಮಕ್ಕಳೂ ಇದ್ದರೂ ಅವರಿಗೆ ಸರಿಯಾದ ಕಟ್ಟಡವೂ ಇಲ್ಲ ಎಂಬಂತಹ ಗ್ರಾಮಗಳು ಅನೇಕವಿವೆ. ಕನ್ನಡ ಸಾಹಿತಿಗಳು ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುತ್ತಾರಾ? ಅಥವಾ ಕೋರ್ಟಿನೊಂದಿಗೆ ಹೊಡೆದಾಟ ಸಾಕಪ್ಪಾ ಸಾಕು, ಆದಿದ್ದಾಗಲಿ ಎಂದು ಸುಮ್ಮನೆ ಕುಳಿತುಬಿಡುತ್ತಾರಾ?

English summary
Karnataka high court has quashed the Public Interest Litigation (PIL) filed by Kannada laureates questioning the order passed by govt to close govt Kannada schools which have less number of students. It is a victory to Karnataka govt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X