ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಮೀನು ಲಂಚ : ಜಡ್ಜ್, ಕರ್ನಾಟಕದ ಶಾಸಕರು ಬುಕ್

By Prasad
|
Google Oneindia Kannada News

Pattabhirama Rao, Somasekhara Reddy, Suresh Babu
ಹೈದರಾಬಾದ್, ಜೂ. 9 : ಅಕ್ರಮ ಗಣಿಗಾರಿಕೆಯ ಆರೋಪಿ ಗಾಲಿ ಜನಾರ್ದನ ರೆಡ್ಡಿಗೆ ಜಾಮೀನು ನೀಡಲು ಸಿಬಿಐ ನ್ಯಾಯಾಧೀಶ ಪಟ್ಟಾಭಿರಾಮ ರಾವ್ ಅವರು ಲಂಚ ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಇಬ್ಬರು ಶಾಸಕರು ಸೇರಿದಂತೆ ಎಂಟು ಜನರ ವಿರುದ್ಧ ಶನಿವಾರ ಎಫ್ಐಆರ್ ದಾಖಲಾಗಿದೆ.

ಲಂಚ ಸ್ವೀಕರಿಸಿದ್ದ ಹೆಚ್ಚುವರಿ ಸಿಬಿಐ ನ್ಯಾಯಾಧೀಶ ಪಟ್ಟಾಭಿರಾಮ ರಾವ್, ಅವರ ಮಕ್ಕಳಾದ ರವಿಚಂದ್ರ ಮತ್ತು ಆದಿತ್ಯ, ನಿವೃತ್ತ ನ್ಯಾಯಾಧೀಶ ಚಲಪತಿ ರಾವ್, ಜನಾರ್ದಾನ ರೆಡ್ಡಿ ಸಹೋದರ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ, ಕಂಪ್ಲಿ ಶಾಸಕ ಸುರೇಶ್ ಬಾಬು, ಹೈದರಾಬಾದ್ ರೌಡಿ ಶೀಟರ್ ಯಾದಗಿರಿ, ದಶರಥ ರಾಮಿರೆಡ್ಡಿ ಮತ್ತು ಓರ್ವ ಜ್ಯೂನಿಯರ್ ವಕೀಲನ ವಿರುದ್ಧ ಆಂಧ್ರಪ್ರದೇಶದ ಭ್ರಷ್ಟಾಚಾರ ವಿರೋಧಿ ದಳ(ಎಸಿಬಿ) ದೂರು ದಾಖಲಿಸಿದೆ.

ಶುಕ್ರವಾರವೆ ಆಂಧ್ರಪ್ರದೇಶದ ಉಚ್ಚ ನ್ಯಾಯಾಲಯ ಜಾಮೀನಿಗಾಗಿ ಲಂಚ ಪಡೆದ ಪ್ರಕರಣವನ್ನು ಸಿಬಿಐನಿಂದ ಎಸಿಬಿಗೆ ವರ್ಗಾವಣೆ ಮಾಡಿತ್ತು. ತನ್ನ ಸುಪರ್ದಿಗೆ ಪ್ರಕರಣ ಬಂದ ಮರುದಿನವೇ ಭ್ರಷ್ಟಾಚಾರ ವಿರೋಧಿ ದಳ ಪಟ್ಟಾಭಿರಾಮ ರಾವ್ ಮತ್ತು ಈ ಸಂಚಿನಲ್ಲಿ ಭಾಗಿಯಾದ ಏಳು ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120(ಬಿ), 420 ಮತ್ತು 417 ಅಡಿಗಳಲ್ಲಿ ಲಂಚಕ್ಕಾಗಿ ಸಂಚು ಹೂಡಿ ಮೋಸವೆಸಗಿದ್ದಕ್ಕಾಗಿ, ಹಾಗು ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 1 ಮತ್ತು 13(2) ಭ್ರಷ್ಟಾಚಾರವೆಸಗಿದ ಆರೋಪದ ಮೇಲೆ ದೂರು ದಾಖಲಿಸಲಾಗಿದೆ. ಎಸಿಬಿಯ ಕೇಂದ್ರೀಯ ತನಿಖಾ ದಳ ತನ್ನ ತನಿಖೆಯನ್ನು ಮುಂದುವರಿಸಲಿಗೆ.

ಜಾಮೀನಿಗಾಗಿ ನ್ಯಾಯಾಧೀಶ ಪಟ್ಟಾಭಿರಾಮ ರಾವ್ ಮತ್ತು ಚಂಚಲಗುಡ ಜೈಲಿನಲ್ಲಿರುವ ಗಾಲಿ ಜನಾರ್ದನ ರೆಡ್ಡಿ ನಡುವೆ 60 ಕೋಟಿ ರು. ಡೀಲ್ ನಡೆದಿತ್ತು. ಈ ಡೀಲ್‌ನಲ್ಲಿ ಪಟ್ಟಾಭಿರಾಮ ರಾವ್ ಅವರ ಮಕ್ಕಳು, ಕರ್ನಾಟಕದ ಶಾಸಕರಾದ ಸೋಮಶೇಖರ ರೆಡ್ಡಿ ಮತ್ತು ಸುರೇಶ್ ಬಾಬು ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಸೋಮಶೇಖರ ರೆಡ್ಡಿ ಮತ್ತು ಸುರೇಶ್ ಬಾಬು ಅವರು ಅಪಾರ ಪ್ರಮಾಣದ ಹಣವನ್ನು ರಸ್ತೆ ಮುಖಾಂತರ ಸಾಗಿಸಿ ನ್ಯಾಯಾಧೀಶರ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದರು.

ಈ ಡೀಲ್‌ಗೆ ಸಂಬಂಧಿಸಿದಂತೆ ದೂರವಾಣಿ ಸಂಭಾಷಣೆ ಸಿಬಿಐಗೆ ದೊರೆತ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿ ಲಕ್ಷ್ಮಿನಾರಾಯಣ ಅವರು ದಾಳಿ ನಡೆಸಿ ಲಂಚ ಪಡೆದ ಘಟನೆಯನ್ನು ಬಯಲಿಗೆಳೆದಿದ್ದರು. ಲಂಚದ ಡೀಲ್ ಬಗ್ಗೆ ಹೈಕೋರ್ಟಿಗೆ ದೂರು ನೀಡಿದ್ದರ ಹಿನ್ನೆಲೆಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಮದನ್ ಬಿ. ಲೋಕೂರ್ ಅವರು ಪಟ್ಟಾಭಿರಾಮ ರಾವ್ ಅವರನ್ನು ಅಮಾನತು ಮಾಡಿದ್ದರು. ಈಗ ಎಫ್ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಯಾವುದೇ ಕ್ಷಣ ಅಮಾನತುಗೊಂಡ ನ್ಯಾಯಾಧೀಶ ಪಟ್ಟಾಭಿರಾಮ ರಾವ್ ಮತ್ತಿತರರ ಬಂಧನವಾಗುವ ಸಾಧ್ಯತೆಗಳಿವೆ.

English summary
Cash-for-bail : Anti-Corruption Bureau (ACB) files FIR against suspended CBI judge Pattabhirama Rao, Karnataka MLAs Somasekhara Reddy, Suresh Babu and 5 others. The jugde had accepted money to grant bail to Janardhana Reddy who is jailed in illegal mining case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X