ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದಲಾವಣೆ ತರುವ ಸಾಮರ್ಥ್ಯ ನನ್ನಲ್ಲಿದೆ : ಅಶ್ವಿನ್

By * ಪ್ರಸಾದ ನಾಯಿಕ
|
Google Oneindia Kannada News

I am the best candidate : Ashwin Mahesh
ಬೆಂಗಳೂರು, ಜೂ. 6 : ಇಂದಿನ ಕೊಳೆತುಹೋದ ರಾಜಕೀಯದಲ್ಲಿ ಅನಾಚಾರ ತಾಂಡವವಾಡುತ್ತಿದೆ. ಇದರಿಂದಾಗಿ ಸಮಾಜದಲ್ಲಿ ನಾನಾ ಸಮಸ್ಯೆಗಳು ಉದ್ಭವವಾಗುತ್ತಿದೆ. ಇಂಥ ಸಮಸ್ಯೆಗಳನ್ನು ರಾಜಕೀಯವಾಗಿಯೇ ಪರಿಹರಿಸುವವರು ಬೇಕಾಗಿದ್ದಾರೆ. ಎಲ್ಲ ಅಡೆತಡೆಗಳನ್ನು ಸಮರ್ಥವಾಗಿ ಎದುರಿಸುವವರು ಮತ್ತು ಅರ್ಹತೆಯುಳ್ಳವರು ಬೇಕಾಗಿದ್ದಾರೆ. ಆ ಎಲ್ಲ ಸಾಮರ್ಥ್ಯ ನನ್ನಲ್ಲಿದೆ ಮತ್ತು ಸಮಾಜದಲ್ಲಿ ಬದಲಾವಣೆ ತರುವ ವಿಶ್ವಾಸವಿದೆ ಎಂದು ಡಾ. ಅಶ್ವಿನ್ ಮಹೇಶ್ ಅವರು ಆತ್ಮವಿಶ್ವಾಸದಿಂದ ನುಡಿದಿದ್ದಾರೆ.

ನಮ್ಮಲ್ಲಿ ನಾವು ನಂಬಿಕೆಯಿಟ್ಟು, ನಮ್ಮ ಸುತ್ತಲಿರುವವರನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡರೆ, ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸಾಧ್ಯ ಮತ್ತು ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರಲು ಶಕ್ಯ ಎಂದು ಗಟ್ಟಿಯಾಗಿ ನಂಬಿರುವ, ವಿಧಾನ ಪರಿಷತ್ ಪದವೀಧರ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಡಾ. ಅಶ್ವಿನ್ ಮಹೇಶ್ ಅವರು ತಮ್ಮ ಅನಿಸಿಕೆಗಳನ್ನು ಬುಧವಾರ ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡರು. ಭ್ರಷ್ಟಾಚಾರವನ್ನು ವಿರೋಧಿಸಿ ಸುಸಂಸ್ಕೃತ ಸಮಾಜಕ್ಕಾಗಿ ದುಡಿಯುವುದಾಗಿ ಅವರು ಪ್ರಮಾಣ ಸ್ವೀಕರಿಸಿದರು.

ಅವರಿಗೆ ಬೆನ್ನೆಲುಬಾಗಿ ಮತ್ತು ಅವರನ್ನು ಗೆಲ್ಲಿಸಲೇಬೇಕೆಂದು ಹಠತೊಟ್ಟಿರುವ ಯುವಕರ ಪಡೆಯೇ ಸಿದ್ಧವಾಗಿದೆ. ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ, ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಎಮ್.ಎನ್. ವೆಂಕಟಾಚಲಯ್ಯ, ರಂಗಕರ್ಮಿ ಪ್ರಕಾಶ್ ಬೆಳವಾಡಿ, ಲೀಡ್ ಇಂಡಿಯಾ ಹರಿಕಾರ ಆರ್.ಕೆ. ಮಿಶ್ರಾ ಮುಂತಾದವರು ಡಾ. ಅಶ್ವಿನ್ ಅವರನ್ನು ಬೆಂಬಲಿಸುತ್ತಿದ್ದಾರೆ.

"ಇದು ನಮ್ಮ ದೇಶ, ನಮ್ಮ ರಾಜ್ಯ. ಆದರೆ, ಇಲ್ಲಿ ಜನರಿಂದ, ಜನರಿಗಾಗಿ ಆಡಳಿತ ನಡೆಸಲಾಗುತ್ತಿದೆಯೇ ಹೊರತು ಜನರೇ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ. ಬಣ್ಣಬಣ್ಣದ ಟೋಪಿ ತೊಟ್ಟವರು, ರೆಸಾರ್ಟ್ ರಾಜಕೀಯದಲ್ಲಿಯೇ ಕಾಲಹರಣ ಮಾಡುತ್ತಿರುವವರು, ಗುಂಡು ತುಂಡು ಸೇವಿಸುತ್ತ ಜನರನ್ನು ಮರೆತಿರುವವರು ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಇಂಥ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕಿದ್ದರೆ ಪದವೀಧರ ಕ್ಷೇತ್ರದ ಚುನಾವಣೆ ಅತ್ಯುತ್ತಮ ಅವಕಾಶ ಜನರಿಗೆ ನೀಡಿದೆ" ಎಂದು ಅಶ್ವಿನ್ ಹೇಳಿದರು.

"ಬದಲಾವಣೆ ತರುತ್ತೇನೆಂಬ ವಿಶ್ವಾಸದಿಂದ ನಾನು ಮುಂದೆ ಬಂದಿದ್ದೇನೆ. ನನಗೆ ಹೆಗ್ಡೆ, ವೆಂಕಟಾಚಲಯ್ಯ, ಮಿಶ್ರಾ ಅಂಥವರ ಆಶೀರ್ವಾದವಿದೆ. ಈಗ ಮತದಾರರೂ ಮುಂದಾಗಬೇಕಾಗಿದೆ. ಇಷ್ಟು ದಿನ ನಡೆದಿರುವುದು ಇನ್ನು ಸಾಕು. ಜನಸಾಮಾನ್ಯರೂ ರಾಜಕೀಯದ ಭಾಗವಾಗಬೇಕಾಗಿದೆ. ನಾನು ಮುಂದಾಗಿದ್ದೇನೆ, ನೀವೂ ಮುಂದಾಗಿ. ನನಗೇ ಪ್ರಥಮ ಆದ್ಯತೆಯ ಮತ ನೀಡಿ" ಎಂದು ಅಶ್ವಿನ್ ಮಹೇಶ್ ಅವರು ಪದವೀಧರರಿಗೆ ಮನವಿ ಮಾಡಿದರು.

"ವಿಪರ್ಯಾಸದ ಸಂಗತಿಯೆಂದರೆ, ಈ ಕ್ಷೇತ್ರಕ್ಕೆ ಹೇಗೆ ನೊಂದಾವಣಿಯಾಗಬೇಕು ಎಂದು ಪದವೀಧರರಿಗೆ ಗೊತ್ತಿಲ್ಲ. ಚುನಾವಣಾ ಆಯೋಗವೂ ಹೆಚ್ಚಿನ ಮಾಹಿತಿ ನೀಡಿಲ್ಲ. ಆದ್ದರಿಂದ ಪದವೀಧರರು ನೊಂದಾಯಿತರಾಗಲು ನಾವು ಸಾಕಷ್ಟು ಶ್ರಮ ಪಡಬೇಕಾಯಿತು. ಅವರಿಗೆ ಮಾಹಿತಿ ನೀಡಲು ಮತ್ತು ಪ್ರಚಾರಕ್ಕಾಗಿ ಕೇವಲ 15-18 ಲಕ್ಷ ರು. ಖರ್ಚು ಮಾಡಲಾಗಿದೆ. ಅನ್ಯರು ಕೋಟಿ ಕೋಟಿ ಖರ್ಚು ಮಾಡುತ್ತಿದ್ದಾರೆ. ನಮ್ಮ ಪ್ರಚಾರದಿಂದ ಪ್ರೇರೇಪಿತರಾಗಿ ಜನ ಮುಂದೆ ಬರುತ್ತಿದ್ದಾರೆ. ಜನ ಬೆಂಬಲ ನೀಡೇ ನೀಡುತ್ತಾರೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಬಾರಿ ಚುನಾವಣೆಯಲ್ಲಿ 60 ಸಾವಿರ ಜನ ನೊಂದಾಯಿಸಿಕೊಂಡಿದ್ದರೆ, ನಮ್ಮ ಪ್ರಯತ್ನದಿಂದ ಈ ಬಾರಿ 1 ಲಕ್ಷ 15 ಸಾವಿರ ಪದವೀಧರರು ನೊಂದಾಯಿಸಿಕೊಂಡಿದ್ದಾರೆ. ನೊಂದಾವಣೆಯ ಪ್ರಕ್ರಿಯೆ ಕೂಡ ಸರಳವಾಗಬೇಕಾಗಿದೆ. ಚುನಾವಣಾ ಸಮಯದಲ್ಲಿ ಮಾತ್ರವಲ್ಲದೆ ಇತರ ಸಮಯದಲ್ಲಿಯೂ ನೊಂದಾಯಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕಾಗಿದೆ. ಪದವೀಧರರು ತಮ್ಮ ಹೆಸರು ಮತಪಟ್ಟಿಯಲ್ಲಿ ಇದೆಯಾ ಇಲ್ಲವಾ ಎಂದು ತಿಳಿಯಲು www.ashwinmahesh.in ವೆಬ್‌ಸೈಟಿಗೆ ಭೇಟಿ ನೀಡಿ ತಿಳಿಯಬಹುದು ಎಂದು ಅವರು ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂತೋಷ್ ಹೆಗ್ಡೆ ಮಾತನಾಡಿ, ರಾಜಕೀಯದಲ್ಲಿ ಇಂದು ಪ್ರಾಮಾಣಿಕರು, ಜವಾಬ್ದಾರಿ ಇರುವವರ ಅಗತ್ಯವಿದೆ. ಅಂತಹ ಪ್ರಾಮಾಣಿಕರೆ ಅಶ್ವಿನ್ ಅವರಲ್ಲಿದೆ ಎಂಬ ನಂಬಿಕೆಯಿಂದ ಅವರನ್ನು ಬೆಂಬಲಿಸುತ್ತಿದ್ದೇನೆ. ಆದರೆ, ನಾನು ಮಾತ್ರ ರಾಜಕೀಯಕ್ಕೆ ಎಂದೂ ಕಾಲಿಡುವುದಿಲ್ಲ. ಅಶ್ವಿನ್ ಅತ್ಯುತ್ತಮ ಅಭ್ಯರ್ಥಿ ಎಂಬುದರಲ್ಲಿ ಎರಡು ಮಾತೇ ಇಲ್ಲ ಎಂದರು. 65 ವರ್ಷದವರಾಗಿದ್ದರೂ ಅಶ್ವಿನ್ ಜೊತೆ ಹೆಜ್ಜೆ ಹಾಕಿ ಮತದಾರರನ್ನು ಓಲೈಸುತ್ತಿರುವ ಹಿರಿಯ ನಾಗರಿಕ ಸತ್ಯ ಅಚ್ಚಯ್ಯ ಅವರು ಕೂಡ ಅಶ್ವಿನ್ ಅವರನ್ನು ಬೆಂಬಲಿಸಿ ಮಾತನಾಡಿದರು.

ಅಶ್ವಿನ್ ಅವರ ಬೆಂಬಲಕ್ಕೆ ದೂರದ ಗುರ್‌ಗಾಂವ್‌ನಲ್ಲಿ ಕಾರ್ಪೊರೇಟರ್ ಆಗಿರುವ ಯುವ ರಾಜಕಾರಣಿ ನಿಶಾ ಸಿಂಗ್ ಅವರು ಬಂದಿದ್ದರು. ಅಲ್ಲಿ ಕೂಡ ಅಶ್ವಿನ್ ಅವರಂತೆಯೆ ಸ್ವತಂತ್ರವಾಗಿ ಸ್ಪರ್ಧಿಸಿ, ಯಾವುದೇ ಭ್ರಷ್ಟಾಚಾರಕ್ಕೆ ನೀರು ಸುರಿಯದೆ, ಭ್ರಷ್ಟ ವಿರೋಧಿ ಜನಬೆಂಬಲದಿಂದ ಗೆದ್ದು ಬಂದಿರುವ ನಿಶಾ ಸಿಂಗ್ ಅವರು, ಕರ್ನಾಟಕದಲ್ಲಿಯೂ ಜನ ಬದಲಾಗುತ್ತಿದ್ದಾರೆ, ಇಲ್ಲಿನ ರಾಜಕೀಯದಲ್ಲಿಯೂ ಬದಲಾವಣೆಯ ಗಾಳಿ ಬೀಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

English summary
I will make an important contribution to realising our collective dream of making Bangalore the cultural, intellectual, economic and social heart of India, says Dr Ashwin Mahesh, who is contesting for Bangalore Graduates' constituency as independent candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X