ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪಂಗಿ ಕಟ್ಟಾ ಯಡಿಯೂರಪ್ಪ ಬಿಜೆಪಿಗೆ ಆತಂಕದ ದಿನ

By Srinath
|
Google Oneindia Kannada News

decisive-day-for-sampangi-katta-bsy-bjp-june4
ಬೆಂಗಳೂರು, ಜೂನ್ 4: ನಾಲ್ಕು ವರ್ಷಗಳಿಂದ ಪಾಪದ ಕೊಡ ತುಂಬಿಸಿಕೊಂಡು ಬಂದಿರುವ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಇಂದು ಆತಂಕದ ದಿನ.

'ಕೊಟ್ಟೋನು ಕೋಡಂಗಿ, ಇಸ್ಕೊಂಡೋನು ಈರಭದ್ರ' ಎಂಬುದಕ್ಕೆ ವಿರುದ್ಧವಾಗಿ ಕೋಡಂಗಿಯಾಗಿರುವ ಸಂಪಂಗಿ, ಆರೋಗ್ಯಭರಿತ ಕಟ್ಟಾಳು ಕಟ್ಟಾ ಸುಬ್ರಮಣ್ಯ ನಾಯ್ಡು, ಸಿಬಿಐ ಭೀತಿವಾದದಿಂದ ಜಾಮೀನು ಮೊರೆಹೋಗಿರುವ ಯಡಿಯೂರಪ್ಪ, ಪಕ್ಷ ಕೈತೊಳೆದುಕೊಂಡಿದ್ದರೂ ಪರೋಕ್ಷವಾಗಿ ಕಾಡಲಿರುವ ಜನಾರ್ದನ ರೆಡ್ಡಿ ಪ್ರಕರಣ ಹೀಗೆ ಒಂದೇ ಎರಡೇ ಶಿಸ್ತಿನ ಪಕ್ಷಕ್ಕೆ ಅಂಟಿಕೊಂಡಿರುವ ಕಳಂಕಗಳು, ಕಾಡುತ್ತಿರುವ ಆತಂಕಗಳು.

ಸಜಾ ಕೈದಿಯಾಗಿ ಮುದ್ದೆ ಮುರಿಯುತ್ತಿರುವ ಕೈದಿ ನಂ. 5692 ಸಂಪಂಗಿ ನಿರೀಕ್ಷೆಯಂತೆ ಜಾಮೀನಿಗಾಗಿ ಇಂದು ಹೈಕೋರ್ಟ್ ಮೊರೆಹೋಗಲಿದ್ದಾರೆ. ಪಕ್ಷವೂ ಅದನ್ನೇ ಕಾಯುತ್ತಿದೆ. ಅಕಸ್ಮಾತ್ ಹೈಕೋರ್ಟು ಸಂಪಂಗಿ ಮೇಲ್ಮನವಿಗೆ ಮಣೆ ಹಾಕಿದರೆ ಅನೇಕ ರೀತಿಯಲ್ಲಿ ಪಕ್ಷ ಬಚಾವಾಗುತ್ತದೆ. ಇಲ್ಲವಾದಲ್ಲಿ ಸಂಪಂಗಿ ಪ್ರಕರಣ ಬಿಜೆಪಿಗೆ ಕಂಟಕವಾಗಲಿದೆ. ಸಂಕಟಗಳ ಸರಮಾಲೆಯನ್ನೇ ಅದು ಹಚ್ಚಲಿದೆ.

ಒಂದು ವೇಳೆ ಕೋರ್ಟ್ ಸಂಪಂಗಿ ಮೇಲ್ಮನವಿಗೆ ಸೊಪ್ಪುಹಾಕಲಿಲ್ಲ ಅಂತಾದರೆ ಬಿಜೆಪಿ ಅನಿವಾರ್ಯವಾಗಿ ಸಂಪಂಗಿಗೆ ಪಕ್ಷದಿಂದ ಗೇಟ್ ಪಾಸ್ ನೀಡಬೇಕಾಗುತ್ತದೆ. ಅಪರಾಧಿ ಎಂದು ಈಗಾಗಲೇ ಘೋಷಿತವಾಗಿದ್ದರೂ ಜಾಣಗುರುಡುತನ ತೋರಿರುವ ಬಿಜೆಪಿ ಇಂದು ಕೋರ್ಟ್ ತೀರ್ಪಿನತ್ತ ಆಶಾಭಾವ ಹೊಂದಿದೆ. ಸಂಪಂಗಿಗೆ ಕೋರ್ಟ್ ತೀರ್ಪು ವ್ಯತಿರಿಕ್ತವಾಗಿ ಸಂಪಂಗಿಯನ್ನು ಪಕ್ಷದಿಂದ ಹೊರಹಾಕಿದರೆ ಇದೇ ಪ್ರಕರಣವನ್ನು ಮುಂದಿಟ್ಟುಕೊಂಡು ಇನ್ನೂ ಅನೇಕ ನಾಯಕರನ್ನು ಪಕ್ಷವು ಸರದಿಯಲ್ಲಿ ಹೊರಗೆ ಹಾಕಬೇಕಾಗುತ್ತದೆ.

ಹಿರಿಯಾಳು ಈಶ್ವರಪ್ಪ ಅವರು ಸಂಪಂಗಿ ಪ್ರಕರಣದಿಂದ ಪಕ್ಷಕ್ಕೆ ಧಕ್ಕೆಯಿಲ್ಲ ಎನ್ನುತ್ತಿದ್ದಾರೆ. ಆದರೆ ತೀರ್ಪು ನೀಡುವಾಗ ನ್ಯಾ. ಸುಧೀಂದ್ರರಾವ್ ಅವರು 'ಯಾವುದೂ ಒಬ್ಬ ಕ್ಲರ್ಕ್ ಲಂಚ ತೆಗೆದುಕೊಂಡಿದ್ದರೆ ಏನೋ ಹಾಳಾಗಿಹೋಗಲಿ ಎನ್ನಬಹುದಿತ್ತು. ಆದರೆ ಲಕ್ಷಾಂತರ ಮಂದಿಯನ್ನು ಪ್ರತಿನಿಧಿಸುವ ಜನಪ್ರತಿನಿಧಿಯಾಗಿ ಹೊಲಸಿಗೆ ಕೈಹಾಕಿರುವುದ ಅಕ್ಷಮ್ಯ' ಎಂದು ಸಂಪಂಗಿಗೆ ಛೀಮಾರಿ ಹಾಕಿರುವುದನ್ನು ಗಮನಿಸಿದಾಗ, ಈಶ್ವರಪ್ಪ ಸಮರ್ಥನೆ ಹಾಸ್ಯಸ್ಪದವಾಗಿದೆ.

ಜತೆಗೆ, ವೈಯಕ್ತಿಕವಾಗಿ ಸಂಪಂಗಿಗೆ ಇಂದಿನ ಕೋರ್ಟ್ ತೀರ್ಪು ಅತ್ಯಂತ ಮಹತ್ವದ, ದೂರಗಾಮಿ ಪರಿಣಾಮದ್ದಾಗಲಿದೆ. ಸಂಪಂಗಿ ತಪ್ಪಿತಸ್ಥ ಎಂದು ಸುಪ್ರೀಂ, ಹೈಕೋರ್ಟುಗಳು ಎತ್ತಿಹಿಡಿದರೆ... ನಮ್ಮ ಪ್ರಜಾಪ್ರಭುತ್ವದಲ್ಲಿ ಜೈಲುಶಿಕ್ಷೆ ಅನುಭವಿಸಿದ ವ್ಯಕ್ತಿಗಳು ಚುನಾವಣೆಗೆ ನಿಲ್ಲುವಂತಿಲ್ಲ ಎಂಬ ನಿಯಮವಿದೆ. ಹಾಗಾಗಿ ಸಂಪಂಗಿ ರಾಜಕೀಯ ಬದುಕು ಅಂತ್ಯವಾಗಲಿದೆ.

ಆರೋಗ್ಯಭರಿತ ಕಟ್ಟಾಳು: ಇನ್ನು ಕಟ್ಟಾ ಸುಬ್ರಮಣ್ಯ ನಾಯ್ಡು. ಕ್ಯಾನ್ಸರ್ ಪೀಡಿತ ಈ ಜನಪ್ರತಿನಿಧಿ ನಾಲ್ಕು ತಿಂಗಳಿಂದ ಬಿಂದಾಸ್ ಆಗಿಯೇ ಓಡಾಡಿಕೊಂಡಿದ್ದಾರೆ. ಪಕ್ಷದ ಮಹಾಮಹಿಮ ನಾಯಕರ ಮದುವೆ, ಸೀಮಂತ ಕಾರ್ಯಕ್ರಮಗಳಲ್ಲಿ ಸುಬ್ರಮಣ್ಯ ನಾಯ್ಡು ಲಕಲಕನೆ ಹೊಳೆಯುತ್ತಿದ್ದಾರೆ. ಸಮಾರಂಭಗಳಲ್ಲಿ ಇವರನ್ನು ನೋಡಿದ ಜನ ಇವಯ್ಯನಿಗೆ ಯಾವ ಕ್ಯಾನ್ಸರಪ್ಪಾ? ಒಳ್ಳೆ ಗುಂಡು, ದುಂಡುಗೆ ಬಂಡೆಯಂತೆ ಇದ್ದಾನೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಅದೂ ನಿಜವೇ ಕಟ್ಟಾ ಬಂಡೆಯಂತೆ ಇದ್ದಾರೆ. ಯಾರೇ ಆಗಲಿ ಆರೋಗ್ಯದ ವಿಷಯದಲ್ಲಿ ಅದರಲ್ಲೂ ಕ್ಯಾನ್ಸರಿನಂತಹ ಕಾಯಿಲೆ ಇದೆ ಎಂದು ಹೇಳಿಕೊಳ್ಳಲೂ ಹಿಂಜರಿಯುತ್ತಾರೆ. ಆತಂಕಪಡುತ್ತಾರೆ. ಆದರೆ ಇವಯ್ಯ ಅದನ್ನೇ ತನ್ನ ಬ್ರಹ್ಮಸ್ತ್ರವನ್ನಾಗಿ ಬಳಸಿಕೊಂಡು ನನಗೆ ಕ್ಯಾನ್ಸರ್ ಅಬ್ಬು ಆಗಿದೆ. ಚಿಕಿತ್ಸೆಗೆ ದಯೆ ತೋರಿ ಎಂದು ಕೋರ್ಟನ್ನು ನಂಬಿಸಿ, ಇತ್ತ ಗೂಳಿಯಂತೆ ಸಿಕ್ಕಸಿಕ್ಕ ಸಮಾರಂಭಗಳಲ್ಲಿ ಸಂಭ್ರಮದಿಂದ ಓಡಾಡಿಕೊಂಡಿದ್ದಾರೆ.

ಕೋರ್ಟು ಯಾಕೋ ಕಣ್ಮುಚ್ಚಿ ಕುಳಿತಿದೆ. ಕಟ್ಟಾ ಈ ಪರಿ ಆರೋಗ್ಯಭರಿತವಾಗಿ ಓಡಾಡಿಕೊಂಡಿದ್ದರೂ ನಿನಗೆ ಜಾಮೀನು ನೀಡಿದ್ದು ಸಾಕು. ಇನ್ನು ಒಳಕ್ಕೆ ಹೋಗು ಎಂದು ಜೈಲಿಗೆ ಅಟ್ಟಿಲ್ಲ. ಕಳೆದ ಡಿಸೆಂಬರಿನಲ್ಲಿ ಲಂಡನ್ನಿನಲ್ಲಿ ಚಿಕಿತ್ಸೆಯ ಶಾಸ್ತ್ರ ಮುಗಿಸಿ ಬಂದ ಕಟ್ಟಾಳು ಮತ್ತೆ ಕೋರ್ಟಿನತ್ತ ತಲೆಹಾಕಿಲ್ಲ. ನಾಚಿಕೆಗೇಡಿನ ಸಂಗತಿಯೆಂದರೆ ನಮ್ಮಪ್ಪನಿಗೆ ನಾನೊಬ್ಬನೇ ಮಗ, ಅವರನ್ನು ಲಂಡನ್ನಿನಲ್ಲಿ ನೋಡಿಕೊಳ್ಳಲು ಮಾನವೀಯತೆ ಆಧಾರದ ಮೇಲೆ ಜಾಮೀನು ನೀಡಿ ಎಂದು ಜೂನಿಯ್ ಕಟ್ಟಾ ಗೋಗರೆದಾಗ ಕೋರ್ಟ್ ತಥಾಸ್ತು ಅಂದಿದೆ.

ಆದರೆ ಇಂತಿಪ್ಪ ಸೀನಿಯರ್ ಕಟ್ಟಾಗೆ ಈಗಲೋ ಆಗಲೋ ಕೋರ್ಟ್ ಬುಲಾವ್ ಬರುವುದು ಖಚಿತ. ಏಕೆಂದರೆ ತಲೆಮರೆಸಿಕೊಂಡಿದ್ದ ಇಬ್ಬರು ಕಟ್ಟಾಳುಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಟ್ಟಾ ಪ್ರಕರಣದಲ್ಲಿ ಅವರು ಮಹತ್ವದ ಪಾತ್ರವಹಿಸಲಿದ್ದಾರೆ. ವಿಚಾರಣೆ ವೇಳೆ ಅವರಿಬ್ಬರೂ ಕಟ್ಟಾ ಹೆಸರನ್ನು ಪ್ರಸ್ತಾಪಿಸಿದರೆ ಕಟ್ಟಾಗೆ ಮತ್ತೆ ಕೆಟ್ಟ ದಿನಗಳು ಕಾಡಲಿವೆ.

ಇನ್ನು, ಸನ್ಮಾನ್ಯ ಯಡಿಯೂರಪ್ಪನವರು. ಸದ್ಯಕ್ಕೆ ಖ್ಯಾತ ವಕೀಲ ಸಿವಿ ನಾಗೇಶ್ ಅವರು ತಮ್ಮ ಅನುಭವವನ್ನೆಲ್ಲ ಧಾರೆಯೆರೆದು ಈ ಮಾಜಿ ಸಿಎಂಅನ್ನು ರಕ್ಷಿಸಿಕೊಳ್ಳಲು ಸರ್ವಪ್ರಯುತ್ನ ನಡೆಸುತ್ತಿದ್ದಾರೆ. ಅದು ಇಂದು ನಿರ್ಣಾಯಕ ಹಂತಕ್ಕೆ ಬರಲಿದೆ. ಸಿಬಿಐ ಕೋರ್ಟ್ ಯಡಿಯೂರಪ್ಪ ಜಾಮೀನು ಅರ್ಜಿ ವಿಚಾರಣೆಯನ್ನು ಇನ್ನು ಸ್ವಲ್ಪವೇ ಉಳಿಸಿಕೊಂಡಿದ್ದು, ಇಂದು ಅದು ಆಖೈರಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಬಹುಶಃ ಸಿಬಿಐ ಕೋರ್ಟ್ ಯಡಿಯೂರಪ್ಪ ಜಾಮೀನು ಅರ್ಜಿ ವಿಚಾರಣೆಯನ್ನು ಇಂದು ಪೂರ್ಣಗೊಳಿಸಿ, ತೀರ್ಪನ್ನು ನಾಳೆಗೆ ಮುಂದೂಡಬಹುದು. ಯಡಿಯೂರಪ್ಪನವರಿಗೆ ಅದೇ ಮಹಾಭಾಗ್ಯವೆನಿಸುವುದಾದರೂ ಮುಂದಿದೆ ಮಾರಿಹಬ್ಬ.

ರೆಡ್ಡಿ ವಿರುದ್ಧ ಇಂದೋ, ನಾಳೆಯೋ ಮತ್ತೊಂದು FIR ದಾಖಲಾಗುವುದು ಖಚಿತ ಈ ಬಾರಿ ಅವಯ್ಯ ತನ್ನ ಜತೆಗೆ ಇಹನ್ನೂ ಒಂದಿಬ್ಬರು ಶಾಸಕರನ್ನು ತನ್ನ ಬೆನ್ನಿಗೆ ಕಟ್ಟಿಕೊಂಡು ನೀರಿಗೆ ಧುಮುಕಿದ್ದಾನೆ. ಗಮನಾರ್ಹವೆಂದರೆ ಅವರನ್ನೆಲ್ಲ ಪಕ್ಷ ಇನ್ನೂ ತನ್ನಲ್ಲೇ ಉಳಿಸಿಕೊಂಡಿರುವುದರಿಂದ ಬಿಜೆಪಿಗೆ ಜನಾ ರೆಡ್ಡಿ, ಸೋಮಶೇಖರ ರೆಡ್ಡಿ, ಸುರೇಶ್ ಬಾಬು, ನಾಗೇಂದ್ರ ಕಂಟಕವಾಗಲಿದ್ದಾರೆ.

ಅಂತಿಮವಾಗಿ, ಬಿಜೆಪಿ ಪಕ್ಷಕ್ಕೆ ಈ ಧೀಮಂತ ನಾಯಕರುಗಳೆಲ್ಲ ಮುಳುಗು ನೀರು ತಂದಿದ್ದು, ಪಕ್ಷ ಸಾಮೂಹಿಕ ಆತ್ಮಹತ್ಯೆಯತ್ತ ಹೆಜ್ಜೆ ಹಾಕಬೇಕಾಗಿದೆ.

English summary
Decisive day for Sampangi Katta Sumbramanya BS Yeddyurappa BJP June 4. umpteen court cases are bothering these stalwarts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X