ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪರಾಧಿ ಸಂಪಂಗಿಗೆ ಬಿಜೆಪಿ ಮಂದಿ ಸಾಂತ್ವನ!

By Srinath
|
Google Oneindia Kannada News

bjp-leaders-console-jailed-mla-sampangi
ಬೆಂಗಳೂರು, ಜೂನ್ 3: ಕೆಜಿಎಫ್‌ನ ಬಿಜೆಪಿ ಶಾಸಕ ವೈ. ಸಂಪಂಗಿ ಲಂಚ ಪ್ರಕರಣ ಸಾಬೀತಾಗಿ ಆತ ಜೈಲುಪಾಲಾಗಿರುವುದು ಆಡಳಿತಾರೂಢ ಬಿಜೆಪಿ ಮಂದಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಖುದ್ದು ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಸಂಪಂಗಿಗೆ ಸಾಂತ್ವನ ಕೋರಲು ಸಾರಥ್ಯವಹಿಸಿದ್ದಾರೆ. ಅಷ್ಟೇ ಅಲ್ಲ ಸಂಪಂಗಿಗೆ ಅಖಂಡ ಬೆಂಬಲವನ್ನೂ ಸೂಚಿಸಿದ್ದಾರೆ.

ಯಾವ ನ್ಯಾ ಸುಧೀಂದ್ರರಾವ್ ಮತ್ತು ನ್ಯಾ ಸಂತೋಷ ಹೆಗ್ಡೆ ಅವರ ಖಡಕ್ ನಿರ್ಧಾರಗಳಿಂದಾಗಿ ಸಂಪಂಗಿ ಜೈಲುಪಾಲಾದರೋ ಅವರ ತೀರ್ಪಿನ ಮುಖದ ಮೇಲೆ ಹೊಡೆದಂತೆ ಸಂಪಂಗಿ ಅವರ ವಿರುದ್ಧ 'ಅವರುಯಾರೋ ತೀರ್ಪು ನೀಡಿದರು ಎಂದ ಮಾತ್ರಕ್ಕೆ ಎಲ್ಲವೂ ಮುಗಿಯಿತು ಅಂತಲ್ಲಾ. ಇನ್ನೂ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ನಲ್ಲಿ ಹೋರಾಡಲು ಅವಕಾಶಗಳಿವೆ' ಎಂದು ಷರಾ ಬರೆದಿದ್ದಾರೆ.

ಖಂಡಿತ ಈಶ್ವರಪ್ಪ ಅವರ ಮಾತಿನಲ್ಲಿ ನಿಜಾಂಶವಿದೆ ಒಪ್ಪೋಣ. ಆದರೆ ಅದು ಅನ್ವಯವಾಗುವುದು ಅಮಾಯಕ ವ್ಯಕ್ತಿ ತಪ್ಪಿತಸ್ಥನೆಂದು ಕೋರ್ಟ್ ತೀರ್ಪು ನೀಡಿದಾಗ ಅಂತಹ ವ್ಯಕ್ತಿಯ ನೆರವಿಗೆ ಬರಲು ಹೈಕೋರ್ಟು‌, ಸುಪ್ರೀಂ ಕೋರ್ಟು, ಮೇಲ್ಮನವಿ ಅಂತೆಲ್ಲ ಇರೋದು, ದಯವಿಟ್ಟು ಈಶ್ವರಪ್ಪನವರು ಇದನ್ನು ಮೊದಲು ತಿಳಿದುಕೊಳ್ಳಲಿ.

ತನ್ನ ಶಾಸಕ ಮಿತ್ರನನ್ನು ರಕ್ಷಿಸಿಕೊಳ್ಳುವ ಸಲುವಾಗಿ ಲೋಕಾಯುಕ್ತ ತೀರ್ಪಿನ ವಿರುದ್ಧ ಹೇಳಿಕೆ ನೀಡುವುದು ಪಕ್ಷಕ್ಕೇ ಆಗಲಿ ವೈಯಕ್ತಿಕವಾಗಿ ಅವರಿಗೇ ಆಗಲಿ ಶೋಭೆ ತರುವಂತಹುದಲ್ಲ. Beyond doubt ಸಂಪಂಗಿ ಲಂಚ ತೆಗೆದುಕೊಂಡಿರುವುದು prove ಆಗಿರುವಾಗ ಯಾವ ಮುಖವಿಟ್ಟುಕೊಂಡು ಅವರನ್ನು ಸಮರ್ಥಿಸಿಕೊಂಡು, ಲೋಕಾಯುಕ್ತವನ್ನು ಹೀಗಳೆಯುತ್ತೀರಿ ಈಶ್ವರಪ್ಪನವರೇ? ಅಷ್ಟಕ್ಕೂ ನಿಮ್ಮ ಈ ತಪ್ಪಿತಸ್ಥ ಶಾಸಕಮಿತ್ರನನ್ನು ಜೈಲಿಗಟ್ಟಿದ್ದು ಬೇರೆ ಯಾರೂ ಅಲ್ಲ, ಅವರ ಪಕ್ಕದೂರಿನ ಜಡ್ಜ್ ಸಾಹೇಬರು!

ಈಶ್ವರಪ್ಪನವರೇ ಅದೇನೋ ಸಮರ್ಥನೆ ಬೇರೆ ಕೊಟ್ಟಿದ್ದೀರಿ. ಜತೆಗೆ ಸಂಬಂಧವೇ ಪಡದ ವಿಷಯ, ವ್ಯಕ್ತಿಗಳನ್ನು ಪ್ರಸ್ತಾಪಿಸಿ, ಅವರನ್ನೆಲ್ಲ ಹೀಯಾಳಿಸಿದ್ದೀರಿ. ಅದ್ಯಾರೋ ಕೇಂದ್ರ ಮಂತ್ರಿಗಳು, ಇಬ್ಬರು ಮಾಜಿ ಮುಖ್ಯಮಂತ್ರಿಗಳ ಹೆಸರುಗಳನ್ನೂ ಉಲ್ಲೇಖಿಸುತ್ತಾ, ಸಂಪಂಗಿ ಪ್ರಕರಣದಲ್ಲಿ ಎಲ್ಲವೂ ಮುಗಿಯಿತು ಎಂದು ಭಾವಿಸಬೇಕಿಲ್ಲ ಎಂದು ಷರಾ ಬರೆದಿದ್ದೀರಿ.

ಅಲ್ಲಾ ಸ್ವಾಮಿ ಆ ಮಹಾನುಭಾವರ ವಿರುದ್ಧವಿರುವ ಪ್ರಕರಣಗಳಿಗೂ ಈ ನಿಮ್ಮ ಸಂಪಂಗಿ ಪ್ರಕರಣಕ್ಕೂ ಏನು ಸಂಬಂಧ. ಹೋಲಿಕೆ ಯಾಕೆ? ಅಲ್ಲಾ ಸ್ವಾಮಿ ಆ ಮಹಾಮಹಿಮರ ವಿರುದ್ಧದ ಪ್ರಕರಣಗಳು ಇನ್ನೂ ಸಾಬೀತಾಗಬೇಕಿವೆ. ಆಗ ನೋಡೋಣ. ಆದರೆ ಇಲ್ಲಿ ಸಂಪಂಗಿ ಮಾಡಿದ್ದು ತಪ್ಪು ಎಂದು ಘೋಷಿಸಿಯಾಗಿದೆಯಲ್ಲಾ? ನ್ಯಾಯದೇವತೆಯ ಎದುರು ಸಂಪಂಗಿ ಈಗ proven ಅಪರಾಧಿ.

ಹೋಗ್ಲಿ ಈಶ್ವರಪ್ಪನವರೇ ಬೇರೆ ಆಪಾದಿತರ ಹೆಸರುಗಳು ನಿಮ್ಮ ಜ್ಞಾಪಕಕ್ಕೆ ಬರಲಿಲ್ಲವೋ? ನಿಮ್ಮ ಜಿಲ್ಲಾಮಿತ್ರರೊಬ್ಬರು ಹೇಗೆ ಕೋರ್ಟು ಕೇಸುಗಳಲ್ಲಿ ಹೈರಾಣರಾಗಿದ್ದಾರೆ. ಸಿಬಿಐ ಕಂಟಕ ಅವರನ್ನು ಹೇಗೆ ಬಾಧಿಸುತ್ತಿದೆ ಎಂಬುದು ನಾಡಿನ ಜನತೆಗಿಂತ ನಿಮಗೇ ಚೆನ್ನಾಗಿ ವೇದ್ಯವಾಗಿದೆ ಅಲ್ಲವಾ? ಪಾಪ ಅವರ ಕಷ್ಟಕ್ಕೆ ನೀವೇ ಮೊನ್ನೆ ಕನಿಕರ ವ್ಯಕ್ತಪಡಿಸಿದಿರಲ್ಲಾ. 'ನಾನಾಗಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ' ಎಂದು ಹೇಳಿ ಅವರ ದುಃಖವನ್ನು ಇಮ್ಮಡಿಗೊಳಿಸಿದ್ದರಲ್ಲಾ, ಸ್ವಾಮಿ!

ನಿಮಗೆ ಜಾಣ ಮರೆವು ಈಶ್ವರಪ್ಪನವರೇ, ಹಾಗಾಗಿ ಯಡಿಯೂರಪ್ಪ ವಗೈರೆ ಹೆಸರುಗಳನ್ನು ಮರೆತಿರಿ. ಅದೇ ನಿಮ್ಮ ಪುರಾತನ ಮಿತ್ರ, ಒಂದು ಕಾಲದಲ್ಲಿ ಪಕ್ಷದ ಆಪದ್ಬಾಂಧವ ಎನಿಸಿಕೊಂಡಿದ್ದ ವ್ಯಕ್ತಿಯ ಹೆಸರನ್ನು ನಿನ್ನೆ ತುಮಕೂರಿನಲ್ಲಿ ಜ್ಞಾಪಿಸಿಕೊಂಡಿದ್ದೀರಿ - 'ಜನಾರ್ದನ ರೆಡ್ಡಿ ಜಾಮೀನು ಪಡೆಯಲು ನ್ಯಾಯಾಧೀಶರಿಗೇ ಲಂಚ ನೀಡಿರುವ ಪ್ರಕರಣ ಕಾನೂನು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಈ ಪ್ರಕರಣದಿಂದ ಪಕ್ಷಕ್ಕೆ ಯಾವುದೇ ರೀತಿ ತೊಂದರೆಯಾಗದು' ಎಂದು ಹೇಳಿದ್ದಿರಿ. ಪಾಪ poor fellow Reddy ನಿಮ್ಮನ್ನೆಲ್ಲ ನಂಬಿ...

ಅದೇ ಯಡಿಯೂರಪ್ಪ ಜೈಲುವಾಸಿಯಾದಾಗ ಸ್ವತಃ ನೀವೇ ಜೈಲಿಗೆ ಹೋಗಿ ಅವರಿಗೆ ಸಾಂತ್ವ ಹೇಳಲು ಪ್ರಯತ್ನಿಸಿದಿರಿ. ಆಗ ಇದೇ ಯಡಿಯೂರಪ್ಪ ನಿಮ್ಮನ್ನು ತರಾಟೆಗೆ ತೆಗೆದುಕೊಂಡಿದ್ದು ಎಲ್ಲ ಮರೆತು ಹೋದಿರಾ? ಆದರೆ ಇದೇ ರೆಡ್ಡಿ ಅದೇ ಜೈಲಿನಲ್ಲಿದ್ದರೂ ಅತ್ತ ನೀವು ತಲೆ ಹಾಕಿಲ್ಲ. ನೀವು ಜೈಲಿಗೆ ಹೋಗಿ ಅವರನ್ನು ನೋಡಿಕೊಂಡು ಬನ್ನಿ ಎಂದು ಇಲ್ಲಿ ಯಾರೂ ನಿಮಗೆ ಹೇಳುತ್ತಿಲ್ಲ.

ಆದರೆ ನೀವು, ನಿಮ್ಮ ಸಿಎಮ್ಮು ಸದಾನಂದಗೌಡ, ನಿಮ್ಮ ಸಚಿವ ಪಟಾಲಂ ಮಾಡಿರುವುದಾದರೂ ಏನು? ಶಾಸಕ ಸಂಪಂಗಿ ಶನಿವಾರ ಸಂಜೆ ಜೈಲು ಸೇರುತ್ತಿದ್ದಂತೆ ತಪ್ಪಿತಸ್ಥನಿಗೆ ದೂರವಾಣಿ ಕರೆ ಮಾಡಿ ಧೈರ್ಯ ತುಂಬಿದಿರಂತೆ! ಆ ಮಹತ್ಕಾರ್ಯಕ್ಕಾಗಿ ನಿಮ್ಮ ಸಚಿವ ಮಹಾಶಯನನ್ನೇ ಮಧ್ಯವರ್ತಿಯನ್ನಾಗಿ ಬಳಸಿಕೊಂಡಿದ್ದೀರಿ. ಆ ಸಚಿವ ಮಹಾಶಯ ಮೊದಲು ತಾನು ಜೈಲಿಗೆ ಹೋಗಿ ಸಂಪಂಗಿಗೆ ಸಾಂತ್ವನ ಹೇಳುತ್ತಾ 'ತಗೋ, ಸದಾನಂದ ಮತ್ತೆ ಈಶ್ವರಪ್ಪ ನಿನ್ಹತ್ರ ಮಾತನಾಡ್ತಾರಂತೆ' ಅಂತ ಹೇಳಿ ಆತ ತನ್ನ ಮೊಬೈಲನ್ನು ಸಂಪಂಗಿಗೆ ಹಸ್ತಾಂತರಿಸಿದಾಗ ನೀವು ಅಪರಾಧಿ ಮಿತ್ರನ ಜತೆ ಮಾತನಾಡಿ ಧನ್ಯರಾದಿರಂತೆ!

ಯಾವುದೇ ಕಾರಣಕ್ಕೂ ಆತ್ಮ ಸ್ಥೈರ್ಯ ಕಳೆದುಕೊಳ್ಳದಂತೆ ಸಂಪಂಗಿಗೆ ಧೈರ್ಯ ತುಂಬಿದ್ದಾರೆ. ಪಕ್ಷ ನಿನ್ನ ಸಹಾಯಕ್ಕೆ ನಿಂತಿದೆ ಎಂದು ಬೇರೆ ಅಭಯ ನೀಡಿದರಂತೆ, ಭಲೇ! ಆ ಪೌರಾಡಳಿತ ಸಚಿವನ ಜತೆಗೂಡಿ ನೆಲಮಂಗಲ ಶಾಸಕ ಎಂವಿ ನಾಗರಾಜ್‌ ಶನಿವಾರ ರಾತ್ರಿ 9 ಗಂಟೆ ಸುಮಾರಿನಲ್ಲಿ ಜೈಲಿಗೆ ಭೇಟಿ ನೀಡಿ ಸಂಪಂಗಿ ಜತೆ ಸುಮಾರು 45 ನಿಮಿಷ ಸಮಾಲೋಚನೆ ನಡೆಸಿದ್ದಾರೆ ಎಂದು ಜೈಲು ದಾಖಲೆಗಳು ಸಾರುತ್ತಿವೆ.

ಅಷ್ಟಕ್ಕೂ ಕೈದಿಯನ್ನು ಭೇಟಿ ಮಾಡಲು ಬಂದ ಸಚಿವ ಮಹೋದಯ ತನ್ನ ಮೊಬೈಲನ್ನು ಕಾರಾಗೃಹ ಪ್ರವೇಶ ದ್ವಾರದ ಬಳಿಯೇ ಇಟ್ಟು ಬರಬೇಕು. ಆದರೂ ಯಾವುದೇ, ಯಾರದೇ ಭಯವಿಲ್ಲದೆ ಮಹತ್ಕಾರ್ಯವನ್ನು ಆ ಸಚಿವರು ಮಾಡಿಬಂದಿದ್ದಾರೆ. ತರವಲ್ಲ ತಗೀ ನಿಮ್ಮ ತಂಬೂರೀ ಈಶ್ವರಪ್ಪನವರೇ...

ಮರೆತ ಮಾತು: ಘನಂಧಾರಿ ನಾಯಕರಾದ ನೀವುಗಳೇ ಹೀಗೆ ಮಾಡಿರುವಾಗ ಇನ್ನು ಆ ಜೈಲು ಮಂತ್ರಿ ಏನೆಲ್ಲ ಮಾಡಬಹುದು, ಅದೂ ಅಪರಾಧಿ ಮತ್ತು ಜೈಲುಮಂತ್ರಿ ಒಂದೇ ಸೀಮೆಯವರು. ಇನ್ನೂ ಏನೆಲ್ಲ ಅನಾಚಾರಗಳನ್ನು ನೋಡಬೇಕು ಈ ನಾಡಿನ ಜನತೆ, ಈಶ್ವರಪ್ಪನವರೇ? ಇದಕ್ಕೆಲ್ಲ ಯಾವಾಗ full stop ಇಡ್ತೀರಿ?

English summary
The Special Lokayukta Court has sent BJP MLA of Kolar Gold Fields Y Sampangi on Saturdayin a bribe case. But the BJP leaders console the jailed MLA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X